ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ ಸಿಪಾಯಿ!

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಟ, ನಿರ್ದೇಶಕ ಶಿವಧ್ವಜ್ ಶೆಟ್ಟಿ ಪ್ರಾದೇಶಿಕ ಭಾಷಾ ಚಿತ್ರ ನಿರ್ಮಾಣದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಕಳೆದ ವರ್ಷವಷ್ಟೆ ಪ್ರಶಸ್ತಿ ವಿಜೇತ `ಗಗ್ಗರ~ ಎಂಬ ತುಳು ಚಿತ್ರ ನಿರ್ದೇಶಿಸಿದ್ದ ಶಿವಧ್ವಜ್ ಈಗ ಕೊಡವ ಭಾಷೆಯಲ್ಲಿ `ನಾ ಪುಟ್ಟ್‌ನ ಮಣ್ಣ್~ (ನನ್ನ ಜನ್ಮಭೂಮಿ) ಎಂಬ ಚಿತ್ರ ನಿರ್ದೇಶಿಸಿದ್ದಾರೆ.

ಕೊಡಗಿನ ಸೈನಿಕ ಪರಂಪರೆ, ಅಲ್ಲಿನ ಸಂಸ್ಕೃತಿ-ಪರಿಸರ, ಸೇನೆಗೆ ಸೇರುವ ಕುರಿತಂತೆ ಇಂದಿನ ಪೀಳಿಗೆಯಲ್ಲಿ ಇರುವ ಮನೋಭಾವ ಎಲ್ಲವನ್ನೂ ಚಿತ್ರದಲ್ಲಲಿ ಸಮೀಕರಿಸುವ ಪ್ರಯತ್ನವನ್ನು ಶಿವಧ್ವಜ್ ಮಾಡಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರದ್ದೆ.

ಸೇನೆಯಲ್ಲಿರುವ ಒಬ್ಬನೇ ಮಗನ ತಾಯಿ ವಿಧವೆ. ಮಗ ಮನೆಗೆ ಮರಳಿದಾಗ ಆತನ ಮದುವೆಗೆ ಆಕೆ ನಡೆಸುವ ಪ್ರಯತ್ನಗಳು, ಸೈನಿಕನೆಂಬ ಕಾರಣಕ್ಕೆ ಇಷ್ಟಪಟ್ಟು ಮದುವೆಯಾಗುವ ಹುಡುಗಿ, ಆಕೆಯ ಕೈಗೂಡದ ಕನಸುಗಳು- ಹೀಗೆ ಕೊಡಗಿನ ಸೈನಿಕ ಕುಟುಂಬಗಳು ಎದುರಿಸುತ್ತಿರುವ ಸಂಕಷ್ಟಗಳ ಚಿತ್ರಣ ಚಿತ್ರದಲ್ಲಿದೆ.
 
ಮಿಲಿಟರಿಗೆ ಸೇರಲು ಇಚ್ಛಿಸದೆ ಡಾಕ್ಟರ್, ಎಂಜಿನಿಯರ್ ಆಗಲು ಬಯಸುವ ವಿದ್ಯಾರ್ಥಿಗಳು, ಸೈನಿಕನನ್ನು ಮದುವೆಯಾಗಲು ಒಪ್ಪದ ಯುವತಿಯರು, ಆಧುನಿಕ ಮನೋಭಾವ ಬೆಳೆಸಿಕೊಂಡು ದೇಶಸೇವೆಯನ್ನು ಹೀಗೆಳೆಯುವ ವ್ಯಕ್ತಿಗಳ ಸಹಜ ಚಿತ್ರಣದ ಮಧ್ಯೆ, ಸೇನೆಗೆ ಸೇರುವಂತೆ ಶಿಕ್ಷಣದ ಮೂಲಕ ಯುವಜನರನ್ನು ಪ್ರೇರೇಪಿಸುವ ಆಶಯ ಚಿತ್ರದಲ್ಲಿದೆ.

ಕೊಡಗಿನ ಸಂಸ್ಕೃತಿ, ಅಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನವಿದು ಎನ್ನುವುದು ನಿರ್ದೇಶಕ ಶಿವಧ್ವಜ್ ಮಾತು. ದೇಶಕ್ಕೆ ಮಹತ್ವದ ಕೊಡುಗೆ ನೀಡಿದ ಪ್ರದೇಶದ ಹಿರಿಮೆಯನ್ನು ಚಲನಚಿತ್ರದ ಮೂಲಕ ಬಿಂಬಿಸುವುದು ತಮ್ಮ ಉದ್ದೇಶ ಎಂದು ಅವರು ಹೇಳಿದರು.

ಕೊಡಗಿನ ಮೂಲದ ಉದ್ಯಮಿ ಮತ್ತು ತಮ್ಮ ಗೆಳೆಯ ಸುರೇಶ್ ನಂಜಪ್ಪ ಅವರಿಗೆ ಕಥೆಯನ್ನು ಕೊಟ್ಟು, ನಿರ್ಮಾಪಕರನ್ನು ಹುಡುಕಿಕೊಡಿ ಎಂದು ಶಿವಧ್ವಜ್ ಕೇಳಿದ್ದರಂತೆ. ಕಥೆ ಓದಿ ವಿಸ್ಮಿತರಾದ ಸುರೇಶ್ ನಾನೇ ಬಂಡವಾಳ ಹೂಡುತ್ತೇನೆ ಎಂದು ಮುಂದೆ ಬಂದರಂತೆ.

ಕೇವಲ ಒಂಬತ್ತು ದಿನದಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಹೀಗಾಗಿ ಹಲವು ತಪ್ಪುಗಳು ಉಳಿದುಕೊಂಡಿವೆ ಎಂದು ಶಿವಧ್ವಜ್ ಮುಂಚೆಯೇ ಕ್ಷಮೆ ಕೋರಿದರು.

ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಶ್ವೇತಾ ಚೆಂಗಪ್ಪ ಅವರಿಗೆ ಚಿತ್ರ ಸಾಕಷ್ಟು ಖುಷಿ ನೀಡಿದೆ. ಕೊಡಗಿನಲ್ಲಿ ಹುಟ್ಟಿದ್ದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಅವರು ಹೇಳಿದರು.

ಕೊಡಗಿನಲ್ಲಿ ಸೇನೆಗೆ ಸೇರುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ. ಪ್ರತಿ ಊರಿನಲ್ಲೆಗ ಒಬ್ಬಿಬ್ಬರು ಮಾತ್ರ ಸೇನೆಯಲ್ಲಿದ್ದಾರೆ. ಈ ಚಿತ್ರದಿಂದ ದೇಶಸೇವೆಗೆ ಯುವಕರು ಸೇರಲು ಪ್ರೇರಣೆ ನೀಡುವ  ಆಶಯ ನನ್ನದು ಎಂದು ನಿರ್ಮಾಪಕ ಸುರೇಶ್ ನಂಜಪ್ಪ ಹೇಳಿದರು.

ಶೈಲಜಾ ಜೋಷಿ, ಜೆನ್ನಿತ್ ಅಯ್ಯಪ್ಪ, ಅಡ್ಡಂಡ ಕರಿಯಪ್ಪ, ನೆರವಂಡ ಉಮೇಶ್, ಪ್ರಭಾ ನಾಣಯ್ಯ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಲೋಕೇಶ್ ಸಂಗೀತ ಸಂಯೋಜನೆ, ವಿನಾಯಕರಾಮ್ ಕಲಗಾರು ಸಂಭಾಷಣೆ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT