ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಯಾದ ಮೇಲೆ ಬಂದರೆ ಕಷ್ಟ ಕಂಡೀತೇ?

Last Updated 14 ಮೇ 2012, 19:30 IST
ಅಕ್ಷರ ಗಾತ್ರ

ಕೊರಟಗೆರೆ/ಮಧುಗಿರಿ:  `ಈಗ ನೀವು ಬಂದಿದ್ದೀರಿ. ಹಿಂದೆ ಮಿನಿಷ್ಟ್ರುಗಳೇ ಬಂದಿದ್ರು. ಯಾರೂ ನಮ್ಮ ಕಷ್ಟ ತೀರಿಸಲಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಸುಮ್ಮನೆ ಏಕೆ ಬರ‌್ತೀರಿ~

ಇವು ತಾಲ್ಲೂಕಿನ ತಣ್ಣೇನಹಳ್ಳಿಯ ಬರ ವೀಕ್ಷಣೆಗೆ ಸೋಮವಾರ ಬಂದಿದ್ದ ಕೇಂದ್ರ ಬರ ಅಧ್ಯಯನ ತಂಡದ ಮುಂದೆ ರೈತರು, ಮಹಿಳೆಯರ ಆಕ್ರೋಶ ಭರಿತ ನೋವು ತುಂಬಿದ ಮಾತುಗಳು.

`ಈಚೆಗಷ್ಟೇ ಮಳೆಯಾಗಿದೆ. ಎಲ್ಲೆಲ್ಲೂ ಹಸಿರು ಹುಲ್ಲು ಚಿಗುರುತ್ತಿದೆ. ಇಂಥ ಸಂದರ್ಭದಲ್ಲಿ ಮುಖ್ಯರಸ್ತೆ ಆಸುಪಾಸು ತಿರುಗಿದರೆ ಎಂಥ ಪರಿಸ್ಥಿತಿ ಕಣ್ಣಿಗೆ ಬೀಳಲು ಸಾಧ್ಯ~ ಎಂದು ರೈತರು ತಂಡವನ್ನು ತರಾಟೆಗೆ ತೆಗೆದುಕೊಂಡರು.

ಬಹುತೇಕ ಗ್ರಾಮಸ್ಥರು ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ಕುಡಿಯುವ ನೀರಿನ ಸಮಸ್ಯೆ ತೋಡಿಕೊಂಡರು. ಅಂತರ್ಜಲ ಬತ್ತಿ ಹೋಗಿರುವ ಕಾರಣ ಕೊಳವೆಬಾವಿಯನ್ನು ಎಷ್ಟು ಆಳ ಕೊರೆದರೂ ನೀರು ಸಿಗುತ್ತಿಲ್ಲ ಎಂದು ಅಲವತ್ತುಕೊಂಡರು.


ಬರದಿಂದಾಗಿ ಮೇವಿಲ್ಲದೆ ರಾಸುಗಳಿಗೆ ಬೇವು ಮತ್ತು ಆಲದ ಮರದ ಎಲೆಗಳನ್ನು ತಿನ್ನಿಸಿದ್ದರಿಂದ ತಣ್ಣೇನಹಳ್ಳಿ ಗ್ರಾಮದಲ್ಲಿ 4 ಹಸುಗಳು ಹಾಗೂ 20 ಕುರಿಗಳು ಸತ್ತಿವೆ. ವಿಮೆ ಮಾಡಿಸಿದ್ದರೂ ಸಂಬಂಧಿಸಿದ ಕಂಪೆನಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ದೂರಿದರು.

ಸರ್ಕಾರ ನಮ್ಮ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಆದರೆ, ಜನರಿಗೆ ಯಾವುದೇ ಉದ್ಯೋಗ ಕೊಟ್ಟಿಲ್ಲ. ಜನ ಕೂಲಿಗಾಗಿ ಬೇರೆಡೆ ಹೋಗುತ್ತಿದ್ದಾರೆ. ಕಳೆದ ಬಾರಿ ಬಿತ್ತಿದ್ದ ಮುಸುಕಿನಜೋಳ ಮತ್ತು ರಾಗಿ ಬಹುತೇಕ ಹಾಳಾಗಿದೆ. ಹಳ್ಳಿಯ ಜನರಿಗೆ ಹಳ್ಳಿಯಲ್ಲಿಯೇ ಉದ್ಯೋಗ ಒದಗಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕೆಂದು ವಿನಂತಿಸಿದರು.

ಮಧುಗಿರಿ ತಾಲ್ಲೂಕು ತುಂಬಾಡಿಗೆ  ತಂಡ ಭೇಟಿ ನೀಡಿದಾಗ, ಗ್ರಾಮದ ರೈತರು ಮಳೆಯಿಲ್ಲದೆ ಹಾಳಾಗಿರುವ ತೆಂಗಿನಕಾಯಿ, ಅಡಿಕೆ ಗೊನೆ, ಮುಸುಕಿನಜೋಳ, ಮತ್ತು ಕಡ್ಲೆಕಾಯಿಗಳನ್ನು ತೋರಿಸಿ ನೋವು ತೋಡಿಕೊಂಡರು.

ಬ್ಯಾಂಕ್‌ಗಳು ಸೇರಿದಂತೆ ಹಲವು ವಾಣಿಜ್ಯ ಸಂಸ್ಥೆಗಳ ಲಾಭ ನಷ್ಟವನ್ನು ಸರ್ಕಾರ ಕೇಳುತ್ತದೆ. ಆದರೆ, ರೈತರ ಲಾಭ-ನಷ್ಟವನ್ನು ಕೇಳುವವರು ಯಾರೂ ಇಲ್ಲ. ನಿಮ್ಮ ಅಧ್ಯಯನ ನಮ್ಮ ಸುಖ-ದುಃಖ ತೀರಿಸುವುದಿಲ್ಲ ಎಂದು ಹೇಳಿದರು.

ಬೆಳೆ ವಿಮೆಗೆ ಸಲಹೆ: ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಬರ ಅಧ್ಯಯನ ತಂಡದ ಪ್ರತಿನಿಧಿಗಳು, `ಯಾವುದೇ ಬೆಳೆ ಬಿತ್ತಿದರು ಬೆಳೆ ವಿಮೆ ಮಾಡಿಸಿ~ ಎಂದು ಸೂಚಿಸಿದರು.

ಬರ ಅಧ್ಯಯನ ತಂಡದ ಮುಖ್ಯಸ್ಥ ಡಾ.ಕೆ.ಮನೋಹರ್, ಸದಸ್ಯರಾದ ಡಿ.ರಾಜಶೇಖರ್, ಎ.ನಂದಕುಮಾರ್, ಸಿ.ಜೋಸ್, ವಿಭು ತ್ರಿಪಾಠಿ, ರಾಂ ವರ್ಮಾ ತಾಲ್ಲೂಕಿನಲ್ಲಿ ಸಂಚರಿಸಿದರು. ನಂತರ ಇಲ್ಲಿಂದ ಶಿರಾ ತಾಲ್ಲೂಕಿಗೂ ಭೇಟಿ ನೀಡಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ದೊಡ್ಡಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುರೇಶ್‌ಕುಮಾರ್, ತಹಶೀಲ್ದಾರ್ ಪಾತರಾಜು ಸೇರಿದಂತೆ ಇನ್ನಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT