ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ್ಗುಲು ಬದಲಿಸಿದ ರಾಜಕಾರಣ

Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆಂಧ್ರಪ್ರದೇಶದಲ್ಲಿ  ರಾಜಕೀಯ ಸಮೀಕರಣಗಳು ಮಗ್ಗುಲು ಬದಲಿಸುವ ಸೂಚನೆಗಳು ಕಾಣಿಸುತ್ತಿವೆ.  ತೆಲಂಗಾಣ– ಸೀಮಾಂಧ್ರದ ಹಗ್ಗಜಗ್ಗಾಟದಲ್ಲಿ  ಹಣ್ಣುಗಾಯಿ ನೀರುಗಾಯಿ ಆಗಿರುವ ಕಾಂಗ್ರೆಸ್‌, ಪುಟಿದೇಳುವ ಪ್ರಯತ್ನದ ಭಾಗವಾಗಿ ರಾಜಕೀಯ ‘ದಾಳ’ ಉರುಳಿಸುತ್ತಿದೆ. ಈ ತಂತ್ರಗಾರಿಕೆಯ ಭಾಗವಾಗಿಯೇ ವೈಎಸ್‌ಆರ್‌ ಕಾಂಗ್ರೆಸ್‌ ಅಧ್ಯಕ್ಷ  ವೈ.ಎಸ್‌. ಜಗನ್ಮೋಹನ್‌ ರೆಡ್ಡಿ ಜೈಲಿನಿಂದ ಬಿಡುಗಡೆ ಯಾಗಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

  ಸಿಬಿಐ ಕಾರ್ಯಶೈಲಿ ಬಗ್ಗೆ ಮೊದಲಿಂದಲೂ ಗುಮಾನಿ ಇದೆ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಈ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಂಡ ನಿದರ್ಶನಗಳಿರುವುದರಿಂದ ಇಂತಹದೊಂದು ಅನುಮಾನ  ಸಹಜ. ಜಗನ್‌ ಪ್ರಕರಣದಲ್ಲಿ ಸಿಬಿಐ ನಡೆದು ಕೊಂಡ ರೀತಿ ಕುರಿತೂ ಟೀಕೆ ವ್ಯಕ್ತವಾಗಿದೆ. ‘ಜಗನ್‌ ವಿರುದ್ಧದ ಎಲ್ಲ ಪ್ರಕರಣ ಗಳ ತನಿಖೆ ಮುಗಿದಿದೆ’ ಎಂದು ಪ್ರಕಟಿಸಿದ್ದು ಮತ್ತು ಜಾಮೀನು ನೀಡುವು ದನ್ನು ದೃಢವಾಗಿ ವಿರೋಧಿಸದೇ ಇರುವ ಅದರ ವರ್ತನೆ ಪ್ರತಿಪಕ್ಷಗಳ ಶಂಕೆಗೆ ಕಾರಣವಾಗಿದೆ.

ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಕಾರಣ ಜಾಮೀನು ಮಂಜೂರು ಮಾಡಿರುವುದಾಗಿ ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಆರೋಪಿಗಳು ನಿಯಮಾನುಸಾರ ಜಾಮೀನು ಪಡೆಯುವುದು ತಪ್ಪಲ್ಲ. ಆದರೆ, ಆಂಧ್ರ ವಿಭಜನೆಗೆ ಆಡಳಿತಾ ರೂಢ ಕಾಂಗ್ರೆಸ್‌ ಒಪ್ಪಿಗೆ ಸೂಚಿಸಿದ ನಂತರದ ಉದ್ವಿಗ್ನ ಸ್ಥಿತಿ ಹಾಗೂ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಗಿರುವ ನಾಟಕೀಯ ಬೆಳವಣಿಗೆ ಎಂತಹ ಸ್ಥಿತಪ್ರಜ್ಞರಲ್ಲೂ ಅನುಮಾನ ಮೂಡಿಸದೇ ಇರದು.  ‘ತಾಯಿ ಕಾಂಗ್ರೆಸ್‌ ಮತ್ತು ಮರಿ ಕಾಂಗ್ರೆಸ್‌ ನಡುವೆ ಒಳಒಪ್ಪಂದ ಆಗಿದೆ’ ಎಂದು ತೆಲುಗುದೇಶಂ ಪಕ್ಷ ಮಾಡಿರುವ ಆರೋಪವನ್ನು ಸುಲಭವಾಗಿ ತಳ್ಳಿಹಾಕಲಾದು.

ಕಾಂಗ್ರೆಸ್‌ ಪಕ್ಷ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ದಕ್ಷಿಣದಿಂದ ದೊಡ್ಡ ಕೊಡುಗೆಯನ್ನು ನೀಡಿದ್ದು ಆಂಧ್ರಪ್ರದೇಶ. 2009ರಲ್ಲಿ 33 ಲೋಕಸಭಾ ಸದಸ್ಯರನ್ನು ವೈ.ಎಸ್‌. ರಾಜಶೇಖರ ರೆಡ್ಡಿ ಆರಿಸಿ ಕಳುಹಿಸಿದ್ದರು. ಅವರ ದುರ್ಮರಣದ  ಬಳಿಕ ಆಂಧ್ರದಲ್ಲಿ ಕಾಂಗ್ರೆಸ್‌ ಅಕ್ಷರಶಃ ಅನಾಥವಾಗಿದೆ. ಪ್ರತ್ಯೇಕ ತೆಲಂಗಾಣಕ್ಕೆ ಆಗ್ರಹಿಸಿ ನಡೆದ ಹೋರಾಟ ರಾಜ್ಯವನ್ನು ಒಂದು ಬಗೆಯಲ್ಲಿ ಅರಾಜಕತೆಯತ್ತ ದೂಡಿತು. ವಿಭಜನೆಗೆ ಒಪ್ಪಿಗೆ ಸೂಚಿಸಿದ ಕಾರಣಕ್ಕೆ  ಕರಾವಳಿ ಮತ್ತು ರಾಯಲಸೀಮ ಭಾಗದಲ್ಲಿ ತಳಮಳದ ಸ್ಥಿತಿ ನೆಲೆಸಿದೆ.

ತೆಲಂಗಾಣ ಭಾಗದಲ್ಲಿ ತುಸು ಚೇತರಿಕೆ ಕಾಣಬಹುದು ಎಂಬ ಆಶಾಭಾವ ಮೂಡುವಷ್ಟರಲ್ಲಿ ಸೀಮಾಂಧ್ರ ಉಲ್ಟಾ ಹೊಡೆಯಿತು. ಇದ ರಿಂದಾಗಿ ಕಾಂಗ್ರೆಸ್‌ ಸ್ಥಿತಿ ಅಡಕತ್ತರಿಗೆ ಸಿಕ್ಕ ಅಡಿಕೆಯಂತಾಗಿದೆ. ಇತ್ತ ಟಿಡಿಪಿಗೆ ಬಿಜೆಪಿ ಗಾಳ ಹಾಕಿದೆ. ಇದೇ ಸ್ಥಿತಿಯಲ್ಲಿ ಚುನಾವಣೆಗೆ ಹೋದರೆ ಸೀಮಾಂಧ್ರ ದಲ್ಲಿ ಕಾಂಗ್ರೆಸ್‌ ಮಣ್ಣುಮುಕ್ಕಲಿದೆ ಎಂದು ಹೇಳಲಿಕ್ಕೆ ಯಾವ ಸಮೀಕ್ಷೆಯೂ ಬೇಕಾಗಿಲ್ಲ.

ವೈಎಸ್‌ಆರ್‌ ಕಾಂಗ್ರೆಸ್‌ ಜತೆ ಒಪ್ಪಂದ ಕುದುರಿಸಿಕೊಂಡರೆ ಈ ಪ್ರದೇಶದಲ್ಲಿ  ಪುನಃ ತಲೆ ಎತ್ತಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ಸಿನದು. 485 ದಿನ ಜೈಲಿನಲ್ಲಿ ಕಳೆದ ಜಗನ್‌ ಅವರಲ್ಲಿಯೂ ಹತಾಶ ಭಾವ ಮೂಡಿರಲು ಸಾಧ್ಯ.  ಈ ಅನಿವಾರ್ಯ, ಎರಡೂ ಪಕ್ಷಗಳನ್ನು ಸನಿಹ ತಂದಿರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT