ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರ ಪಾಲಿಕೆ ‘ಕಿರೀಟ’ ಬಂತು; ಮುಂದೇನು?

ಐತಿಹಾಸಿಕ ನಗರದ ಜನತೆಯಲ್ಲಿ ಹೊಸ ಸಂಚಲನ
Last Updated 3 ಜನವರಿ 2014, 8:35 IST
ಅಕ್ಷರ ಗಾತ್ರ

ವಿಜಾಪುರ: ಇಲ್ಲಿಯ ನಗರಸಭೆ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆ ಗೇರಿದ್ದು, ಬದಲಾವಣೆಯ ಗಾಳಿ ಬೀಸಬಹುದು ಎಂದು ಕನಸು ಕಾಣುತ್ತಿರುವ ಜನತೆಗೆ ನಿರಾಶೆ ಕಾದಿದೆ. ಆಡಳಿತ ನಿರ್ವಹಣೆಯಲ್ಲಿ ತಕ್ಷಣಕ್ಕೆ ಯಾವುದೇ ಬದಲಾವಣೆ ಆಗುವುದಿಲ್ಲ. ಮಹಾನಗರ ಪಾಲಿಕೆ ಎಂಬ ‘ಕಿರೀಟ’ ಲಭಿಸಿದ್ದರೂ ಕನಿಷ್ಠ ಆರು ತಿಂಗಳ ವರೆಗೆ ಈಗಿರುವ ವ್ಯವಸ್ಥೆಯೇ ಮುಂದು ವರಿಯಲಿದೆ.

ನಗರಸಭೆ ಸದಸ್ಯರೇ ಮಹಾನಗರ ಪಾಲಿಕೆಯ ಸದಸ್ಯರಾಗಿದ್ದಾರೆ. ಅಧ್ಯಕ್ಷ–ಉಪಾಧ್ಯಕ್ಷರ ಮೀಸಲಾತಿ ವಿವಾದ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದ್ದು, ಅದು ಇತ್ಯರ್ಥವಾಗುವವರೆಗೆ ಮೇಯರ್‌–ಉಪ ಮೇಯರ್‌ ಚುನಾವಣೆ ನಡೆಯುವುದಿಲ್ಲ. ಹೀಗಾಗಿ ತಕ್ಷಣಕ್ಕೆ ಮೇಯರ್‌–ಉಪ ಮೇಯರ್‌ ಸಹ ಇರುವುದಿಲ್ಲ!

ಪೌರಾಯುಕ್ತರಾಗಿದ್ದ ಜಿ.ರಾಮ ದಾಸ ಹಿರಿಯ ವೇತನ ಶ್ರೇಣಿಯ ಕೆಎಂಎಸ್‌ (ಕರ್ನಾಟಕ ಮುನ್ಸಿಪಲ್‌ ಸರ್ವೀಸ್‌) ಅಧಿಕಾರಿ. ಬೃಹತ್‌ ಬೆಂಗ ಳೂರು ಮಹಾನಗರ ಪಾಲಿಕೆಯನ್ನು ಹೊರತು ಪಡಿಸಿ ರಾಜ್ಯದ ಇತರ ಮಹಾನಗರ ಪಾಲಿಕೆಗಳಿಗೆ ಕಿರಿಯ ಶ್ರೇಣಿಯ ಐಎಎಸ್‌ ಅಧಿಕಾರಿ, ಹಿರಿಯ ಶ್ರೇಣಿಯ ಕೆಎಎಸ್‌ ಅಧಿಕಾರಿ ಹಾಗೂ ಹಿರಿಯ ವೇತನ ಶ್ರೇಣಿಯ ಕೆಎಂಎಸ್‌ ಅಧಿಕಾರಿಗಳು ಮಹಾನಗರ ಪಾಲಿಕೆಯ ಆಯುಕ್ತರಾಗಲು ಅರ್ಹರು. ಈ ಅರ್ಹತೆ ಹೊಂದಿರುವ ಜಿ.ರಾಮದಾಸ ಅವರೇ ವಿಜಾಪುರ ಮಹಾನಗರ ಪಾಲಿಕೆಯ ಆಯುಕ್ತರಾಗಿ ಮುಂದು ವರಿದಿದ್ದಾರೆ (ಸರ್ಕಾರ ಅವರನ್ನು ವರ್ಗಾಯಿಸದಿದ್ದರೆ).

ಸದ್ಯ ವ್ಯಾಪ್ತಿ ವಿಸ್ತರಣೆ ಇಲ್ಲ: ವಿಜಾಪುರ ನಗರ, ಭೂತನಾಳ, ದರ್ಗಾ, ಅಫ್ಜಲಪೂರ, ಮಹಾಲಬಾಗಾಯತ, ರಂಭಾಪುರ, ಕಸಬಾ ಸೇರಿದಂತೆ ಈಗಿ ರುವ ನಗರಸಭೆ ವ್ಯಾಪ್ತಿ ಅಷ್ಟೇ ಮಹಾನಗರ ಪಾಲಿಕೆಯ ವ್ಯಾಪ್ತಿ ಗೊಳಪಟ್ಟಿದೆ. ನಗರಾಭಿವೃದ್ಧಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆ (ಯುಡಿಡಿ153/ಎಂಎಲ್‌ಆರ್‌ 2013, ದಿ.20.12.2013)ಯಲ್ಲಿ ಹೊಸದಾಗಿ ಅಧಿಸೂಚಿತ ಪ್ರದೇಶದಲ್ಲಿ 3 ಲಕ್ಷಕ್ಕಿಂತ ಅಧಿಕ ಜನರಿದ್ದು,  ನಗರ ವಲಯದಲ್ಲಿ ಪ್ರತಿ ಚದುರ ಕಿ.ಮೀ.ಗೆ 3000ಕ್ಕಿಂತ ಹೆಚ್ಚು ಜನ ವಾಸ ವಾಗಿದ್ದಾರೆ.

ನಗರಸಭೆಯ ವಾರ್ಷಿಕ ಆದಾಯ ₨6 ಕೋಟಿಗೂ ಹೆಚ್ಚು ಮತ್ತು ನಗರದ ಜನತೆಯ ತಲಾ ಆದಾಯ ₨200ಕ್ಕಿಂತ ಹೆಚ್ಚಿದೆ. ಅಧಿ ಸೂಚಿತ ಪ್ರದೇಶದಲ್ಲಿ ಒಟ್ಟಾರೆ ಉದ್ಯೋ ಗಾವಕಾಶಗಳಲ್ಲಿ ಶೇ.50ಕ್ಕಿಂತ ಹೆಚ್ಚು ಜನರು ಕೃಷಿ ಏತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. 2011ರ ಜನಗಣತಿ ಪ್ರಕಾರ ನಗರದ ಜನಸಂಖ್ಯೆ 3.27 ಲಕ್ಷ ಇದ್ದು, ನಗರಸಭೆಯ ಆದಾಯ ₨7.53 ಕೋಟಿ ಇದೆ. ಮಹಾನಗರ ಪಾಲಿಕೆ ಯಾಗಲು ಈ ಅಂಶಗಳು ಪ್ರಮುಖ ಮಾನದಂಡವಾಗಿವೆ.

ವಾರ್ಡ್‌ಗಳ ಪುನರ್‌ ವಿಂಗಡಣೆ: ಸರ್ಕಾರದ ಆದೇಶದಂತೆ ಈಗಿರುವ ವ್ಯವಸ್ಥೆಯೇ ಆರು ತಿಂಗಳ ಕಾಲ ಮುಂದುವರೆಯಲಿದ್ದು, ಆ ನಂತರ ವಾರ್ಡ್‌ಗಳ ಪುನರ್‌ ವಿಂಗಡಣೆ ಯಾಗಲಿದೆ. ‘ವಾರ್ಡ್‌ಗಳ ಪುನರ್‌ ವಿಂಗಡಣೆ ಎಂಬುದು ಬಹುದೊಡ್ಡ ಕೆಲಸ. ವಾರ್ಡ್‌ಗಳನ್ನು ಪುನರ್‌ ವಿಂಗಡಣೆ ಮಾಡಿ ಗಡಿ ಗುರುತಿಸಿದ ನಂತರ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕಾಗುತ್ತದೆ. ಎಷ್ಟೇ ತ್ವರಿತವಾಗಿ ಮಾಡಿದರೂ ಇದಕ್ಕೆ ಕನಿಷ್ಠ ಎರಡರಿಂದ ಮೂರು ತಿಂಗಳ ಅವಧಿ ಬೇಕಾಗುತ್ತದೆ ಬೇಕಾಗುತ್ತದೆ’ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ಯೊಬ್ಬರು ಹೇಳಿದರು.

‘ಕರ್ನಾಟಕ ಮುನ್ಸಿಪಲ್‌ ಕಾಯ್ದೆ–1964ರ ಕಲಂ 11ರ ಪ್ರಕಾರ ಮೂರು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವ ಪುರಸಭೆಗಳಿಗೆ ಸದಸ್ಯರ ಸಂಖ್ಯೆಯನ್ನು 35ಕ್ಕೆ ನಿಗದಿ ಪಡಿಸಲಾಗಿದೆ. ವಿಜಾಪುರ ನಗರಸಭೆ ಚುನಾವಣೆಗೂ ಮುನ್ನವೇ ಜನಗಣತಿಯ ವರದಿ ಬಂದಿದ್ದರೆ ವಾರ್ಡ್‌ಗಳ ಸಂಖ್ಯೆ ಆಗಲೇ ಹೆಚ್ಚು ತ್ತಿತ್ತು’ ಎನ್ನುತ್ತಾರೆ ಹೆಚ್ಚುವರಿ ಜಿಲ್ಲಾಧಿ ಕಾರಿ ಗಂಗೂಬಾಯಿ ಮಾನಕರ.

‘ಮಹಾನಗರ ಪಾಲಿಕೆಗಳ ಕಾಯ್ದೆ– 1976ರ ಪ್ರಕಾರ ಮಹಾನಗರ ಪಾಲಿಕೆಗಳ ಸದಸ್ಯರ ಸಂಖ್ಯೆ 30ಕ್ಕಿಂತ ಹೆಚ್ಚು ಹಾಗೂ 200ಕ್ಕಿಂತ ಕಡಿಮೆ ಇರಬೇಕು. ಸದ್ಯ ನಮ್ಮಲ್ಲಿ 35 ಜನ ಸದಸ್ಯರು ಇದ್ದಾರೆ’ ಎಂಬುದು ಆಯುಕ್ತ ಜಿ.ರಾಮದಾಸ ಅವರ ವಿವರಣೆ. 

ಸಿಬ್ಬಂದಿ ಸಂಖ್ಯೆ ಹೆಚ್ಚಳ:ಈಗ ಆಯುಕ್ತರು, ಒಬ್ಬ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರರು (ಎಇಇ), ಮೂವರು ಕಿರಿಯ ಎಂಜಿನಿಯ ರರು(ಜೆಇ), ಒಬ್ಬ ಸಹಾಯಕ ಎಂಜಿನಿ ಯರರು (ಎಇ), ಒಬ್ಬ ಪರಿಸರ ಎಂಜಿನಿಯರ್‌ ಇದ್ದಾರೆ. ಮಹಾನಗರ ಪಾಲಿಕೆ ಪೂರ್ಣ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂದರೆ ಸಿಬ್ಬಂದಿಗಳ ಸಂಖ್ಯೆ ಹೆಚ್ಚಲಿದೆ. ಮುಖ್ಯವಾಗಿ ಎಂಜಿನಿಯರಿಂಗ್‌ ವಿಭಾಗ ಬಲಗೊಳ್ಳಲಿದೆ.

ಉಪ ಆಯುಕ್ತರು, ಕೌನ್ಸಿಲ್‌ ಕಾರ್ಯದರ್ಶಿ, ಕಾರ್ಯ ನಿರ್ವಾಹಕ ಎಂಜಿನಿಯರ್‌ ಹುದ್ದೆ ಸೃಷ್ಟಿಯಾಗಲಿವೆ. ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರರ ಸಂಖ್ಯೆ ನಾಲ್ಕಕ್ಕೆ ಏರಲಿದ್ದು, ಇದರಿಂದ ಕಾಮ ಗಾರಿಗಳ ನಿರ್ವಹಣೆಯ ಮೇಲೆ ನಿಗಾ ವಹಿಸಲು ಸಾಧ್ಯವಾಗಲಿದೆ ಎಂಬುದು  ಅಧಿಕಾರಿಗಳ ಮಾಹಿತಿ.

ಸಿಬ್ಬಂದಿ ಹೆಚ್ಚಳಕ್ಕೆ ಪ್ರಸ್ತಾವ
ಅರ್ಹತೆಯ ಆಧಾರದ ಮೇಲೆ ಮಹಾನಗರ ಪಾಲಿಕೆ ಆಯುಕ್ತ ಹುದ್ದೆ ವಹಿಸಿಕೊಂಡಿದ್ದೇನೆ. ಮಹಾನಗರ ಪಾಲಿಕೆಗೆ ಅಗತ್ಯವಿರುವ ಅಧಿಕಾರಿಗಳು–ಸಿಬ್ಬಂದಿ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕಿದೆ.
–ಜಿ.ರಾಮದಾಸ, ಮಹಾನಗರ ಪಾಲಿಕೆಯ ಆಯುಕ್ತ.

ವಾರ್ಡ್‌ಗಳ ವಿಂಗಡಣೆ
ವಿಜಾಪುರ ಮಹಾನಗರ ಪಾಲಿಕೆಯಾಗಿ ರುವುದರಿಂದ ನಗರದ ವಾರ್ಡ್‌ಗಳ ಸಂಖ್ಯೆ 50ರಿಂದ 55ಕ್ಕೆ ಹೆಚ್ಚಲಿವೆ. ವಾರ್ಡ್‌ಗಳ ಪುನರ್‌ ವಿಂಗಡಣೆ ಕುರಿತು ಸರ್ಕಾರದ ಇನ್ನೂ ಮಾರ್ಗಸೂಚಿ ನೀಡಿಲ್ಲ. ಸರ್ಕಾರದ ಆದೇಶದ ಅನುಸಾರ ನಿಗದಿತ ಅವಧಿಯಲ್ಲಿ ಈ ಕೆಲಸ ನಡೆಯಲಿದೆ.
–ಗಂಗೂಬಾಯಿ ಮಾನಕರ, ಹೆಚ್ಚುವರಿ ಜಿಲ್ಲಾಧಿಕಾರಿ

ವಿಜಾಪುರ ನಗರ
ಒಟ್ಟು ಜನಸಂಖ್ಯೆ: 3,27,427
ಗಂಡು: 1,65,177
ಹೆಣ್ಣು: 1,62,250
ಇತರೆ: 01
ಸಾಕ್ಷರರು:     2,39,631
ಗಂಡು: 1,28,615
ಹೆಣ್ಣು: 1,11,016
ವಿಸ್ತೀರ್ಣ: 93.5 ಚದುರ ಕಿ.ಮೀ.
ಆಸ್ತಿಗಳ ಸಂಖ್ಯೆ: 96,317
ವಾರ್ಡ್‌ಗಳ ಸಂಖ್ಯೆ: 35.
ರಸ್ತೆಗಳ ಉದ್ದ 690 ಕಿ.ಮೀ.

ಹಾಲಿ ಸದಸ್ಯರ ವಿವರ
ಬಿಜೆಪಿ:         13

ಕಾಂಗ್ರೆಸ್‌:     10
ಜೆಡಿಎಸ್‌:      08
ಎನ್‌ಸಿಪಿ:      01
ಕೆಜೆಪಿ:         01
ಪಕ್ಷೇತರರು:   02
ಒಟ್ಟು ಸದಸ್ಯರು:35

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT