ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ್ಯಾದೆ ಹೋದರೂ ಅಧಿಕಾರ ಇರಲಿ

ಕೊಪ್ಪಳ: ಬಿಜೆಪಿ ಸರ್ಕಾರಕ್ಕೆ ಸಚಿವ ಮೊಯಿಲಿ ವ್ಯಂಗ್ಯ
Last Updated 24 ಡಿಸೆಂಬರ್ 2012, 8:26 IST
ಅಕ್ಷರ ಗಾತ್ರ

ಕೊಪ್ಪಳ: ಮರ್ಯಾದೆ ಹೋದರೂ ಪರವಾಗಿಲ್ಲ ಅಧಿಕಾರದಲ್ಲಿ ಇರಬೇಕು ಎಂಬುದು ಈಗಿನ ಬಿಜೆಪಿ ಸರ್ಕಾರದ ಧೋರಣೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದ್ದಾರೆ.

ಅವರು ನಗರದ ಕಾಳಿದಾಸ ಪ್ರೌಢ ಶಾಲೆ ಮೈದಾನದಲ್ಲಿ ಭಾನುವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಂಘಟನಾ ಸಭೆಯಲ್ಲಿ ಮಾತನಾಡಿದರು.

ಈಗಿನ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳಕುತ್ತಿದೆ. ಬಹುತೇಕ ಶಾಸಕರ ವಿರುದ್ಧ ಭ್ರಷ್ಟಾಚಾರದ ಆರೋಪ ಇದೆ. ಗಣಿ ಅಕ್ರಮ ಕುರಿತಂತೆ ನ್ಯಾ. ಸಂತೋಷ್ ಹೆಗ್ಡೆ ಅವರು ಲೋಕಾಯುಕ್ತರಾಗಿದ್ದಾಗ ನೀಡಿರುವ ವರದಿಯ ಅನ್ವಯ ಕ್ರಮ ಕೈಗೊಂಡಿದ್ದೇ ಆದರೆ, ಬಿಜೆಪಿಯ 100ಕ್ಕೂ ಹೆಚ್ಚು ಶಾಸಕರು ಜೈಲಿಗೆ ಹೋಗಬೇಕಾಗುತ್ತದೆ. ಹೀಗಾಗಿ ಮರ್ಯಾದೆ ಇಲ್ಲದಿದ್ದರೂ ಸರಿ ಅಧಿಕಾರದಲ್ಲಿ ಇರಬೇಕು ಎಂಬುದು ಬಿಜೆಪಿ ನಾಯಕರ ಧೋರಣೆಯಾಗಿದೆ ಎಂದು ಕುಟುಕಿದರು.

ಕಾಂಗ್ರೆಸ್ ಪಕ್ಷದಲ್ಲಿ ಇರುವಷ್ಟು ಬುದ್ಧಿವಂತ ಹಾಗೂ ಬಲಿಷ್ಠ ನಾಯಕರು ಇತರ ಪಕ್ಷಗಳಲ್ಲಿ ಇಲ್ಲ. ಹೀಗಾಗಿ ಕಾಂಗ್ರೆಸ್‌ನಿಂದ ಮಾತ್ರ ರಾಜ್ಯದ ಅಭಿವೃದ್ಧಿ. ನಮ್ಮ ಪಕ್ಷವೇ ಜನ ಸಾಮಾನ್ಯರ ಪಕ್ಷವಾಗಲಿದೆ ಎಂದ ಅವರು, ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮುಂದಿನ ಚುನಾವಣೆಗೆ ಸಿದ್ಧರಾಗುವಂತೆ ಕಾರ್ಯಕರ್ತರಿಗೆ ಸಲಹೆ ನೀಡಿದರು.

ನಗರಸಭೆ ಸದಸ್ಯರಾದ ಡಾ.ಉಪೇಂದ್ರ, ಮಹಿಬೂಬ್ ಹುಸೇನ್ ನಾಲಬಂದ್, ಯಲ್ಲಪ್ಪ, ಮುಖಂಡ ಚಿಕನ್ ಪೀರಾ ಅವರು ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾದರು. ಜಿಲ್ಲೆಯ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಸಚಿವ ಮೊಯಿಲಿ ಅವರು ಪಕ್ಷಕ್ಕೆ ಬರ ಮಾಡಿಕೊಂಡರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಬಸವರಾಜ ರಾಯರೆಡ್ಡಿ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ್, ಶಾಸಕ ಅಮರೇಗೌಡ ಬಯ್ಯಾಪುರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ್, ಮುಖಂಡರಾದ ಶಾಂತಣ್ಣ ಮುದಗಲ್, ಆಸೀಪ್ ಅಲಿ, ಬಿ.ಎಂ.ಶಿರೂರು, ಮುಕುಂದರಾವ್ ಭವಾನಿಮಠ, ನಗರಸಭೆ ಸದಸ್ಯೆ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಇಂದಿರಾ ಭಾವಿಕಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT