ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ ಹೊರುವ ಪದ್ಧತಿ ನಿರ್ಮೂಲನೆ: ಮಾಹಿತಿಗೆ ಹೈಕೋರ್ಟ್ ಆದೇಶ

Last Updated 21 ಫೆಬ್ರುವರಿ 2011, 16:30 IST
ಅಕ್ಷರ ಗಾತ್ರ

ಬೆಂಗಳೂರು: ತಲೆಯ ಮೇಲೆ ಮಲ ಹೊರುವ ಪದ್ಧತಿ ಮತ್ತು ಯಂತ್ರಗಳ ಸಹಾಯವಿಲ್ಲದೇ ಒಳಚರಂಡಿ ಶುಚಿಗೊಳಿಸುವುದನ್ನು ಹೋಗಲಾಡಿಸಲು ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು ಎಂಬ ಬಗ್ಗೆ ವಿವರ ಮಾಹಿತಿ ನೀಡುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೋಮವಾರ ಆದೇಶಿಸಿದೆ.

ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಮಾಜಿ ಅಡ್ವೊಕೇಟ್ ಜನರಲ್, ಹಿರಿಯ ವಕೀಲ ಆರ್.ಎನ್. ನರಸಿಂಹಮೂರ್ತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಮತ್ತು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

‘ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಇನ್ನೂ ತಲೆಯ ಮೇಲೆ ಮಲ ಹೊರುವ ಪದ್ಧತಿ ಜೀವಂತವಾಗಿರುವುದು ದೃಢಪಟ್ಟಿದೆ. ಸ್ವಾತಂತ್ರ್ಯ ದೊರೆತು 60 ವರ್ಷಗಳಾದರೂ ಈ ಪದ್ಧತಿ ಸಂಪೂರ್ಣವಾಗಿ ತೊಲಗಿಲ್ಲ. ಇದು ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ. 1993ರಲ್ಲೇ ಈ ಪದ್ಧತಿಯನ್ನು ನಿಷೇಧಿಸಿದ್ದರೂ ಈಗಲೂ ಚಾಲ್ತಿಯಲ್ಲಿದೆ’ ಎಂದು ನರಸಿಂಹಮೂರ್ತಿ  ಅರ್ಜಿಯಲ್ಲಿ ಹೇಳಿದ್ದಾರೆ.

ತಲೆಯ ಮೇಲೆ ಮಲ ಹೊರುವ ಪದ್ಧತಿ ಮತ್ತು ಕಾರ್ಮಿಕರೇ ಒಳಚರಂಡಿ ಶುಚಿಗೊಳಿಸುವ ಪದ್ಧತಿ ಕುರಿತು ರಾಜ್ಯವ್ಯಾಪಿ ಸಮೀಕ್ಷೆ ನಡೆಸುವಂತೆ ಸರ್ಕಾರಕ್ಕೆ ಆದೇಶಿಸಬೇಕು. ಕಟ್ಟುನಿಟ್ಟಾಗಿ ನಿಷೇಧ ಜಾರಿಗೊಳಿಸುವಂತೆಯೂ ಆದೇಶ ನೀಡಬೇಕು. ಈ ಪದ್ಧತಿಯಿಂದ ಶೋಷಣೆಗೆ ಒಳಗಾಗಿರುವ ಜನರಿಗೆ ಪುನರ್ವಸತಿ ಕಲ್ಪಿಸಲು ಪ್ರತ್ಯೇಕ ಯೋಜನೆ ಜಾರಿಗೊಳಿಸಲೂ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ. ಸರ್ಕಾರದ ವಲಯದಲ್ಲಿ ಈ ಪದ್ಧತಿ ರೂಢಿಯಲ್ಲಿ ಇಲ್ಲ. ಆದರೆ ಖಾಸಗಿಯಾಗಿ ಇದು ನಡೆಯುತ್ತಿರಬಹುದು ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ವಿಚಾರಣೆಯನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT