ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಅಭಾವ:ಗಗನಕ್ಕೇರಿದ ಬೆಲೆ

Last Updated 7 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾನೂನುಬದ್ಧವಾಗಿ ಮರಳು ಸಾಗಿಸಲು ಅನುಕೂಲವಾಗುವಂತೆ ಸಮಗ್ರ ಮರಳು ನೀತಿ ರೂಪಿಸಬೇಕೆಂದು ಒತ್ತಾಯಿಸಿ ಲಾರಿ ಮಾಲೀಕರು  ಮರಳು ಸಾಗಣೆ ಸೇವೆ ಸ್ಥಗಿತಗೊಳಿಸಿ 14 ದಿನಗಳಿಂದ ಮುಷ್ಕರ ನಡೆಸುತ್ತಿರುವುದರಿಂದ ನಗರದಲ್ಲಿ ಕಟ್ಟಡ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಅಡ್ಡಿಯಾಗಿದೆ.

ಮುಷ್ಕರದ ಪರಿಣಾಮ ಮರಳಿನ ಅಭಾವ ಸೃಷ್ಟಿಯಾಗಿದ್ದು, ಮರಳಿನ ಬೆಲೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಮುಷ್ಕರಕ್ಕೂ ಮುನ್ನ 35ರಿಂದ 40 ಸಾವಿರ ರೂಪಾಯಿ ಇದ್ದ ಒಂದು ಲಾರಿ ಲೋಡ್ ಉತ್ತಮ ಗುಣಮಟ್ಟದ ಮರಳಿನ ಬೆಲೆ ಇದೀಗ ಸುಮಾರು ರೂ 48 ಸಾವಿರಕ್ಕೆ ಏರಿಕೆಯಾಗಿದೆ. ಅಲ್ಲದೇ ಅಷ್ಟು ಹಣ ಕೊಟ್ಟರು ಸಹ ಗುಣಮಟ್ಟದ ಮರಳು ಸಿಗುತ್ತಿಲ್ಲ.

ಮುಷ್ಕರಕ್ಕೂ ಮುನ್ನ ನಗರಕ್ಕೆ ಪ್ರತಿನಿತ್ಯ ಸುಮಾರು 2,500 ಸಾವಿರ ಲಾರಿ ಲೋಡ್ ಮರಳು ಬರುತ್ತಿತ್ತು. ಇದೀಗ 200ರಿಂದ 300 ಲಾರಿ ಲೋಡ್ ಮರಳು ಬರುತ್ತಿದೆ. ಹಲವೆಡೆ ಈ ಹಿಂದೆಯೇ ದಾಸ್ತಾನು ಮಾಡಿದ್ದ ಮರಳನ್ನೇ ವ್ಯಾಪಾರಿಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಮತ್ತೊಂದೆಡೆ ಫಿಲ್ಟರ್ ಮರಳನ್ನೇ ಮಾರಾಟ ಮಾಡಲಾಗುತ್ತಿದೆ.
 
ಮತ್ತೆ ಕೆಲ ವ್ಯಾಪಾರಿಗಳು ನೆರೆಯ ತಮಿಳುನಾಡಿನಿಂದ ರಾತ್ರಿ ವೇಳೆ ಅಕ್ರಮವಾಗಿ ಮರಳು ಸಾಗಿಸಿ ತಂದು ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಮರಳಿನ ಕೊರತೆಯಿಂದ ಹಲವೆಡೆ ಕಟ್ಟಡ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ.

ದಿನ ಕಳೆದಂತೆ ಲಾರಿ ಚಾಲಕರು, ಕೂಲಿ ಕಾರ್ಮಿಕರು ಮತ್ತು ಕಟ್ಟಡ ಕಾರ್ಮಿಕರಿಗೂ ಮುಷ್ಕರದ ಬಿಸಿ ತಟ್ಟಲಾರಂಭಿಸಿದೆ. ಮರಳು ಸಾಗಣೆ ಸೇವೆ ಸ್ಥಗಿತಗೊಂಡಿರುವುದರಿಂದ ಚಾಲಕರಿಗೆ ಹಾಗೂ ಕಾರ್ಮಿಕರಿಗೆ ದುಡಿಮೆ ಇಲ್ಲದಂತಾಗಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಪರಿಣಾಮ ಅವರು ಕುಟುಂಬ ಸದಸ್ಯರೊಂದಿಗೆ ಸ್ವಂತ ಊರುಗಳಿಗೆ ಮರಳುತ್ತಿರುವುದು ವರದಿಯಾಗಿದೆ.

ಈ ನಡುವೆ ಲಾರಿ ಮಾಲೀಕರು ಸೋಮವಾರದಿಂದ ಇಟ್ಟಿಗೆ, ಜಲ್ಲಿ ಕಲ್ಲು ಮತ್ತಿತರ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸಾಗಣೆ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.

ರಾಜ್ಯ ಜಲ್ಲಿ ಕಲ್ಲು ಉತ್ಪಾದಕರು ಮತ್ತು ಕಲ್ಲು ಗಣಿಗಾರರ ಸಂಘದ ಸದಸ್ಯರು ಸಹ ಮುಷ್ಕರಕ್ಕೆ ಬೆಂಬಲ ಸೂಚಿಸಿ ಕ್ರಷರ್ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ. ಮರಳು ಸಾಗಣೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಲಾರಿಗಳು ಬನಶಂಕರಿ, ನಾಯಂಡನಹಳ್ಳಿ, ಕೊಟ್ಟಿಗೆಪಾಳ್ಯ, ಕೆಂಗೇರಿ, ಮಾಗಡಿ ರಸ್ತೆ, ಕೆಂಗುಂಟೆ, ಯಲಹಂಕ, ಹೆಬ್ಬಾಳ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಮತ್ತಿತರ ನಿಲ್ದಾಣಗಳಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.

`ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡುವವರೆಗೂ ಮುಷ್ಕರವನ್ನು ನಿಲ್ಲಿಸುವುದಿಲ್ಲ. ಮರಳು ಸಾಗಣೆ ಲಾರಿಗಳ ಮಾಲೀಕರ ಸಮಸ್ಯೆಗಳಿಗೆ ಸರ್ಕಾರ ಶಾಶ್ವತ ಪರಿಹಾರ ರೂಪಿಸಬೇಕು. ವಿವಿಧ ಸರ್ಕಾರಿ ಇಲಾಖೆ ಅಧಿಕಾರಿಗಳ ಕಿರುಕುಳ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು~ ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಕಾರ್ಯದರ್ಶಿ ಬಿ.ವಿ.ನಾರಾಯಣಪ್ಪ ಮನವಿ ಮಾಡಿದ್ದಾರೆ.

`ಸರ್ಕಾರ ದಂಡ ವಿಧಿಸುವ ಬದಲು ಕಾನೂನುಬದ್ಧವಾಗಿಯೇ ಮರಳು ಸಾಗಿಸಲು ಪರವಾನಗಿ ನೀಡಲಿ. ಅದು ಸಾಧ್ಯವಾಗದಿದ್ದರೆ ದಂಡದ ಮೊತ್ತವನ್ನು ಕಡಿಮೆ ಮಾಡಲಿ. ಲಾರಿಗಳ ಮಾಲೀಕರು ಮತ್ತು ಚಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು.

ಮರಳು ಸಾಗಣೆ ಲಾರಿಗಳಿಗೆ ಹಳದಿ ಬಣ್ಣ ಬಳಿಸಬೇಕು ಮತ್ತು ಜಿಪಿಎಸ್  ಉಪಕರಣ ಅಳವಡಿಸಬೇಕೆಂದು ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು~ ಎಂದು ರಾಜ್ಯ ಲಾರಿ ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಿ.ಚನ್ನಾರೆಡ್ಡಿ ಹೇಳಿದ್ದಾರೆ.

ಸಮಸ್ಯೆ ಬಗೆಹರಿಸಲಿ: `ಮುಷ್ಕರ, ಕಟ್ಟಡ ನಿರ್ಮಾಣ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಹಲವೆಡೆ ನಿರ್ಮಾಣ ಕಾರ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಷ್ಕರ ಮುಂದುವರಿದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಲಿದೆ.
 
ಸರ್ಕಾರ ಈ ಬಗ್ಗೆ ನಿರ್ಲಕ್ಷ್ಯ ತೋರದೆ ಸಾಧ್ಯವಾದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು~ ಎಂದು ಸಿಐಟಿಯು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಕೆ.ವೀರಮಣಿ ಮನವಿ ಮಾಡಿದ್ದಾರೆ.

ಲಾರಿ ಮಾಲೀಕರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವರ ಹೋರಾಟವನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಲಾರಿ ಮಾಲೀಕರ ಬೇಡಿಕೆಗಳನ್ನು ಶೀಘ್ರವೇ ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದರು.

`ಲಾರಿ ಸೇವೆ ಆರಂಭಿಸಿದರೂ ಕಷ್ಟ, ಆರಂಭಿಸದಿದ್ದರೂ ಕಷ್ಟ~

`ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ಮಾಡಿ ಲಾರಿ ಖರೀದಿಸಿದ್ದೇನೆ. ಮುಷ್ಕರದ ಹಿನ್ನೆಲೆಯಲ್ಲಿ ಲಾರಿ ಸೇವೆ ಸ್ಥಗಿತಗೊಂಡಿರುವುದರಿಂದ ಸಂಪಾದನೆಯೂ ಆಗುತ್ತಿಲ್ಲ. ಇದರಿಂದ ಸಾಲ ಮತ್ತು ಬಡ್ಡಿ ಹಣ ಕಟ್ಟಲು ಕಷ್ಟವಾಗುತ್ತಿದೆ~ ಎಂದು ಲಾರಿ ಮಾಲೀಕ ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ಈ ಕಾರಣಕ್ಕಾಗಿ ಮುಷ್ಕರದಿಂದ ಹಿಂದೆ ಸರಿದು ಲಾರಿ ಸೇವೆ ಆರಂಭಿಸಿದರೆ ಸಾರಿಗೆ, ಕಂದಾಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಲಂಚಕ್ಕಾಗಿ ಕಿರುಕುಳ ನೀಡುತ್ತಾರೆ. ಲಂಚ ಕೊಡದಿದ್ದರೆ ಲಾರಿಯನ್ನು ಜಪ್ತಿ ಮಾಡುತ್ತಾರೆ. ಚಾಲಕನನ್ನು ಸಹ ಬಂಧಿಸುತ್ತಾರೆ. ಅಲ್ಲದೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುತ್ತಾರೆ ಎಂದು ದೂರಿದರು.

ರಾಜಧನ ನಿಗದಿಪಡಿಸಿ

`ಜಿಲ್ಲಾಧಿಕಾರಿಗಳು, ಪೊಲೀಸರು, ಕಂದಾಯ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೇ ಲಂಚ ಪಡೆದು ಮರಳಿನ ಅಕ್ರಮ ಸಾಗಣೆಗೆ ಅವಕಾಶ ನೀಡುತ್ತಿದ್ದಾರೆ.
 
ಲಂಚ ಕೊಡದಿದ್ದರೆ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸುತ್ತಾರೆ. ಅದರ ಬದಲು ಪ್ರತಿ ಲೋಡ್‌ಗೆ ರಾಜಧನ ನಿಗದಿಪಡಿಸಿ ಕಾನೂನು ಪ್ರಕಾರವೇ ಮರಳು ಸಾಗಿಸಲು ಅವಕಾಶ ನೀಡಬೇಕು~ ಎಂದು ಲಾರಿ ಚಾಲಕ ಸುಬ್ಬಣ್ಣ ಮನವಿ ಮಾಡಿದರು.

ಜೀವನ ನಿರ್ವಹಣೆ ಕಷ್ಟ


ತಿಂಗಳಲ್ಲಿ ಸುಮಾರು 20 ಲೋಡ್ ಮರಳು ಸಾಗಿಸಿ 10ರಿಂದ 15 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಮುಷ್ಕರದಿಂದಾಗಿ ಕೆಲಸ ಇಲ್ಲದಂತಾಗಿದೆ ಮತ್ತು ಸಂಪಾದನೆಯೂ ಶೂನ್ಯವಾಗಿದೆ.

ಪರಿಣಾಮ ಜೀವನ ನಿರ್ವಹಣೆಗೆ ತೊಂದರೆಯಾಗಿದ್ದು, ಕುಟುಂಬ ಸದಸ್ಯರನ್ನೆಲ್ಲ ಊರಿಗೆ ಕಳುಹಿಸಿದ್ದೇನೆ~ ಎಂದು ಲಾರಿ ಚಾಲಕ ರಾಜು ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT