ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಚಾರ್ಮಾಡಿ ಸೊಬಗು ಇಮ್ಮಡಿ....

Last Updated 22 ಜೂನ್ 2012, 5:25 IST
ಅಕ್ಷರ ಗಾತ್ರ

ವು ಎಂದಾದರೂ ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಸಿದ್ದೀರಾ? ಹೌದಾದರೆ ಚಾರ್ಮಾಡಿಯ ಪ್ರಕೃತಿಯ ನಯನ ಮನೋಹರ ದೃಶ್ಯಾವಳಿಗೆ ಖಂಡಿತಾ ಮನಸೋತಿರುತ್ತೀರಿ. ಬೆಟ್ಟಗುಡ್ಡಗಳ ನಡುವೆ ಹಾವಿನಂತೆ ಹರಿದ ರಸ್ತೆಗಳಲ್ಲಿ ವಾಹನ ಸಾಗುವಾಗ ಚಾರ್ಮಾಡಿಯ ಅಂದ ಕಣ್ತುಂಬಿಕೊಂಡಷ್ಟೂ ಮುಗಿಯದು. ಮಳೆಗಾಲದಲ್ಲಿ ಮಳೆ ಕಣ್ಣಾ ಮುಚ್ಚಾಲೆಯ ನಡುವೆ ಮೋಡ ಮುಸುಕಿದ ಚಾರ್ಮಾಡಿಯ ಸೊಬಗು ಇಮ್ಮಡಿಯಾಗುತ್ತದೆ.

ಮಂಗಳೂರಿನಿಂದ ಸುಮಾರು 90 ಕಿ.ಮೀ. ದೂರದಲ್ಲಿರುವ ಚಾರ್ಮಾಡಿಯನ್ನು ಬಿ.ಸಿ.ರೋಡ್, ಉಜಿರೆ ಮಾರ್ಗವಾಗಿ  ತಲುಪಬಹುದು.  ಈ ಕಡೆ ಧರ್ಮಸ್ಥಳದಿಂದಲೂ ಆಗಮಿಸಬಹುದು. ಉಜಿರೆ ಪೇಟೆಯ ವೃತ್ತದಿಂದ ಬಲಕ್ಕೆ ತಿರುಗಿ, ಸಾಗುತ್ತಿದ್ದಂತೆಯೇ ವಾತಾವರಣದಲ್ಲಿನ ಉಷ್ಣತೆ ಕಡಿಮೆಯಾಗಿ ಚಳಿ ಕಚಗುಳಿಯಿಡತೊಡಗುತ್ತದೆ.
 
ಮುಂದೆ ಮುಂದೆ ಹೋದಂತೆ ದಟ್ಟವಾದ ಕಾನನ ಪ್ರದೇಶ ಪ್ರವಾಸಿಗನನ್ನು ಕೈಬೀಸಿ ಕರೆಯುತ್ತದೆ. ದಟ್ಟಡವಿಯ ಮಧ್ಯದಲ್ಲಿ ಬೈಕ್ ಸವಾರಿಯ ರೋಚಕತೆ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಲೇ ಬೇಕಾದುದು!

ಉಜಿರೆಯಿಂದ ಸುಮಾರು 15 ಕಿ.ಮೀ ಕ್ರಮಿಸಿದರೆ  ಚಾರ್ಮಾಡಿ ಘಾಟಿ  ಬಂದೇ ಬಿಡುತ್ತದೆ. ನೋಡಲು ಸುಂದರವಾದ, ದಟ್ಟವಾದ ಅಡವಿಯ ಪರಿಚಯ ನಿಮಗೆ ಇಲ್ಲಿ ಆಗುತ್ತದೆ. ಅಲ್ಲಲ್ಲಿ ಕಾಣಿಸಿಕೊಳ್ಳುವ ಪುಟ್ಟ ಪುಟ್ಟ ತೊರೆಗಳ ಸೊಬಗೇ ಬೇರೆ. ಇಲ್ಲಿ ನಮ್ಮ ವಾಹನಗಳನ್ನು ನಿಲ್ಲಿಸಿ, ಮೈ ರೋಮಾಂಚನಗೊಳಿಸುವ ಚಳಿಯಲ್ಲಿ ನೀರಾಟವಾಡಬಹುದು!. ನೀರಿಗೆ ಹೆಚ್ಚು ರಭಸ ಇಲ್ಲದಿರುವುದರಿಂದ ಅಪಾಯ ಕಡಿಮೆ.

ಆದರೆ  ಪಾಚಿ  ಹೆಚ್ಚಾಗಿ ಬೆಳೆದಿರುವುದರಿಂದ ಎಚ್ಚರಿಕೆ ಅತ್ಯಗತ್ಯ. ಝರಿಯಿಂದ ಬರುವ ನೀರು ತುಂಬಾ ತಂಪು. ಕೈ ಮರಕಟ್ಟುವಷ್ಟು  ಚಳಿಯ ನಡುವೆಯೂ ನೀರಿನಲ್ಲಿ ಮೋಜು ಮಾಡುವ ಸನ್ನಿವೇಶ ಅವಿಸ್ಮರಣೀಯ.

ಇದೆಲ್ಲದರ ನಡುವೆ ಈ ಘಾಟಿಯಲ್ಲಿ ಚಲಿಸುವಾಗ ವಿಶೇಷ ಜಾಗರೂಕತೆ ಬಹಳ ಅಗತ್ಯ. ಯಾಕೆಂದರೆ ದಾರಿ ಕಿರಿದಾಗಿರುವುದರಿಂದ, ಎದುರಿನಿಂದ ಬಸ್ಸು ಲಾರಿಗಳ  ಅಡ್ಡಾದಿಡ್ಡಿ ಚಲಾವಣೆ ನಮ್ಮನ್ನು ಯಮಲೋಕಕ್ಕೇ ಕರೆದೊಯ್ಯಬಹುದು. ರಸ್ತೆಯ ಬದಿಯಲ್ಲಿ ತಡೆಗೋಡೆಗಳನ್ನು ನಿರ್ಮಿಸಿದ್ದರೂ ಹಲವಾರು ವಾಹನಗಳು ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದಿದ್ದುಂಟು.

ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹಲವಾರು ಜಾತಿಯ ಹಾವುಗಳೂ, ಹಾಗೆಯೇ ಅನೇಕ ರೀತಿಯ ಔಷಧೀಯ ಗಿಡಮರಗಳೂ ಲಭ್ಯ ಎನ್ನುತ್ತಾರೆ ಸ್ಥಳೀಯರು.

ಮಳೆಗಾಲ ಹಾಗೂ ಚಳಿಗಾಲದಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಹಿಮ ಆವರಿಸಿ, ಪ್ರಾಯಾಣಿಸುವವರಿಗೆ ಪ್ರಕೃತಿ ಸೌಂದರ್ಯ ಕಾಣಲು ಆಗದೇ ಮುಂದೆ ಸಾಗಬೇಕಾಗುತ್ತದೆ. ಜನವರಿ ತಿಂಗಳಿನಿಂದ ಗಿಡಮರಗಳು ಚಿಗುರಿ ದಟ್ಟ ಕಾಡು ಹಸಿರಾಗಿ ಕಾಣುವುದು ಮನಸ್ಸಿಗೆ ಅಹ್ಲಾದಕರ.

ನಿತ್ಯವೂ ಮನೆ, ಉದ್ಯೋಗ ಇತ್ಯಾದಿ ವಿಷಯಗಳಲ್ಲಿ ನಿರತರಾಗಿರುವ ಮಂದಿ ವಾರಾಂತ್ಯ ಕಳೆಯಲು ದೂರದ ಊರುಗಳಿಗೆ ಹೋಗಿ ಹಣ ಕಳೆದುಕೊಳ್ಳುವ ಬದಲು ಒಮ್ಮೆ ಚಾರ್ಮಾಡಿ ಘಾಟಿಯಲ್ಲಿ ಸುಮ್ಮನೇ ಪ್ರಯಾಣಿಸಿದರೆ ಸಾಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT