ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಹೋಮ ಮೌಢ್ಯದ ಪರಮಾವಧಿ

Last Updated 7 ಸೆಪ್ಟೆಂಬರ್ 2011, 9:55 IST
ಅಕ್ಷರ ಗಾತ್ರ

ಚಾಮರಾಜನಗರ: `ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯಡಿ ನಡೆಯುತ್ತಿರುವ ಮಹಾಹೋಮ ಮೌಢ್ಯದ ಪರಮಾವಧಿಯಾಗಿದೆ~ ಎಂದು ಶಾಸಕ ಎಚ್.ಎಸ್. ಮಹದೇವಪ್ರಸಾದ್ ಟೀಕಿಸಿದರು.

`ಮಹಾಹೋಮಕ್ಕೆ 15ರಿಂದ 20 ಲಕ್ಷ ರೂ ಖರ್ಚಾಗುತ್ತಿದೆ. ಇದಕ್ಕೆ ಹಣ ನೀಡುತ್ತಿರುವವರು ಯಾರೆಂಬುದು ಗೊತ್ತಿಲ್ಲ. ಯಾವುದೇ, ಸಂಘ-ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಇದಕ್ಕೆ ಹಣ ನೀಡುತ್ತಿಲ್ಲ. ಆರ್ಥಿಕ ನೆರವು ನೀಡುತ್ತಿರುವವರನ್ನು ಅಷ್ಟಮಂಗಲ ಪ್ರಶ್ನೆ ಮೂಲಕವೇ ಕಂಡು ಹಿಡಿಯಬೇಕಿದೆ~ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ದೇವಸ್ಥಾನದಲ್ಲಿ ಮಹಾಹೋಮ ನಡೆಸುವ ಮೂಲಕ ಜಿಲ್ಲೆಯ ಜನರ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ರಾಜ್ಯದಲ್ಲಿ ಮೂರು ವರ್ಷದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ರಾಜ್ಯ ಸರ್ಕಾರ ಗಡಿ ಜಿಲ್ಲೆಯ ಅಭಿವೃದ್ಧಿಗೆ ಮುಂದಾಗಿಲ್ಲ. ಈಗ ಹೋಮಹವನದ ಹೆಸರಿನಡಿ ಅಭಿವೃದ್ಧಿ ಮಾಡುತ್ತೇವೆಂದು ಬಿಂಬಿಸಲಾಗುತ್ತಿದೆ. ಇದಕ್ಕಿಂತ ವಿಪರ್ಯಾಸ ಮತ್ತೊಂದಿಲ್ಲ. ಬಿಜೆಪಿ ಮುಖಂಡರೇ ಮಹಾಹೋಮ ಮಾಡಿಸುತ್ತಿರುವ ಬಗ್ಗೆ ಶಂಕೆಯಿದೆ ಎಂದರು.

ಬರ ಪರಿಹಾರ ಘೋಷಿಸಿ: `ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಬೆಳೆ ನಷ್ಟದಿಂದ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಪರಿಹಾರ ಕಾರ್ಯಕೈಗೆತ್ತಿಕೊಳ್ಳಬೇಕು~ ಎಂದು ಒತ್ತಾಯಿಸಿದರು.

ಕಳೆದ ವರ್ಷ ಅರಿಶಿಣಕ್ಕೆ ಉತ್ತಮ ಬೆಲೆ ಇತ್ತು. ಹೀಗಾಗಿ, ಈ ಬಾರಿ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ಭಾಗದ ಸುಮಾರು 30 ಸಾವಿರ ಎಕರೆ ಪ್ರದೇಶದಲ್ಲಿ ರೈತರು ಅರಿಶಿಣ ಬೆಳೆದಿದ್ದಾರೆ. ಈಗ ಬೆಲೆ ಏರಿಳಿತದಿಂದ ರೈತರು ದಿಕ್ಕೆಟ್ಟಿದ್ದಾರೆ. ಬೆಲೆ ಕುಸಿದಿರುವ ಪರಿಣಾಮ ತೊಂದರೆಗೆ ಸಿಲುಕಿದ್ದಾರೆ. ಕೃಷಿಗೆ ಖರ್ಚು ಮಾಡಿರುವ ವೆಚ್ಚವೂ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕನಿಷ್ಠ ಕ್ವಿಂಟಲ್ ಅರಿಶಿಣಕ್ಕೆ 8 ಸಾವಿರ ರೂ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ಸಮರ್ಪಕ ಬೆಲೆ ಸಿಗದಿದ್ದರೆ ರೈತರು ಮತ್ತಷ್ಟು ತೊಂದರೆಗೆ ಸಿಲುಕಲಿದ್ದಾರೆ. ರಾಜ್ಯ ಸರ್ಕಾರದ ಆಯವ್ಯಯದಲ್ಲಿ ಘೋಷಣೆ ಮಾಡಿರುವಂತೆ ಅರಿಶಿಣ ಮಾರುಕಟ್ಟೆ ಮತ್ತು ಸಂಸ್ಕರಣಾ ಘಟಕ ಸ್ಥಾಪನೆಗೆ ಅನುದಾನ ಬಿಡುಗಡೆ ಮಾಡಬೇಕು. ಬೆಲೆ ನಿಗದಿಯಾಗದ ಪರಿಣಾಮ ಕಬ್ಬು ಬೆಳೆಗಾರರು  ಸಹ ಕಂಗಾಲಾಗಿದ್ದಾರೆ. ಕೂಡಲೇ, ಜಿಲ್ಲಾ ವ್ಯಾಪ್ತಿ ಬೆಳೆದಿರುವ ಕಬ್ಬಿಗೆ ಸಮರ್ಪಕ ಬೆಲೆ   ನಿಗದಿಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿ.ಪಿ. ಪುಟ್ಟಬುದ್ಧಿ, ಕೋಡಿಮೋಳೆ ರಾಜಶೇಖರ್, ರಾಜೀವ್‌ಕುಮಾರ್ ಹಾಜರಿದ್ದರು.

ಇಂದು ಮಹಾಹೋಮ ಮುಕ್ತಾಯ
ಚಾಮರಾಜನಗರ:
ಅಷ್ಟಮಂಗಲ ಪ್ರಶ್ನೆಯಡಿ ನಗರದ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯುತ್ತಿರುವ ಮಹಾಹೋಮ ಬುಧವಾರ ಮುಕ್ತಾಯವಾಗಲಿದೆ.

ಕಳೆದ ಮೂರು ದಿನದಿಂದ ಮಹಾಹೋಮ ನಡೆಯುತ್ತಿದೆ. ಮಂಗಳವಾರ ಚಂಡಿಕಹೋಮ ನಡೆಯಿತು. ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ಆರ್. ಕೃಷ್ಣಮೂರ್ತಿ, ಚೂಡಾ ಅಧ್ಯಕ್ಷ ಆರ್. ಸುಂದರ್ ಇತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT