ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಠಾಳ: ನೀರಿಗೆ ತತ್ವಾರ, ನೈರ್ಮಲ್ಯಕ್ಕೆ ಬರ

Last Updated 14 ಏಪ್ರಿಲ್ 2011, 7:10 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಮಂಠಾಳದಲ್ಲಿ ನೀರಿನ ಸಮರ್ಪಕ ಪೋರೈಕೆ ಇಲ್ಲದ್ದರಿಂದ ಜನರು ಪರದಾಡುವ ಪರಿಸ್ಥಿತಿ ಇದೆ. ಚರಂಡಿ ವ್ಯವಸ್ಥೆ ಇಲ್ಲ. ಅಲ್ಲದೆ ಮೋರಿಗಳ ನೀರು ಹರಿದು ಹೋಗುವ ರಸ್ತೆ ಪಕ್ಕದ ಸಣ್ಣ ನಾಲಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದ ಕಾರಣ ಎಲ್ಲೆಡೆ ದುರ್ನಾತ ಸೂಸುತ್ತದೆ.

ಈ ಗ್ರಾಮ ಹೋಬಳಿ ಕೇಂದ್ರ ಹಾಗೂ 10 ಸಾವಿರ ಜನಸಂಖ್ಯೆ ಇರುವ ದೊಡ್ಡ ಗ್ರಾಮವಾಗಿದೆ. ಗ್ರಾಮ ಪಂಚಾಯಿತಿ ಸಹ ಇದೆ. ಇಲ್ಲಿ ಇದುವರೆಗೆ ಅನೇಕ ಯೋಜನೆಗಳು ಜಾರಿಗೊಂಡಿವೆ. ಆದರೂ ಸಮಸ್ಯೆಗಳು ಬಗೆಹರಿದಿಲ್ಲ. ಸುಂದರ ಮತ್ತು ಸುವ್ಯವಸ್ಥಿತ ಗ್ರಾಮವಾಗಿ ಅಭಿವೃದ್ಧಿ ಹೊಂದಿಲ್ಲ ಎಂಬುದು ಗ್ರಾಮಸ್ಥರ ಕೊರಗು.

‘ಬಾವಿಗಳಲ್ಲಿ ನೀರು ಇಲ್ಲ ಎಂದೆನಿಲ್ಲ. ಆದರೆ ಸರಬರಾಜು ವ್ಯವಸ್ಥೆ ಸರಿ ಇಲ್ಲದೆ ಸಮಸ್ಯೆ ಆಗುತ್ತಿದೆ. ವಾಟರಮ್ಯಾನ್ ಊರಿಗೆ ಹೋಗಿದ್ದಾನೆಂದು ಪಂಚಾಯಿತಿ ಕಚೇರಿ ಸುತ್ತಲಿನ ಮನೆಗಳಿಗೆ ಏಳು ದಿನಗಳಿಂದ ನೀರು ಬಿಡಲಾಗಿಲ್ಲ. ಬೇರೆ ಸಮಯದಲ್ಲಿಯೂ ನಳಕ್ಕೆ ಮೂರ್ನಾಲ್ಕು ದಿನಕ್ಕೊಮ್ಮೆ ನೀರು ಬರುತ್ತದೆ’ ಎಂದು ಸುಭಾಷ ಕಾಂಬಳೆ ಹಾಗೂ ಇತರರು ಗೋಳು ತೋಡಿಕೊಂಡರು.

ಕಳೆದ ಕೆಲ ದಿನಗಳಿಂದ ಹೊಲಗಳಲ್ಲಿನ ಬಾವಿಗಳಿಂದ ನೀರು ತರುತ್ತಿದ್ದೇವೆ. ಗ್ರಾಮದಲ್ಲಿ ಮನೆಗೊಂದು ಬಾವಿ ಇವೆ. ಆದರೆ ಈಚೆಗೆ ಉಪಯೋಗಿಸದ ಕಾರಣ ಅವು ಹಾಳು ಬಿದ್ದಿವೆ. ಅವುಗಳಲ್ಲಿನ ನೀರು ಸಹ ಸರಿ ಇಲ್ಲ ಎಂದು ಕೆಲ ಮಹಿಳೆಯರು ತಿಳಿಸಿದರು. ಇದು ದೊಡ್ಡ ಗ್ರಾಮವಾಗಿರುವ ಕಾರಣ ನೀರು ಸರಬರಾಜು ಮಾಡುವ ದೊಡ್ಡ ಯೋಜನೆ ಕೈಗೊಳ್ಳಬೇಕು. ಸಮೀಪದ ಮುಲ್ಲಾಮಾರಿ ನಾಲೆಯಿಂದ ನೀರು ಸರಬರಾಜು ವ್ಯವಸ್ಥೆ ಮಾಡಿದರೆ ಸಮಸ್ಯೆ ಬಗೆಹರಿಯಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಊರು ಉದ್ದವಾಗಿ ಬೆಳೆದಿದ್ದು ಒಂದು ಕಡೆಯಿಂದ ಇನ್ನೊಂದು ತುದಿಗೆ ಹೋಗಬೇಕಾದರೆ ಅರ್ಧ ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಆದರೆ ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ನಾಲಿ ಸ್ವಚ್ಛಗೊಳಿಸುವವರು ಮಾತ್ರ ಒಬ್ಬರೇ ಇದ್ದಾರೆ. ಇಬ್ಬರು ಇದ್ದರಾದರೂ ಸಂಬಳ ಹೆಚ್ಚಿಗೆ ಕೊಡದ ಕಾರಣ ಅವರು ಬಿಟ್ಟು ಹೋಗಿದ್ದಾರೆ. ನಂತರ ಬೇರೆ ನೌಕರರನ್ನು ತೆಗೆದುಕೊಳ್ಳಲಾಗಿಲ್ಲ. ಆದ್ದರಿಂದ ಮೋರಿಗಳ ನೀರು ನಿಂತಲ್ಲೇ ನಿಲ್ಲುತ್ತದೆ. ಅಲ್ಲಲ್ಲಿ ಬಿದ್ದ ಕಸ, ಕಡ್ಡಿಗಳು ಹಾಗೆಯೇ ಉಳಿಯುತ್ತವೆ. ಆದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಲಿ, ಕಾರ್ಯದರ್ಶಿಯಾಗಲಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ದೂರುತ್ತಾರೆ.

ಇಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಒಳಗೊಂಡು ಶಾಲಾ ಕಾಲೇಜುಗಳ ಕಟ್ಟಡಗಳಿವೆ. ಆದರೆ ಕೆಲವು ಕಟ್ಟಡಗಳಿಗೆ ಆವರಣಗೋಡೆ ಇಲ್ಲದ ಕಾರಣ ರಾತ್ರಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಜನರು ಹೇಳುತ್ತಾರೆ. ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಸರಿಯಿಲ್ಲ. ತಾಲ್ಲೂಕಿನ ಅರ್ಧಭಾಗದಷ್ಟು ಜನತೆ ಈ ಕೇಂದ್ರವನ್ನು ಅವಲಂಬಿಸಿದ್ದಾರೆ ಆದರೂ ಹೆಚ್ಚಿನ ಸೌಲಭ್ಯ ಒದಗಿಸಲಾಗಿಲ್ಲ. ಪೊಲೀಸ್ ಠಾಣೆ ಸಮೀಪದ ಮನೆಗಳಿಗೆ ಸೌಲಭ್ಯಗಳಿಲ್ಲ. ಇಲ್ಲಿಂದ ಉರ್ಕಿಗೆ ಹೋಗುವ ರಸ್ತೆಯ ಸುಧಾರಣೆ ಕೈಗೊಂಡಿಲ್ಲ. ಸಂಬಂಧಿತರು ಈ ಕಡೆ ಲಕ್ಷವಹಿಸಿ ಸೌಲಭ್ಯಗಳನ್ನು ಒದಗಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT