ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಮಾನಸಿಕ ಆರೋಗ್ಯ

Last Updated 24 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಕ್ಕಳು ಜ್ವರದಿಂದ ಬಳಲುತ್ತಿದ್ದರೆ ಅಥವಾ ಶೀತ ಕೆಮ್ಮಿನಿಂದ ಬಾಧಿತವಾಗಿದ್ದರೆ ಕಂಡುಹಿಡಿಯುವುದು ಬಹಳ ಸುಲಭ. ಆದರೆ, ಮಕ್ಕಳ ಮಾನಸಿಕ ಆರೋಗ್ಯವನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟ.

ಮಕ್ಕಳ ಮಾನಸಿಕ ಲಕ್ಷಣಗಳನ್ನು ಗುರುತಿಸುವತ್ತ ಗಮನ ನೀಡಲು ಪಾಲಕರು ಅರಿಯಬೇಕು. ಮಕ್ಕಳಲ್ಲಿ ಆಗುವ ದಿಢೀರ್ ವರ್ತನಾ ಬದಲಾವಣೆಗಳು ಅವರಲ್ಲಿ ಸಮಸ್ಯೆ ಇರುವ ಕುರಿತು ಸುಳಿವು ನೀಡಬಹುದು. ಇದ್ದಕ್ಕಿದ್ದಂತೆ ಸಿಟ್ಟಿಗೇಳುವುದು, ಅತಿಯಾದ ವ್ಯಾಯಾಮ, ವಸ್ತುಗಳಿಗೆ ಹಾನಿ ಮಾಡುವುದು ಅಥವಾ ನಾಶಪಡಿಸುವುದು ಮುಂತಾದ ವರ್ತನೆಗಳಲ್ಲಿ ಇದು ಅಭಿವ್ಯಕ್ತವಾಗುತ್ತದೆ. ಮಕ್ಕಳ ಕೆಲ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಇಲ್ಲಿ ಚರ್ಚಿಸೋಣ.     
                  
ಕೋಪೋದ್ರೇಕ
ಕೋಪೋದ್ರೇಕ ಅಥವಾ ರಂಪಾಟವು ಮಕ್ಕಳ ಅಸಂತೋಷಕರ ಮತ್ತು ಛಿದ್ರಕಾರಕ ವರ್ತನೆ ಅಥವಾ ಭಾವನಾತ್ಮಕ ಸ್ಫೋಟ. ಸಾಮಾನ್ಯವಾಗಿ ತಮ್ಮ ಅಗತ್ಯಗಳು ಅಥವಾ ಆಸೆಗಳು ಈಡೇರದಿದ್ದಾಗ ಪ್ರತಿಕ್ರಿಯೆಯಾಗಿ ಈ ರೀತಿ ಆಗುತ್ತದೆ. ಚಿಕ್ಕ ಮಕ್ಕಳಲ್ಲಿ ಕೋಪೋದ್ರೇಕ ಸಾಮಾನ್ಯ ಅಥವಾ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸಲಾಗದವರಲ್ಲಿ ಅಥವಾ ಹತಾಶರಾದಾಗ, ನಿರಾಶರಾದಾಗ ತಮ್ಮ ಭಾವನೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲಾಗದ ಮಕ್ಕಳು ಅಥವಾ ಇತರರಲ್ಲಿ ಇದು ಉಂಟಾಗುತ್ತದೆ.

ಬಾಲ್ಯದ ಆರಂಭ ಕಾಲದಲ್ಲಿ ಕೋಪೋದ್ರೇಕಗಳು ಸಹಜ. ತಾವು ಪ್ರತ್ಯೇಕ ಜೀವಿಗಳು ಎಂಬ ಪಾಠವನ್ನು ಮಕ್ಕಳು ಪಾಲಕರಿಂದ ಕಲಿಯುವುದರಿಂದ ಅವರಲ್ಲಿ ತಮ್ಮ ಸ್ವಾತಂತ್ರ್ಯವನ್ನು ಪ್ರತಿಪಾದಿಸುವ ಪ್ರವೃತ್ತಿ ಸಾಮಾನ್ಯ ಮತ್ತು ಸಹಜವಾಗಿರುತ್ತದೆ. ನಿಯಂತ್ರಣದ ಕುರಿತಾದ ಈ ಆಕಾಂಕ್ಷೆಯು ಯಾವುದಕ್ಕಾದರೂ `ಇಲ್ಲ~ ಎಂದು ಹೇಳುವಲ್ಲಿ ವ್ಯಕ್ತವಾಗುತ್ತದೆ ಮತ್ತು ಕೋಪೋದ್ರೇಕ, ರಂಪಾಟದಲ್ಲಿ ವ್ಯಕ್ತವಾಗುತ್ತವೆ. ತಮ್ಮ ಭಾವನೆಗಳನ್ನು ಶಬ್ದಗಳ ಮೂಲಕ ವ್ಯಕ್ತಪಡಿಸಲು ಆಗದಿದ್ದಾಗ ಮಕ್ಕಳ ಈ ವರ್ತನೆ ಇನ್ನಷ್ಟು ಹದಗೆಡುವ ಮಟ್ಟಕ್ಕೆ ಹೋಗುತ್ತದೆ.

ಸಾಮಾನ್ಯವಾಗಿ ಕೋಪೋದ್ರೇಕವು 12-18 ತಿಂಗಳ ವಯಸ್ಸಿನಲ್ಲಿ ಆರಂಭವಾಗುತ್ತದೆ. 2 ಮತ್ತು 3ನೇ ವರ್ಷದಲ್ಲಿ ಇದು ವಿಪರೀತಕ್ಕೆ ಹೋಗುತ್ತದೆ. ನಂತರ 4ನೇ ವರ್ಷದ ಹೊತ್ತಿಗೆ ತೀವ್ರಗತಿಯಲ್ಲಿ ಕಡಿಮೆಯಾಗುತ್ತದೆ. 4ನೇ ವಯಸ್ಸಿನ ನಂತರ ಇದು ಕಾಣಿಸುವುದು ಅಪರೂಪ. ದಣಿವಾಗಿದ್ದಾಗ, ಹಸಿವಾಗಿದ್ದಾಗ ಅಥವಾ ಅನಾರೋಗ್ಯವಾಗಿದ್ದಾಗ ಸಿಟ್ಟು, ಸೆಡವು ಪ್ರವೃತ್ತಿ ಇನ್ನಷ್ಟು ಹದಗೆಡುತ್ತದೆ ಮತ್ತು ಪದೇ ಪದೇ ಕಾಣಿಸುತ್ತದೆ.

ಮಕ್ಕಳಲ್ಲಿ ಕೋಪದ ಪ್ರವೃತ್ತಿ ಇದ್ದಾಗ ಪಾಲಕರು ಶಾಂತವಾಗಿರುವುದು ಮುಖ್ಯ. ಇದಲ್ಲದೆ, ಮಕ್ಕಳ ಗಮನವನ್ನು ಬೇರೆಡೆ ಸೆಳೆಯುವ ಯತ್ನವನ್ನೂ ಮಾಡಬಹುದು. ಮಕ್ಕಳು ಆನಂದಿಸುವ ಚಟುವಟಿಕೆಗಳತ್ತ ತೊಡಗಿಸುವ ಮೂಲಕ ಮಕ್ಕಳ ಗಮನವನ್ನು ಬೇರೆಡೆ ತಿರುಗುವಂತೆ ಮಾಡಬಹುದು ಅಥವಾ ಪಾಲಕರೇ ವಿನೋದ ಚಟುವಟಿಕೆಯಿಂದ ಮಕ್ಕಳ ಮುಖದಲ್ಲಿ ನಗೆಯರಳುವಂತೆ ಮಾಡಲು ಯತ್ನಿಸಬಹುದು. ಮಕ್ಕಳು ಕೋಪಗೊಂಡಾಗ ನೀವು ಮನೆಯಲ್ಲಿ ಇಲ್ಲದಿದ್ದರೆ,  ಮಕ್ಕಳನ್ನು ಕಾರು ಅಥವಾ ವಿಶ್ರಾಂತಿ ಕೋಣೆಯಂತಹ ಶಾಂತ ಸ್ಥಳಕ್ಕೆ ಕರೆದೊಯ್ಯಲು ಪ್ರಯತ್ನಿಸಿ. ಮಕ್ಕಳ ರಂಪಾಟ, ಕೋಪ ಇಳಿಯುವವರೆಗೆ ಅವರನ್ನು ಸುರಕ್ಷಿತವಾಗಿ ನೋಡಿಕೊಳ್ಳಿ.

ಕೋಪಕ್ಕೆ ಬ್ರೇಕ್
- ನಿಮ್ಮ ಮಗು ಎಂದಿನ ಸಮಯದಲ್ಲಿಯೇ ಆಹಾರ ಸೇವಿಸುತ್ತದೆ ಮತ್ತು ನಿದ್ರಿಸುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

-ಯಾವ ಷೂ ಧರಿಸಬೇಕು ಅಥವಾ ಎತ್ತರದ ಕುರ್ಚಿಯಲ್ಲಿ ಕೂಡ್ರಬೇಕೋ  ಬೇಡವೊ ಇತ್ಯಾದಿ ಅಮುಖ್ಯ ವಿಷಯಗಳ ಕುರಿತು ಜಗಳ ಕಾಯಬೇಡಿ.

- ಮಕ್ಕಳ ಸುರಕ್ಷತೆ ಕುರಿತು ಕಾಳಜಿ ಬೇಕು. ಬಿಸಿ ಸ್ಟೋವ್‌ಅನ್ನು ಮುಟ್ಟದಿರುವುದು, ಕಾರ್ ಸೀಟ್ ಬಕಲ್ ಹಾಕಿಡುವುದು, ಬೀದಿಯಲ್ಲಿ ಆಡದಿರುವುದು ಇತ್ಯಾದಿ. `ನಿಮ್ಮ ಪುಟ್ಟ ಮಗು ಎಲ್ಲದಕ್ಕೂ `ಇಲ್ಲ~ಎಂದು ಹೇಳುತ್ತಿದ್ದರೆ, ದಿನದಲ್ಲಿ ನೀವು ಕೆಲವು ಬಾರಿ ಮಾತ್ರ `ಇಲ್ಲ~ಎಂದು ಹೇಳಬೇಕು. ಅದೂ ಅತಿ ಅಗತ್ಯವಾಗಿದ್ದಾಗ ಮಾತ್ರ~ಎಂದು ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್‌ನ ತಜ್ಞರು ಹೇಳುವ ಮಾತು ಉಲ್ಲೇಖನೀಯ.

- ಸಾಧ್ಯವಿದ್ದಾಗಲೆಲ್ಲ ಮಕ್ಕಳಿಗೆ ಆಯ್ಕೆಗಳನ್ನು ನೀಡಿ. ಉದಾ:ಯಾವ ಬಟ್ಟೆ ಧರಿಸಬೇಕು ಅಥವಾ ಯಾವ ಕಥೆ ಓದಬೇಕೆಂಬುದನ್ನು ಮಗುವೇ ನಿರ್ಧರಿಸಲಿ.

ಕೋಪದ ಗುಣ ಹದಗೆಡುತ್ತಲೇ ಇದ್ದರೆ ಮತ್ತು ನಿಮ್ಮಿಂದ ಮಗುವನ್ನು ಸಂಭಾಳಿಸಲು ಆಗದು ಎಂದೆನಿಸಿದರೆ, ಅಥವಾ ಮಗುವಿನ ವರ್ತನೆಗೆ ದೈಹಿಕವಾಗಿ ಶಿಕ್ಷಿಸುವ ಮೂಲಕ ಪ್ರತಿಕ್ರಿಯಿಸುತ್ತೀರಿ ಎಂಬ ಆತಂಕ ನಿಮಗಿದ್ದರೆ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳಿ.

ಮಕ್ಕಳಲ್ಲಿ ಕಂಡುಬರುವ ಅವಿಧೇಯತೆ, ಪ್ರತಿಭಟನೆ, ಎದುರುಬೀಳುವ ವರ್ತನೆಯನ್ನು `ಅಪೊಜಿಶನಲ್ ಡಿಫಯಂಟ್ ಡಿಸ್‌ಆರ್ಡರ್~ ಎಂದು ಕರೆಯಲಾಗುತ್ತದೆ. ಇದು, ಕುಟುಂಬದವರು ಮತ್ತು ಸಂಬಂಧಪಟ್ಟ ಇತರ ಅಧಿಕಾರವಲಯದವರ ಕುರಿತು ಮಕ್ಕಳಲ್ಲಿ ಕಾಣಿಸುವ ಅವಿಧೇಯತೆ, ಹಗೆತನ ಮತ್ತು ಉದ್ಧಟತನದ ವರ್ತನೆಯ ಮಾದರಿ. ಹುಡುಗಿಯರಿಗಿಂತ ಹುಡುಗರಲ್ಲಿ ಈ ಅಸ್ವಸ್ಥತೆ ಹೆಚ್ಚು ಮಾಮೂಲು. ಈ ಅಸ್ವಸ್ಥತೆಯು ಜೈವಿಕ, ಮಾನಸಿಕ ಮತ್ತು ಸಾಮಾಜಿಕ ಅಂಶಗಳ ಸಂಯೋಜನೆಯ ಕಾರಣದಿಂದಾಗಿ ಆಗುತ್ತದೆ ಎಂದು ಭಾವಿಸಲಾಗಿದೆ.

ಲಕ್ಷಣಗಳು
- ದೊಡ್ಡವರ ವಿನಂತಿಗಳನ್ನು ಸಕ್ರಿಯವಾಗಿ ಅನುಸರಿಸದಿರುವುದು.
- ಇತರರ ಬಗ್ಗೆ ಕೋಪ ಮತ್ತು ಅಸಮಾಧಾನ
- ದೊಡ್ಡವರ ಜೊತೆ ವಾಗ್ವಾದ
- ತಮ್ಮ ತಪ್ಪಿಗೆ ಇತರರನ್ನು ದೂಷಿಸುವುದು.
- ಕೆಲವೇ ಸ್ನೇಹಿತರನ್ನು ಹೊಂದಿರುವುದು ಅಥವಾ ಸ್ನೇಹಿತರೇ ಇಲ್ಲದಿರುವುದು ಅಥವಾ ಸ್ನೇಹಿತರನ್ನು ಕಳೆದುಕೊಳ್ಳುವುದು

- ಶಾಲೆಯಲ್ಲಿ ನಿರಂತರವಾಗಿ ತೊಂದರೆಗೀಡಾಗುವುದು.
- ಶಾಂತತೆ ಕಳೆದುಕೊಳ್ಳುವುದು.
- ಪ್ರತೀಕಾರ ಭಾವನೆ.
- ಸಣ್ಣ ಕಾರಣಕ್ಕೆ ಅಥವಾ ಸುಲಭಕ್ಕೆ ಕೆರಳುವುದು.

ಮಕ್ಕಳಲ್ಲಿ ಈ ತೊಂದರೆ ಇದೆ ಎಂದು ನಿರ್ಧರಿಸಲು ಇಂಥ ಲಕ್ಷಣಗಳು ಕನಿಷ್ಠ ಆರು ತಿಂಗಳವರೆಗೆ ಇರಬೇಕು ಮತ್ತು ಬಾಲ್ಯದಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುವರ್ತನೆಗಳಿಗಿಂತ ಹೆಚ್ಚಿನದಾಗಿರಬೇಕು. ಮತ್ತು ಅಂಥ ವರ್ತನೆಯು ಶಾಲೆ ಅಥವಾ ಸಾಮಾಜಿಕ ಚಟುವಟಿಕೆಗಳಲ್ಲಿ ಗಮನಾರ್ಹ ಸಮಸ್ಯೆಗಳನ್ನು ಉಂಟುಮಾಡುವಂತಿರಬೇಕು.

ಈ ಅಸ್ವಸ್ಥತೆಯ ಲಕ್ಷ್ಷಣಗಳಿರುವ ಮಕ್ಕಳನ್ನು ಮನೋರೋಗಚಿಕಿತ್ಸಕರು ಅಥವಾ ಮನೋವೈದ್ಯರ ಬಳಿ ತೋರಿಸಬೇಕು.

ಸಂಭಾವ್ಯ ತೊಂದರೆ
ಅನೇಕ ಪ್ರಕರಣಗಳಲ್ಲಿ, ಈ ಅಸ್ವಸ್ಥತೆ ಇರುವ ಮಕ್ಕಳು ಬೆಳೆಯುತ್ತಿದ್ದಂತೆ ನಡವಳಿಕೆ ತೊಂದರೆಗಳು ಕಾಣಿಸುತ್ತವೆ. ತಾರುಣ್ಯದಲ್ಲಿ ಅಥವಾ ದೊಡ್ಡವರಾದಾಗ ಈ ತೊಂದರೆ ಆಗಬಹುದು. ಕೆಲ ಪ್ರಕರಣಗಳಲ್ಲಿ, ಮಕ್ಕಳಲ್ಲಿ ಸಮಾಜವಿರೋಧಿ ವ್ಯಕ್ತಿತ್ವ ಅಸ್ವಸ್ಥತೆ ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಮುನ್ನೆಚ್ಚರಿಕೆ
ಮನೆಯಲ್ಲಿ ನಿಯಮಗಳು ಮತ್ತು ಅವುಗಳ ಪರಿಣಾಮಗಳ ಕುರಿತು ಸ್ಥಿರವಾಗಿರಬೇಕು. ಬಹಳ ಕಠಿಣವಾಗಿ ಮಕ್ಕಳನ್ನು ಶಿಕ್ಷಿಸಬಾರದು. ಮಕ್ಕಳಲ್ಲಿ ಸರಿಯಾದ ವರ್ತನೆಗಳ ಕುರಿತು ಮಾದರಿ ಹಾಕಿಕೊಡಬೇಕು. ದೂಷಣೆ ಮತ್ತು ನಿರ್ಲಕ್ಷ್ಯ ಮಾಡಿದರೆ ಮಕ್ಕಳಲ್ಲಿ ಈ ಬಗೆಯ ತೊಂದರೆ ಕಾಣಿಸುವ ಸಾಧ್ಯತೆ ಹೆಚ್ಚು.

                                                    ===========
ನಡವಳಿಕೆ ತೊಂದರೆ
ಬಾಲ್ಯ ಮತ್ತು ತಾರುಣ್ಯದಲ್ಲಿ ನಡವಳಿಕೆ ಅಸ್ವಸ್ಥತೆ ಕಂಡುಬರುತ್ತದೆ. ಇದು ದೀರ್ಘಕಾಲೀನ ವರ್ತನಾ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಬಾಲ್ಯದಲ್ಲಿನ ದೌರ್ಜನ್ಯ, ಕೌಟುಂಬಿಕ ಬಿಕ್ಕಟ್ಟುಗಳು, ಬಡತನ, ಪಾಲಕರಲ್ಲಿ ಮದ್ಯಸೇವನೆ ಚಟ ಮುಂತಾದವು ಇದಕ್ಕೆ ಕಾರಣವಾಗುತ್ತವೆ.

ಹುಡುಗರಲ್ಲಿ ನಡವಳಿಕೆ ತೊಂದರೆ ಹೆಚ್ಚು ಮಾಮೂಲು. ಏಕಾಗ್ರತೆ ಕೊರತೆ ತೊಂದರೆಯ ಜೊತೆ ಇದು  ಸಂಬಂಧ ಹೊಂದಿರುತ್ತದೆ. ಈ ಎರಡೂ ಸ್ಥಿತಿಗಳಲ್ಲಿ ಮಕ್ಕಳು ಮದ್ಯ ಅಥವಾ ಇತರ ಮಾದಕವಸ್ತುಗಳ ಚಟಕ್ಕೆ ಬೀಳುವ ಅಪಾಯವಿರುತ್ತದೆ. ಇದು ಖಿನ್ನತೆಯ ಮುಂಚಿತ ಲಕ್ಷಣವೂ ಆಗಿರಬಹುದು. ನಡವಳಿಕೆ ತೊಂದರೆ ಇರುವ ಮಕ್ಕಳು ಹಠಾತ್ ಪ್ರವೃತ್ತಿಯವರೂ, ನಿಯಂತ್ರಿಸಲು ಕಷ್ಟವೂ, ಇತರರ ಭಾವನೆಗಳ ಕುರಿತು ಕಾಳಜಿ ಇಲ್ಲದವರೂ ಆಗಿರುತ್ತಾರೆ. ಈ ತೊಂದರೆಯ ಲಕ್ಷಣಗಳು:

- ಸ್ಪಷ್ಟ ಕಾರಣವಿಲ್ಲದೆ ನಿಯಮ ಉಲ್ಲಂಘಿಸುವುದು.
- ಜನರು ಮತ್ತು ಪ್ರಾಣಿಗಳ ಕುರಿತು ಕ್ರೂರ ವರ್ತನೆ.
- ಶಾಲೆಗೆ ಹಾಜರಾಗಲು ವೈಫಲ್ಯ.
- ಕುಡಿಯುವುದು ಅಥವಾ ಮಾದಕ ವಸ್ತುಗಳ ಅತಿ ಸೇವನೆ.
- ತಮ್ಮ ಪ್ರಯೋಜನಕ್ಕಾಗಿ ಸುಳ್ಳಾಡುವುದು ಮತ್ತು ತಾವು ಮಾಡಬೇಕಾದ ಕೆಲಸಗಳಿಂದ ತಪ್ಪಿಸಿಕೊಳ್ಳುವುದು.
- ಓಡಿಹೋಗುವುದು.
- ಆಸ್ತಿಗೆ ಹಾನಿಮಾಡುವುದು

ಮಗು ಅಥವಾ ಹದಿಹರೆಯದವರಲ್ಲಿ ನಡವಳಿಕೆ ಸಮಸ್ಯೆ ವರ್ತನೆಯ ಇತಿಹಾಸ ಇದ್ದಾಗ ಈ ಕುರಿತು ಡಯಗ್ನೈಸ್ ಮಾಡಲಾಗುತ್ತದೆ. ಅಪರೂಪಕ್ಕೆ, ಇತರ ತೊಂದರೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಿದುಳಿನ ಸ್ಕ್ಯಾನ್ ಕೂಡ ಪ್ರಯೋಜನಕ್ಕೆ ಬರಬಹುದು.
(ಲೇಖಕರು ಹೋಮಿಯೊಪಥಿ ತಜ್ಞರು,ಮೊಬೈಲ್ 8880788123)

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT