ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಲ್ಲಿ ಸ್ವಾಭಿಮಾನ ಬೆಳೆಸಿ: ದೇಶಪಾಂಡೆ

Last Updated 6 ಸೆಪ್ಟೆಂಬರ್ 2013, 6:52 IST
ಅಕ್ಷರ ಗಾತ್ರ

ಕಾರವಾರ: `ಮಕ್ಕಳಿಗೆ ಗುಣಮಟ್ಟ ಶಿಕ್ಷಣ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಶಿಕ್ಷಕರು ಪಾಠ ಮಾಡುವುದರ ಜೊತೆಗೆ ಮಕ್ಕಳಲ್ಲಿ ಸ್ವಾಭಿಮಾನ ಹಾಗೂ ಶಿಸ್ತು ಬೆಳೆಸಬೇಕು' ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಸಲಹೆ ನೀಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಅಂಕೋಲಾ ಅರ್ಬನ್ ಬ್ಯಾಂಕ್, ಕೆನರಾ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಕೈಗಾ ಅಣು ವಿದ್ಯುತ್ ಉತ್ಪಾದನಾ ಕೇಂದ್ರದ ಆಶ್ರಯದಲ್ಲಿ ಗುರುವಾರ ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ವಿದ್ಯಾರ್ಥಿಗಳಿಗೆ ನೀಡುವ ಶಿಕ್ಷಣ ಅವರನ್ನು ವಿಶ್ವಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಜ್ಜುಗೊಳಿಸುವಂತಿರಬೇಕು. ಉತ್ತಮ  ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ವಿದ್ಯಾರ್ಥಿಗಳು ಮಾರುಕಟ್ಟೆಯಲ್ಲಿ ಉತ್ತಮ ಉದ್ಯೋಗ ಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ನಗರ ಪ್ರದೇಶದಲ್ಲಿ ಸಿಗುವ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಮಟ್ಟದಲ್ಲೂ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ. ಮುಂದಿನ ದಿನಗಳಲ್ಲಿ ಉಪಗ್ರಹ ಆಧಾರಿತ ಪಠ್ಯಕ್ರಮಗಳನ್ನು ವ್ಯಾಪಕಗೊಳಿಸಲಾಗುವುದು' ಎಂದರು.

`ಶಿಕ್ಷಕರ ಪ್ರತಿಭೆ ಹೊರಹಾಕುವುದಕ್ಕೂ ಈ ದಿನಾಚರಣೆ ವೇದಿಕೆಯಾಗಬೇಕು. ಶಿಕ್ಷಕ ಪ್ರಶಸ್ತಿ ನೀಡುವಾಗ ಅವರ ಪ್ರತಿಭೆಗಳನ್ನು ಪರಿಗಣಿಸಬೇಕು' ಎಂದರು.

ಪ್ರಶಸ್ತಿ ಪ್ರದಾನ: ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 10 ಶಿಕ್ಷಕರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. 

ಪ್ರೌಢಶಾಲಾ ವಿಭಾಗ: ಸುಬ್ರಾಯ ಶಂಕರ ಹೆಬ್ಬಾರ, ಭಾಸ್ಕರ ಪಿ. ಗಾಂವಕರ್, ರಾಜು ರಾಮಾ ನಾಯ್ಕ, ಪಿ. ಮಂಜಪ್ಪ, ಸಬಿಹಾ ಖಾತೀನ್ ಮೊಹಿದ್ದೀನ್.

ಪ್ರಾಥಮಿಕ ಶಾಲಾ ವಿಭಾಗ: ಸರ್ವಮಂಗಳಾ ಬೊಮ್ಮಯ್ಯ ನಾಯಕ, ಸುಜಾತಾ ಬಿ.ನಾಯಕ, ತುಳ್ಸು ಐ. ಗೌಡ, ಗಣಪತಿ ತಮ್ಮಯ್ಯ ನಾಯ್ಕ, ಸುಬ್ರಾಯ ರಾ. ಮೇಸ್ತ ಅವರನ್ನು ಸನ್ಮಾನಿಸಲಾಯಿತು.

ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರನ್ನು ನಗರದ ಜನ ವಿಕಾಸ ಸಂಸ್ಥೆಯ ಆಶ್ರಯದಲ್ಲಿ ಸನ್ಮಾನಿಸಲಾಯಿತು. ಶಾಸಕ ಸತೀಶ ಸೈಲ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೃಷ್ಣ ಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಆರತಿ ಬಾನಾವಳಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಸುಬ್ರಾಯ ಕಾಮತ್, ಜಿಲ್ಲಾ ವರಿಷ್ಠಾಧಿಕಾರಿ ಆರ್. ದಿಲೀಪ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರೇವಣ ಸಿದ್ಧಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಕಾಂತ್ ಹೆಗಡೆ, ಜನವಿಕಾಸ ಸಂಸ್ಥೆಯ ಅಧ್ಯಕ್ಷೆ ಖೈರುನ್ನಿಸಾ ಶೇಖ್ ಮತ್ತಿತರರು ಹಾಜರಿದ್ದರು.

`ಶಿಕ್ಷಕರ ಪಾತ್ರ ಬಹು ದೊಡ್ಡದು'
ಹಳಿಯಾಳ: `ದೇಶವನ್ನು ಮಾದರಿಯನ್ನಾಗಿಸಲು ಶಿಕ್ಷಕರ ಪಾತ್ರ ಬಹು ದೊಡ್ಡದು' ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಹೇಳಿದರು.

ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಪಟ್ಟಣದಲ್ಲಿ ಗುರು ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನದರ ಜೊತೆಗೆ ರೂ 20 ಲಕ್ಷ ಗಳನ್ನು ಮಂಜೂರು ಮಾಡಲಾಗುವುದು ಎಂದರು.

ಡಾ.ಎಸ್.ವಿ.ವಸ್ತ್ರದ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ನಾಯ್ಕ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಣರಾವ್ ಯಕ್ಕುಂಡಿ, ತಹಶೀಲ್ದಾರ್‌ಶಾರದಾ ಸಿ.ಕೋಲಕಾರ, ಪ್ರಾರ್ಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಡಿ.ಮಡಿವಾಳ, ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಮೋಹನ ಶೆಟ್ಟಿ, ಪ.ಪಂ. ಸದಸ್ಯ ಉಮೇಶ ಬೊಳಶೆಟ್ಟಿ ಮಾತನಾಡಿದರು.

ಶಿಕ್ಷಕ ಸುರೇಂದ್ರ ಬಿರ್ಜೆ ರಚಿಸಿರುವ ವರ್ಷದ 365 ದಿನಗಳಲ್ಲಿನ ದಿನವಿಶೇಷ ಕ್ಯಾಲೆಂಡರ್ ಅನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.

ಚಿಬ್ಬಲಗೇರಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಹವ್ಯಾಸಿ ಕಲಾವಿದ ಸಿದ್ದಪ್ಪಾ ಬಿರಾದಾರ ನಿರ್ದೇಶನದಲ್ಲಿ ಶಾಲಾ ವಿದ್ಯಾರ್ಥಿಗಳು ಪುಣ್ಯಕೋಟಿ ಕಥಾ ರೂಪಕದ ಗೊಂಬೆಯಾಟವನ್ನು ಪ್ರದರ್ಶಿಸಿದರು.

ತಾಲ್ಲೂಕು ಮಟ್ಟದ ಉತ್ತಮ ಶಿಕ್ಷಕ, ಉತ್ತಮ ಶಾಲೆ ಹಾಗೂ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

`ಸಾಮಾಜಿಕ ಮೌಲ್ಯ ಬೆಳೆಸಿ'
ಮುಂಡಗೋಡ: `ಇಂದಿನ ತಾಂತ್ರಿಕ ಯುಗದಲ್ಲಿ ಸಾಮಾಜಿಕ ಮೌಲ್ಯಗಳನ್ನು ಬೆಳೆಸುವ  ಜವಾಬ್ದಾರಿ ಶಿಕ್ಷಕರ ಮೇಲಿದೆ' ಎಂದು ಜಿ.ಪಂ.ಸದಸ್ಯ ಅಶೋಕ ಸಿರ್ಸಿಕರ ಹೇಳಿದರು.

ಇಲ್ಲಿಯ ಲೊಯೋಲ ವಿಕಾಸ ಕೇಂದ್ರದ ಸಭಾಭವನದಲ್ಲಿ ನಡೆದ ಗುರು ಗೌರವಾರ್ಪಣ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದರು. 

ಸಾಮಾಜಿಕ ಕಾರ್ಯಕರ್ತ ಪಿ.ಎಸ್.ಸಂಗೂರಮಠ ಮಾತನಾಡಿ ಸಮಾಜದಲ್ಲಿ ಗುರುವಿಗೆ ಹೆಚ್ಚಿನ ಸ್ಥಾನವಿದ್ದು ಮಕ್ಕಳನ್ನು ಆದರ್ಶವ್ಯಕ್ತಿಗಳನ್ನಾಗಿ ಮಾಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು.

ಅದರಗುಂಚಿಯ ಟೀಡ್ಸ್ ತರಬೇತಿ ಸಂಸ್ಥೆಯ ಮುಖ್ಯಸ್ಥ ಶಿವಾನಂದ ಜವಳಿ ಉಪನ್ಯಾಸ ನೀಡಿದರು. ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘ ಹಾಗೂ ರೋಟರಿ ಕ್ಲಬ್ ವತಿಯಿಂದ ಹಲವು ಶಿಕ್ಷಕರನ್ನು ಸನ್ಮಾನಿಸಲಾಯಿತು.

ತಾ.ಪಂ.ಅಧ್ಯಕ್ಷೆ ಕೊಂಡುಬಾಯಿ ಜೋರೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕ ಎ.ಎಚ್.ದೊಡ್ಮನಿ, ಪ್ರಾ.ಶಿ.ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ.ಹೂಗಾರ, ಪ್ರೌ.ಶಾ.ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಎನ್.ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಮಹೇಶ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.

ಬಿಇಒ ವೈ.ಬಿ.ಬಾದವಾಡಗಿ ಸ್ವಾಗತಿಸಿದರು. ಬಸವರಾಜ ಬೆಂಡ್ಲಗಟ್ಟಿ ನಿರ್ವಹಿಸಿದರು. ಎನ್.ಆರ್.ಕಳ್ಳಿಮನಿ ವಂದಿಸಿದರು.
`ಭವಿಷ್ಯದ ನಾಗರಿಕರ ರೂವಾರಿ'

ಅಂಕೋಲಾ: `ಶಿಕ್ಷಕರು ದೇಶದ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯುತ ನಾಗರಿಕರನ್ನು ನಿರ್ಮಿಸುವ ಶಿಲ್ಪಿಗಳಾಗಿದ್ದಾರೆ. ಇಂಥ ಶಿಕ್ಷಕರ ಆದರ್ಶಗಳು ವಿದ್ಯಾರ್ಥಿಗಳ ಜೀವನದುದ್ದಕ್ಕೂ ದಾರಿದೀಪಗಳಾಗುತ್ತವೆ' ಎಂದು ಶಾಸಕ ಸತೀಶ ಸೈಲ್ ಅಭಿಪ್ರಾಯಪಟ್ಟರು.
ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಜಿ.ಪಂ. ಸದಸ್ಯ ವಿನೋದ ಬಿ. ನಾಯಕ, ಜಿ.ಪಂ. ಸದಸ್ಯೆ ಸರಸ್ವತಿ ಗೌಡ, ತಾ.ಪಂ. ಅಧ್ಯಕ್ಷೆ ಮಂಜುಳಾ ವೆರ್ಣೇಕರ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಪಿ.ಜಿ. ಗಾಂವಕರ, ಶಾಲಾ ನೌಕರರ ಸಂಘದ ಕಾರ್ಯದರ್ಶಿ ವೆಂಕಟ್ರಮಣ ನಾಯ್ಕ, ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ನಾಯಕ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್.ಎಚ್. ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. ಕಾರವಾರದ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಶಿವಾನಂದ ನಾಯಕ ಉಪನ್ಯಾಸ ನೀಡಿದರು.

ಸನ್ಮಾನ: ಇದೇ ಸಂದರ್ಭದಲ್ಲಿ 30 ಜನ ನಿವೃತ್ತ ಶಿಕ್ಷಕರು, ಕಳೆದ ಸಾಲಿನಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ವೆಂಕಟ್ರಮಣ ಬಿ. ನಾಯಕ, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಎಸ್.ಎನ್. ಭಟ್, ಮಂಜುನಾಥ ನಾಯಕ ಇವರನ್ನು ಸಂಘಟಕರ ಪರವಾಗಿ ಗೌರವಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯಕ ಸ್ವಾಗತಿಸಿದರು. ಶಿಕ್ಷಕಿ ರಮಾ ಸಂಗಡಿಗರು ಪ್ರಾರ್ಥನೆ ಹಾಡಿದರು. ಅಂಕೋಲಾ ಅರ್ಬನ್ ಬ್ಯಾಂಕ್ ನಿರ್ದೇಶಕ ಭೈರವ್ ಡಿ. ನಾಯ್ಕ ಪ್ರಾಸ್ತವಿಕವಾಗಿ ಮಾತನಾಡಿದರು. ಶಿಕ್ಷಕ ಮಂಜುನಾಥ ಬರ್ಗಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT