ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ನಿತ್ಯಾನಂದ ಬಂಧನ

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಗುರುವಾರ ಮಧ್ಯಾಹ್ನವಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಿಡದಿಯ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ, ಸಂಜೆ ವೇಳೆಗೆ ನ್ಯಾಯಾಂಗ ಬಂಧನಕ್ಕೆ ಒಳಗಾದ ಪ್ರಸಂಗ ನಡೆಯಿತು.

ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವ ಉದ್ದೇಶದಿಂದ ಜಿಲ್ಲಾ ದಂಡಾಧಿಕಾರಿ ವಿ.ಶ್ರೀರಾಮರೆಡ್ಡಿ ಸ್ವಾಮೀಜಿಯನ್ನು ಏಳು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

ಜಿಲ್ಲೆಯಲ್ಲಿ ಸ್ವಾಮೀಜಿ ಅವರಿಂದ ಶಾಂತಿ ಭಂಗವಾಗಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಪೊಲೀಸರಿಂದ ಗುರುವಾರ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಸಿಆರ್‌ಪಿಸಿ ಕಲಂ 107 ಮತ್ತು 151ರ ಅಡಿ ಅರ್ಜಿ ಸಲ್ಲಿಕೆಯಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಅವರನ್ನು ಸಂಜೆ ಜಿಲ್ಲಾಧಿಕಾರಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.

ಸ್ವಾಮೀಜಿ ಬಿಡುಗಡೆಯಾದರೆ ಜಿಲ್ಲೆಯಲ್ಲಿ ಶಾಂತಿ ಕದಡಿದ ವಾತಾವರಣ ನಿರ್ಮಾಣವಾಗುತ್ತದೆ. ಗಲಭೆ, ಗಲಾಟೆಗಳು ಹೆಚ್ಚಾಗಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ ಎಂದು ಸರ್ಕಾರಿ ವಕೀಲರು ವಾದಿಸಿದರು.

ಸುಮಾರು 20 ನಿಮಿಷ ತನ್ನ ಪರ ಸಮರ್ಥನೆಯ ಸ್ವಯಂ ವಾದ ಮಂಡಿಸಿದ ನಿತ್ಯಾನಂದ ಸ್ವಾಮೀಜಿ `ನನ್ನಿಂದ ಯಾವುದೇ ರೀತಿಯ ಕಾನೂನು ಭಂಗವಾಗಿಲ್ಲ. ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳಲು ಹಾಗೂ ಶಾಂತಿ ಕಾಪಾಡಲು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಅಗತ್ಯವಿದ್ದರೆ ನಾನು ಮದುರೆಯ ಅಧೀನಂ ಪೀಠಕ್ಕೆ ಹೋಗಿ ಅಲ್ಲಿಯೇ ಇರುತ್ತೇನೆ~ ಎಂದು ವಾದಿಸಿದರು. ಎರಡೂ ಕಡೆಯ ವಾದವನ್ನು ಆಲಿಸಿದ ಜಿಲ್ಲಾಧಿಕಾರಿ, ಸ್ವಾಮೀಜಿಯನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು.

ರಾಮನಗರ ನ್ಯಾಯಾಲಯದಲ್ಲಿ ಸ್ವಾಮೀಜಿಯನ್ನು ಇರಿಸಿದರೆ ಶಾಂತಿಗೆ ಭಂಗ ಉಂಟಾಗಬಹುದು ಎಂದು ಸರ್ಕಾರಿ ವಕೀಲರು ವಾದಿಸಿದ್ದರಿಂದ ಜಿಲ್ಲಾಧಿಕಾರಿ ಸ್ವಾಮೀಜಿಯನ್ನು ಮೈಸೂರು ಜೈಲಿನಲ್ಲಿ ಇರಿಸುವಂತೆ ಆದೇಶಿಸಿದರು. ಆದೇಶ ಹೊರಬೀಳುತ್ತಿದ್ದಂತೆ ಸ್ವಾಮೀಜಿಯನ್ನು ಸುತ್ತುವರೆದ ಪೊಲೀಸರು ಅವರನ್ನು ಮೈಸೂರಿಗೆ ಕರೆದೊಯ್ದರು.

ಮಧ್ಯಾಹ್ನ ಜಾಮೀನು ದೊರೆತಿದ್ದರಿಂದ ಮಂದಸ್ಮಿತರಾಗಿದ್ದ ಸ್ವಾಮೀಜಿಯ ಮುಖದಲ್ಲಿನ ನಗು ಸಂಜೆಯಾಗುವಷ್ಟರಲ್ಲಿ ಮಾಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT