ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಉತ್ತೇಜಿಸಲು ಪತ್ರ ಪ್ರಯೋಗ

Last Updated 25 ಏಪ್ರಿಲ್ 2013, 20:10 IST
ಅಕ್ಷರ ಗಾತ್ರ

ಬೆಂಗಳೂರು: ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸಲು ಈ ಬಾರಿ ವ್ಯಾಪಕ ಪ್ರಚಾರ ಕೈಗೊಂಡಿರುವ ಚುನಾವಣಾ ಆಯೋಗ, ಮತದಾನ ಮಾಡುವಂತೆ ಮತದಾರರಿಗೆ ಪತ್ರದ ಮೂಲಕ ಮನವಿ ಮಾಡುವ ಪ್ರಯೋಗಕ್ಕೆ ಮುಂದಾಗಿದೆ.

ಮತದಾನದ ದಿನವಾದ ಮೇ 5ರಂದು ಮತಗಟ್ಟೆಗೆ ಬಂದು ಅಮೂಲ್ಯವಾದ ಮತ ಚಲಾಯಿಸುವಂತೆ ಆಯಾ ಜಿಲ್ಲಾಧಿಕಾರಿಗಳು ಎಲ್ಲ ಮತದಾರರಿಗೂ ಪತ್ರ ಬರೆಯಲಿದ್ದಾರೆ. ಬೂತ್‌ಮಟ್ಟದ ಅಧಿಕಾರಿಗಳು ಖುದ್ದಾಗಿ ಈ ಪತ್ರವನ್ನು ಮತದಾರರಿಗೆ ತಲುಪಿಸಲಿದ್ದಾರೆ ಎಂದು ರಾಜ್ಯದ ಮುಖ್ಯಚುನಾವಣಾಧಿಕಾರಿ ಅನಿಲ್‌ಕುಮಾರ್ ಝಾ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮತದಾನಕ್ಕೆ ಮೂರು ದಿನ ಮೊದಲೇ `ವೋಟರ್ಸ್‌ ಸ್ಲಿಪ್' ಅನ್ನು ಮತದಾರರಿಗೆ ತಲುಪಿಸಲಾಗುತ್ತದೆ. ಆ ಸಂದರ್ಭದಲ್ಲೇ ಜಿಲ್ಲಾಧಿಕಾರಿಗಳ ಪತ್ರವನ್ನು ನೀಡಲಾಗುತ್ತದೆ. ಇದಲ್ಲದೆ ಮುಖ್ಯಚುನಾವಣಾಧಿಕಾರಿಗಳ ಕಚೇರಿಯಿಂದಲೂ ಎಸ್‌ಎಂಎಸ್ ಸಂದೇಶ ಕಳುಹಿಸಿ ಮತದಾನ ಮಾಡುವಂತೆ ಕೋರಲಾಗುವುದು ಎಂದರು.

`ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾನದ ಹಕ್ಕು ಚಲಾಯಿಸುತ್ತೇನೆ ಎಂದು ವಿದ್ಯಾರ್ಥಿಗಳ ಮೂಲಕ ಪೋಷಕರಿಂದ ಪ್ರಮಾಣ ಮಾಡಿಸುವ ಕಾರ್ಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದುವರೆಗೆ 24 ಲಕ್ಷ ಪತ್ರಗಳನ್ನು ವಿದ್ಯಾರ್ಥಿಗಳು ಪೋಷಕರಿಂದ ಸಹಿ ಮಾಡಿಸಿ ನೀಡಿದ್ದಾರೆ' ಎಂದು ಅವರು ಹೇಳಿದರು.

ಹೊಸ ಮತದಾರರು: ರಾಜ್ಯದಲ್ಲಿ 18ರಿಂದ 22 ವರ್ಷ ವಯೋಮಾನದ 35,58,862 ಮತದಾರರು ಇದ್ದಾರೆ. ಇವರೆಲ್ಲ ಇದೇ ಮೊದಲ ಬಾರಿಗೆ ಮತ ಚಲಾಯಿಸಲಿದ್ದಾರೆ. ಹೊಸ ಮತದಾರರಲ್ಲಿ 5,34,548 ಮಂದಿ ಬೆಂಗಳೂರಿನವರಾಗಿದ್ದಾರೆ.

  ರಾಜ್ಯದಲ್ಲಿನ ಒಟ್ಟು ಮತದಾರರ ಸಂಖ್ಯೆ 4,36,36,966. ಈ ಪೈಕಿ 2,22,84,050 ಮಂದಿ ಪುರುಷರು ಹಾಗೂ 2,13,02,916 ಮಹಿಳಾ ಮತದಾರರಾಗಿದ್ದಾರೆ. ಬೆಂಗಳೂರಿನ ಮತದಾರರ ಸಂಖ್ಯೆ 70,37,885.

ಒಟ್ಟು 52,034 ಮತಗಟ್ಟೆಗಳಿವೆ. ಈ ಪೈಕಿ 14,209 ಸೂಕ್ಷ್ಮ ಮತ್ತು 10,103 ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗಿದೆ. ಚುನಾವಣೆಗಾಗಿ ಒಟ್ಟು 65 ಸಾವಿರ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತದೆ ಎಂದು ತಿಳಿಸಿದರು.

ಮತಗಟ್ಟೆಗಳಲ್ಲಿ 2.53 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಮತಗಟ್ಟೆಗಳ ಹೊರಗೆ 48,182 ಮಂದಿ ಪೊಲೀಸರು ಭದ್ರತಾ ಕಾರ್ಯದಲ್ಲಿ ತೊಡಗಲಿದ್ದಾರೆ. ಇದಲ್ಲದೆ 9,900 ಚಾಲಕರು, ನಿರ್ವಾಹಕರು ಚುನಾವಣಾ ಕಾರ್ಯದಲ್ಲಿ ತೊಡಗಲಿದ್ದಾರೆ. ಒಟ್ಟಾರೆ 3,11,142 ಮಂದಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ ರಕ್ಷಣಾ ಇಲಾಖೆಯ ಸೇವೆಯಲ್ಲಿರುವ 37,535 ಮಂದಿಗೆ ಮೂರು ದಿನಗಳ ಹಿಂದೆಯೇ ಅಂಚೆ ಮೂಲಕ ಮತಪತ್ರಗಳನ್ನು ಕಳುಹಿಸಲಾಗಿದೆ.

ಮೇ 8ರಂದು ಮತ ಎಣಿಕೆ ಆರಂಭವಾಗುವ ಮೊದಲೇ ಮತಪತ್ರಗಳನ್ನು ವಾಪಸ್ ಕಳುಹಿಸಿದರೆ ಮಾತ್ರ ಎಣಿಕೆ ಸಂದರ್ಭದಲ್ಲಿ ಪರಿಗಣಿಸಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT