ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಹಂಬಲಿಕೆ: ನೀವೂ ಬರೆಯಿರಿ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ದಿನವಿಡೀ ದುಡಿದು, ಸಂಜೆಯ ಗದ್ದಲದಲ್ಲಿ ಬಸ್ಸು ಹತ್ತಿ, ಕಿಟಕಿಯ ಪಕ್ಕದ್ದೊಂದು ಸೀಟು ಹಿಡಿದು, ಗಿಜಿ-ಗಿಜಿ ಗೋಜಿನ ನಡುವೆ ಆಚೆ ದೃಷ್ಟಿ ಚೆಲ್ಲಿದರೆ ಮನೆಯ ಹಂಬಲಿಕೆ ಶುರುವಾಗಿ ಬಿಡುತ್ತೆ.
 
ಮನೆಯಂತಿದ್ದರೂ ಮನೆಯಲ್ಲದ ಪಿ.ಜಿ. ಒಳಗೆ ಕಾಲಿಟ್ಟರೆ ಸುಖಾಸುಮ್ಮನೇ ಅಮ್ಮನ್ನ ಹುಡುಕಿ ನೀರು ತುಂಬಿಕೊಳ್ಳುವ ಕಣ್ಣಾಲಿಗಳು, ಪ್ರೀತಿಯ ಎರಡು ಮಾತು, ಸಾಂತ್ವನದ ಒಂದು ಅಪ್ಪುಗೆಗೆ ತುಡಿಯುವ ಮನ, ಹಿಡಿಸದ ಊಟ, ಬಾರದ ನಿದ್ರೆ. ಅದೆಷ್ಟೊ ಬಾರಿ ಲ್ಯಾಪ್‌ಟಾಪ್ ಹಾಗೂ ಮೊಬೈಲ್‌ನ ಸ್ಕ್ರೀನ್‌ಸೇವರ್‌ನಲ್ಲಿ ಸೇವ್ ಮಾಡಿಟ್ಟ ಅಮ್ಮ-ಅಪ್ಪನ ಕ್ಲೋಸ್ ಅಪ್ ಫೋಟೊಗಳೇ ಕಣ್ಣೊರೆಸಿ ಸಮಾಧಾನ ಮಾಡಿದಂತೆನಿಸುತ್ತದೆ...

ಅರ್ಧರಾತ್ರಿ ಕೆಟ್ಟ ಕನಸು ಬಿದ್ದು, ಬೆಚ್ಚಿ ಕಿರುಚಿಕೊಂಡರೆ ಅಪ್ಪಿ, ತಲೆ ತಟ್ಟಿ ರಮಿಸೊ ಅಮ್ಮ ಅಷ್ಟು ದೂರ... `ಸುಮ್ನೆ ಮಲ್ಕೊಳ್ಳೆ... ಏನು ಗೋಳು ನಿಂದು~ ಅಂತ ಗುನುಗುವ ರೂಮ್‌ಮೇಟ್‌ಗಳು ಕೆಲವೊಮ್ಮೆ `ನನ್ನನ್ನು ನಿನ್ನಕ್ಕ ಅಂತ ತಿಳ್ಕೊ... ನನ್ನೊಂದಿಗೆ ಮನಸ್ಸು ಬಿಚ್ಚಿ ಮಾತಾಡು~ ಅನ್ನುವಷ್ಟು ಸಾಫ್ಟ್ ಆಗಿ ಬಿಡುವ ಪವಾಡವೂ ನಡೆದು ಬಿಡುತ್ತೆ.

ಅಷ್ಟೊಂದು ಜನರ ನಡುವಿದ್ದರೂ ಕಾಡುವ ಪರಕೀಯ ಭಾವ. ಒಂಟಿಯಾಗಿರುವ ಒಂದೇ ಕಾರಣಕ್ಕೆ ಸಂಶಯದಿಂದ ನೋಡುವ ಜನ. ಇದರ ನಡುವೆ ಅಮ್ಮ-ಅಪ್ಪನ ಮಮತೆ, ಅಣ್ಣ-ಅಕ್ಕಂದಿರ ಅಕ್ಕರೆಯ ನೆನಪು... ಮನೆ ನೀಡುವ ಆ ನೆಮ್ಮದಿಯೇ ಬೇರೆ. ಆದರೆ ಹಾಗೆಂದು ಎಲ್ಲವನ್ನೂ ಬಿಟ್ಟು ಅಲ್ಲಿಗೇ ಓಡಲೂ ಆಗುವುದಿಲ್ಲ. ಅದು ಸಮಸ್ಯೆಗೆ ಪರಿಹಾರವೂ ಅಲ್ಲ. ಇದೆಲ್ಲದರೊಂದಿಗೆ ನಾವೂ ನಮ್ಮ `ಸ್ಪೇಸ್~ ಉಳಿಸಿಕೊಳ್ಳಬೇಕು, ನಮ್ಮ ಹೆಜ್ಜೆ ಗುರುತುಗಳನ್ನು ಉಳಿಸಬೇಕು...

ನೀವೂ ಸಹ ಚಿಕ್ಕ ಊರುಗಳಿಂದ ಬಂದು ನಗರ ಬದುಕಿನ ಇಂತಹ ಜಟಿಲ ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಆ ಮಾನಸಿಕ ತೊಳಲಾಟ, ಮನೆಯ ಹಂಬಲಿಕೆ, ಕಾಡುವ ಒಂಟಿತನ... ಇದೆಲ್ಲವನ್ನು ನೀವು ಹೇಗೆ ನಿಭಾಯಿಸುತ್ತೀರಿ? ಆಫೀಸು, ಮನೆ, ಪಿ.ಜಿ. ಹೀಗೆ ಎಲ್ಲ ಕಡೆಯೂ ನಿಮ್ಮ ಮೇಲೆ ಹಿಡಿತ ಸಾಧಿಸಲು ಹವಣಿಸುವ ಶಕ್ತಿಗಳೊಡನೆ ಹೋರಾಡಲು ನೀವು ಮಾಡಿಕೊಂಡ ತಯಾರಿ ಏನು?

ಇದರ ಜೊತೆಗೆ ಒಂಟಿಯಾಗಿ ನೀವು ಎದುರಿಸಿದ ನೋವು, ನಲಿವು, ನಿಮ್ಮಂದಿಗೆ ನಿಂತ ಸಹೃದಯಿ ಗೆಳತಿಯರು, ಗೇಲಿ ಮಾಡಿದ ತುಂಟ ಹುಡುಗಿಯರು...

ಈ ಬಗ್ಗೆ `ಭೂಮಿಕಾ~ ಜೊತೆ ಹಂಚಿಕೊಳ್ಳಿ... ಹಗುರಾಗಿ... ನಿಮ್ಮ ಬರಹ ಚಿಕ್ಕದಾಗಿದ್ದಷ್ಟು ಒಳ್ಳೆಯದೇ. ಆದರೆ ಆಪ್ತವಾಗಿರಲಿ. ಪ್ರಕಟಿತ ಬರಹಗಳಿಗೆ ಸಂಭಾವನೆ ಉಂಟು.
ಬರಹ ಕಳಿಸಬೇಕಾದ ವಿಳಾಸ: ಸಂಪಾದಕರು, ಭೂಮಿಕಾ, ಪ್ರಜಾವಾಣಿ 75, ಎಂ.ಜಿ.ರಸ್ತೆ, ಬೆಂಗಳೂರು 560001

ಇಮೇಲ್ ವಿಳಾಸ-  bhoomika@prajavani.co.in
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT