ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಪ್ರತಿಭೆ ಉದ್ಯೋಗಕ್ಕೆ ಸೀಮಿತವಾಗದಿರಲಿ

Last Updated 18 ಅಕ್ಟೋಬರ್ 2012, 5:45 IST
ಅಕ್ಷರ ಗಾತ್ರ

ಮೈಸೂರು: ಮಕ್ಕಳ ಶಕ್ತಿ, ಪ್ರತಿಭೆ, ಕೌಶಲಗಳು ಉದ್ಯೋಗ ಪಡೆಯಲು, ಹಣ ಗಳಿಸಲು ಸೀಮಿತವಾಗದಿರಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.

ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.

ಭವ್ಯ ಭಾರತದ ಭವಿಷ್ಯ ಇಂದಿನ ಮಕ್ಕಳ ಕೈಯ್ಯಲ್ಲಿದೆ. ಆದ್ದರಿಂದ ಮಕ್ಕಳಲ್ಲಿರುವ ಪ್ರತಿಭೆ, ಕೌಶಲಗಳನ್ನು ಶಿಕ್ಷಕರು ಮತ್ತು ಪೋಷಕರು ಗುರುತಿಸಿ, ಪ್ರೋತ್ಸಾಹಿಸಬೇಕು. ಮಕ್ಕಳು ಹಣ ಗಳಿಸುವ ಯಂತ್ರಗಳಾಗಬಾರದು.

ಈ ನಿಟ್ಟಿನಲ್ಲಿ ಪೋಷಕರು ಯೋಚಿಸಬೇಕು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಷಿ, ಸುಬ್ಬುಲಕ್ಷ್ಮಿ, ರಾಜ್‌ಕುಮಾರ್, ವಿಷ್ಣುವರ್ಧನ್ ಮುಂತಾದ ಸಾಂಸ್ಕೃತಿಕ ಲೋಕದ ಸಾಧಕರನ್ನು ನಾವು ಕಳೆದುಕೊಂಡಿದ್ದೇವೆ. ಇಂಥವರ ಸಾಧನೆ ನಮಗೆ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.

ಮನರಂಜನೆಗೆ ಸೀಮಿತವಾಗದಿರಲಿ: ಮಕ್ಕಳ ದಸರಾ ಕೇವಲ ಮನರಂಜನೆಗೆ ಸೀಮಿತವಾಗದೆ, ಸಂಸ್ಕೃತಿ ಉಳಿಸಿ ಬೆಳೆಸುವ, ಸಾಮಾಜಿಕ ಮೌಲ್ಯ ಬಿತ್ತುವ, ಉತ್ತಮ ಸಂದೇಶ ನೀಡುವ ಕಾರ್ಯಕ್ರಮವಾಗಬೇಕು. ಶಿಕ್ಷಣ ಎಂದರೆ ಕೇವಲ ಅಕ್ಷರಾಭ್ಯಾಸವಲ್ಲ, ಅದೊಂದು ಸಂಸ್ಕಾರ. ಈ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕೆಲಸ ಮಾಡುತ್ತಿದೆ. ಇದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹ ಅಗತ್ಯ ಎಂದರು.

ದುಷ್ಟರನ್ನು ಶಿಕ್ಷಿಸಿ: ದುಷ್ಟರಿಗೆ ಎಂದಿಗೂ ಹೆದರಬಾರದು. ದುಷ್ಕೃತ್ಯಗಳನ್ನು ಖಂಡಿಸಿ, ದುಷ್ಟರನ್ನು ಶಿಕ್ಷಿಸಬೇಕು. ಒಳ್ಳೆಯರಿಗೆ ರಕ್ಷಣೆ ನೀಡುತ್ತಾ, ಸದಾ ಒಳ್ಳೆಯ ಕೆಲಸವನ್ನೇ ಮಾಡಬೇಕು. ಆಗ ಮಾತ್ರ ಸಮಾಜದಲ್ಲಿ ಆದರ್ಶ, ಮೌಲ್ಯ ಗಳಿಗೆ ಬೆಲೆ ಬರುತ್ತದೆ. ಮೈಸೂರು ದಸರಾದಲ್ಲಿ ವೈವಿಧ್ಯ ಮಯ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಅದರಲ್ಲಿ ಮಕ್ಕಳ ದಸರಾ ಅತ್ಯಂತ ಪ್ರಭಾವಿ ಕಾರ್ಯಕ್ರಮವಾಗಿದೆ. ಮಕ್ಕಳು ಅತಿಥಿಗಳನ್ನು ಕವಾಯತು ಪ್ರದರ್ಶನದೊಂದಿಗೆ ಸ್ವಾಗತಿಸಿ, ಬಲೂನುಗಳನ್ನು ಹಾರಿಸಿ ಸಂಭ್ರಮಿಸಿದರು. ನಲಿ- ಕಲಿ ಚಟುವಟಿಕೆ, ವಸ್ತುಪ್ರದರ್ಶನ, ವಿವಿಧ ವೇಷಭೂಷಣಗಳ ಮೂಲಕ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಹೀಗಾಗಿ ಮಕ್ಕಳ ದಸರಾ ಅರ್ಥಪೂರ್ಣ ಕಾರ್ಯಕ್ರಮ ಎಂದು ಶ್ಲಾಘಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಮಾತನಾಡಿ, ಮಕ್ಕಳ ದಸರಾ ಮೊದಲ ಹಂತವಾಗಿದ್ದು, ವಿದ್ವತ್ ಗೋಷ್ಠಿ ಎರಡನೇ ಹಂತವಾಗಿದೆ. ಜತೆಗೆ ಆನ್‌ಲೈನ್ ಕ್ವಿಜ್ ಸ್ಪರ್ಧೆ ಏರ್ಪಡಿಸಿದ್ದು, ವಿಶ್ವದಾದ್ಯಂತ ಮಕ್ಕಳು ನೋಂದಣಿಯಾಗಿದ್ದಾರೆ. ಗೆದ್ದವರಿಗೆ ಉತ್ತಮ ಬಹುಮಾನ ಕೊಡಲಾಗುತ್ತದೆ. ಹೀಗೆ ಮಕ್ಕಳ ಪ್ರತಿಭೆ ಹೊರಹೊಮ್ಮಿಸಲು ದಸರಾದಲ್ಲಿ ಸೂಕ್ತ ವೇದಿಕೆ ಒದಗಿಸಿದ್ದೇವೆ ಎಂದರು.

ನಂತರ, ಏಕಕಾಲದಲ್ಲಿ ಎರಡು ವಸ್ತು ಒಂದೇ ಸ್ಥಳ ಆಕ್ರಮಿಸಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟವರು ಯಾರು? ಮೈಸೂರು ಪಾಕ್ ಎಂಬ ಹೆಸರು ಕೊಟ್ಟವರು ಯಾರು? ಮೈಸೂರು ಅರಮನೆ ಎಷ್ಟು ಎಕರೆ ಇದೆ? ಟೆಲಿಫೋನ್‌ನ ಮೊದಲ ನಂಬರ್ ಯಾವುದು? ಮುಂತಾದ ಪ್ರಶ್ನೆಗಳನ್ನು ಕೇಳಿ ಮಕ್ಕಳಿಂದ ಉತ್ತರ ಪಡೆದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕಾ.ಪು.ಸಿದ್ದವೀರಪ್ಪ, ಉಪಾಧ್ಯಕ್ಷೆ ಸುಚಿತ್ರಾ, ಮಕ್ಕಳ ದಸರಾ ಉಪಸಮಿತಿಯ ಅಧ್ಯಕ್ಷೆ ವಿದ್ಯಾ ಅರಸ್, ಉಪಾಧ್ಯಕ್ಷರಾದ ಮಂಗಳಾ ಸೋಮಶೇಖರ್, ತೇಜಾ ರಾಘವೇಂದ್ರ, ಮೃಗಾಲಯ ಪ್ರಾಧಿಕಾರ ಅಧ್ಯಕ್ಷ ನಂಜುಂಡಸ್ವಾಮಿ ಇತರರು ಇದ್ದರು.


ಗಮನ ಸೆಳೆದ ಮಕ್ಕಳ ವೇಷಭೂಷಣ
ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಯ ಮಕ್ಕಳು ಹಾಗೂ ವಿಶೇಷ ಮಕ್ಕಳ ವೇಷಭೂಷಣಗಳು ಎಲ್ಲರ ಗಮನ ಸೆಳೆದವು. ಅದರಲ್ಲೂ ಕಡಲೆಪುರಿ ಮತ್ತು ತರಕಾರಿಯಿಂದ ಅಲಂಕರಿಸಿದ್ದ ಮಕ್ಕಳ ವೇಷಭೂಷಣ ಶಿಕ್ಷಣ ಸಚಿವರ ಮೆಚ್ಚುಗೆಗೆ ಪಾತ್ರವಾಯಿತು. ಮಹಿಷಿ, ಓಬವ್ವ, ಕಿತ್ತೂರು ರಾಣಿ ಚನ್ನಮ್ಮ, ಚಾರ್ಲಿ ಚಾಪ್ಲಿನ್, ಜಯಚಾಮ ರಾಜೇಂದ್ರ  ಒಡೆಯರ್ ಸೇರಿದಂತೆ ವಿವಿಧ ಪೋಷಾಕಿನಲ್ಲಿ ಮಕ್ಕಳು ಮಿಂಚಿದರು.

ನಲಿ-ಕಲಿ ಚಟುವಟಿಕೆ, ಪ್ರಯೋಗಾಲಯ, ವಿಜ್ಞಾನ ಮಾದರಿ, ಕಲಿಕೋಪಕರಣಗಳು ಮುಂತಾದ ವಿಭಾಗಗಳು ವಸ್ತುಪ್ರದರ್ಶನದಲ್ಲಿ ಜನರನ್ನು ಆಕರ್ಷಿಸಿದವು.

ಬಾರದ ಸಚಿವರು, ಬಸವಳಿದ ಮಕ್ಕಳು
ಮಕ್ಕಳ ದಸರಾ ನಿಗದಿತ ಸಮಯಕ್ಕಿಂತ ಬರೋಬ್ಬರಿ ಮೂರು ಗಂಟೆ ಹತ್ತು ನಿಮಿಷ ತಡವಾಗಿ ಆರಂಭವಾಯಿತು.

ಬೆಳಿಗ್ಗೆ 9.30ಕ್ಕೆ ಆರಂಭವಾಗಬೇಕಿದ್ದ ಮಕ್ಕಳ ದಸರಾ ಉದ್ಘಾಟನೆಯಾದದ್ದು ಮಧ್ಯಾಹ್ನ 12.40ಕ್ಕೆ. ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 11.50ಕ್ಕೆ ಬಂದು ಮಕ್ಕಳ ದಸರಾ ಕಾರ್ಯಕ್ರಮ ಉದ್ಘಾಟಿಸಲು ಸಚಿವ ಎಸ್.ಎ.ರಾಮದಾಸ್ ಅವರಿಗಾಗಿ ಕಾದು ಕುಳಿತರು. ಮಧ್ಯಾಹ್ನ 12.40ಕ್ಕೆ ರಾಮದಾಸ್ ಬಂದ ನಂತರ ಮಕ್ಕಳ ದಸರಾಕ್ಕೆ ಚಾಲನೆ ನೀಡಲಾಯಿತು.

ಈ ಮಧ್ಯೆ ವಿವಿಧ ಪೋಷಾಕುಗಳನ್ನು ತೊಟ್ಟ ಪುಟ್ಟ-ಪುಟ್ಟ ಮಕ್ಕಳು ಮತ್ತು ವಿಶೇಷ ಮಕ್ಕಳು ಸಚಿವರ ಆಗಮನಕ್ಕೆ ಕಾದು ಸುಸ್ತಾದರು. ಬಾಗಿಲಲ್ಲಿ ಸಚಿವರನ್ನು ಸ್ವಾಗತಿಸಲು ನಿಂತಿದ್ದ ಮಕ್ಕಳು ಬಿಸಿಲಿನಲ್ಲಿ ಬಳಲಿದರು.

ಜಗನ್ಮೋಹನ ಅರಮನೆ ತುಂಬಿ ತುಳುಕುತ್ತಿದ್ದುದರಿಂದ ಕೆಲವು ಮಕ್ಕಳು ಕುಳಿತುಕೊಳ್ಳಲು ಕುರ್ಚಿ ಸಿಗದೆ ಪರದಾಡಿದರು. ಕೆಲವು ಮಕ್ಕಳಂತು ಕುಳಿತಲ್ಲೇ ತೂಕಡಿಸುತ್ತಿದ್ದರು.

`ಫಲಪುಷ್ಪ ಪ್ರದರ್ಶನ ಉದ್ಘಾಟನೆ ಎರಡೂವರೆ ಗಂಟೆ, ಪ್ರವಾಸೋದ್ಯಮ ಉದ್ಘಾಟನೆ 2 ಗಂಟೆ, ವಿದ್ವತ್ ಗೋಷ್ಠಿ 1 ಗಂಟೆ ಜತೆಗೆ ಮಕ್ಕಳ ದಸರಾ 3 ಗಂಟೆ ತಡವಾಗಿ ಆರಂಭವಾಗುವ ಮೂಲಕ ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಉಪಸಮಿತಿಗಳ ಪದಾಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಮಯಪ್ರಜ್ಞೆ ಇಲ್ಲವೆ? ಎಂದು ಪೋಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT