ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ: ಜಿಲ್ಲೆಯ ವಿವಿಧೆಡೆ ಜಾಗೃತಿ ಆಂದೋಲನ

Last Updated 3 ಏಪ್ರಿಲ್ 2013, 10:06 IST
ಅಕ್ಷರ ಗಾತ್ರ

ಚಾಮರಾಜನಗರ: ಸುಭದ್ರ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮತ ಚಲಾಯಿಸಿ ಎಂದು ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರ ಕರೆ ನೀಡಿದರು.ನಗರದ ಗೃಹರಕ್ಷಕ ದಳದ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಗೃಹರಕ್ಷಕ ದಳ, ಲಯನ್ಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಜಾಥಾ ಉದ್ಘಾಟಿಸಿ ಅವರು  ಮಾತನಾಡಿದರು.

18 ವರ್ಷ ತುಂಬಿದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಿದಲ್ಲಿ ಸಮಾಜ ಸದೃಢವಾಗಲು ಸಾಧ್ಯ. ಮತದಾರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸುವವರು ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶಂಕರರಾಜು ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಮತದಾರರಲ್ಲಿ ಮತದಾನದ ಬಗ್ಗೆ ಮತ್ತು ಮತ ಚಲಾಯಿಸುವ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸಂತೋಷದ ವಿಷಯ ಎಂದರು.

ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಬಿ. ಎಸ್.ಬಸವರಾಜು, ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಎಲ್. ಸುರೇಶ್, ಬಿ.ಎಸ್.ವಿ. ಪ್ರತಿಷ್ಠಾನದ ವೆಂಕಟನಾಗಪ್ಪ ಶೆಟ್ಟಿ, ರೋಟರಿ ಅಧ್ಯಕ್ಷ ಮಹೇಶ್, ಸಿ.ಎಂ. ನರಸಿಂಹಮೂರ್ತಿ, ಯೋಜನಾ ಸಂಸ್ಥೆ ಪರಶಿವಪ್ಪ, ಗೃಹರಕ್ಷಕ ದಳದ ಬೋಧಕರಾದ ಎಂ.ರಾಮಣ್ಣ ಮತ್ತು ಸಿಬ್ಬಂದಿ ಹಾಜರಿದ್ದರು.

`ಜನತಂತ್ರ ಯಶಸ್ಸಿಗೆ ಮತದಾನ ಅಗತ್ಯ'
ಚಾಮರಾಜನಗರ: `ಮತದಾನ ಪ್ರಕ್ರಿಯೆಯಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡರೆ ಜನತಂತ್ರ ವ್ಯವಸ್ಥೆ ಸದೃಢಗೊಳ್ಳುತ್ತದೆ. ಜೊತೆಗೆ, ಅಭಿವೃದ್ಧಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಉಂಟಾಗುತ್ತದೆ' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಆರ್. ಸೋಮಶೇಖರಪ್ಪ ಹೇಳಿದರು.

ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಚುನಾವಣಾ ಆಯೋಗ, ಜಿಲ್ಲಾಡಳಿತ, ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜನಸಂಖ್ಯೆಗೆ ಅನುಗುಣವಾಗಿ ಮತದಾನ ನಡೆಯಬೇಕು. ಆದರೆ, ಇಲ್ಲಿವರೆಗೆ ನಡೆದಿರುವ ಚುನಾವಣೆಗಳಲ್ಲಿ ಶೇ.100ರಷ್ಟು ಮತದಾನ ಆಗಿರುವ ನಿದರ್ಶನಗಳಿಲ್ಲ. ಜನರಲ್ಲಿ ನಿರ್ಲಿಪ್ತ ಮನೋಭಾವ ಹೋಗಬೇಕು. ಆಡಳಿತ ಹಾಗೂ ಪ್ರಗತಿಯಲ್ಲಿ ಸುಧಾರಣೆ ಬಯಸಬೇಕು. ಇದಕ್ಕಾಗಿ ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಎಂ ವಿ. ಸಾವಿತ್ರಿ ಮಾತನಾಡಿ, `ಮತಯಂತ್ರಗಳಲ್ಲಿ ಮತ ಚಲಾವಣೆ ಮಾಡುವ ಬಗ್ಗೆ ಕೆಲವು ಗೊಂದಲ ಮತದಾರರಲ್ಲಿ ಇದೆ. ಇದರ ಪರಿಹಾರಕ್ಕಾಗಿಯೇ ಶೀಘ್ರದಲ್ಲಿ ಮತಗಟ್ಟೆ ವ್ಯಾಪ್ತಿ ಮತ ಯಂತ್ರಗಳ ಪ್ರಾತ್ಯಕ್ಷಿಕೆ ಮೂಲಕ ಮತ ಹಾಕುವ ವಿಧಾನದ ಬಗ್ಗೆ ಅರಿವು ಮೂಡಿಸಲಾಗುವುದು' ಎಂದರು.

ಪ್ರಾಂಶುಪಾಲ ಪ್ರೊ. ದೇವರಾಜು ಮಾತನಾಡಿ, `ಚುನಾವಣಾ ಆಯೋಗ ಈ ಬಾರಿ ಮತದಾರರ ಜಾಗೃತಿಗೆ ದಿಟ್ಟ ಕಾರ್ಯಕ್ರಮಗಳನ್ನು ರೂಪಿಸಿರುವುದು ಸ್ವಾಗತಾರ್ಹ. ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮತದಾನದ ಮಹತ್ವವನ್ನು ತಿಳಿಯಪಡಿಸುವ ನಿಟ್ಟಿನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಕಾಲೇಜುಗಳ ಮೂಲಕ ಆಯೋಜಿಸಲಾಗಿದೆ' ಎಂದರು.

ಉಪನ್ಯಾಸಕಿ ಪ್ರೇಮಲತಾ ಮಾತನಾಡಿದರು. ಇದೇವೇಳೆ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಮತದಾನದ ಮೌಲ್ಯ ಕುರಿತ ಪ್ರತಿಜ್ಞಾ ವಿಧಿ ಬೋಧಿಸಿದರು
ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಭಾರತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಹಾಗೂ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಸಂಬಯ್ಯ, ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಂಕರರಾಜು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರೇಗೌಡ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಬಂಗಾರು ನಾಯಕ, ಡ್ರೀಮ್ಸ ಎಜುಕೇಷನ್ ಸೋಷಿಯಲ್ ಟ್ರಸ್ಟ್‌ನ ಕಾರ್ಯದರ್ಶಿ ವೈ.ಆರ್. ಮಹೇಶ್, ಧರ್ಮಸ್ಥಳ  ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಿಲ್ಲಾ ಮುಖ್ಯಸ್ಥ ವಿಠಲ್ ಪೂಜಾರಿ, ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ಪ್ರಕಾಶ್ ಹಾಜರಿದ್ದರು.

`ನಿರ್ಭಯವಾಗಿ ಮತ ಚಲಾಯಿಸಿ'
ಚಾಮರಾಜನಗರ: `ಹಣ, ಹೆಂಡ ಹಾಗೂ ಇನ್ನಿತರ ಆಮೀಷಗಳಿಗೆ ಒಳಗಾಗದೆ ನಿರ್ಭಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವದ ಮೌಲ್ಯವನ್ನು ಕಾಪಾಡಬೇಕು' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಿ.ಬಸವರಾಜು ಕರೆ ನೀಡಿದರು.

ತಾಲ್ಲೂಕಿನ ಹರದನಹಳ್ಳಿ ಕುಂಟುಮ್ಮತಾಯಿ ದೇವಸ್ಥಾನದಲ್ಲಿ ಈಚೆಗೆ ನಡೆದ ಮತದಾರರ ಜಾಗೃತಿ  ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಿ ಅವರು ಮಾತನಾಡಿದರು.

ಜನರು ಹಾಕುವ ಒಂದು ಮತ ದೇಶದ ಭವಿಷ್ಯವನ್ನು ರೂಪಿಸುತ್ತದೆ. ಮಹಿಳೆಯರು ಮತಗಟ್ಟೆಗಳಿಗೆ  ತೆರಳಿ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.ಶಿಶು ಮತ್ತು ಮಹಿಳಾ ಅಭಿವೃದ್ಧಿ ಇಲಾಖೆ ಅಧಿಕಾರಿ ಎಚ್.ಕೆ. ರೇವಣೇಶ್, ವೃತ್ತದ ಮೇಲ್ವಿಚಾರಕಿ ಲಕ್ಷ್ಮಿ ಹಾಜರಿದ್ದರು.

ಮುಕ್ತ ಮತದಾನಕ್ಕೆ ಸಕಲ ಸಿದ್ಧತೆ: ಡಿಸಿ
ಚಾಮರಾಜನಗರ: ಜಿಲ್ಲಾ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ಮತದಾನ ಆಗಬೇಕಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಜಿಲ್ಲಾಡಳಿತದಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ.ಸಾವಿತ್ರಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಹಾಗೂ ಮುಕ್ತ ಮತದಾನ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳು, ಆಟೊ, ಬಸ್‌ಗಳು ಹಾಗೂ ಇನ್ನಿತರ ವಾಹನಗಳಿಗೆ ಜಾಹೀರಾತು ಫಲಕಗಳನ್ನು ಅಳವಡಿಸುವಂತೆ ಆರ್‌ಟಿಒ ಮೂಲಕ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಅಂತರಜಿಲ್ಲಾ ಹಾಗೂ ಅಂತರರಾಜ್ಯ ಸಂಪರ್ಕಿಸುವ ಅರಣ್ಯ ಗಡಿ ಪ್ರದೇಶಗಳಲ್ಲಿ ವಾಸಿಸುವವರು ಕೂಡ ಮತದಾನ ಮಾಡಲು ಅರ್ಹರಾಗಿದ್ದಾರೆ. ಇವರಿಗೆ ಚನಾವಣೆ ಕುರಿತು ಅಗತ್ಯ ತಿಳುವಳಿಕೆ ನೀಡಿ ಮತದಾನ ಮಾಡಲು ಅವಕಾಶ ನೀಡಲಾಗುವುದು. ಅರಣ್ಯ ಇಲಾಖೆ ಸಿಬ್ಬಂದಿಯವರಿಂದ ಮತದಾನ ಕೇಂದ್ರಗಳಿಗೆ ತೆರಳಲು ವಾಹನದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಚುನಾವಣಾ ಅಪರಾಧಗಳಿಗೆ ಸಂಬಂಧಿಸಿದ ದೂರು ಸ್ವೀಕರಿಸಲು ಕ್ಷಿಪ್ರಪಡೆ ನೇಮಕ ಮಾಡಲಾಗಿದೆ. ಚುನಾವಣಾ ಅಕ್ರಮ ತಡೆಯಲು ಹಾಗೂ ಈ ಸಂಬಂಧ ದೂರುಗಳ ಬಗ್ಗೆ ಕ್ರಮವಹಿಸಲು ವಿಡಿಯೋ ವೀಕ್ಷಣಾ ತಂಡ ರಚಿಸಲಾಗಿದ್ದು, ಆಯಾ ತಾಲ್ಲೂಕು ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಆಗಿರುವ ವೆಚ್ಚದ ವಿವರ ಹಾಗೂ ನೀತಿಸಂಹಿತೆ ಉಲ್ಲಂಘನೆಯಾಗಿದ್ದರೆ ಪರಿಶೀಲಿಸಿ ವಿಡಿಯೋ ವಿಕ್ಷಣಾ ತಂಡ ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ತಂಡಕ್ಕೆ ವರದಿ ಮಾಡುವಂತೆ ಸೂಚಿಸಲಾಗುವುದು ಎಂದು ವಿವರಿಸಿದರು.

ಕಡ್ಡಾಯ ಮತದಾನಕ್ಕೆ ಸಲಹೆ
ಕೊಳ್ಳೇಗಾಲ: ಕಡ್ಡಾಯ ಮತದಾನದ ಮೂಲಕ ಸುಭದ್ರ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಯುವ ಮತದಾರರು ಮುಂದಾಗಬೇಕು ಎಂದು ಹನೂರು ವಿಶೇಷ ತಹಶೀಲ್ದಾರ್ ಎಸ್.ಎಂ. ಮಹದೇವು ಹೇಳಿದರು.

ತಾಲ್ಲೂಕಿನ ಹನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಮಂಗಳವಾರ ತಾಲ್ಲೂಕು ಕಾನೂನು ನೆರವು ಸಮಿತಿ ವತಿಯಿಂದ ನಡೆದ ಮತದಾರರ ಜಾಗೃತಿ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನೀತಿಸಂಹಿತೆ ಜಾಗೃತ ದಳದ ಮುಖ್ಯಸ್ಥೆ ಶಕುಂತಲಾ ಬಾಯಿ ಮಾತನಾಡಿ, ಮತದಾನ ಗುರುತಿನ ಚೀಟಿಯನ್ನು ಜನರು ಸಂವಿಧಾನ ಬದ್ಧ ಹಕ್ಕಾಗಿ ಬಳಕೆ ಮಾಡದೆ ಕೇವಲ ವಾಸಸ್ಥಳ ದೃಢೀಕರಣಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ವಿಷಾದನೀಯ ಎಂದರು.

ಪ್ರಾಂಶುಪಾಲ ಡಾ.ಸತ್ಯನಾರಾಯಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕ ಸುಂದರ್‌ರಾಜ್, ಪ್ರಕಾಶ್ ಇತರರು ಹಾಜರಿದ್ದರು.

ಮತದಾನ ಅರಿವು ಕಾರ್ಯಾಗಾರ
ಕೊಳ್ಳೇಗಾಲ:
ಸ್ವಸಹಾಯ ಸಂಘಗಳ ಮಹಿಳೆಯರಿಗೆ ಕಡ್ಡಾಯ ಮತದಾನ ಮಾಡುವ ಬಗ್ಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ತಿಳವಳಿಕೆ ನೀಡಬೇಕು ಎಂದು ಉಪವಿಭಾಗಾಧಿಕಾರಿ ಎಚ್.ಎನ್.ಸತೀಶ್‌ಬಾಬು ಸೂಚಿಸಿದರು.

ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಾಲ್ಲೂಕು ಆಡಳಿತ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮತದಾನ ಕುರಿತ ಅರಿವು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ರತಿ ಗ್ರಾಮದಲ್ಲೂ ಮಹಿಳಾ ಸ್ವಸಹಾಯ ಸಂಘಗಳಲ್ಲಿ ಮತದಾನ ಮಹತ್ವ ಮತ್ತು ಯೋಗ್ಯ ಅಭ್ಯರ್ಥಿಗಳಿಗೆ ಮತ ಚಲಾಯಿಸುವ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಶ್ರಮಿಸಬೇಕು ಎಂದು ಸೂಚಿಸಿದರು. ತಹಶೀಲ್ದಾರ್ ಮಾಳಿಗಯ್ಯ, ಎಂ.ನಂಜುಂಡಯ್ಯ, ಹನೂರು ವಲಯ ಚುನಾವಣಾಧಿಕಾರಿ ರಮೇಶ್, ಚಂದ್ರಪ್ಪ, ಮಾದೇಶ್ ಇತರರು ಹಾಜರಿದ್ದರು.

ಮತದಾನ: ಜಾಗೃತಿ ಜಾಥಾ
ಸಂತೇಮರಹಳ್ಳಿ:
ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸಾಮಾಜಿಕ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು ಎಂದು ಜೆಎಸ್‌ಎಸ್ ಡಿಇಡಿ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ಮನವಿ ಮಾಡಿದರು.

ಸ್ಥಳೀಯ ಜೆಎಸ್‌ಎಸ್ ಡಿಇಡಿ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರ ನಡೆಸಿದ ಮತದಾನ ಅರಿವು ಕುರಿತ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಶಿಕ್ಷಣಾರ್ಥಿಗಳು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಅಲ್ಲದೆ, `ಪ್ರಜಾಪ್ರಭುತ್ವ ಗಟ್ಟಿಗೊಳಿಸುವಲ್ಲಿ ಮತದಾರರ ಪಾತ್ರ' ಎಂಬ ವಿಷಯದ ಬಗ್ಗೆ ಪ್ರಬಂಧ ಮತ್ತು ಭಾಷಣ ಸ್ಪರ್ಧೆ ನಡೆಯಿತು.ಉಪನ್ಯಾಸಕರಾದ ಮಲ್ಲಿಕಾರ್ಜುನಸ್ವಾಮಿ, ದಯಾನಂದಸ್ವಾಮಿ, ಶಾಂತರಾಜು, ಪ್ರದೀಪ್‌ಕುಮಾರ್, ಕೆ.ಜೆ.ಜಗದೀಶ್ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಜಾಗೃತಿ ಜಾಥಾ
ಯಳಂದೂರು:
ಪಟ್ಟಣದ ಸರ್ಕಾರಿ ವೈಎಂಎಂ ಪದವಿ ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಪಟ್ಟಣದ ರಸ್ತೆಗಳಲ್ಲಿ ಮತದಾನ ಜಾಗೃತಿ ಜಾಥಾ ನಡೆಸಿದರು.

`ನಿಮ್ಮ ಮತ, ನಿಮ್ಮ ಹಕ್ಕು. ಉತ್ತಮ ಪ್ರಜಾಪ್ರಭುತ್ವದ ಆಶಯಕ್ಕೆ ಮತದ ಮಹತ್ವ ಮನಗಾಣಿ, ವಿಶ್ವದ ಬೃಹತ್ ಪ್ರಜಾರಾಜ್ಯ ಭಾರತದ ಯುವಕರೇ ಮತಗಟ್ಟೆಗೆ ತೆರಳಿ, ಭವಿಷ್ಯದಲ್ಲಿ ಸುಂದರ ಸಮಾಜ ನಿರ್ಮಾಣಕ್ಕೆ ಮತ ಚಲಾವಣೆಗೆ ಸಜ್ಜಾಗಿ' ಎಂಬ ಭಿತ್ತಿಪತ್ರಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT