ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮಗು ಗುಂಡಗಾಗಿದೆಯೇ, ಬಿ.ಪಿ ಪರೀಕ್ಷಿಸಿ'

ತಂದೆ- ತಾಯಿಗಳಿಗೆ ತಜ್ಞ ವೈದ್ಯರ ತಂಡದ ಎಚ್ಚರಿಕೆ
Last Updated 7 ಏಪ್ರಿಲ್ 2013, 20:13 IST
ಅಕ್ಷರ ಗಾತ್ರ

ಬೆಂಗಳೂರು: `ನಿಮ್ಮ ಮಗು ಗುಂಡು-ಗುಂಡಾಗಿದೆಯೇ? ಹಾಗಾದರೆ `ನಮ್ಮ ಕಂದ ತುಂಬಾ ಮುದ್ದಾಗಿದೆ' ಎನ್ನುವ ಹರ್ಷದಲ್ಲಿ ಮೈಮರೆಯದೆ ಅದರ ರಕ್ತದೊತ್ತಡವನ್ನು ಒಮ್ಮೆ ಪರೀಕ್ಷೆ ಮಾಡಿಸಿ'

-ತಜ್ಞ ವೈದ್ಯರ ತಂಡ ನೀಡಿರುವ ಎಚ್ಚರಿಕೆ ಇದು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲ ವೈದ್ಯರು ಇದೇ ಅಂಶದ ಕಡೆಗೆ ವಿಶೇಷ ಒತ್ತು ನೀಡಿದರು.

`ಭಾರತದಲ್ಲಿ ಶೇ 5ರಷ್ಟು ಮಕ್ಕಳು ರಕ್ತದೊತ್ತಡದಿಂದ ಬಳಲುತ್ತಿದ್ದು, ಅದರ ಪರಿಣಾಮವಾಗಿ ಮಿದುಳು, ಹೃದಯ, ಕಿಡ್ನಿ, ಕಣ್ಣು ಸೇರಿದಂತೆ ಪ್ರಮುಖ ಅಂಗಾಂಗಳ ವೈಫಲ್ಯ ಉಂಟಾಗುತ್ತಿದೆ' ಎನ್ನುವ ಕಳವಳಕಾರಿ ಅಂಶವನ್ನು ಅವರು ತೆರೆದಿಟ್ಟರು. `ಕಾಡುವ ತಲೆನೋವು, ನಿದ್ರೆ ಮಾಡಲು ಒದ್ದಾಟ, ದಣಿವಿನಿಂದ ಚಟುವಟಿಕೆಯಲ್ಲಿ ನಿರಾಸಕ್ತಿ ಇವೇ ಮೊದಲಾದವು ರಕ್ತದೊತ್ತಡದ ಚಿಹ್ನೆಗಳಾಗಿವೆ' ಎಂದು ವಿವರಿಸಿದರು.

`ಮಕ್ಕಳಲ್ಲಿ ರಕ್ತದೊತ್ತಡ' ವಿಷಯವಾಗಿ ಮಾತನಾಡಿದ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕಿ ಡಾ. ಪ್ರೇಮಲತಾ, `ಅತಿಯಾದ ತೂಕ, ಕಾಣೆಯಾದ ವ್ಯಾಯಾಮ, ಬೇಕರಿ ಮತ್ತು ಕುರುಕಲು ತಿನಿಸುಗಳ ಅಧಿಕ ಸೇವನೆ, ಮಿತಿಮೀರಿದ ಟಿವಿ ವೀಕ್ಷಣೆ ರಕ್ತದೊತ್ತಡಕ್ಕೆ ಕಾರಣವಾಗಿವೆ' ಎಂದು ತಿಳಿಸಿದರು.

`ಬದಲಾದ ಜೀವನ ಶೈಲಿಯಿಂದ ನಾವೇ ನಮ್ಮ ಮಕ್ಕಳನ್ನು ಅಪಾಯದ ಮಡುವಿಗೆ ನೂಕುತ್ತಿದ್ದೇವೆ' ಎಂದು ಹೇಳಿದ ಅವರು, `ಅವಧಿಗೆ ಮುನ್ನ ಜನಿಸಿದ ಮಗುವಿಗೂ ರಕ್ತದೊತ್ತಡದ ಸಮಸ್ಯೆ ಕಾಡುವ ಸಂಭವ ಇದೆ' ಎಂದರು. `ಮೂರು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಪ್ರತಿ ವರ್ಷವೂ ರಕ್ತದೊತ್ತಡದ ಪರೀಕ್ಷೆ ಮಾಡಿಸಬೇಕು. ಕೆಲವು ಸಂದರ್ಭದಲ್ಲಿ ಔಷಧಿ ನೀಡುವ ಅಗತ್ಯವೂ ಇರುತ್ತದೆ' ಎಂದು ಹೇಳಿದರು.

ನಿಮ್ಹಾನ್ಸ್ ನಿರ್ದೇಶಕ ಡಾ.ಪಿ. ಸತೀಶ್‌ಚಂದ್ರ, `ಅಪಘಾತದ ಸಂದರ್ಭದಲ್ಲಿ ತಲೆಗೆ ಪೆಟ್ಟಾದಲ್ಲಿ ಇಲ್ಲವೆ ಮಿದುಳಿನ ರಕ್ತಸ್ರಾವ ಸಂಭವಿಸಿದಲ್ಲಿ ಘಟನೆ ನಡೆದು ಮೊದಲ ಮೂರು ಗಂಟೆಗಳ ಅವಧಿ ಅತ್ಯಂತ ಮಹತ್ವದ್ದಾಗಿದೆ. ಆ ಅವಧಿಯೊಳಗೆ ರೋಗಿಯನ್ನು ಆಸ್ಪತ್ರೆಗೆ ಕರೆತಂದರೆ ಜೀವಕ್ಕೆ ಎದುರಾಗಬಹುದಾದ ಅಪಾಯ ತಪ್ಪಿಸಬಹುದು' ಎಂದು ಹೇಳಿದರು.

`ರಕ್ತದೊತ್ತಡದಿಂದ ಬಳಲುವವರು ಹೊತ್ತಿಗೆ ಸರಿಯಾಗಿ ಮಾತ್ರೆ ನುಂಗದೆ ಬೇರೆ ಪರಿಹಾರವೇ ಇಲ್ಲ. ಮಾತ್ರೆ ನುಂಗುವುದನ್ನು ತುಸು ವ್ಯತ್ಯಾಸ ಮಾಡಿದರೂ ಆರೋಗ್ಯದಲ್ಲಿ ದೊಡ್ಡ ಏರು-ಪೇರಾಗುವ ಅಪಾಯ ಇದೆ' ಎಂದು ಎಚ್ಚರಿಸಿದರು.

ನಾರಾಯಣ ಹೃದಯಾಲಯದ ಡಾ.ಎಸ್. ಗುರುಪ್ರಸಾದ್, `ಬದಲಾದ ಜೀವನ ಶೈಲಿಯ ಪರಿಣಾಮ ಭಾರತ ಹಲವು ರೋಗಗಳ ಗೂಡಾಗಿದೆ. ರಕ್ತದೊತ್ತಡ ಅದರಲ್ಲಿ ಒಂದಾಗಿದೆ. ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಬಹುತೇಕರು ವಿಫಲವಾಗಿರುವ ಕಾರಣ ಮಿದುಳಿನಲ್ಲಿ ರಕ್ತಸ್ರಾವ, ಕಿಡ್ನಿ ವೈಫಲ್ಯ ಮತ್ತು ಹೃದ್ರೋಗದಂತಹ ಸಮಸ್ಯೆಗಳಿಗೆ ತುತ್ತಾಗುತ್ತಾರೆ' ಎಂದು ವಿವರಿಸಿದರು.

`ಮುಂಜಾನೆಯ ವಾಯು ವಿಹಾರದಿಂದ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ತರಕಾರಿ-ಹಣ್ಣು ಹೆಚ್ಚು ಸೇವನೆ ಕೂಡ ಒಳ್ಳೆಯದು. ಇಂತಹ ನೈಸರ್ಗಿಕ ವಿಧಾನಗಳ ಜತೆಗೆ ಮಾತ್ರೆಯೂ ಅತ್ಯಗತ್ಯ' ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ. ಮದನ್ ಗೋಪಾಲ್, `ನಮ್ಮ ದೇಶೀ ಸಂಸ್ಕೃತಿ ಮತ್ತು ಆಹಾರ ಪದ್ಧತಿಯಲ್ಲಿ ಒತ್ತಡ ನಿವಾರಣೆಗೆ ಬೇಕಾದ ಎಲ್ಲ ವ್ಯವಸ್ಥೆ ಇತ್ತು. ನಗರೀಕರಣದ ಭರದಲ್ಲಿ ನಾವು ಅವುಗಳನ್ನೆಲ್ಲ ಮರೆತದ್ದೇ ಈ ಸ್ಥಿತಿಗೆ ಕಾರಣವಾಗಿದೆ' ಎಂದು ಪ್ರತಿಪಾದಿಸಿದರು.

`ಬೆಂಗಳೂರಿನ ಟ್ರಾಫಿಕ್ ಕೂಡ ಜನರಲ್ಲಿ ಅಧಿಕ ಒತ್ತಡ ಉಂಟುಮಾಡುತ್ತಿದೆ. ಟ್ರಾಫಿಕ್‌ನಲ್ಲಿ ಸಿಕ್ಕಿಬಿದ್ದು ಮೀಟಿಂಗ್‌ಗೆ ಹೋಗುವುದು ತಡವಾದಾಗ ನಾನೂ ವಿಪರೀತ ಒತ್ತಡ ಅನುಭವಿಸಿದ್ದಿದೆ' ಎಂದು ಅನುಭವ ಹಂಚಿಕೊಂಡರು.

`ನಮ್ಮ ಜನರಲ್ಲಿ ಚಿಕಿತ್ಸೆ ಪಡೆಯುವ ಜಾಗೃತಿ ಹೆಚ್ಚಾಗಿದೆಯೇ ಹೊರತು, ರೋಗ ಬಾರದಂತೆ ತಡೆಗಟ್ಟುವಲ್ಲಿ ಅವರು ಗಮನವನ್ನೇ ಹರಿಸುವುದಿಲ್ಲ. ಆಯುರ್ವೇದ ಮತ್ತು ನಿಸರ್ಗ ಚಿಕಿತ್ಸೆಗಳು ಒತ್ತಡವನ್ನು ನಿಯಂತ್ರಣದಲ್ಲಿ ಇಡಲು ಪೂರಕವಾಗಿವೆ' ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ವಿ.ಬಿ. ಪಾಟೀಲ, `ಸರ್ಕಾರಿ ನೌಕರಿ ಕೂಡ ಈಗ ಒತ್ತಡದಿಂದ ಕೂಡಿದೆ. ಹಿಂದೆ ಯಾವಾಗಲೋ ಒಂದು ಟೆಲಿಗ್ರಾಂ ಬರುತ್ತಿದ್ದವು. ಈಗ ನಿತ್ಯ ಹತ್ತಾರು ಎಸ್‌ಎಂಎಸ್‌ಗಳ ಆದೇಶಗಳು ಬಂದು ಒತ್ತಡವನ್ನು ಹೆಚ್ಚಿಸುತ್ತಿವೆ. ಒತ್ತಡದ ಜೀವನ ಯಾರನ್ನೂ ಬಿಟ್ಟಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT