ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣಶಯ್ಯೆಯಲ್ಲಿ ನತದೃಷ್ಟೆ

Last Updated 17 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಆಸ್ತಿ, ಆಭರಣ ಕಸಿದುಕೊಂಡ ಬಂಧುಗಳು ಮಹಿಳೆ ಯೊಬ್ಬರನ್ನು ಮನೆಯಿಂದ ಹೊರ ದಬ್ಬಿದ್ದು, ಆಕೆ ಬೀದಿ ಬದಿಯಲ್ಲಿ ನಿತ್ರಾಣಗೊಂಡು ಮಲಗಿರುವ ಮನ ಕಲುಕುವ ಪ್ರಕರಣ ಇಲ್ಲಿಗೆ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯ ಬಳಿ ಬುಧವಾರ ಬೆಳಕಿಗೆ ಬಂದಿದೆ. ಸುಮಾರು 55 ವರ್ಷದ ಜಯಮ್ಮ ಎಂಬವರು ಇಲ್ಲಿನ ನಿಮಿಷಾಂಬ ದೇವಾಲಯ ಬಳಿ ಹೋಟೆಲೊಂದರ ಎದುರು ನಿಶ್ಯಕ್ತರಾಗಿ ಬಿದ್ದಿದ್ದಾರೆ. ಪಾರ್ಶ್ವವಾಯುದಿಂದ ಬಲಗೈ, ಬಲಗಾಲು ಸ್ವಾಧೀನ ತಪ್ಪಿವೆ.

ಸದ್ಯ ಎದ್ದು ಕೂರಲಾಗದ ಸ್ಥಿತಿ ತಲುಪಿರುವ ಜಯಮ್ಮ ಮಲಗಿದ್ದಲ್ಲೇ ಎಲ್ಲವನ್ನೂ ಮಾಡಿಕೊಳ್ಳುತ್ತಿದ್ದಾರೆ. ಮಾತು ಸಂಪೂರ್ಣ ನಿಂತಿದೆ. ಊಟವನ್ನು ಬಿಟ್ಟಿರುವ ನತದೃಷ್ಟೆ ಕೇವಲ ಹಾಲು, ನೀರು ಗುಟುಕಿಸುತ್ತಿದ್ದಾರೆ. ಜಯಮ್ಮ ಬ್ಯಾಗ್‌ನಲ್ಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿದೆ. ಅದರಲ್ಲಿ ಮಂಡ್ಯ ಗುತ್ತಲು ನಿವಾಸಿ ಎಂಬ ವಿಳಾಸ ಇದೆ. ಪತಿ ರಮೇಶ ಅವರು ತೀರಿಕೊಂಡ ಮೇಲೆ ಬಂಧುಗಳು ಜಯಮ್ಮ ಅವರಿಗೆ ಕಿರುಕುಳ ನೀಡಿ ಆಭರಣ , ಆಸ್ತಿ ಕಿತ್ತುಕೊಂಡಿದ್ದಾರೆ ಎಂದು ಅವರನ್ನು ಬಲ್ಲವರು ಹೇಳಿದ್ದಾರೆ.

ಲಭ್ಯ ವಿಳಾಸ ಆಧರಿಸಿ ಹೋಟೆಲ್ ಮಾಲೀಕ ನಾಗರಾಜು ಮಂಡ್ಯಕ್ಕೆ ತೆರಳಿ ಮನೆ ಪತ್ತೆ ಮಾಡಿದ್ದಾರೆ. ಜಯಮ್ಮ ಅವರ ಸ್ಥಿತಿ ತಿಳಿಸಿದರೂ ‘ಯಾರೋ ಗೊತ್ತಿಲ್ಲ’ ಎಂದು ಮನೆಯವರು ಹೇಳಿ ಕಳುಹಿಸಿದರು. ‘ಬೇರೆ ದಾರಿ ಇಲ್ಲದೆ ವಾಪಸ್ ಕರೆತಂದು ಉಪಚರಿಸುತ್ತಿದ್ದೇವೆ. ಪಾರ್ಶ್ವವಾಯು ಬೇನೆಗೆ ಕೊಡಿಯಾಲದಲ್ಲಿ ಚಿಕಿತ್ಸೆ ಕೊಡಿಸಿದ್ದೇವೆ. ಆದರೆ ಗುಣ ಕಾಣುತ್ತಿಲ್ಲ’ ಎಂದು ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿ ತ್ತಾದರೂ ಅಲ್ಲಿ ಜಯಮ್ಮ ಅವರನ್ನು ನೋಡಿಕೊಳ್ಳಲು ಇಲ್ಲದೆ ವಾಪಸ್ ಕರೆತಂದಿದ್ದಾರೆ. ‘ಜಯಮ್ಮ ಕಳೆದ ಒಂದೂವರೆ ವರ್ಷದಿಂದ ನಿಮಿಷಾಂಬ ದೇವಾಲಯದ ಬಳಿ ಭಿಕ್ಷೆ ಬೇಡಿಕೊಂಡು ಬದುಕಿದ್ದರು. ವಾರದಿಂದ ಸ್ಥಿತಿ ಗಂಭೀರವಾಗಿದೆ. ಆಹಾರ ಸೇವಿಸುತ್ತಿಲ್ಲ. ಈ ಮಹಿಳೆಗೆ ಚಿಕಿತ್ಸೆ ಕೊಡಿಸಿ ಆಶ್ರಯ ನೀಡುವವರು ನೆರವಿಗೆ ಬರಬೇಕು’ ಎಂದು ನಾಗರಾಜು ಪತ್ನಿ ಸುಶೀಲಮ್ಮ ಕೋರಿದ್ದಾರೆ. ನತದೃಷ್ಟೆಯ ದೂರದ ಬಂಧುಗಳು ಇದ್ದಲ್ಲಿ ಮೊ: 93427 28528 ಸಂಪರ್ಕಿಸಬಹುದು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT