ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳು ಎಂಬ ಆಜ್ಞಾಪಾಲಕರು!

Last Updated 30 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಕ್ಕಳ ಬುದ್ಧಿವಂತಿಕೆ ಬಗ್ಗೆ ಮಾತನಾಡುವಾಗಲೆಲ್ಲ ಯಾವುದು ಬುದ್ಧಿವಂತಿಕೆ, ಯಾರು ಬುದ್ಧಿವಂತರು ಎಂಬ ಬಗ್ಗೆ ಸ್ಪಷ್ಟವಾಗಿ ಹೇಳಲು ನಾನು ತಡಕಾಡುತ್ತೇನೆ. ಏಕೆಂದರೆ ಶಾಲಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರು ಬುದ್ಧಿವಂತರು, ಉಳಿದವರು ದಡ್ಡರು ಎಂಬುದು ಪೋಷಕರಾದಿಯಾಗಿ ಬಹುತೇಕರ ನಂಬಿಕೆಯಾಗಿದೆ. ಪರೀಕ್ಷೆಯಲ್ಲಿ ಫೇಲಾದವರಂತೂ ಉಪಯೋಗಕ್ಕೆ ಬಾರದವರು ಎಂಬ ಭಾವನೆ ಹಲವರಲ್ಲಿ ಇದೆ. ಈ ತಪ್ಪು ಗ್ರಹಿಕೆಯಿಂದ ಹೊರಬರಬೇಕಾದರೆ ಬದುಕಿನಲ್ಲಿ ಗೆದ್ದವರೆಷ್ಟು- ಸೋತವರೆಷ್ಟು? ಸುಖಿಗಳೆಷ್ಟು- ದುಃಖಿಗಳೆಷ್ಟು? ಇವರಲ್ಲಿ ಹೆಚ್ಚು ಅಂಕ ಪಡೆದವರೆಷ್ಟು- ಕಡಿಮೆ ಅಂಕ ಪಡೆದವರೆಷ್ಟು? ಎಂಬುದರ ಸಮೀಕ್ಷೆ ನಡೆಸಿ ಈ ಬಗ್ಗೆ ಉನ್ನತ ಮಟ್ಟದ ಅಧ್ಯಯನ ನಡೆಸಬೇಕು.

ಶಾಲಾ ಪರೀಕ್ಷೆಯಲ್ಲಿ ಪಾಸಾದ ಎಷ್ಟೋ ಜನ ಜೀವನ ಪರೀಕ್ಷೆಯಲ್ಲಿ ಫೇಲಾಗಿದ್ದಾರೆ. ಹಾಗೆಂದು ಶಿಕ್ಷಣ ಬೇಡ ಎಂಬುದು ನನ್ನ ಅಭಿಮತವಲ್ಲ. ಶಾಲಾ ಶಿಕ್ಷಣ ಹೇಗಿರಬೇಕು ಎಂಬುದು ನನ್ನ ಮೂಲಭೂತ ಪ್ರಶ್ನೆ. ಮಕ್ಕಳ ಕಲಿಕೆ  ಕುರಿತು ಹೇಳುವಾಗ ನನಗೆ ಎರಡು ಮಹತ್ವದ ಪತ್ರಗಳ ವಿಷಯ ಪ್ರಸ್ತಾಪಿಸುವುದು ತುಂಬಾ ಮುಖ್ಯ ಎನಿಸುತ್ತದೆ. ಒಂದು, ಅವೆುರಿಕದ ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್ ತಮ್ಮ ಮಗನ ಶಿಕ್ಷಕನಿಗೆ ಬರೆದ ಪತ್ರ. ಇನ್ನೊಂದು, ನನ್ನ ಸ್ನೇಹಿತ ರಂಗಕರ್ಮಿ ಹಾಗೂ ರಂಗಶಿಕ್ಷಕ ಎಸ್.ರಾಮನಾಥ ಅವರು ತಮ್ಮ ಶಿಕ್ಷಕ ಮಿತ್ರನಿಗೆ ಬರೆದ ಆತ್ಮ ಶೋಧನೆಯ ಆತ್ಮೀಯ ಪತ್ರ.

ಅಬ್ರಹಾಂ ಲಿಂಕನ್ ಅವರು ಬರೆದ ಪತ್ರದ ಸಾರಾಂಶ ಹೀಗಿದೆ:
`ಎಲ್ಲರೂ ನ್ಯಾಯಪರರಲ್ಲ, ಸತ್ಯವಂತರಲ್ಲ ಎಂಬುದನ್ನು ಬಲ್ಲೆನಾದರೂ ಪ್ರತಿಯೊಬ್ಬ ಮುಠ್ಠಾಳನಿಗೂ ಪ್ರತಿಯಾಗಿ ಒಬ್ಬ ಧೀರೋದಾತ್ತನನ್ನು, ಪ್ರತಿಯೊಬ್ಬ ಸ್ವಾರ್ಥ ರಾಜಕಾರಣಿಗೆ ಬದಲು ಒಬ್ಬ ನಿಷ್ಠಾವಂತನನ್ನು, ಪ್ರತಿ ಶತ್ರುವಿಗೆ ಬದಲು ಒಬ್ಬ ಸನ್ಮಿತ್ರನಿದ್ದಾನೆ ಎಂಬುದನ್ನು ಕಲಿಸಿರಿ. ನಿಮಗೆ ಸಾಧ್ಯವಾದರೆ, ಶ್ರಮವಹಿಸಿ ಗಳಿಸಿದ ಹಣ ಹೆಚ್ಚು ಬೆಲೆಯುಳ್ಳದ್ದು ಎಂಬುದನ್ನು, ಸೋಲು ಗೆಲುವಿನಲ್ಲಿ ಸಮಚಿತ್ತದಿಂದ ಇರುವುದನ್ನು, ಸೃಷ್ಟಿಯ ಕೌತುಕವನ್ನು ಕಂಡು ಧ್ಯಾನಿಸುವುದನ್ನು ಕಲಿಸಿರಿ. ನಯದ ಜನರಲ್ಲಿ ವಿನಯ, ಒರಟರಲ್ಲಿ ಒರಟುತನದಿ ನಡೆಯುವುದನ್ನು, ಹೃದಯ ಮತ್ತು ಆತ್ಮಕ್ಕೆ ಬೆಲೆಯ ಚೀಟಿ ಅಂಟಿಸಿಕೊಳ್ಳದೇ ಇರುವುದನ್ನು, ತನ್ನ ವಿಚಾರಗಳ ಬಗ್ಗೆ ತನಗೇ ನಂಬಿಕೆ ಗಳಿಸಿಕೊಳ್ಳುವುದನ್ನು ಕಲಿಸಿರಿ. ಹಾಗಾದಾಗ ಅವರು ತಮ್ಮಲ್ಲಿ ತಾವು ವಿಶ್ವಾಸ ಹೊಂದಿ ಮಾನವೀಯ ವ್ಯಕ್ತಿಗಳಾಗಿ ಬೆಳೆಯುತ್ತಾರೆ'.

ಮಗು ಜ್ಞಾನದ ಹೆಸರಿನಲ್ಲಿ ಬರೀ ಮಾಹಿತಿ ಸಂಗ್ರಹಿಸಿ ಬೆಳೆಯುವುದಲ್ಲ; ಮಾನವೀಯತೆಯ ನೆಲೆಗಟ್ಟನ್ನು ಭಾವನಾತ್ಮಕವಾಗಿ ಸ್ವೀಕರಿಸುತ್ತಾ ಬುದ್ಧಿವಂತಿಕೆಯಿಂದ ಬದುಕುವ ವಿಧಾನವನ್ನು ಕಲಿಯಬೇಕು ಎಂಬ ಲಿಂಕನ್‌ರ ಮಹದಾಶಯವನ್ನು ಈ ಪತ್ರ ಧ್ವನಿಸುತ್ತದೆ.

ಬತ್ತಿಹೋದ ಕನಸು
ವೃತ್ತಿಪರ ರಂಗಕರ್ಮಿ ಎಸ್.ರಾಮಾನಾಥ ಅವರು, ತಮ್ಮ ಬಾಲ್ಯದಲ್ಲಿ ಬತ್ತಿ ಹೋಗುತ್ತಿದ್ದ ಸೃಜನಶೀಲತೆಯ ಕನಸುಗಳ ಬಗ್ಗೆ ಶಾಲಾ ಶಿಕ್ಷಣ ವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸುತ್ತಾ, ರಂಗಭೂಮಿ ಅದಕ್ಕೆ ಹೇಗೆ ಪರಿಹಾರ ಆಗಬಲ್ಲದು ಎಂಬುದನ್ನು ತಮ್ಮ ಶಿಕ್ಷಕ ಮಿತ್ರನಿಗೆ ಬರೆದ ಪತ್ರದಲ್ಲಿ ಹೀಗೆ ತೆರೆದಿಟ್ಟಿದ್ದಾರೆ.

`ಶಾಲೆ ಎಂದರೆ ಕೇವಲ ಪುಸ್ತಕ ಓದುವ, ಪುಸ್ತಕದಲ್ಲಿ ಬರೆದಿರುವುದನ್ನು ಕಲಿಯುವ ಕೇಂದ್ರವಲ್ಲ. ಅದು ಮಕ್ಕಳ ಮನಸ್ಸನ್ನು ವಿಕಸನಗೊಳಿಸುವ ಕೇಂದ್ರವೂ ಹೌದು. ನಮ್ಮ ಬಾಲ್ಯವನ್ನು ನೆನೆಸಿಕೊಂಡರೆ ನಮಗೆ ಶಾಲೆಗೆ ಹೋಗುವುದು ಅಷ್ಟೇನೂ ಪ್ರಿಯವಾದ ಕೆಲಸ ಆಗಿರಲಿಲ್ಲ. ಮೂರು ಹೊತ್ತೂ ಆಡುವ ಮನಸ್ಸು. ಶಾಲೆಯ ಘಂಟೆ ಬಾರಿಸಿದ ಸದ್ದು ಕೇಳುತ್ತಿದ್ದಂತೆಯೇ ಯಾವುದೋ ದೊಡ್ಡ ಭಾರವೊಂದು ಮೈಮನಗಳ ಮೇಲೆ ಹೇರಿದಂತಾಗಿ, ಉಸಿರುಗಟ್ಟಿದ ಅನುಭವ ಆಗುತ್ತಿತ್ತು. ಶಾಲೆ ಎಂದರೆ ಶಿಕ್ಷಕ ಹೇಳಿಕೊಟ್ಟಂತೆ ಪುಸ್ತಕದಲ್ಲಿ ಇರುವುದನ್ನು ಕಲಿಯುವುದು.

ಅಂಗಳ-ಬೀದಿಗಳಲ್ಲಿ ಯಾವುದೇ  ನಿರ್ಬಂಧವಿಲ್ಲದೇ ಆಡುತ್ತಾ ಬೆಳೆದ ಯಾವ ಮಗುವಿಗೆ ತಾನೇ ಈ ನಿರ್ಬಂಧಿತ ಶಾಲೆ ಪ್ರಿಯವಾದೀತು? ಕತೆ ಕೇಳುವ ಮನಸ್ಸು, ಕತೆ ಹೇಳುವ ಮನಸ್ಸು, ಏನಾದರೂ ಸಾಹಸ ಮಾಡಿ ದೇಹ ದಂಡಿಸುವ ಮನಸ್ಸು, ಕಲ್ಪನೆಯಲ್ಲೇ ಹೂ ಅರಳಿಸಿ ಸುವಾಸನೆ ಹೀರಿಬಿಡುವ ಹುಮ್ಮಸ್ಸು, ಇದಾವುದಕ್ಕೂ ಆಸ್ಪದವಿಲ್ಲದ ನಮ್ಮ ಶಾಲೆ ನಮ್ಮಲ್ಲಿನ ಆಕಾಂಕ್ಷೆ, ಬಯಕೆಗಳನ್ನೇ ಮುರುಟಿಬಿಟ್ಟಿತು'.

`ಆ ನಾಲ್ಕು ಗೋಡೆಗಳ ಕೋಣೆಯಲ್ಲಿ ನಾನು ಕಲಿತದ್ದು ಅರ್ಥವಾಗದ ಅಕ್ಷರಗಳನ್ನು ಮಾತ್ರ! `ಹೇಳಿದಷ್ಟು ಕೇಳು, `ಹೇಳಿದಷ್ಟು ಮಾಡು , `ಗಪ್ ಚುಪ್, ಇಷ್ಟೇ. ನಮಗೆ ಪಾಠ ಹೇಳುತ್ತಿದ್ದವರು ಎಂದೂ ನಮ್ಮ ಧ್ವನಿಯನ್ನು ಕೇಳಲೇ ಇಲ್ಲ. ಭಯ, ಆತಂಕಕ್ಕೆ ಆಸ್ಪದ ಇಲ್ಲದಂತೆ ಮಗುವಿನ ಸಹಜ ಶೈಲಿಯನ್ನು ಪೋಷಿಸುತ್ತಲೇ, ಹೊಸತನ್ನು ಕಲಿಸುವ ಮಾರ್ಗವನ್ನು ನಮ್ಮ ಶಿಕ್ಷಕರು ಅನುಸರಿಸಲು ಪ್ರಯತ್ನಿಸಿದ್ದರೆ ಇಂದು ನಾನು ಬಹಳಷ್ಟು ಶಕ್ತಿ ಸಾಮರ್ಥ್ಯಗಳ ಸರದಾರನಾಗುತ್ತಿದ್ದೆ. ನಾನು ಶಾಲೆಯಿಂದ ಹೊರಗೆ ಬಂದ ಮೇಲೆ ಪರಿಸರದಲ್ಲಿ ಕಲಿತುದೇ ಹೆಚ್ಚು. ಇಂಥ ಶಿಕ್ಷಣ ಪದ್ಧತಿಯಿಂದ ಆರೋಗ್ಯವಂತ, ಪ್ರಗತಿಶೀಲ ಸಮಾಜ ಕಟ್ಟಲು ಸಾಧ್ಯವಿಲ್ಲ' ಎನ್ನುತ್ತಾರೆ ರಾಮನಾಥ.

ಮಕ್ಕಳು ಬಾಲ್ಯವನ್ನು ಕಳೆಯುತ್ತಿರುವುದೇ ಒಂದೆಡೆ ಪರಾಧೀನತೆ, ಇನ್ನೊಂದೆಡೆ ಮುಗ್ಧತೆಯ ಖುಷಿಯಿಂದ ಅಲ್ಲವೇ? ಹೊಟ್ಟೆ ಬಟ್ಟೆಯನ್ನು ಪೋಷಕರು ನೋಡಿಕೊಂಡರೆ, ವಿದ್ಯೆಯ ಹೊಣೆಯನ್ನು ಉಪಾಧ್ಯಾಯರು ನೋಡಿಕೊಳ್ಳುತ್ತಾರೆ. ಹೀಗಾಗಿ ಇವರಿಬ್ಬರ ಆಜ್ಞೆಗಳನ್ನು ಪಾಲಿಸುವುದಷ್ಟೇ ಮಗುವಿನ ಕೆಲಸ ಎಂದು ಭಾವಿಸಿ ಮುಗ್ಧತೆಯ ಖುಷಿಯನ್ನು ಕಡೆಗಣಿಸುತ್ತಿದ್ದೇವೆ.

ಇಂದು ಶಾಲಾ ಶಿಕ್ಷಣ ವಿಧಾನದಲ್ಲಿ ಮುಕ್ತ ಅಭಿವ್ಯಕ್ತಿಗೆ ಅವಕಾಶ ಕಡಿಮೆ. ತರಗತಿಯಲ್ಲಿ ಮಕ್ಕಳು ಬೋಧಕರ ಮಾತು ಕೇಳುತ್ತಾ ಅಸಹಾಯಕ ಶೋತೃಗಳಂತೆ ಕುಳಿತುಕೊಳ್ಳುತ್ತಿದ್ದಾರೆ. ಮಕ್ಕಳು ಹೀಗೆ ಗಂಟೆಗಟ್ಟಲೆ ನಿಷ್ಕ್ರಿಯರಾಗಿ ಕುಳಿತುಕೊಳ್ಳುವುದರಿಂದ ಅವರಲ್ಲಿರುವ ಅಪರಿಮಿತ ಸೃಜನಶೀಲ ಶಕ್ತಿ, ಅದಮ್ಯ ಉತ್ಸಾಹ ಕಳೆದು ಹೋಗುತ್ತದೆ.

ಆದ್ದರಿಂದ ಈ ಏಕಮುಖಿ ಪಾಠ ಪ್ರವಚನ ಪದ್ಧತಿಯಿಂದ ಮಕ್ಕಳನ್ನು ಮುಕ್ತ ಮಾಡಬೇಕು. ಯಾವುದೇ ವಿಷಯ ತೆಗೆದುಕೊಂಡರೂ ಮಕ್ಕಳು ವಿಭಿನ್ನ ರೀತಿಯಲ್ಲಿ ಆಲೋಚಿಸುತ್ತಾರೆ, ವಿಭಿನ್ನ ರೀತಿಯಲ್ಲಿ ಪ್ರಸ್ತುತ ಪಡಿಸುತ್ತಾರೆ. ಇದಕ್ಕೆ ಕಡಿವಾಣ ಹಾಕಿ ನಾವು ಹೇಳಿದಂತೆ ಕೇಳಿಸುವುದು ಸರಿಯಾದ ಕ್ರಮವಲ್ಲ. ಹೀಗಾಗುತ್ತಿರುವುದರಿಂದಲೇ ಶಾಲೆಗಳಲ್ಲಿ ಕಂಠಪಾಠ ಮಾಡಿ  ಹೆಚ್ಚು ಅಂಕ ಪಡೆದವರು ಬುದ್ಧಿವಂತರು ಎನಿಸಿಕೊಂಡು, ಅದೇ ಸೃಜನಾತ್ಮಕ ಪೃವೃತ್ತಿಯುಳ್ಳ ಮಕ್ಕಳು ಎಷ್ಟೇ ಕ್ರಿಯಾಶೀಲರಾಗಿದ್ದರೂ ದಡ್ಡರೆಂಬ ಹಣೆಪಟ್ಟಿ ಕಟ್ಟಿಕೊಂಡು ಮಾನಸಿಕವಾಗಿ ಕುಗ್ಗಿ ಹೋಗುತ್ತಿದ್ದಾರೆ.

ಇಂಥ ವೈರುಧ್ಯವನ್ನು ಅಳಿಸಿಹಾಕಿ ಸೃಜನಶೀಲ ಮಕ್ಕಳ ಆತ್ಮ ಸ್ಥೈರ್ಯ ಕುಗ್ಗಿ ಹೋಗದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ ಕ್ರಿಯಾಶೀಲ ಶಿಕ್ಷಕರು ಶಾಲಾ ಅಂಗಳದಲ್ಲಿ ಮಕ್ಕಳ ಸೃಜನಾತ್ಮಕ ಆಟ-ನಾಟಕಗಳಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು. ಯಾವ ಮಕ್ಕಳೂ ದಡ್ಡರಲ್ಲ ಎಲ್ಲರಲ್ಲೂ ಬಹುಮುಖ ಪ್ರತಿಭೆ ಇದ್ದೇ ಇರುತ್ತದೆ. ಅವರ ಸೃಜನಶೀಲತೆಗೆ ಅವಕಾಶ ಮಾಡಿಕೊಡುವ ಮೂಲಕ ಎಲ್ಲರೂ ಬುದ್ಧಿವಂತರೂ, ಸೃಜನಶೀಲರೂ, ಸಹನಶೀಲರೂ, ಕ್ರಿಯಾಶೀಲರೂ ಆದ ವ್ಯಕ್ತಿತ್ವ ರೂಪಿಸಿಕೊಂಡು ಸರ್ವಾಂಗೀಣ ವಿಕಾಸ ಹೊಂದಲು ಅನುವು ಮಾಡಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT