ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಗಾಳಿ-ಆಸ್ತಿಪಾಸ್ತಿಗೆ ಭಾರಿ ಹಾನಿ

Last Updated 17 ಏಪ್ರಿಲ್ 2013, 13:51 IST
ಅಕ್ಷರ ಗಾತ್ರ

ಕನಕಪುರ: ಸೋಮವಾರ ರಾತ್ರಿ ಸುರಿದ ಭಾರಿ ಮಳೆ ಮತ್ತು ಬಿರುಗಾಳಿಗೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಅತ್ಯಂತ ಹಳೆಯ ಮರಗಳು ಧರೆಗೆ ಉರುಳಿವೆ. ಬಾಳೆ ಮತ್ತು ಮಾವಿನ ಗಿಡಗಳು ನಾಶವಾಗಿದ್ದು ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ರೈತರು ದೂರಿದ್ದಾರೆ.

ರಾತ್ರಿ ಭಾರಿ ಮಳೆ ಮತ್ತು ಗಾಳಿ ಪ್ರಾರಂಭವಾಯಿತು. ಮಧ್ಯರಾತ್ರಿ ವೇಳೆಗೆ ಮಳೆ ಕಡಿಮೆಯಾಗಿ ಗಾಳಿಯು ಜೋರಾಗಿ ಬೀಸಲಾರಂಭಿಸಿದ್ದರಿಂದ ಕಸಬಾ ಹೋಬಳಿ ಎಚ್.ಕೊತ್ತನೂರು ಗ್ರಾಮವೊಂದರಲ್ಲೇ ಸುಮಾರು 40ಕ್ಕೂ ಹೆಚ್ಚು ಮನೆಗಳು ಬಿರುಗಾಳಿಗೆ ಸಿಕ್ಕಿ ಸಂಪೂರ್ಣವಾಗಿ ನಾಶವಾಗಿವೆ ಎಂದು ತಿಳಿದು ಬಂದಿದೆ.

ಈ ಗ್ರಾಮದಲ್ಲಿ 30 ಎಕರೆಯಷ್ಟು ಭೂ ಪ್ರದೇಶದಲ್ಲಿನ ಮಾವಿನ ಫಸಲು ಸಂಪೂರ್ಣ ನಾಶವಾಗಿದೆ. 40ಕ್ಕೂ ಹೆಚ್ಚು ಮರಗಳು ಗಾಳಿಗೆ ಸಿಲುಕಿ ಮುರಿದು ಬಿದ್ದಿವೆ. 10 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗೊನೆಗಳು ಬಿರುಗಾಳಿಗೆ ಸಿಕ್ಕಿ ಮಣ್ಣ ಪಾಲಾಗಿವೆ. ಕೊತ್ತನೂರು ಗ್ರಾಮವೊಂದರ್ಲ್ಲಲೇ ಸುಮಾರು ಒಂದು ಕೋಟಿ ರೂಪಾಯಿಗಳಷ್ಟು ಆಸ್ತಿಪಾಸ್ತಿಗೆ ನಷ್ಟ ಉಂಟಾಗಿದೆ.

`ಎರಡು ವರ್ಷದಿಂದ ಸರಿಯಾಗಿ ಮಳೆಬಾರದೆ ಬರಗಾಲಕ್ಕೆ ತುತ್ತಾಗಿ ಮಳೆಗಾಗಿ ಕಾಯುತ್ತಿದ್ದೆವು. ಆದರೆ ಈಗ ಮಳೆ ಬಂದಿದೆ. ಆದರೆ ನಮ್ಮ ಬದುಕನ್ನೇ ಕಿತ್ತುಕೊಂಡಿದೆ' ಎಂದು  ಬಾಳೆ ಮತ್ತು ಮಾವು ಬೆಳೆದಿರುವ ರೈತರಾದ ಲಕ್ಷ್ಮಣಗೌಡ, ಹೊನ್ನೇಗೌಡ ತಮ್ಮ ಅಳಲನ್ನು ತೋಡಿಕೊಂಡರು.

ಮಳೆಗಾಳಿಗೆ ಹೆಚ್ಚಿನ ರೇಷ್ಮೆ ಮನೆಗಳೇ ನಾಶವಾಗಿವೆ. ರೇಷ್ಮೆ ಕೃಷಿಯು ಸ್ವಲ್ಪಮಟ್ಟಿಗೆ ಲಾಭದಾಯಕ ಆಗಿರುವುದರಿಂದ ಹೆಚ್ಚಿನ ರೈತರು ಇಲಾಖೆಯ ಮಾರ್ಗದರ್ಶನದ ಮೇರೆಗೆ ಜಮೀನುಗಳಲ್ಲಿಯೇ ಎತ್ತರವಾಗಿ ರೇಷ್ಮೆ ಮನೆಗಳನ್ನು ನಿರ್ಮಿಸಿದ್ದರು. ಒಂಟಿ ಮನೆಗಳಾಗಿದ್ದರಿಂದ ಬಿರುಗಾಳಿಗೆ ಸಿಕ್ಕಿ ಇವುಗಳ ಮೇಲ್ಛಾವಣಿಗಳು ಹಾರಿಹೋಗಿವೆ.

`ಒಂದು ಮನೆಗೆ 8 ರಿಂದ 10 ಲಕ್ಷ ಬಂಡವಾಳ ಹಾಕಲಾಗಿದೆ. ಬ್ಯಾಂಕ್ ಮತ್ತು ಖಾಸಗಿಯಾಗಿ ಸಾಲ ಮಾಡಿ ಇವುಗಳನ್ನು ನಿರ್ಮಿಸಲಾಗಿತ್ತು. ಆದರೆ ಈಗ ಮಳೆಗಾಳಿಗೆ ಸಿಕ್ಕಿ ಎಲ್ಲವೂ ನಾಶವಾಗಿದೆ. ಸರ್ಕಾರವು ನಷ್ಟಕ್ಕೆ ಈಡಾಗಿರುವ ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ರೇಷ್ಮೆ ಬೆಳೆಗಾರರಾದ ದಾಸಪ್ಪ, ಪುಟ್ಟತಾಯಮ್ಮ, ನರಸಿಂಹೇಗೌಡ, ಚನ್ನೇಗೌಡ ಒತ್ತಾಯಿಸಿದ್ದಾರೆ.

ಬಸವನಹಳ್ಳಿ ಗ್ರಾಮದಲ್ಲಿ ಹತ್ತಾರು ವರ್ಷಗಳಿಂದ ವೀಳ್ಯೆದೆಲೆ ಬೆಳೆಯುತ್ತಿರುವ ಶಿವಲಿಂಗೇಗೌಡರ ವೀಳ್ಯೆದೆಲೆ ತೋಟವೂ ಸಂಪೂರ್ಣ ನಾಶವಾಗಿದೆ. ಸುಮಾರು 2 ಎಕರೆಯಷ್ಟು ಪ್ರದೇಶದಲ್ಲಿದ್ದ ವೀಳ್ಯೆದೆಲೆ ಗಿಡಗಳು ನಾಶವಾಗಿದ್ದು ಅಂದಾಜು ಎರಡು ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಅವರು `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಲ್ಲೂಕಿನ ಸಾತನೂರು ಹೋಬಳಿ ಕಾಳೇಗೌಡನ ದೊಡ್ಡಿ ಗ್ರಾಮದಲ್ಲೂ ಮಳೆಗಾಳಿಗೆ ದಬ್ಬಳ್ಳಿ ಬಸವೇಗೌಡರ ಮಗ ಬಸವರಾಜು ಎಂಬುವರ ಮನೆಯ ಶೀಟುಗಳು ಗಾಳಿಗೆ ಹಾರಿಹೋಗಿದ್ದು ಮೇಲ್ಛಾವಣಿ ಸಂಪೂರ್ಣ ನಾಶವಾಗಿದ್ದು ಸುಮಾರು 60 ಸಾವಿರದಷ್ಟು ನಷ್ಟವಾಗಿದೆ. ಇದೇ ಗ್ರಾಮದ ಸಿದ್ದೇಗೌಡರ ಮಗ ಪ್ರಕಾಶ್ ಅವರ ಮನೆಯ ಸೀಟುಗಳೂ ಗಾಳಿಗೆ ಹಾರಿಹೋಗಿದ್ದು ಸುಮಾರು 25 ಸಾವಿರ ರೂಗಳಷ್ಟು ನಷ್ಟವಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಜೆ. ನಾಗರಾಜು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಪಂಚಾಯಿತಿ ವತಿಯಿಂದ ಹಾಗೂ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಕಸಬಾ ಹೋಬಳಿ ಶೀಗೆಕೋಟೆ ಗ್ರಾಮದಲ್ಲಿ ಭದ್ರಮ್ಮ ಕೋಂ ಮರೀಗೌಡರಿಗೆ ಸೇರಿದ ವಾಸದ ಮನೆಯ ಮೇಲ್ಛಾವಣಿಯ ಹೊದಿಕೆಗಳೂ ಗಾಳಿಗೆ ಹಾರಿಹೋಗಿವೆ.  ಮೇಲ್ಛಾವಣಿ ಬ್ದ್ದಿದ ಪರಿಣಾಮ ಮನೆಯಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ. ಘಟನೆಯಲ್ಲಿ ಸುಮಾರು 50 ಸಾವಿರ ರೂಗಳಷ್ಟು ನಷ್ಟವಾಗಿದ್ದು ಪರಿಹಾರ ನೀಡುವಂತೆ ಅವರು ಒತ್ತಾಯಿಸಿದ್ದಾರೆ.  ಇದೇ ಗ್ರಾಮದ ನಿಂಗೇಶ್ ಎಂಬುವರ ಮನೆಯ ಮೇಲ್ಛಾವಣಿಯೂ ಹಾರಿ ಹೋಗಿದ್ದು ಸುಮಾರು 20 ಸಾವಿರ ರೂಗಳಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT