ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಅಚ್ಚರಿಯ ಅಲೆ: ಐರ್ಲೆಂಡ್ ಗುರಿ

Last Updated 10 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಐರ್ಲೆಂಡ್ ತಂಡವನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಕಳೆದ ಬಾರಿಯ ವಿಶ್ವಕಪ್‌ನಲ್ಲಿಯೂ ಇದೇ ಸ್ಥಿತಿ ಇತ್ತು. ಸುಲಭದ ತುತ್ತಾಗುವ ತಂಡವೆಂದುಕೊಂಡು ಪಾಕಿಸ್ತಾನ ಹಾಗೂ ಬಾಂಗ್ಲಾದೇಶದವರು ಐರ್ಲೆಂಡ್ ಎದುರು ಆಘಾತ ಅನುಭವಿಸಿದರು.

ಆದ್ದರಿಂದಲೇ ಐರ್ಲೆಂಡ್ ತಂಡದ ನಾಯಕ ವಿಲಿಯಮ್ ಪೋರ್ಟರ್‌ಫೀಲ್ಡ್ ಅವರು ‘ನಮ್ಮ ತಂಡವನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. 2007ರ ವಿಶ್ವಕಪ್ ಕಡೆಗೆ ಒಂದು ನೋಟ ಬೀರಿದರೆ ಅವರ ಬೆದರಿಕೆಯಲ್ಲಿ ಸತ್ವವಿದೆ ಎಂದು ಅನಿಸುವುದು ಸಹಜ.

ಐರ್ಲೆಂಡ್ ತಂಡವು ಈ ಬಾರಿಯ ವಿಶ್ವಕಪ್‌ನಲ್ಲಿ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಇದೇ ಗುಂಪಿಯನ್ ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ ಹಾಗೂ ಹಾಲೆಂಡ್ ತಂಡಗಳೂ ಇವೆ. ಪ್ರದರ್ಶನ ಮಟ್ಟದಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡಿರುವ ಐರ್ಲೆಂಡ್‌ನವರು ಭಾರತ, ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ಫೆಬ್ರುವರಿ 19ರಿಂದ ನಡೆಯಲಿರುವ ವಿಶ್ವಕಪ್‌ನ ಕೆಲವು ಪಂದ್ಯಗಳಲ್ಲಿ ಅನಿರೀಕ್ಷಿತ ಫಲಿತಾಂಶವನ್ನು ಪಡೆಯುವ ವಿಶ್ವಾಸ ಹೊಂದಿದ್ದಾರೆ.

* 2007ರಲ್ಲಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಪ್ರಧಾನ ಹಂತದಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದ ಐರ್ಲೆಂಡ್ ಎರಡು ಅಚ್ಚರಿಯ ಫಲಿತಾಂಶಗಳಿಂದ ಕ್ರಿಕೆಟ್ ಜಗತ್ತು ಬೆಚ್ಚಿಬೀಳುವಂತೆ ಮಾಡಿತ್ತು. ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ವಿರುದ್ಧ ಆಡಿದ್ದರೂ, ಗೆಲುವು ಪಡೆದಿದ್ದು ಬಾಂಗ್ಲಾ ಹಾಗೂ ಪಾಕ್ ವಿರುದ್ಧ ಮಾತ್ರ. ಜಿಂಬಾಬ್ವೆ ವಿರುದ್ಧದ ಪಂದ್ಯವು ಟೈ ಆಗಿತ್ತು. ಭಾರತವನ್ನು ಎದುರಿಸುವ ಅವಕಾಶವು ಈ ತಂಡಕ್ಕೆ ಈ ಬಾರಿ ಸಿಗುತ್ತಿದೆ. ಲೀಗ್‌ನಲ್ಲಿ ಒಂದೇ ಗುಂಪಿನಲ್ಲಿ ಇರುವುದರಿಂದ ಭಾರತ-ಐರ್ಲೆಂಡ್ ಮುಖಾಮುಖಿ ಖಚಿತ.

* ಜಮೈಕಾದ ಕಿಂಗ್‌ಸ್ಟನ್‌ನಲ್ಲಿರುವ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ 15ನೇ ಮಾರ್ಚ್ 2007ರಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿ 50 ಓವರುಗಳಲ್ಲಿ ಐರ್ಲೆಂಡ್ 221 ರನ್‌ಗಳನ್ನು ಕಲೆಹಾಕಿತ್ತು. ಇದ ಪಂದ್ಯದಲ್ಲಿ ಜೆರೆಮಿ ಬ್ರೇ ಅವರು ಶತಕ (115; 221 ನಿ., 137 ಎ., 10 ಬೌಂಡರಿ, 2 ಸಿಕ್ಸರ್) ಸಾಧನೆಯ ಶ್ರೇಯ ಪಡೆದಿದ್ದರು. ಅಚ್ಚರಿಯೆಂದರೆ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಜಿಂಬಾಬ್ವೆ ಸರಿಯಾಗಿ ಐವತ್ತು ಓವರುಗಳು ಪೂರ್ಣಗೊಳ್ಳುವ ಹೊತ್ತಿಗೆ ಎಲ್ಲ ವಿಕೆಟ್ ಕಳೆದುಕೊಂಡು 221 ರನ್ ಗಳಿಸಿತ್ತು. ಆದ್ದರಿಂದ ಆ ಪಂದ್ಯವು ಟೈ ಆಗಿತ್ತು.

* ಕ್ರಿಕೆಟ್ ಜಗತ್ತು ಎಂದೂ ಮರೆಯದ ಅಚ್ಚರಿಯ ಫಲಿತಾಂಶಕ್ಕೆ ಐರ್ಲೆಂಡ್ ಕಾರಣವಾಗಿದ್ದು ಪಾಕಿಸ್ತಾನ ವಿರುದ್ಧ. ಯಾರೂ ನಿರೀಕ್ಷೆ ಮಾಡಿರಲಿಲ್ಲ ಐರ್ಲೆಂಡ್‌ನಂಥ ದುರ್ಬಲ ಎದುರಾಳಿಗೆ ಪಾಕ್ ಪಡೆಯವರು ಸುಲಭವಾಗಿ ಶರಣಾಗುತ್ತಾರೆಂದು! ಆದರೆ ಅನಿರೀಕ್ಷಿತವೊಂದು ನಡೆದೇ ಹೋಯಿತು. ಟಾಸ್ ಗೆದ್ದಿದ್ದ ಐರ್ಲೆಂಡ್ ತಂಡದ ನಾಯಕ ಜಾನ್‌ಸ್ಟನ್ ಅವರು ಮೊದಲು ಕ್ಷೇತ್ರ ರಕ್ಷಣೆ ಮಾಡುವ ನಿರ್ಧಾರ ಕೈಗೊಂಡರು. ಪಾಕ್ ಬ್ಯಾಟ್ಸ್‌ಮನ್‌ಗಳು ಭಾರಿ ಕಷ್ಟಪಟ್ಟು 45.4 ಓವರುಗಳಲ್ಲಿ 132 ರನ್‌ಗಳಿಗೆ ಆಲ್‌ಔಟ್ ಆದರು. ಆನಂತರ ಗುರಿಯ ಕಡೆಗೆ ಯಾತ್ರೆ ನಡೆಸಿದ ಐರ್ಲೆಂಡ್ ತಂಡದವರು ಡಕ್ವರ್ಥ್-ಲೂಯಿಸ್ ನಿಯಮದ ಪ್ರಕಾರ 47 ಓವರುಗಳಲ್ಲಿ 128 ರನ್ ಗಳಿಸುವ ಸವಾಲು ಪಡೆದರು. ಸುಲಭವ ಈ ಗುರಿಯನ್ನು ಜಾನ್‌ಸ್ಟನ್ ಬಳಗದವರು 41.4 ಓವರುಗಳಲ್ಲಿ ತಲುಪಿದರು. 7 ವಿಕೆಟ್ ನಷ್ಟಕ್ಕೆ 133 ರನ್ ಸೇರಿಸಿ, ಇನ್ನೂ 32 ಎಸೆತಗಳು ಬಾಕಿ ಇರುವಂತೆಯೇ ಮೂರು ವಿಕೆಟ್‌ಗಳ ಅಂತರದ ಐತಿಹಾಸಿಕ ವಿಜಯ ಸಾಧಿಸಿದರು. ಆ ಪಂದ್ಯದ ನಂತರ ಪಾಕ್ ತಂಡವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದು, ಕೋಚ್ ಬಾಬ್ ವೂಲ್ಮರ್ ಸಾವಿನ ಘಟನೆಯಂತೂ ವಿಶ್ವಕಪ್ ಇತಿಹಾಸದ ಕರಾಳ ಅಧ್ಯಾಯವಾಯಿತು.

* 15ನೇ ಏಪ್ರಿಲ್ 2007ರಂದು ಬ್ರಿಜ್‌ಟೌನ್‌ನಲ್ಲಿರುವ ಕಿಂಗ್‌ಸ್ಟನ್ ಓವಲ್‌ನಲ್ಲಿ ಐರ್ಲೆಂಡ್ ಇನ್ನೊಂದು ಬೆರಗಾಗುವಂಥ ಫಲಿತಾಂಶ ಪಡೆಯಿತು. 74 ರನ್‌ಗಳ ಭಾರಿ ಅಂತರದಿಂದ ಬಾಂಗ್ಲಾದೇಶಕ್ಕೆ ಆಘಾತ ನೀಡಿತು. ಅದಕ್ಕೂ ಮೊದಲೇ ಪಾಕ್‌ಗೆ ಸೋಲಿನ ಕಹಿ ನೀಡಿದ್ದ ಐರ್ಲೆಂಡ್ ಸಾಮರ್ಥ್ಯದ ಬಗ್ಗೆ ಯಾರಿಗೂ ಅನುಮಾನ ಬರಲಿಲ್ಲ. ಆದರೂ ಐರ್ಲೆಂಡ್‌ಗೆ ಪಾಕ್ ಶರಣಾದ ರೀತಿಯು ಇನ್ನೂ ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಮುಳ್ಳಿನಂತೆ ಚುಚ್ಚುತ್ತಿದೆ. ಅದೇನೇ ಇರಲಿ; ಐರ್ಲೆಂಡ್ ತಂಡವು ಪೋರ್ಟರ್‌ಫೀಲ್ಡ್ ಬ್ಯಾಟಿಗ್ ಬಲ ಹಾಗೂ ಬೌಲರ್‌ಗಳ ಪ್ರಬಲ ಪ್ರಯತ್ನದಿಂದ ಬಾಂಗ್ಲಾವನ್ನು ಬಗ್ಗುಬಡಿಯಿತು. ಐರ್ಲೆಂಡ್ ತನ್ನ ಐವತ್ತು ಓವರುಗಳ ಆಟದಲ್ಲಿ ಏಳು ವಿಕೆಟ್‌ಗಳನ್ನು ಕಳೆದುಕೊಂಡು 243 ಪೇರಿಸಿತು. ಇದಕ್ಕೆ ಉತ್ತರ ನೀಡುವಲ್ಲಿ ವಿಫಲವಾದ ಬಾಂಗ್ಲಾ 41.2 ಓವರುಗಳಲ್ಲಿ 169 ರನ್‌ಗಳಿಗೆ ಮುಗ್ಗರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT