ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ ಮಾಡು ಎಂದು ಬೈಬಲ್ ತಿಳಿಸಿಲ್ಲ

Last Updated 23 ಜನವರಿ 2012, 8:25 IST
ಅಕ್ಷರ ಗಾತ್ರ

ಹಳೆಯಂಗಡಿ (ಮೂಲ್ಕಿ): ಪವಿತ್ರ ದೇವರ ಗ್ರಂಥವೆಂದು ಪೂಜಿಸುವ ಬೈಬಲ್‌ನಲ್ಲಿ ಮತಾಂತರ ಮಾಡು, ದುರ್ಬಲರಿಗೆ ಆಮಿಷ ಒಡ್ಡು, ಅಸಹಾಯಕರ ಧರ್ಮವನ್ನು ಬದಲಿಸು ಎಂದು ಎಲ್ಲೂ ಹೇಳಿಲ್ಲ. ಆದರೆ ಅಮೆರಿಕಾ ಪ್ರಾಯೋಜಕತ್ವದ ಹಳೆಯಂಗಡಿಯ ಹೆಬ್ರಾನ್ ಅಸೆಂಬ್ಲಿಯಂತಹ ಪ್ರಾರ್ಥನಾ ಮಂದಿರವು ಕಾನೂನುಬಾಹಿರವಾಗಿ ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದು ಇದು ಸಭ್ಯ ಕ್ರೈಸ್ತರನ್ನು ಸಮಾಜದಲ್ಲಿ ಸಂಶಯದಿಂದ ಕಾಣುವಂತಾಗಿದೆ ಎಂದು ಬಿಜೆಪಿ ರಾಜ್ಯ ಅಲ್ಪಸಂಖ್ಯಾತ ಮೋರ್ಚಾ ಉಪಾಧ್ಯಕ್ಷ ಫ್ರಾಂಕ್ಲಿನ್ ಮೊಂತೆರೊ ಹೇಳಿದರು.

ಮೂಲ್ಕಿ ಬಳಿಯ ಹಳೆಯಂಗಡಿಯಲ್ಲಿ ಹೆಬ್ರಾನ್ ಅಸೆಂಬ್ಲಿಯ ಪ್ರಾರ್ಥನಾ ಮಂದಿರದ ವಿರುದ್ಧ ಭಾನುವಾರ ಅಕ್ರಮ ಮತಾಂತರ ಹಾಗೂ ಅನಧಿಕೃತ ಪ್ರಾರ್ಥನಾ ಮಂದಿರ ಎಂದು ಆರೋಪಿಸಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಹಿಂದೂ ಸಂಘಟನೆಯ ಹಿರಿಯ ನಾಯಕ ಎಸ್.ಎಸ್.ಸತೀಶ್ ಭಟ್ ಕೊಳುವೈಲು ಮಾತನಾಡಿ ಮೂಲ್ಕಿ ವೃತ್ತ ನಿರೀಕ್ಷಕರು ಕೊಳಚಿಕಂಬಳದ ಅಮಾಯಕ ಮಹಿಳೆಯೆ ಕೊಲೆ, ಹಳೆಯಂಗಡಿಯಲ್ಲಿ ನಡೆದ ಸರಣಿ ಕಳ್ಳತನ, ಇತರ ಅಪರಾಧ ಪ್ರಕರಣದ ತನಿಖೆಯನ್ನು ಮಾಡುವುದನ್ನು ಬಿಟ್ಟು ಹಳೆಯಂಗಡಿಯ ವಿವಾದಾತ್ಮಕ ಪ್ರಾರ್ಥನಾ ಮಂದಿರದ ಪರವಾಗಿ ಕಾವಲು ಕಾಯುತ್ತಿರುವ ಹಿನ್ನೆಲೆ ಬಹಿರಂಗ ಆಗಬೇಕು ಅಲ್ಲದೇ ಸುಳ್ಳು ಹೇಳಿ ಕೇಸು ಹಾಕುವ ಪ್ರಯತ್ನ ನಡೆಸುವ ಇಂತಹ ಅಧಿಕಾರಿಯನ್ನು ಕೂಡಲೆ ಮೂಲ್ಕಿಯಿಂದ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಮಂಗಳೂರಿನ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಕಿಶೋರ್ ಮಾತನಾಡಿ ದೇಶಪ್ರೇಮ, ಸ್ವಾಭಿಮಾನ ಇದ್ದರೆ ಪ್ರಾರ್ಥನಾ ಮಂದಿರದಲ್ಲಿ ವಂದೆಮಾತರಂ ದೇಶ ಭಕ್ತಿಗೀತೆ ಹಾಡಿರಿ, ಹಿಂದೂ ಸಮಾಜವನ್ನು ಕೆಣಕಬೇಡಿರಿ ಎಂದು ಹೇಳಿದರು.

ರಾಮಚಂದ್ರ ಶೆಣೈ, ವಿನೋದ್ ಬೇಳ್ಳಾಯರು, ಈಶ್ವರ ಕಟೀಲು, ಕಸ್ತೂರಿ ಪಂಜ, ಸತೀಶ್ ಮುಂಚೂರು, ಮಹಾಬಲ ಸಾಲ್ಯಾನ್, ವಿನೋದ್ ಸಾಲ್ಯಾನ್, ಶೋಭೇಂದ್ರ ಸಸಿಹಿತ್ಲು, ಸತೀಶ್ ಅಂಚನ್ ಮೂಲ್ಕಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಇನ್ನಿತರ ಪ್ರಮುಖರು ಹಾಜರಿದ್ದರು.

ಸಭೆಯ ಆರಂಭದಲ್ಲಿ ಪಾವಂಜೆ ದೇವಸ್ಥಾನದಿಂದ ಹಳೆಯಂಗಡಿ ಮುಖ್ಯಪೇಟೆಯಾಗಿ ಪಡುಪಣಂಬೂರು ವರೆಗೆ ಕಪ್ಪು ಪಟ್ಟಿ ಧರಿಸಿ ಮೌನ ಮೆರವಣಿಗೆ ಸಾಗಿ ರಾಷ್ಟ್ರೀಯ ಹದ್ದಾರಿಯಲ್ಲಿ ಸಭೆ ನಡೆಯಿತು. ಸುಮಾರು ಒಂದು ಸಾವಿರ ಜನರು ಸೇರಿದ್ದು ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಇದ್ದರು.
 
ಮೆರವಣಿಗೆ ಪ್ರಾರ್ಥನಾ ಮಂದಿರದ ಮುಂದೆ ಸಾಗುವಾಗ ಮಂದಿರದಲ್ಲಿ ನಡೆಸುತ್ತಿದ್ದ ಪ್ರಾರ್ಥನೆಯ ಧ್ವನಿವರ್ಧಕದ ಶಬ್ದವನ್ನು ಏರಿಸಿ ಪ್ರತಿಭಟನಕಾರರ ವಿಡಿಯೋ ಶೂಟಿಂಗ್ ನಡೆಸುತ್ತಿದ್ದಾಗ ಕಾರ್ಯಕರ್ತರ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೇ ಬಿಗುವಿನ ವಾತಾವರಣ ನಿರ್ಮಾಣ ಆಗಿತ್ತು ತತ್‌ಕ್ಷಣ ಸತೀಶ್ ಭಟ್ ಕಾರ್ಯಕರ್ತರನ್ನು ಸಮಾಧಾನಿಸಿ ಸಭೆಗೆ ಕರೆತಂದರು. ಪೊಲೀಸ್ ಅಧಿಕಾರಿಗಳಾದ ಪುಟ್ಟಮಾದಯ್ಯ, ಬೆಳ್ಳಿಯಪ್ಪ, ಬಶೀರ್ ಅಹ್ಮದ್, ವೆಲೆಂಟನ್ ಡಿಸೋಜಾ, ಸುನಿಲ್ ಪಾಟೀಲ್ ಸಹಿತ ವಿಶೇಷ ಪೊಲೀಸ್ ತುಕುಡಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT