ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು: ನಾಲ್ಕು ಗೋಡೆಯೊಳಗೆ ಕೃಷಿ ಜಾಗೃತಿ!

Last Updated 9 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಮಂಗಳೂರು: ಜನರಲ್ಲಿ ಕೃಷಿ, ತೋಟಗಾರಿಕೆ ಬಗ್ಗೆ ಪ್ರೀತಿ ಮೂಡಿಸುವ ಸಲುವಾಗಿ ನಗರದ ಕಂಕನಾಡಿಯ ಮೀನುಗಾರಿಕಾ ಕಾಲೇಜು ಆವರಣದಲ್ಲಿ ಸೋಮವಾರ ನಡೆದ ಕೃಷಿ ಮಾಹಿತಿ-ಜಾಗೃತಿ ಆಂದೋಲನ ಪ್ರಾಯೋಗಿಕ ಅನುಭವಕ್ಕೆ ಆಸ್ಪದ ನೀಡದೆ ನಾಲ್ಕು ಗೋಡೆಯೊಳಗಿನ ಗೋಷ್ಠಿಗಳಿಗೆ ಸೀಮಿತವಾಗಿಬಿಟ್ಟಿತು.

ಇದೊಂದು ಸಾವಯವ ಉತ್ಪಾದಕರ-ಮಾರುಕಟ್ಟೆದಾರರ ಸಮಾವೇಶವೂ ಆಗಿತ್ತು. ಕಾಲೇಜಿನ ಆವರಣದಲ್ಲಿದ್ದ ಹತ್ತಾರು ಮಳಿಗೆಗಳು ಸಾವಯವ ಬೆಳೆ, ಬೀಜ, ಫಸಲಿನ ಬಗ್ಗೆ ಮಾಹಿತಿ ನೀಡುವಲ್ಲಿ ಸಫಲವಾದವು. ಅಷ್ಟರ ಮಟ್ಟಿಗೆ ಕೃಷಿ ಮೇಳ ಯಶಸ್ವಿಯಾಯಿತು.

ಮೀನುಗಾರಿಕಾ ಕಾಲೇಜಿನ ಸಭಾಂಗಣದೊಳಗೆ ನಡೆದ ಗೋಷ್ಠಿಗಳನ್ನು ಕೇಳಲು ಬೆರಳೆಣಿಕೆಯ ಮಂದಿ ಇದ್ದರು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರಿ ಸಂಖ್ಯೆಯಲ್ಲಿ ರೈತರು ಬಂದಾಗ ಅಲ್ಲಿ ಸ್ಥಳವೇ ಇರಲಿಲ್ಲ. ಒಂದೆರಡು ಹೊಲಗಳಲ್ಲಿ ಬೆಳೆದು ನಿಂತ ಭತ್ತದ ಪೈರನ್ನು ತೋರಿಸಿದ್ದು ಬಿಟ್ಟರೆ ಪ್ರಾಯೋಗಿಕ ಅನುಭವ ನೀಡುವ ಯಾವ ಪ್ರಯತ್ನವೂ ನಡೆಯಲಿಲ್ಲ.
 
ಕಳೆದ ವರ್ಷದ ಮಳೆಗಾಲ ಇಲ್ಲಿನ ಹೊಲಗಳಲ್ಲಿ ಯಾಂತ್ರೀಕೃತ ಕೃಷಿಯ ಪ್ರಾತ್ಯಕ್ಷಿಕೆ ನಡೆದಿತ್ತು. ಈ ಬಾರಿ ಅದ್ಯಾವುದೂ ಇರಲಿಲ್ಲ. ಕೃಷಿ ಯಂತ್ರಗಳ ಬಳಕೆ, ಅವುಗಳ ಲಭ್ಯತೆ ಮುಂತಾದ ವಿಚಾರಗಳಲ್ಲಿ ಇಲಾಖೆಯ ವತಿಯಿಂದ ಪ್ರಾಯೋಗಿಕ ವಿವರಣೆಯೂ ಸಿಗಲಿಲ್ಲ. ವಾಹನದ ಮೇಲಿದ್ದ ಟ್ರಾಕ್ಟರ್, ಟಿಲ್ಲರ್, ಒಂದೆರಡು ಮಳಿಗೆಗಳಲ್ಲಿ ಇದ್ದ ಕಳೆ ಕತ್ತರಿಸುವ ಯಂತ್ರ, ಔಷಧ ಸಿಂಪಡಿಸುವ ಸಾಧನ ಸಹಿತ ಕೆಲವೊಂದು ಕೃಷಿ ಪರಿಕರಗಳು ಬಿಟ್ಟರೆ ರೈತರಿಗೆ ಉಪಯೋಗವಾಗುವಂತಹ ಹೆಚ್ಚಿನ ಪ್ರಾತ್ಯಕ್ಷಿಕೆಗಳು ಇರಲಿಲ್ಲ.

ಮಳಿಗೆಗಳಲ್ಲಿ ಸಾವಯವ ಕೃಷಿಗೆ ಸಂಬಂಧಿಸಿದ ಮಳಿಗೆಗಳು ಹೆಚ್ಚಿದ್ದವು. ವಿಟ್ಲದ ಸಿಪಿಸಿಆರ್‌ಐ ವಿವಿಧ ತಳಿಯ ಅಡಿಕೆ, ಕೋಕೊ ಬೆಳೆಯನ್ನು ಪ್ರದರ್ಶಿಸಿತ್ತು. ಮಿತ್ತಬಾಗಿಲಿನ ಬಿ.ಕೆ.ದೇವರಾವ್ ಅವರು ಅಭಿವೃದ್ಧಿಪಡಿಸಿದ 60 ಬಗೆಯ ಭತ್ತದ ತಳಿಗಳು ಗಮನ ಸೆಳೆದವು.

ಕೃಷಿ, ತೋಟಗಾರಿಕೆ, ಮೀನುಗಾರಿಕೆ, ಅರಣ್ಯ, ರೇಷ್ಮೆಯಂತಹ ಇಲಾಖೆಗಳ ಮಳಿಗೆಗಳು ಸರ್ಕಾರದ ಯೋಜನೆಗಳನ್ನು ಪರಿಚಯಿಸುವ ಪ್ರಚಾರ ಮಳಿಗೆಗಳಂತೆ ಕಾಣಿಸಿದವು. ವಾರಣಾಸಿ ಸಂಸ್ಥೆಯ ಕೃಷಿ ಪೂರಕ ಉತ್ಪನ್ನಗಳು, ಪಂಚಮಿ ಸಾವಯವ ಗೊಬ್ಬರದಂತಹ ಹಲವು ಖಾಸಗಿ ಸಂಸ್ಥೆಗಳು ಸಹ ತಮ್ಮ ಉತ್ಪನ್ನಗಳ ಮೂಲಕ ಗಮನ ಸೆಳೆದವು.

ಎರಡು ಟರ್ಕಿ ಕೋಳಿಗಳಿದ್ದವು. ಅವುಗಳ ಬಗ್ಗೆ ಮಾಹಿತಿ ಫಲಕವೂ ಇರಲಿಲ್ಲ, ಮಾಹಿತಿ ನೀಡುವವರೂ ಇರಲಿಲ್ಲ. ಹಂದಿ ಸಾಕಣೆ, ದನ ಸಾಕಣೆಯ ಬಗ್ಗೆ ಸಹ ಮಾಹಿತಿ ನೀಡುವವರು ಇರಲಿಲ್ಲ. ಮಂಗಳೂರಿನಲ್ಲಿ ಒಂದಿಷ್ಟು ವಿಶೇಷ ಏನಾದರೂ ಇದ್ದೀತು ಎಂಬ ಆಸೆಯಿಂದ ಬೆಳ್ತಂಗಡಿಯಿಂದ ಬಂದಿದ್ದೆವು. ನಮಗೆ ಇಲ್ಲಿ ವಿಶೇಷ ಏನೂ ಕಾಣಿಸಲಿಲ್ಲ~ ಎಂದು ಭಾಸ್ಕರ ಸಾಲ್ಯಾನ್ ಹೇಳಿದರು.

ಅಡ್ಯನಡ್ಕದಿಂದ ಬಂದಿದ್ದ ಮಹಾಲಿಂಗ ನಾಯ್ಕ ಅವರು ಮಳಿಗೆಗಳನ್ನು ನೋಡಿಕೊಂಡು ಬಂದರು. ಅವರ ಜತೆಗೆ ಬಂದ ಹಲವರು ಗೋಷ್ಠಿಗಳಿಗೆ ಹಾಜರಾಗಲಿಲ್ಲ.

ಕೃಷಿ ವೆಚ್ಚ ತಗ್ಗಲಿ: ಸಿ.ಟಿ.ರವಿ
ಕೃಷಿಯೇ ಪ್ರಮುಖ ಉದ್ಯೋಗವಾಗಿದ್ದ ಭಾರತದಲ್ಲಿ ಇಂದು ಕೃಷಿಗಾಗಿ ಆಂದೋಲನ ನಡೆಯುತ್ತಿರುವುದು ಕಳವಳದ ಸಂಗತಿ. ಕೃಷಿ ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯಲೇಬೇಕು. ಕೋಕಾ ಕೋಲಾದಂತಹ ಕೃತಕ ಉತ್ಪನ್ನಗಳನ್ನು ನಿಷೇಧಿಸಿ, ಎಳನೀರು, ಲಿಂಬು ಶರಬತ್ತಿನಂತಹ ಪೇಯಗಳು ಸಹಿತ ಇತರ ಉತ್ಪನ್ನಗಳತ್ತ ನಮ್ಮ ಗಮನ ಹರಿದಾಗ ರೈತರಿಗೆ ಉತ್ತಮ ಮಾರುಕಟ್ಟೆ ಲಭಿಸಲು ಸಾಧ್ಯ ಎಂದು ಕೃಷಿ ಮೇಳ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

ಸುವರ್ಣ ಭೂಮಿ ಯೋಜನೆಯಲ್ಲಿ ಜಿಲ್ಲೆಯಲ್ಲಿ ಕೇವಲ 2,449 ಮಂದಿ 43 ಲಕ್ಷ ರೂಪಾಯಿ ಸಹಾಯಧನ ಪಡೆದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ರಾಸಾಯನಿಕಗಳ ಬದಲಿಗೆ ಸಾವಯವ, ಸಹಜ ಕೃಷಿಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯ ಇದೆ ಎಂದರು.

ವಿಧಾನಸಭೆಯ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಅವರು ಜಿಲ್ಲೆಯಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಕೇರಳ ಮಾದರಿಯ ಪ್ಯಾಕೇಜ್, ಬೆಳೆ ಹಾನಿಗೆ ಸೂಕ್ತ ಪರಿಹಾರ, ಪಶ್ಚಿಮ ವಾಹಿನಿ ನದಿಗಳಿಗೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಕೃಷಿಗೆ ಸಹಾಯಕವಾಗುವ ವಾತಾವರಣ ಮೂಡಿಸುವ ಅಗತ್ಯ ಇದೆ ಎಂದರು.

ಶಾಸಕ ಮೋನಪ್ಪ ಭಂಡಾರಿ, ಜಿ.ಪಂ.ಕೃಷಿ-ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್‌ಕುಮಾರ್ ಮೇನಾಲ, ತಾ.ಪಂ.ಉಪಾಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಜಿ.ಪಂ.ಸಿಇಒ ಕೆ.ಎನ್.ವಿಜಯಪ್ರಕಾಶ್, ಜಂಟಿ ಕೃಷಿ ನಿರ್ದೇಶಕ ಪಿ.ಮೋಹನ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT