ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯಪಾನ ನಿಷೇಧಿಸಲು ಮಠಾಧೀಶರ ಒತ್ತಾಯ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮದ್ಯಪಾನದ ವಿರುದ್ಧ ಬುಧವಾರ ಆರಂಭವಾದ ಧರ್ಮಾಧಿಕಾರಿಗಳ ದುಂಡು ಮೇಜಿನ ಪರಿಷತ್ತಿನ ಮೊದಲ ದಿನ ಮಠಾಧೀಶರು ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧಿಸುವಂತೆ ಒತ್ತಾಯಿಸಿದರೆ, ಮದ್ಯ ಮಾರಾಟ ನಿಷೇಧಿಸಿದಲ್ಲಿ ಅದರಿಂದಾಗುವ ಪರಿಣಾಮಗಳ ಬಗ್ಗೆಯೂ ಗಂಭೀರ ಚರ್ಚೆ ನಡೆಯಿತು.

ರಾಜ್ಯ ಸರ್ಕಾರಕ್ಕೆ ಎರಡನೇ ಅತಿ ಹೆಚ್ಚು ಆದಾಯ ತಂದುಕೊಡುತ್ತಿರುವ ಮದ್ಯ ಮಾರಾಟವನ್ನು ನಿಷೇಧಿಸಲು ಯಾವುದೇ ಸರ್ಕಾರ ಒಪ್ಪುವುದು ಕಷ್ಟ. ಈ ಹಿನ್ನೆಲೆಯಲ್ಲಿ ಮದ್ಯಪಾನಕ್ಕೆ ಬಳಸುತ್ತಿರುವ ಆಲ್ಕೊಹಾಲ್ ಅನ್ನು ಸರ್ಕಾರಿ ವಾಹನಗಳಿಗೆ ಬಳಸುವ ಇಂಧನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣ ಮಾಡುವುದಕ್ಕೆ ಸರ್ಕಾರ ಪರಿಶೀಲಿಸಬೇಕು ಎಂದು ಪರಿಷತ್ತು ಆಗ್ರಹಿಸಿತು.

ಸಮಾವೇಶವನ್ನು ಉದ್ಘಾಟಿಸಿದ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ, `ಮದ್ಯ ಮಾರಾಟದಿಂದ ಹೆಚ್ಚಿನ ಆದಾಯವಿದೆ ಎಂಬ ಕಾರಣಕ್ಕೆ ಮದ್ಯಪಾನ ನಿಷೇಧಿಸಲು ಹಿಂದೇಟು ಹಾಕುವ ಸರ್ಕಾರ, ಈ ಆದಾಯ ಬಡವರ ಬೆವರು ಎಂಬುದನ್ನು ಮನಗಾಣಲಿ~ ಎಂದು ಸಲಹೆ ಮಾಡಿದರು.

`ಹೆಚ್ಚಿನ ಆದಾಯ ನಿರೀಕ್ಷಿಸುವ ಸರ್ಕಾರದಿಂದ ಮದ್ಯಪಾನ ನಿಷೇಧ ಕೇವಲ ಕನಸು. ಈ ಹಿನ್ನೆಲೆಯಲ್ಲಿ ಮಠಾಧೀಶರು ಒಗ್ಗಟ್ಟಾಗಿ ಬಡಜನರನ್ನು ಮದ್ಯಪಾನದಿಂದ ಮುಕ್ತಗೊಳಿಸಬೇಕು. ಸಮಾಜವನ್ನು ತಿದ್ದುವುದು ಪ್ರತಿಯೊಬ್ಬರ ಕರ್ತವ್ಯ. ಮಠ-ಮಾನ್ಯಗಳು ಈ ವಿಷಯದಲ್ಲಿ ಹೆಚ್ಚಿನ ಆಸಕ್ತಿ ತೋರುವ ಮೂಲಕ ಭಕ್ತರು ಹಾಗೂ ಇತರರಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕಾಗಿದೆ~ ಎಂದು ಸಲಹೆ ಮಾಡಿದರು.

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, `ಎಲ್ಲದಕ್ಕೂ ಗುಜರಾತ್ ಮಾದರಿ ಎನ್ನುವ ಸರ್ಕಾರ ಅದೇ ರೀತಿ ರಾಜ್ಯದಲ್ಲೂ ಮದ್ಯಪಾನ ನಿಷೇಧಿಸಲಿ. ಬಸವಣ್ಣ, ಪುರಂದರದಾಸರೂ ಸೇರಿದಂತೆ ಅನೇಕ ಗಣ್ಯರು ಹುಟ್ಟಿದ ನಾಡಿನಲ್ಲಿ ಮದ್ಯಪಾನ ನಿಷೇಧಿಸುವುದು ಅಗತ್ಯ~ ಎಂದು ಪ್ರತಿಪಾದಿಸಿದರು.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷ ಸಚ್ಚಿದಾನಂದ ಹೆಗಡೆ, `ಪ್ರತಿ ವರ್ಷ ಹೊಸದಾಗಿ 24ರಿಂದ 25 ಲಕ್ಷ ಜನ ಕುಡಿತದ ಚಟ ಬೆಳೆಸಿಕೊಳ್ಳುತ್ತಿದ್ದಾರೆ. ಜನಜಾಗೃತಿಯಿಂದ ಕೇವಲ ಸಾವಿರಾರು ಸಂಖ್ಯೆಯ ಜನರಲ್ಲಿ ಜಾಗೃತಿ ಮೂಡಿಸಬಹುದು. ಆದರೆ, ಪ್ರತಿ ವರ್ಷ ಲಕ್ಷ ಲಕ್ಷ ಜನ ಮದ್ಯಪಾನ ಚಟಕ್ಕೆ ದಾಸರಾಗುವುದರಿಂದ ನಿಷೇಧ ಸವಾಲೆನಿಸಿದೆ. ಕುಡಿಯುವವರ ಹೃದಯದಲ್ಲಿ ಅರಿವು ಮೂಡಿಸುವ ಕೆಲಸ ನಡೆಯಬೇಕು~ ಎಂದರು.

ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಯುವ ಜನರಲ್ಲಿ ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರೌಢಶಾಲೆ ಹಾಗೂ ಕಾಲೇಜು ಮಟ್ಟದಲ್ಲಿ ಹೆಚ್ಚಿನ ಜಾಗೃತಿ ಶಿಬಿರಗಳನ್ನು ನಡೆಸಬೇಕಾಗಿದೆ. ಮದ್ಯಪಾನ ನಿಷೇಧಕ್ಕೆ ಚಳವಳಿ ಅಥವಾ ಆಂದೋಲನ ಪರಿಹಾರವಲ್ಲ ಎಂದು ಅಭಿಪ್ರಾಯಪಟ್ಟರು.

ಜೈವಿಕ ಇಂಧನ ಕಾರ್ಯಪಡೆ ಕಾರ್ಯನಿರ್ವಾಹಕ ಅಧ್ಯಕ್ಷ ವೈ.ಬಿ. ರಾಮಕೃಷ್ಣ, ಪ್ರಸ್ತುತ 135 ದಶಲಕ್ಷ ಲೀಟರ್ ಆಲ್ಕೋಹಾಲ್ ಅನ್ನು ಇಂಧನ ಬಳಕೆಗೆ ಬಳಸಲಾಗುತ್ತಿದೆ. ಪೆಟ್ರೋಲ್‌ನಲ್ಲಿ ಶೇ 5ರಷ್ಟು ಆಲ್ಕೋಹಾಲ್ ಮಿಶ್ರಣ ಮಾಡಲಾಗುತ್ತಿದೆ. ಬ್ರೆಜಿಲ್‌ನಲ್ಲಿ ವಾಹನಗಳಿಗೆ ಸಂಪೂರ್ಣ ಆಲ್ಕೋಹಾಲ್ ಬಳಸಲಾಗುತ್ತಿದೆ. ಇದೀಗ 2200 ಸರ್ಕಾರಿ ಬಸ್‌ಗಳಲ್ಲಿ ಆಲ್ಕೋಹಾಲ್ ಮಿಶ್ರಿತ ಇಂಧನ ಬಳಸಲಾಗುತ್ತಿದೆ. ಇನ್ನೂ ಅಧಿಕ ಪ್ರಮಾಣದಲ್ಲಿ ಇಂಧನದಲ್ಲಿ ಆಲ್ಕೋಹಾಲ್ ಮಿಶ್ರಣ ಮಾಡಬಹುದು. ಈ ಬಗ್ಗೆ ಸರ್ಕಾರ ಗಮನಹರಿಸಬಹುದು ಎಂದರು. ಈ ಹಿನ್ನೆಲೆಯಲ್ಲಿ ಇಂಧನ ಬಳಕೆಗೆ ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಬಳಕೆಯಾಗುವುದಾದಲ್ಲಿ ಮದ್ಯಪಾನ ನಿಷೇಧಿಸುವ ಬಗ್ಗೆಯೂ ಸರ್ಕಾರ ಪರಿಶೀಲಿಸಬಹುದು ಎಂದು ಮಠಾಧೀಶರು ಒತ್ತಾಯಿಸಿದರು.

ಸಭೆಯಲ್ಲಿ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ರಚಿತ `ಮದ್ಯಪಾನ ನಮಗೆ ಏಕೆ ಬೇಡ~ ಎಂಬ ಪುಸ್ತಕವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ಬಿಡುಗಡೆ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಪಿ. ರಾಮಯ್ಯ ಮಾತನಾಡಿದರು. ರಾಜ್ಯದ ವಿವಿಧ ಭಾಗಗಳ ಅನೇಕ ಮಠಾಧೀಶರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT