ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯನ್ನೇ ತಪ್ಪಿಸುತ್ತಿದೆ ಇಲ್ಲಿಯ ರಸ್ತೆ!

Last Updated 15 ಸೆಪ್ಟೆಂಬರ್ 2011, 7:35 IST
ಅಕ್ಷರ ಗಾತ್ರ

ಉಳ್ಳಾಲ: `ರಸ್ತೆ ಅವ್ಯವಸ್ಥೆಯಿಂದ ನಮ್ಮೂರಿನ ಹೆಣ್ಮಕ್ಕಳನ್ನು ಮದುವೆಯಾಗಲು ಯುವಕರು ಮುಂದಾಗುತ್ತಿಲ್ಲ, ಸಂಬಂಧ ಕುದುರಿದರೂ ರಸ್ತೆ ನೋಡಿ ಅವರು ದೂರ ಹೋಗುತ್ತಿದ್ದಾರೆ.....~ ಹೀಗೆಂದು ತಮ್ಮ ಅಳಲನ್ನು ವ್ಯಕ್ತಪಡಿಸಿದವರು ಬರುವ-ಕಲ್ಲಗುಡ್ಡೆ ನಿವಾಸಿಗಳು.

ಬುಧವಾರ ಕಲ್ಲುಗುಡ್ಡೆಯಲ್ಲಿ ರಸ್ತೆ ಅವ್ಯವಸ್ಥೆ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳ ವಿರುದ್ಧ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಈ ಮಾತನ್ನು ಆಡಿದರು.ಮದಕ ಸಮೀಪದಲ್ಲಿರುವ ಬರುವ ಪ್ರದೇಶದಿಂದ ಕಲ್ಲಗುಡ್ಡೆ ಎಂಬಲ್ಲಿಗೆ  ಸಂಚರಿಸುವ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಇಲ್ಲಿನ ನಿವಾಸಿಗಳು ಭಾರಿ ತೊಂದರೆಗೀಡಾಗಿದ್ದಾರೆ. ಸುಮರು ಎರಡು ಕಿ.ಮೀ ಉದ್ದದ ಈ ರಸ್ತೆ ಡಾಂಬರು ಕಾಣುವುದು ಬಿಡಿ, ಕಲ್ಲುಗಳನ್ನು ಹಾಕಿ ಸಮುತಟ್ಟುಗೊಳಿಸಿಯೂ ಇಲ್ಲ.

ಶಾಸಕರ ಅನುದಾನದಲ್ಲಿ ಇದೇ ರಸ್ತೆಯ ಪ್ರಾರಂಭದ ಅರ್ಧ ಕಿ.ಮೀ ವರೆಗೆ  ಕಾಂಕ್ರೀಟಿಕರಣ ಮಾಡಲಾಗಿದೆ. ಆದರೆ ಅದು ಇಲ್ಲಿನ ನಿವಾಸಿಗಳಿಗೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

`ವರ್ಷಗಳಿಂದ ಶಾಸಕರಿಗೆ ಮನವಿಯನ್ನು  ಮಾಡುತ್ತಲೇ ಬಂದಿದ್ದೇವೆ  ಆದರೆ ಭರವಸೆಯ ಮಾತುಗಳು ಮಾತ್ರ  ಸಿಗುತ್ತಲೇ ಇದೆ ಹೊರತು ಕಾಂಕ್ರೀಟಿಕರಣ ಆಗಲಿಲ್ಲ. ಈ ಕಾರಣಕ್ಕಾಗಿ ಜಿ.ಪಂ. ಸದಸ್ಯ ಎನ್.ಎಸ್.ಕರೀಂ ಇವರ ಮೊರೆ ಹೋಗಲಿದ್ದೇವೆ~ ಎಂದು ಹಿರಿಯರಾದ ಅಹಮ್ಮದ್ ಬಾವಾ ಹೇಳಿದರು.

ವೋಟು ಕೇಳಲು ಮಾತ್ರ ಬರುವ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಬಗೆಹರಿಸಲು ಕೇಳಿದಾಗ ಇತ್ತ ಸುಳಿಯುವುದೇ ಇಲ್ಲ. ರಸ್ತೆ ದುರವಸ್ಥೆಯಿಂದಾಗಿ ಎರಡು ತಿಂಗಳ ಅವಧಿಯಲ್ಲಿ ವಿದ್ಯಾರ್ಥಿಗಳನ್ನು ಹೇರಿಕೊಂಡು ಹೋಗುತ್ತಿದ್ದ ಎರಡು ರಿಕ್ಷಾ ಪಲ್ಟಿಯಾಗಿ  ಗಾಯಗಳಾಗಿತ್ತು. ಘಟನೆ ನಂತರ  ರಿಕ್ಷಾದವರು ರಸ್ತೆಯಲ್ಲಿ ಬರಲು ಕೇಳುತ್ತಿಲ್ಲ.
 
ಇದರಿಂದಾಗಿ ಮನೆಗಳಿಗೆ ಯಾವುದೇ ವಸ್ತುಗಳನ್ನು ತರಲು ಸಾಧ್ಯವಾಗುತ್ತಿಲ್ಲ. ಕತ್ತಲು ಆವರಿಸಿದ ನಂತರ ಕೆಸರಿನಿಂದ ಜಾರುಮಯವಾಗಿರುವ ರಸ್ತೆಯಲ್ಲಿ ಎದ್ದುಬಿದ್ದು ಮನೆಯನ್ನು ತಲುಪಬೇಕಾಗುತ್ತದೆ. ಅಸೌಖ್ಯದಿಂದಿರುವವರನ್ನು ಆಸ್ಪತ್ರೆಗೆ  ಕರೆದುಕೊಂಡು ಹೋಗಲು ವ್ಯವಸ್ಥೆಯಿಲ್ಲವಾಗಿದೆ.

108 ಆರೋಗ್ಯ ಕವಚದವರಿಗೆ ಕರೆ ಮಾಡಿದರೂ ಅವರು ಈ ರಸ್ತೆಯಲ್ಲಿ ಬರಲು ಒಪ್ಪುತ್ತಿಲ್ಲ ಎಂದು ಊರಿನ ಮಹಿಳೆಯರು ತಮ್ಮ ಗೋಳು ತೋಡಿಕೊಂಡರು.  ಹುಡುಗಿ ನೋಡಲು ಬಂದು  ಹುಡುಗಿ ಒಪ್ಪಿಗೆಯಾಗಿದ್ದರೂ  ಮನೆಗೆ ಹೋಗಲು ಸರಿಯಾದ ದಾರಿಯಿಲ್ಲ ಎಂಬ ಕೊರಗಿಗೆ ಸಂಬಂಧವೇ ಬೇಡ ಎಂದು ಹಲವರು ಹಿಂತೆರಳಿದ್ದಾರೆ. ಇದರಿಂದಾಗಿ ಇಲ್ಲಿನ ಹೆಣ್ಮಕ್ಕಳನ್ನು  ಮದುವೆ ಮಾಡಿಕೊಡುವುದೇ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅಹಮ್ಮದ್ ಬಾವಾ, ಅಬ್ದುಲ್ ಲತೀಫ್,  ಬಿ.ಇಬ್ರಾಹಿಂ, ಹಸೈನಾರ್ ಕಲ್ಲುಗುಡ್ಡೆ, ಅಬೂಬಕ್ಕರ್ ಕಲ್ಲುಗುಡ್ಡೆ,  ನಝೀರ್, ಅಬ್ದುಲ್ ಲತೀಫ್,  ಸಿದ್ಧೀಕ್,  ಸಮೀರ್, ಇಸಾಕ್,  ಉಮ್ಮರ್ ಫಾರುಕ್,  ಸೆಬೀರ್, ಸಲಾಂ ಮತ್ತು ಊರಿನ ಮಹಿಳೆಯರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT