ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟರು ಮಾನವರಲ್ಲ; ಅಂತಹವರನ್ನು ಬಹಿಷ್ಕರಿಸಿ

Last Updated 1 ಫೆಬ್ರುವರಿ 2012, 11:35 IST
ಅಕ್ಷರ ಗಾತ್ರ

ಶಿವಮೊಗ್ಗ: ಭ್ರಷ್ಟರು ಮಾನವರಲ್ಲ; ಮಾನವರಲ್ಲದವರಿಗೆ ಸಮಾಜದಲ್ಲಿ ಸ್ಥಾನ ಇಲ್ಲ. ಅಂತಹವರನ್ನು ಸಮಾಜ ಬಹಿಷ್ಕರಿಸಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಎನ್. ಸಂತೋಷ್ ಹೆಗ್ಡೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಮಂಗಳವಾರ ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಇನ್ನೊಬ್ಬರ ಜೇಬಿಗೆ ಜೈ ಹಾಕುವ, ಸರ್ಕಾರದ ಖಜಾನೆ ಕೊಳ್ಳೆ ಹೊಡೆಯುವವರು ಮಾನವರು ಹೇಗಾಗುತ್ತಾರೆ? ಅಂತಹವರಿಗೆ ಸಮಾಜದಲ್ಲಿ ಸ್ಥಾನ ಇರಬಾರದು ಎಂದರು.

ಪ್ರಜಾಪ್ರಭುತ್ವದಲ್ಲಿ ಪ್ರಜೆಯೇ ಪ್ರಭು ಎಂಬುದನ್ನು ನಾವು ಮರೆಯಬಾರದು. ಅದನ್ನು ಮರೆಯಲು ಅವರಿಗೆ ಬಿಡಬಾರದು. ಅಂತಹವರಿಂದ ವೈಯಕ್ತಿಕ ಕೆಲಸ ಮಾಡಿಸಿಕೊಳ್ಳುವುದು ಚಿಕ್ಕ ವಿಚಾರ. ಅದನ್ನು ಮಾಡಲು ಬಿಡಬೇಡಿ. ನಮ್ಮ ಹಕ್ಕನ್ನು ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಭ್ರಷ್ಟಾಚಾರ ವಿರುದ್ಧ ಹೋರಾಟದ ದಾರಿ ಅಷ್ಟು ಸುಲಭ ಅಲ್ಲ. 60 ವರ್ಷಗಳಿಂದ ಬಂದ ಈ ಪದ್ಧತಿಯನ್ನು ಕೇವಲ 6ರಿಂದ 10 ವರ್ಷಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಬಹುದು ಎಂದರು.

ಭ್ರಷ್ಟಾಚಾರ ಮಾಡಲು ವಿದ್ಯೆ ಬೇಕಾಗಿಲ್ಲ. ಅದನ್ನು ಮಟ್ಟ ಹಾಕದಿದ್ದರೆ ಮುಂದೆ ಹೆಜ್ಜೆ ಹೆಜ್ಜೆಗೂ ಲಂಚ ಕೊಡಬೇಕಾಗುತ್ತದೆ. ಅದು ನಿಮಗೇ ಕಷ್ಟ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.ಕಾನೂನಿನ ಚೌಕಟ್ಟಿನಲ್ಲಿ ಸಂಪತ್ತು ಸಂಪಾದಿಸುವುದು ತಪ್ಪಲ್ಲ. ಅದು, ಹೆಮ್ಮೆ, ತೃಪ್ತಿ ತಂದುಕೊಡುತ್ತದೆ ಎಂದ ಅವರು, ಆಸೆ ಇರಬೇಕು; ಆದರೆ, ದುರಾಸೆ ಬೇಡ. ತೃಪ್ತಿ ಎಂಬ ಪದದ ನಿಜವಾದ ಅರ್ಥ ಮಾಡಿಕೊಳ್ಳಬೇಕು. ಈ ಮನೋಭಾವವನ್ನು ಈ ವಯಸ್ಸಿನಲ್ಲೇ ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕು ಸಂತೋಷ್ ಹೆಗ್ಡೆಗೆ ಇಲ್ಲ ಎಂಬ ಟೀಕೆಗಳಿಗೆ ಉತ್ತರಿಸಿದ ಅವರು, `ನಾನು ಯಾವುದೇ ಆಸ್ತಿ ಮಾಡಿಲ್ಲ; ಬಿಡಿಎ ನಿವೇಶನ ಖರೀದಿಸಿಲ್ಲ, ಬಂಗ್ಲೆ, ಮನೆ ಕಟ್ಟಿಲ್ಲ. ಒಂದೇ ಒಂದು ಇಂಚು ಶಿವಮೊಗ್ಗದಲ್ಲಿ ಆಸ್ತಿ ಇಲ್ಲ. ಹಾಗಾಗಿ, ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಅಧಿಕಾರ ನನಗಿದೆ~ ಎಂದರು.

`ನನ್ನ ರಾತ್ರಿ ವೆಚ್ಚದ ಬಗ್ಗೆಯೂ ಟೀಕೆಗಳು ಬಂದವು. ಆದರೆ, 45 ವರ್ಷದಲ್ಲಿ ಇರುವುದು ನನಗೆ ಒಬ್ಬಳೇ ಹೆಂಡತಿ~ ಎಂದು ತಿರುಗೇಟು ನೀಡಿದರು. ಭ್ರಷ್ಟಚಾರ ಹುಡುಕಲು ಹಿಂದೆ ಐದು ಬೆರಳು ಸಾಕಾಗಿತ್ತು. ಇಂದು ಪ್ರಾಮಾಣಿಕರನ್ನು ಹುಡುಕಲು ಕೇವಲ ಐದು ಬೆರಳು ಸಾಕು ಎಂದು ಬೇಸರ ವ್ಯಕ್ತಪಡಿಸಿದರು.


ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಸ್ವಾಮೀಜಿ, ಮಾರ್ಕ್ ರೆವರೆಂಡ್ ಡಿಸಿಲ್ವಾ ನೇತೃತ್ವ ವಹಿಸಿದ್ದರು. ಟ್ರಸ್ಟ್‌ನ ಆಡಳಿತಾಧಿಕಾರಿ ಪ್ರೊ.ಟಿ.ಎಸ್. ಹೂವಯ್ಯಗೌಡ ಪ್ರಾಸ್ತಾವಿಕ ಮಾತನಾಡಿದರು.
ಟ್ರಸ್ಟ್‌ನ ಶಿಕ್ಷಣಾ ಸಲಹೆಗಾರ ಪ್ರೊ.ಬಿ.ಆರ್. ವಿಜಯವಾಮನ್ ಉಪಸ್ಥಿತರಿದ್ದರು.

`ಲಂಚ ಕೊಡಬೇಡಿ, ಪಡೆಯಬೇಡಿ~

ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಸಂತೋಷ್ ಹೆಗ್ಡೆ, ಭ್ರಷ್ಟಚಾರ ತಡೆ ಹೇಗೆ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ `ಲಂಚ ಕೊಡಬೇಡಿ, ಲಂಚ ಪಡೆಯಬೇಡಿ~ ಎಂದರು.

ಸರ್ಕಾರಿ ಕಚೇರಿಯಲ್ಲಿ ನಿಮ್ಮ ಕೆಲಸ ಆಗಬೇಕಾದರೆ ಆ ಅರ್ಜಿಯನ್ನು ಮುಂಚಿತವಾಗಿ ನೀಡಿ. ಯಾವುದೇ ಕಾರಣಕ್ಕೂ ಕಚೇರಿ ಸಿಬ್ಬಂದಿ ನಿಮ್ಮ ಕೆಲಸ ಮಾಡಿಕೊಡಲು ಸಾಧ್ಯವಿಲ್ಲ ಎನ್ನಲು ಬರುವುದಿಲ್ಲ. ಒಂದು ವೇಳೆ ತಡ ಮಾಡಿದರೆ ಲೋಕಾಯುಕ್ತಕ್ಕೆ ದೂರು ನೀಡಿ ಎಂದು ಸಲಹೆ ಮಾಡಿದರು.

`ನಿಮ್ಮ ಗಣಿ ವರದಿಯಿಂದ ಯಡಿಯೂರಪ್ಪ ಕೆಲ ದಿನಗಳಷ್ಟೇ ಜೈಲಿಗೆ ಹೋಗಿ ಬಂದರು. ಆದರೆ, ಸಿಬಿಐ ವರದಿಯಿಂದಾಗಿ ಜನಾರ್ದನ ರೆಡ್ಡಿ ಇನ್ನೂ ಜೈಲಿನಲ್ಲಿ ಇದ್ದರಲ್ಲ. ನಿಮ್ಮ ವರದಿಗಿಂತ ಅವರ ವರದಿಯೇ ಸ್ಟ್ರಾಂಗಾ?~ ಎಂಬ ವಿದ್ಯಾರ್ಥಿನಿಯ ಪ್ರಶ್ನೆಗೆ, `ಯಡಿಯೂರಪ್ಪ ನನ್ನ ವರದಿ ಮೇಲೆ ಜೈಲಿಗೆ ಹೋಗಿಲ್ಲ; ಖಾಸಗಿ ದೂರಿನ ಮೇಲೆ ಹೋಗಿದ್ದು. ನನ್ನ ವರದಿಯನ್ನು ಸರ್ಕಾರ ಓದಿಯೇ ಇಲ್ಲ~ ಎಂದು ಉತ್ತರಿಸಿದರು.

ಅಣ್ಣಾ ಹಜಾರೆ ಹೋರಾಟ ತಣ್ಣಗಾಗಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜನರ ಒಳಗಿನ ಆಕ್ರೋಶ ಮಡುಗಟ್ಟಲು ಅವಕಾಶ ಕೊಡಬಾರದು. ಅದು ಇಡೀ ವ್ಯವಸ್ಥೆಗೆ ಅಪಾಯ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT