ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಪಂಚಾಯಿತಿ ಸದಸ್ಯೆ ಮನೆಗೆ ನೀರು

Last Updated 3 ಸೆಪ್ಟೆಂಬರ್ 2011, 6:35 IST
ಅಕ್ಷರ ಗಾತ್ರ

ಹನುಮಸಾಗರ:  ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ಇಲ್ಲಿನ 7ನೇ ವಾರ್ಡಿನ ಗ್ರಾಮ ಪಂಚಾಯಿತಿ ಸದಸ್ಯೆ ಧರಿಯಾಬಿ ಬಳೂಟಗಿಯವರ ಮನೆಗೆ ನುಗ್ಗಿದ ಮಳೆ ನೀರು ಅಕ್ಕಿ ಮೂಟೆ ಸೇರಿದಂತೆ ಅನೇಕ ವಸ್ತುಗಳಿಗೆ ಹಾನಿ ಸಂಭವಿಸುವುದರ ಜೊತೆಗೆ ಇಡೀ ಕುಟುಂಬ ಮಧ್ಯರಾತ್ರಿಯವರೆಗೆ ಜಾಗರಣೆ ಮಡಿದ ಘಟನೆ ಜರುಗಿದೆ.

ಹೊಸ ಬಸ್ ನಿಲ್ದಾಣದ ಮುಖ್ಯ ರಸ್ತೆಯ ಎಡಬಲದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಚರಂಡಿಗಳಲ್ಲಿ ಸರಾಗವಾಗಿ ಮಳೆ ನೀರು ಹರಿದು ಹೋಗದಂತಾಗಿರುವುದೇ ಈ ಘಟನೆ ಸಂಭವಿಸಲು ಕಾರಣವಾಗಿದೆ.

ಚರಂಡಿ ಬಿಟ್ಟು ಹರಿದು ಬಂದ ನೀರು ಮುಂದಿನ ಬಾಗಿಲು ಪ್ರವೇಶಿಸಿ  ಮನೆ ತುಂಬಿದ ನಂತರ ಹಿತ್ತಲೂ ಬಾಗಿಲಿನಿಂದ ಹೊರ ಹೋಗಿ ಪಕ್ಕದ ಗೂಳಪ್ಪ ಮಜ್ಜಗಿಯವರ ಮನೆ ತುಂಬಿ ಕೆರೆಯಂತಾಗಿದೆ ಎಂದು ಕುಟುಂಬದ ಯುವಕ ಕರೀಂಸಾಬ ಬಳೂಟಗಿ ನೋವಿನಿಂದ ಹೇಳುತ್ತಾರೆ.

ಸಾಮಾನ್ಯವಾಗಿ ಈ ಗ್ರಾಮದಲ್ಲಿ ಜೋರು ಮಳೆಯಾದಾಗ ಮಳೆ ನೀರಿಗೆ ನಲುಗುವ ಮೊದಲ ಮನೆಗಳು ಇವುಗಳಾಗಿದ್ದರೂ ಗ್ರಾಮ ಪಂಚಾಯಿತಿ ಇಲ್ಲಿಯವರೆಗೂ ಪರಿಹಾರ ಕ್ರಮ ಕೈಕೊಂಡಿಲ್ಲ.

ಜೂನ್ ತಿಂಗಳಲ್ಲಿ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು ಬಳೂಟಗಿಯವರ ಮನೆಯಲ್ಲಿ ಮದುವೆಗಾಗಿ ತಂದಿರಿಸಲಾಗಾದ್ದ ದಿನಸಿಗಳು, ಬಟ್ಟೆಗಳು ಮಳೆ ನೀರಿಗೆ ತೊಯ್ದು ಸಾಕಷ್ಟು ಹಾನಿ ಸಂಭವಿಸಿತ್ತು.
ಆ ಸಂದರ್ಭದಲ್ಲಿ ಈ ಮನೆಗೆ ಭೇಟಿ ನೀಡಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರಹ್ಲಾದ ಕಟ್ಟಿ ಒಂದು ವಾರದೊಳಗಾಗಿ ಪರಿಹಾರ ಕಾಮಗಾರಿ ಕೈಕೊಂಡು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ಹೇಳಿದ್ದರು.

ಆದರೆ ಆ ಘಟನೆ ಸಂಭವಿಸಿ ಮೂರು ತಿಂಗಳ ಗತಿಸಿದರೂ ಇಲ್ಲಿ ಯಾವುದೇ ಪರಿಹಾರ ಕಾರ್ಯಚರಣೆಗಳು ಇಲ್ಲಿಯವರೆಗೂ ನಡೆಯದಿರುವುದು ಹಾಸ್ಯಾಸ್ಪದ ಸಂಗತಿಯಾಗಿದೆ.

ಸಾಯಂಕಾಲ 1ಗಂಟೆ ಕಾಲ ಮಳೆ ಸುರಿದು ನಿಂತರೂ ಹರಿದು ಬರುವ ನೀರು ಮಾತ್ರ ಮಧ್ಯರಾತ್ರಿಯವರೆಗೂ ಮುಂದುವರೆದಿದ್ದರಿಂದ ಮಕ್ಕಳು ಮರಿಗಳು ಸೇರಿದಂತೆ ಕುಟುಂಬದ ಸದಸ್ಯರು ಇಡೀ ರಾತ್ರಿ ಜಾಗರಣೆ ಮಾಡಬೇಕಾದ ಪರಸ್ಥಿತಿ ನಿರ್ಮಾಣವಾಗಿತ್ತು ಎಂದು ಇದೇ ವಾರ್ಡ ಪ್ರತಿನಿಧಿಸಿರುವ ಗ್ರಾಮ ಪಂಚಾಯಿತಿ ಸದಸ್ಯೆ ಧರಿಯಾಬಿ ಬಳೂಟಗಿ ಹೇಳುತ್ತಾರೆ. ಈ ವಾರ್ಡ ಉದ್ಧಾರ ಮಾಡಬೇಕಾದ್ದ ಪಂಚಾಯಿತಿ ಸದಸ್ಯರದ್ದೇ ಇಂತಹ ಪರಸ್ಥಿತಿಯಾಗಿರುವಾಗ ಇನ್ನು ನಮ್ಮಂತಹ ಸಾಮಾನ್ಯ ಜನರ ಸ್ಥಿತಿ ಹೇಗಿರಬೇಡ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT