ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಡಿಗೆ ದಿಢೀರ್ ದುಪ್ಪಟ್ಟು

Last Updated 20 ಜನವರಿ 2011, 9:00 IST
ಅಕ್ಷರ ಗಾತ್ರ

ಮಂಗಳೂರು: ಮೊದಲ ಹಂತದ ಭೂಸ್ವಾಧೀನ ಪ್ರಕ್ರಿಯೆ ನಂತರ ಮಂಗಳೂರು ವಿಶೇಷ ಆರ್ಥಿಕ ವಲಯದ(ಎಂಎಸ್‌ಇಝೆಡ್) ಕಾಮಗಾರಿ ಆರಂಭವಾಗಿದ್ದು, ಹೊರ ರಾಜ್ಯಗಳಿಂದ ಸಾವಿರಾರು ಕಾರ್ಮಿಕರು ಆಗಮಿಸುತ್ತಿರುವುದರಿಂದ ನಗರದ ಹೊರವಲಯದ ಪ್ರದೇಶಗಳಲ್ಲಿ ಬಾಡಿಗೆ ಮನೆಗಳಿಗೆ ದಿಢೀರ್ ಬೇಡಿಕೆ ಹೆಚ್ಚಿದ್ದು, ಮನೆಬಾಡಿಗೆ ದುಪ್ಪಟ್ಟುಗೊಂಡು ಬಾಡಿಗೆದಾರರು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

ಎಂಎಸ್‌ಇಝೆಡ್ ವ್ಯಾಪ್ತಿಯಲ್ಲಿ ನಿಯಂತ್ರಣವಿಲ್ಲದೆ ಏರುತ್ತಿರುವ ಮನೆ ಬಾಡಿಗೆಯಿಂದಾಗಿ ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರಬದುಕು ದುಸ್ತರಗೊಂಡಿದೆ. ಅಧಿಕ ಬಾಡಿಗೆ ತೆರಲಾಗದ ಬಾಡಿಗೆದಾರರನ್ನು ಮಾಲೀಕರು ಬಲವಂತವಾಗಿ ಮನೆ ಖಾಲಿ ಮಾಡಿಸತೊಡಗಿದ್ದಾರೆ.

ಎಂಎಸ್‌ಇಝೆಡ್ ವ್ಯಾಪ್ತಿಯ ಸುರತ್ಕಲ್, ಬಜ್ಪೆ, ಕಾಟಿಪಳ್ಳ, ಕೃಷ್ಣಾಪುರ, ಕುಳಾಯಿ, ಕಾನ, ಬಾಳ, ಕಳವಾರು, ಜೋಕಟ್ಟೆ ಅಸುಪಾಸಿನ ವಸತಿ ಪ್ರದೇಶದಲ್ಲಿ ಮನೆಗಳು ಬಾಡಿಗೆಗೆ ಸಿಗುವುದೇ ಕಷ್ಟಕರವಾಗಿದೆ. ಇರುವ ಮನೆಗಳ ಬಾಡಿಗೆ ದುಪ್ಪಟ್ಟಾಗಿದೆ. ಪರಿಣಾಮ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕುಟುಂಬಗಳು ಅಧಿಕ ಬಾಡಿಗೆ ತೆರಲಾಗದೆ ಪರಿತಪಿಸುವಂತಾಗಿದೆ ಎಂದು ಕೃಷ್ಣಾಪುರದ ನಿವಾಸಿ ಬಷೀರ್, ಮನೆ ಬಾಡಿಗೆ ಸಮಸ್ಯೆಯನ್ನು ಪ್ರಜಾವಾಣಿ ಎದುರು ಬುಧವಾರ ಬಿಚ್ಚಿಟ್ಟರು.

ಎಂಎಸ್‌ಇಝೆಡ್ ಕಾಮಗಾರಿ ಭರದಿಂದ ನಡೆಯುತ್ತಿರುವುದರಿಂದ ಹೊರರಾಜ್ಯಗಳಿಂದ ಸಾವಿರಾರು ಕಾರ್ಮಿಕರು ಇಲ್ಲಿಗೆ ಆಗಮಿಸಿದ್ದು,  ಒಂದೇ ಮನೆಯಲ್ಲಿ 10ರಿಂದ 15 ಜನ ಒಟ್ಟಿಗೆ ವಾಸಿಸತೊಡಗಿರುವುದು ಬಾಡಿಗೆ ಅನಾರೋಗ್ಯಕರ ಹೆಚ್ಚಳಕ್ಕೆ ಕಾರಣವಾಗಿದೆ.ಎಂಎಸ್‌ಇಝೆಡ್ ಆರಂಭಕ್ಕೂ ಮೊದಲು ಇದೇ ಭಾಗದಲ್ಲಿ ಒಂದೇ ಕೊಠಡಿಯ (ಸಿಂಗಲ್ ಬೆಡ್ ರೂಂ) ಮನೆಯೊಂದಕ್ಕೆ ರೂ. 2 ಸಾವಿರ ಇದ್ದ ಬಾಡಿಗೆ ದರ ಈಗ ರೂ. 5ರಿಂದ 6 ಸಾವಿರಕ್ಕೆ ಹೆಚ್ಚಿದೆ. ರೂ. 4 ಸಾವಿರದ ಆಸುಪಾಸು ಇದ್ದ ಎರಡು ಕೊಠಡಿಗಳ (ಡಬಲ್ ಬೆಡ್ ರೂಂ) ಮನೆಗೆ ಈಗ ರೂ. 8ರಿಂದ 10 ಸಾವಿರ ಬಾಡಿಗೆ ಕೊಡಬೇಕಾಗಿದೆ.

ಮೊದಲಿನಿಂದ ಮನೆಯಲ್ಲಿ ಬಾಡಿಗೆಗೆ ಇದ್ದ ಕುಟುಂಬಗಳು ಏಕಾಏಕಿ ಇಷ್ಟೊಂದು ಬಾಡಿಗೆ ಪಾವತಿಸುವುದು ಕಷ್ಟಕರವಾಗಿದೆ ಎಂದು ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಜಯಪ್ಪ ಸೊರಬ ಅಳಲು ತೋಡಿಕೊಂಡರು.ಹೆಚ್ಚುತ್ತಿರುವ ಮನೆಗಳ ಬೇಡಿಕೆ ಹಿನ್ನೆಲೆಯಲ್ಲಿ ಮಾಲೀಕರು ಬೇಕಾಬಿಟ್ಟಿ ಮನೆ ಬಾಡಿಗೆ ಹೆಚ್ಚಿಸುತ್ತಿದ್ದು, ಕೇಳಿದಷ್ಟು ಬಾಡಿಗೆ ಪಾವತಿಸದ ಬಾಡಿಗೆದಾರರನ್ನು –ಮನೆ ಖಾಲಿ ಮಾಡಿಸಲು ಮುಂದಾಗಿದ್ದಾರೆ. ಕೆಲವೆಡೆ ಬಾಡಿಗೆದಾರರನ್ನು ಬಲವಂತವಾಗಿ ಹೊರಹಾಕುತ್ತಿರುವ ಘಟನೆಗಳು ನಡೆದಿದ್ದು, ಒಂದೆರಡು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿವೆ.

ಬಾಡಿಗೆ ಆಸೆಗೆ ವಲಸೆ: ಅಧಿಕ ಬಾಡಿಗೆ ಹಣದ ಆಸೆಗೆ ಒಳಗಾಗಿರುವ ಕೆಲವು ಮನೆ ಮಾಲೀಕರು ತಾವು ವಾಸಿಸುತ್ತಿರುವ ಮನೆಯನ್ನೂ ಎಂಎಸ್‌ಇಝೆಡ್ ಕಾರ್ಮಿಕರಿಗೆ ದುಪ್ಪಟ್ಟು ಬಾಡಿಗೆಗೆ ನೀಡಿ, ಮಂಗಳೂರು ನಗರದಲ್ಲಿ ಕಡಿಮೆ ಬಾಡಿಗೆಗೆ ಸಿಗುವ ಮನೆಗಳತ್ತ ಗುಳೇ ಹೊರಟಿರುವುದು ಮತ್ತೊಂದು ವಿಶೇಷವಾಗಿದೆ.

ತಾತ್ಕಾಲಿಕ ವಸತಿ: ದುಪ್ಪಟ್ಟು ಬಾಡಿಗೆ ಕೊಟ್ಟರೂ ಮನೆ ಸಿಗದ ಪರಿಸ್ಥಿತಿ ತಲೆದೋರಿದ್ದು, ಎಸ್‌ಇಝೆಡ್ ಗುತ್ತಿಗೆದಾರರು ಪಾಲಿಕೆಯಿಂದ ಅನುಮತಿ ಪಡೆಯದೇ ಪಾಲಿಕೆ ಜಾಗ ಹಾಗೂ ಖಾಸಗಿ ಜಮೀನಿನಲ್ಲಿ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಕಾರ್ಮಿಕರು ವಾಸಿಸಲು ವ್ಯವಸ್ಥೆ ಕಲ್ಪಿಸಿದ್ದಾರೆ.  ಈ ಶೆಡ್‌ಗಳಿಗೆ ಅಗತ್ಯ ಮೂಲ ಸೌಕರ್ಯಗಳಿಲ್ಲದೇ ಕಾರ್ಮಿಕರು ಬಯಲಿನಲ್ಲೇ ಸ್ನಾನ, ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರತಿಭಟನೆ:  ಈ ಭಾಗದಲ್ಲಿ ಗುತ್ತಿಗೆ ಕಾರ್ಮಿಕರು ಅಧಿಕ ಸಂಖ್ಯೆಯಲ್ಲಿ ವಾಸಿಸತೊಡಗಿರುವುದರಿಂದ ಹೋಟೆಲ್, ಅಂಗಡಿ ವ್ಯಾಪಾರ ಅಧಿಕವಾಗಿದೆ.  ಇದನ್ನು ಮನಗಂಡು ಸುರತ್ಕಲ್ ಸಮೀಪದ ಕಾಣ ಗ್ರಾಮದ ದಲಿತ ಕಾಲೊನಿಯಲ್ಲಿ ಅಬಕಾರಿ ಇಲಾಖೆ ಅನುಮತಿ ಇಲ್ಲದೇ ಆರಂಭಗೊಂಡ ‘ಲ್ಯಾನ್ಸ್ ವೇ’ ಬಾರ್ ಅಂಡ್ ರೆಸ್ಟೋರೆಂಟ್ ಮುಚ್ಚುವಂತೆ ಸ್ಥಳೀಯರು ಇತ್ತೀಚೆಗೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಅಲ್ಲದೇ ಸ್ಥಳೀಯರು ಗುತ್ತಿಗೆ ಕಾರ್ಮಿಕರ ವಿರುದ್ಧ ಹರಿಹಾಯ್ದ ಅಹಿತಕರ ಘಟನೆಗಳು ನಡೆಯುತ್ತಿವೆ.

ಮನೆ ಬಾಡಿಗೆ ನಿಯಂತ್ರಣ ಕಾಯ್ದೆ ಜಾರಿಗೆ ಒತ್ತಾಯ:
ಮಂಗಳೂರು ನಗರ ಮತ್ತು ಎಂಎಸ್‌ಇಝೆಡ್ ವ್ಯಾಪ್ತಿಯಲ್ಲಿ ಮನೆ ಬಾಡಿಗೆ ಯಾವುದೇ ನಿಯಂತ್ರಣವಿಲ್ಲದೇ ಏರುತ್ತಿರುವ ಬಗ್ಗೆ  ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ  ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ, ಮನೆ ಬಾಡಿಗೆದಾರರ ಸಂಕಷ್ಟವನ್ನು ಯಾರೊಬ್ಬರು ಕೇಳದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಮನೆ ಬಾಡಿಗೆ ನಿಯಂತ್ರಣ ಕಾಯ್ದೆ ಇಲ್ಲದಿರುವುದರಿಂದ ಮನೆ ಮಾಲೀಕರು ಬಾಡಿಗೆ ಏರುಸುತ್ತಿದ್ದಾರೆ. ಸರ್ಕಾರ ಮನೆ ಬಾಡಿಗೆ ನಿಯಂತ್ರಣ ಕಾಯ್ದೆಯನ್ನು ಪುನರ್ ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಎಂಎಸ್‌ಇಝಡ್ ವ್ಯಾಪ್ತಿಯಲ್ಲಿ ಮನೆ ಬಾಡಿಗೆ ಏರುತ್ತಿರುವುದರಿಂದ ಬಲವಂತವಾಗಿ ಕೆಲ ಕುಟುಂಬಗಳನ್ನು ಹೊರಹಾಕುತ್ತಿರುವ ಪ್ರಕರಣದ ವಿರುದ್ಧ ಡಿವೈಎಫ್‌ಐ ಶೀಘ್ರದಲ್ಲೇ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮತ್ತು ಪಾಲಿಕೆ ಗಮನಕ್ಕೆ ತರಲಿದೆ ಎಂದು ತಿಳಿಸಿದರು.

ಎಸ್‌ಇಝೆಡ್ ಆಗಮನದಿಂದ ಸ್ಥಳೀಯರಿಗೆ ಉದ್ಯೋಗ, ಪ್ರದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಿದ್ದ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಬಡವರ ಸಂಕಷ್ಟ ನಿವಾರಿಸುವಂತೆ ಅವರು ಆಗ್ರಹಿಸಿದರು.ಬೆಲೆ ಏರಿಕೆಯಿಂದ ತತ್ತರಿಸಿರುವ ಕೂಲಿಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನತೆ ಇದೀಗ ಮನೆಗೆ ಅಧಿಕ ಬಾಡಿಗೆ ಕೊಡಲಾಗದೇ ಬೀದಿಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT