ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಠದ ಒಳಗಿನವರ ಹುನ್ನಾರ?

Last Updated 10 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೀದರ್: ಮೂವರು ಸಾಧಕರ ಆತ್ಮಾಹುತಿ ಘಟನೆಯ ನಂತರ ಚೌಳಿ ಮಠ ರಾಜ್ಯವ್ಯಾಪಿ ಚರ್ಚೆಗೆ ಗ್ರಾಸವಾದ ಹಿಂದೆಯೇ, ಪೊಲೀಸರು ಈ ಎಲ್ಲ ಬೆಳವಣಿಗೆಗಳಿಗೆ ಕಾರಣವಾದ ಘಟನೆಯ ಮೂಲ ಹುಡುಕುವ ಕಾರ್ಯ ಚುರುಕುಗೊಳಿಸಿದ್ದಾರೆ.

ಆತ್ಮಾಹುತಿ ದುರಂತದ ಹಿನ್ನೆಲೆಯಲ್ಲಿ ಈ ಮೊದಲು ಚೌಳಿ ಮಠದಲ್ಲಿಯೇ ಇದ್ದು, ಇತ್ತೀಚಿನ ತಿಂಗಳುಗಳಲ್ಲಿ ಮಠದಿಂದ ಹೊರಗೆ ನೆಲೆಸಿರುವ ಸಾಧಕ ಅಶೋಕ್ ಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸುವ ಸಂಭವವಿದ್ದು, ಮಠದಲ್ಲಿ ಇರುವ ಮಹಾದೇವ್ ಸ್ವಾಮೀಜಿ ಮತ್ತು ಸುಭಾಷ್ ಸ್ವಾಮೀಜಿ ಅವರನ್ನು ಪೊಲೀಸರು ಈಗಾಗಲೇ ವಿಚಾರಣೆಗೆ ಒಳಪಡಿಸಿದ್ದಾರೆ.

ಅಶೋಕ್ ಸ್ವಾಮಿ, ಸದ್ಯಕ್ಕೆ ಶ್ರೀಶೈಲಂನಲ್ಲಿ ಇರುವ ಬಗೆಗೆ ಮಾಹಿತಿ ಇದೆ. ಮಾರುತಿ ಸ್ವಾಮಿ ಕಣ್ಮರೆ ಕುರಿತಂತೆ ಪ್ರಕರಣ ದಾಖಲಾಗಿದ್ದರೂ, ಆತನ ಇರುವಿಕೆ ಕುರಿತಂತೆ ಸಮರ್ಪಕ ಮಾಹಿತಿ ಲಭಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ತ್ಯಾಗರಾಜನ್ ಹೇಳುತ್ತಾರೆ.

ಈ ನಡುವೆ, ಮಠದ ಎಲ್ಲ ಪ್ರಮುಖ ಭಕ್ತರನ್ನು ಸೇರಿಸಿ ಮಠದ ಮುಂದಿನ ಹೆಜ್ಜೆ ಕುರಿತು ಚರ್ಚಿಸಲು ಮಠದ ಪ್ರಮುಖರು ಸಭೆ ಕರೆದಿದ್ದಾರೆ. ಸಭೆಯಲ್ಲಿ ವ್ಯಕ್ತವಾಗುವ ಅಂಶಗಳನ್ನು ಎದುರು ನೋಡುತ್ತಿದ್ದೇವೆ ಎಂದು ಅವರು ತಮ್ಮನ್ನು ಸಂಪರ್ಕಿಸಿದ `ಪ್ರಜಾವಾಣಿ'ಗೆ ತಿಳಿಸಿದರು.

ಸಾಮಾನ್ಯವಾಗಿ ಪ್ರಕರಣಗಳನ್ನು ಆಯಾ ವ್ಯಾಪ್ತಿಯ ಠಾಣೆಯ ತನಿಖಾಧಿಕಾರಿಗಳೇ ತನಿಖೆ ಮಾಡುತ್ತಾರೆ. ಆದರೆ, ವಿಷಯದ ಗಂಭೀರತೆ ಮತ್ತು ಹಿಂದಿನ ಕಾರಣಗಳು ಪ್ರಶ್ನಾರ್ಥಕವಾಗಿರುವ ಕಾರಣ ಡಿವೈಎಸ್‌ಪಿ ವಿ.ಎನ್. ಜ್ಯೋತಿ ನೇತೃತ್ವದಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದರು.

12ರಂದು ಸಭೆ: ಮಠದ ಮುಂದಿನ ನಿರ್ವಹಣೆ, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಸಾಧಕರು, ಪ್ರಮುಖರ ಸಭೆಯನ್ನು ಏಪ್ರಿಲ್ 12ರಂದು ಕರೆಯಲಾಗಿದೆ ಎಂದು ಮಠದ ಭಕ್ತರು ಆಗಿರುವ ಬೀದರ್ ನಗರಸಭೆ ಸದಸ್ಯ ವೀರಶೆಟ್ಟಿ ಭಂಗೂರ  ತಿಳಿಸಿದ್ದಾರೆ.

ಸದ್ಯಕ್ಕೆ ಮಠದಲ್ಲಿ ಇಬ್ಬರು ಸಾಧಕರೇ (ಮಹಾದೇವ್ ಸ್ವಾಮೀಜಿ, ಸುಭಾಷ್ ಸ್ವಾಮೀಜಿ) ಉಳಿದಿದ್ದಾರೆ. ಮೂವರ ಆತ್ಮಾಹುತಿ ಪ್ರಕರಣದ ನಂತರ ಅವರೂ ಮಠ ಬಿಟ್ಟು ಹೋಗುವ ಮಾತು ಆಡಿದ್ದಾರೆ. 12ರ ಸಭೆಯವರೆಗೂ ಉಳಿಯುವಂತೆ ಕೋರಿದ್ದೇವೆ ಎಂದರು.

ಮೂರು ಆಯ್ಕೆಗಳು: ಇನ್ನೊಬ್ಬ ಭಕ್ತರ ಪ್ರಕಾರ, ಮಠದ ನಿರ್ವಹಣೆ ಕುರಿತಂತೆ ಮೂರು ಆಯ್ಕೆಗಳಿವೆ. ಇರುವ ಸಾಧಕರ ನೇತೃತ್ವದಲ್ಲಿ ಮಠ ಮುನ್ನಡೆಸುವುದು; ಪ್ರಮುಖ ಭಕ್ತರು ಸೇರಿದಂತೆ ಟ್ರಸ್ಟ್ ರಚಿಸುವುದು ಅಥವಾ ಇಡೀ ಮಠವನ್ನು ಸರ್ಕಾರದ ಸುಪರ್ದಿಗೆ ಒಪ್ಪಿಸುವುದು. ಸಭೆಯಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ಆಧರಿಸಿ ಅಂತಿಮ ತೀರ್ಮಾನಕ್ಕೆ ಬರುವ ನಿರೀಕ್ಷೆ ಇದೆ.

ಒಳಗಿನವರ ಕೈವಾಡ?: ಮಠದ ರೂವಾರಿ ಗಣೇಶ್ವರ ಅವಧೂತರ ನಿಧನದ ನಂತರ ಮಠದ ಉತ್ತರಾಧಿಕಾರತ್ವ ಕುರಿತು ಸಾಧಕರ ಪೈಕಿ ಮುಂಚೂಣಿಯಲ್ಲಿದ್ದ ಜಗನ್ನಾಥ ಸ್ವಾಮೀಜಿ, ಅಶೋಕ್ ಸ್ವಾಮೀಜಿ ಮತ್ತು ಈಗ ನಾಪತ್ತೆಯಾಗಿರುವ ಮಾರುತಿ ಸ್ವಾಮೀಜಿ ಅವರ ನಡುವೆ ಮನಸ್ತಾಪ ಇದ್ದು, ಅದೂ ನಂತರದ ಬೆಳವಣಿಗೆಗಳಿಗೆ ಕಾರಣವಿರಬಹುದು. ಹೀಗಾಗಿ, ಮಠದ ಒಳಗಿನವರ ಕೈವಾಡವೂ ಇರಬಹುದು ಎಂಬ ಶಂಕೆಯೂ ಕೇಳಿಬರುತ್ತಿದೆ.
ಮೂವರು ಸಾಧಕರು ಆತ್ಮಾಹುತಿಗೆ ಮುನ್ನ ಬರೆದಿಟ್ಟಿದ್ದ ಪತ್ರ ಮತ್ತು ನಂತರದ ವಿಡಿಯೊ ನೋಡಿದರೆ, ಸಾವಿಗೆ ಭಾವನಾತ್ಮಕ ಸಂಬಂಧಗಳೇ ಕಾರಣ ಎನಿಸಿದರೂ, ಪತ್ರವನ್ನು ಮೀರಿ ಬೇರೇನೋ ಕಾರಣಗಳು ಇರಬಹುದು ಎಂಬ ಸಂಶಯ ಭಕ್ತವರ್ಗದಲ್ಲಿದೆ.

ಜಾತ್ರೆ ರದ್ದು: ಹಿರಿಯ ಸ್ವಾಮೀಜಿ ಗಣೇಶ್ವರ ಅವಧೂತರ ಬೀದರ್ ಪ್ರವೇಶದ ಸ್ಮರಣೆಗಾಗಿ ಏಪ್ರಿಲ್ 11ರಂದು ನಡೆಯಲಿದ್ದ ಜಾತ್ರೆ ರದ್ದಾಗಿದೆ.

ಹಿಂದೆ ಮಠದಲ್ಲಿ 7 ದಿನಗಳ ಜಾತ್ರೆ ನಡೆಯುತ್ತಿತ್ತು. ಪಲ್ಲಕ್ಕಿ ಉತ್ಸವ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಇರುತ್ತಿದ್ದವು. ಅವಧೂತರ ಸಾವಿನ ನಂತರ ಜಾತ್ರೆಯನ್ನು ಒಂದೇ ದಿನಕ್ಕೆ ಸೀಮಿತಗೊಳಿಸಿ ಯಾವುದೇ ವೈಭವ ಇಲ್ಲದೆ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಮೂವರು ಸಾಧಕರ ಆತ್ಮಾಹುತಿ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಜಾತ್ರೆ ರದ್ದಾಗಿದೆ ಎಂದು ಮಠದ ಭಕ್ತರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT