ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಾಲಾ ಸ್ಫೂರ್ತಿ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹದಿನಾಲ್ಕು ವರ್ಷದ ಬಾಲಕಿ ಮಲಾಲಾ ಯೂಸುಫ್‌ಜೈ ಹತ್ಯೆ ಯತ್ನ ವಿಶ್ವದಾದ್ಯಂತ ಸಹಜವಾಗಿಯೇ ಆಕ್ರೋಶದ ಅಲೆಗಳನ್ನು ಎಬ್ಬಿಸಿದೆ. ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ಮೂಲಭೂತವಾದಿಗಳ ವಿರುದ್ಧ ದನಿ ಎತ್ತಿದ ಸಾಹಸಿ ಬಾಲಕಿ ಮಲಾಲಾ.

ಇದಕ್ಕಾಗಿ ಈ  ಚಿಕ್ಕ ಹುಡುಗಿಯನ್ನು ತಾಲಿಬಾನ್ ತನ್ನ ಆಕ್ರೋಶದ ಗುರಿಯಾಗಿಸಿಕೊಂಡಿದ್ದು ಆಘಾತಕಾರಿಯಾದ ಕೀಳುಮಟ್ಟದ ಕಾರ್ಯತಂತ್ರ. ಶಾಲಾ ಬಸ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದ  ಸಂದರ್ಭದಲ್ಲಿ  ಬಸ್‌ಅನ್ನು ತಡೆದು ನ್ಲ್ಲಿಲಿಸಿ `ಮಲಾಲಾ ಯಾರು?~ ಎಂದು ಕೇಳಿ ಬಂದೂಕುಧಾರಿಗಳು ಆಕೆಯ ಮೇಲೆ ಗುಂಡು ಹಾರಿಸಿರುವುದು ನೀಚತನದ ಕ್ರೌರ್ಯದ ಪರಮಾವಧಿ. `ಪಾಶ್ಚಿಮಾತ್ಯ ವಿಚಾರಧಾರೆಗಳಿಂದ ಪ್ರಭಾವಿತಳಾದವಳು~ ಎಂದು ಮಲಾಲಳನ್ನು ಜರೆದಿರುವುದು ಮೂಲಭೂತವಾದ ಸೃಷ್ಟಿಸಬಹುದಾದ ಉಸಿರುಗಟ್ಟಿಸುವ ಸ್ಥಿತಿಗೆ ಪ್ರತೀಕ.
 
ಈ ಗುಂಡಿನ ದಾಳಿ ತಾಲಿಬಾನ್ ಆಡಳಿತವನ್ನು ಧಿಕ್ಕರಿಸುವವರಿಗೆ ಒಂದು ಪಾಠ ಎಂಬಂತೆ ಪ್ರಚಾರ ಮಾಡಲಾಗುತ್ತಿದೆ. ಆದರೆ ಇದು, ಉಗ್ರರ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಗಟ್ಟಿಗೊಳಿಸುತ್ತಿರುವಂತಹ ಅಪರೂಪದ ಘಟನೆಯೂ ಆಗಿ ಹೊರಹೊಮ್ಮುತ್ತಿರುವುದು ವಿಶೇಷವಾದುದು. ಮಲಾಲಾ ಪರವಾಗಿ ಪಾಕಿಸ್ತಾನ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಪ್ರತಿಭಟನಾ ರ‌್ಯಾಲಿಗಳು ನಡೆದಿವೆ.

ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಸಿಕ್ಕಿದ್ದು ಮಲಾಲಾ ಪರ ಸಹಾನುಭೂತಿಯ ಪ್ರವಾಹವೇ ಹರಿದುಬರುತ್ತಿದೆ. ಸಾವು, ಬದುಕಿನ ನಡುವೆ ಹೋರಾಡುತ್ತಿರುವ ಮಲಾಲಾಳನ್ನು ಈಗ ಹೆಚ್ಚಿನ ಚಿಕಿತ್ಸೆಗಾಗಿ ಪಾಕಿಸ್ತಾನದಿಂದ ಬ್ರಿಟನ್ ಆಸ್ಪತ್ರೆಗೆ ಒಯ್ಯಲಾಗಿದೆ. 

ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಲ್ಲ ಧೀರೆ ಮಲಾಲಾ. ಕೇವಲ 11 ವರ್ಷದವಳ್ದ್ದಿದಾಗಲೇ ಉರ್ದು ಬಿಬಿಸಿಯ ಬ್ಲಾಗ್‌ನಲ್ಲಿ, ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿರುವ ತನ್ನೂರು ಮಿಂಗೋರಾದ ಶಾಲಾ ಜೀವನವನ್ನು ದಿಟ್ಟವಾಗಿ ಚಿತ್ರಿಸಿ ಖ್ಯಾತಿ ಪಡೆದಿದ್ದಳು.

ಹೆಣ್ಣುಮಕ್ಕಳ ಶಾಲೆಗಳನ್ನು ಮುಚ್ಚಬೇಕೆಂಬ ತಾಲಿಬಾನ್ ಆದೇಶಕ್ಕೆ ತನ್ನೂರಿನ ಶಾಲೆಯಲ್ಲಿ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ದಿನಚರಿಯ ರೂಪದ ಈ ಬರಹಗಳಲ್ಲಿ ಮಲಾಲಾ  ಕಟ್ಟಿಕೊಟ್ಟಿದ್ದಳು. ವಿದ್ಯಾಭ್ಯಾಸ ಕುರಿತಾಗಿ ಆಕೆಗಿರುವ ಅದಮ್ಯ ಪ್ರೀತಿ ಹಾಗೂ ಅದಕ್ಕಾಗಿ ತಾಲಿಬಾನ್ ಎದುರಿಸಿ ನಿಲ್ಲುವ ಆಕೆಯ ಛಾತಿಗಾಗಿ 2011ರಲ್ಲಿ ಪಾಕಿಸ್ತಾನ ಸರ್ಕಾರ ರಾಷ್ಟ್ರೀಯ ಶಾಂತಿ ಪ್ರಶಸ್ತಿಯನ್ನೂ ನೀಡಿತ್ತು.
 
ಈಗ ತಾಲಿಬಾನಿಗಳಿಂದ ಗುಂಡೇಟು ತಿಂದಿರುವ ಮಲಾಲಾ, ಹೆಣ್ಣುಮಕ್ಕಳಿಗೆ ಹೊಸ ಸ್ಫೂರ್ತಿಯಾಗಿದ್ದಾಳೆ. ಮಲಾಲಾಳ ಮೇಲಿನ ಆಕ್ರಮಣ, ಇಸ್ಲಾಮಿಕ್ ಉಗ್ರರತ್ತ ಪಾಕಿಸ್ತಾನಿ ಪ್ರಭುತ್ವದ ದ್ವಂದ್ವಗಳನ್ನೂ ಬಯಲಿಗೆಳೆದಿದೆ. ಈಗ ಈ ಆಕ್ರಮಣ ಸಿಡಿಸಿರುವ ಆಕ್ರೋಶ, ಪಾಕಿಸ್ತಾನದ ವಾಯವ್ಯ ಭಾಗದಲ್ಲಿ ವಿಶೇಷವಾಗಿ ಉತ್ತರ ವಜೀರಿಸ್ತಾನದಲ್ಲಿ ಬೇರು ಬಿಟ್ಟಿರುವ ತಾಲಿಬಾನ್ ನೆಲೆಗಳ ವಿರುದ್ಧ ಏನಾದರೂ ನಿರ್ದಿಷ್ಟ ಕ್ರಮಗಳಿಗೆ ಕಾರಣವಾಗುತ್ತವೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.

ವಿದ್ಯಾಭ್ಯಾಸದಂತಹ ಮೂಲಭೂತ ಹಕ್ಕಿಗೂ ಎಳೆಯ ಹೆಣ್ಣುಮಕ್ಕಳೇ ಹೋರಾಡಬೇಕಾದ ಸ್ಥಿತಿ ಇರುವುದು ನಾಗರಿಕ ಸಮಾಜಗಳು ತಲೆ ತಗ್ಗಿಸುವ ವಿಚಾರ. ಈ ಬಗೆಯ ಆಕ್ರಮಣಗಳು ಜನಸಾಮಾನ್ಯರನ್ನು ಭೀತಿಯ ಕೂಪಕ್ಕೂ ತಳ್ಳುವಂತಹದ್ದು. ಇಂತಹ ಅತಿರೇಕದ ಕೃತ್ಯಗಳಿಗೆ ಆಧುನಿಕ ಬದುಕಿನಲ್ಲಿ ಅವಕಾಶವಿರಬಾರದು ಎಂಬಂತಹ ಸಂದೇಶ ಗಟ್ಟಿಯಾಗಿ ವಿಶ್ವದಲ್ಲಿ ಪಸರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT