ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಕೈಗೆ ಪ್ರಭುತ್ವ: ಪಾಪು ಪ್ರತಿಪಾದನೆ

Last Updated 7 ಜನವರಿ 2012, 6:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ಪ್ರಪಂಚವನ್ನು ಮಹಿಳೆಯರೇ ಆಳುವಂತಾದರೆ ಜಗತ್ತಿನ ಜನ ಸುಖ, ಶಾಂತಿ ಹಾಗೂ ನೆಮ್ಮದಿಯಿಂದ ಬದುಕಲು ಸಾಧ್ಯ~ ಎಂದು ಹಿರಿಯ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರದಿಂದ ಏರ್ಪಡಿಸಲಾಗಿರುವ ಮೂರು ದಿನಗಳ 12ನೇ ಅಖಿಲ ಭಾರತ ಕವಯಿತ್ರಿಯರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ವಿವಿಧ ಲೇಖಕಿಯರ 20ಕ್ಕೂ ಅಧಿಕ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಮೊದಲು ಬ್ರಾಹ್ಮಣರು ಜಗತ್ತನ್ನು ಆಳಿದರು. ನಂತರ ಆ ಸ್ಥಾನ ತುಂಬಿದ್ದು ಕ್ಷತ್ರಿಯರು. ಈಗ ನಡೆದಿರುವುದು ವೈಶ್ಯರ ಆಳ್ವಿಕೆ ಕಾಲ. ಮುಂದಿನ ಸರದಿ ಶೋಷಿತರಾಗಿದ್ದು, ಶೋಷಿತರಲ್ಲಿ ಮಹಿಳೆಯರೂ ಸೇರಿದ್ದರಿಂದ ಅವರೇ ಪ್ರಪಂಚವನ್ನು ಆಳಲಿದ್ದಾರೆ~ ಎಂದು ಅವರು ವಿಶ್ಲೇಷಿಸಿದರು. `ಮಹಿಳೆ ಹುಟ್ಟು ಕವಯಿತ್ರಿ ಆಗಿದ್ದು, ಎಲ್ಲ ಕಲೆಗಳು ಉಳಿದಿರುವುದು ಅವಳಿಂದಲೇ~ ಎಂದು ಅವರು ಹೆಮ್ಮೆಯಿಂದ ಹೇಳಿದರು.

`ಮಹಿಳೆಯರು ಸಮಾವೇಶಗೊಂಡ ಸ್ಥಳ ವರ್ಣರಂಜಿತವಾಗಿರುತ್ತದೆ~ ಎಂದು ಚಟಾಕಿ ಹಾರಿಸಿದ ಪಾಪು, `ಬಣ್ಣ ಬಣ್ಣದ ಸೀರೆಗಳನ್ನು ಉಟ್ಟುಕೊಂಡು ಬಂದಿರುವ ನೀವು ಅಂದವಾಗಿ ಕಾಣುತ್ತೀರಿ~ ಎನ್ನುತ್ತಿದ್ದಂತೆಯೇ ಸಭೆಯಲ್ಲಿ ದೊಡ್ಡ ನಗೆಯ ಅಲೆ ಎದ್ದಿತು. `ಮಹಿಳೆಯರ ನೈಜ ಪ್ರತಿಭೆಯನ್ನು ಗುರುತಿಸುವಲ್ಲಿ ನಮ್ಮ ಸಮಾಜ ಎಡವಿದ್ದು, ಅವರಿಗೆ ಸಿಗಬೇಕಾದ ಸೂಕ್ತ ಗೌರವ ಇನ್ನೂ ದೊರೆತಿಲ್ಲ~ ಎಂದು ಅವರು ವಿಷಾದಿಸಿದರು.

`ಪುರುಷರ ಯಶಸ್ಸಿನ ಹಿಂದೆ ಮಹಿಳೆಯರ ಪಾತ್ರ ಇದ್ದೇ ಇರುತ್ತದೆ~ ಎಂದ ಅವರು, `ಯಜಮಾನಿ ಒಂದೆರಡು ದಿನ ಮನೆಯಲ್ಲಿ ಇಲ್ಲದಿದ್ದರೆ ಇಡೀ ಮನೆ ಅಸ್ತವ್ಯಸ್ತವಾಗುತ್ತದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಅವಳ ಕೌಶಲಕ್ಕೆ ಇದೇ ಸಾಕ್ಷಿಯಾಗಿದೆ~ ಎಂದು ಅವರು ತಿಳಿಸಿದರು.

`ಮಹಿಳೆಯರ ಬುದ್ಧಿ ಮೊಣಕಾಲ ಕೆಳಗೆ ಎಂದು ಹೇಳಲಾಗುತ್ತದೆ. ಪುರುಷರ ಬುದ್ಧಿಯೂ ಅಷ್ಟೇ ಇರುವುದರಿಂದ ಇಬ್ಬರ ಸಾಮರ್ಥ್ಯವನ್ನು ಸರಿದೂಗಿಸುವ ಸಲುವಾಗಿ ದೇವರು ಆ ರೀತಿ ಮಾಡಿದ್ದಾನೆ~ ಎಂದು ಪಾಪು ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಜೋರಾದ ಚಪ್ಪಾಳೆ ಸದ್ದು ಮಾರ್ದನಿಸಿತು. `ಭಾರತೀಯ ಮಹಿಳಾ ಸಾಧಕರಿಗೆ ನೊಬೆಲ್ ಪ್ರಶಸ್ತಿ ದೊರೆಯಬೇಕು~ ಎಂದೂ ಅವರು ಹಾರೈಸಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, `ಕವಿ ಹೃದಯ ಹೊಂದಿದವರು ಸಮಾಜದ ಒಳಿತಿಗಾಗಿ ಸ್ಪಂದಿಸುತ್ತಾರೆ. ಆದರೆ, ರಾಜಕೀಯ ರಂಗದ ಬಹುತೇಕರಿಗೆ ಅಂತಹ ಮಿಡಿಯುವ ಹೃದಯ ಇರುವುದಿಲ್ಲ~ ಎಂದು ವಿಷಾದಿಸಿದರು.

`ವಚನಗಳೂ ಸೇರಿದಂತೆ ಕವಯಿತ್ರಿಯರ ಅನುಭವದ ಮೂಸೆಯಿಂದ ಹೊರಹೊಮ್ಮಿದ ಕಾವ್ಯಗಳು ಸಮಾಜ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ~ ಎಂದ ಅವರು, `ಮಹಿಳೆಯನ್ನು ಹೀಗಳೆಯುವ, ಶೋಷಿಸುವ ಸಂಪ್ರದಾಯ ಎಂದಿಗೂ ಸಲ್ಲದು. ನಮಗೆಲ್ಲ ಜನ್ಮ ನೀಡಿದ್ದು ಅದೇ ಮಹಿಳೆ ಎಂಬುದನ್ನು ಮರೆಯಬಾರದು~ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಎಐಪಿಸಿ ಸಂಸ್ಥಾಪಕ ಡಾ. ಲಾರಿ ಅಜಾದ್, `ಕವಯಿತ್ರಿಯರಿಗೆ ವೇದಿಕೆ ಕಲ್ಪಿಸುವುದಷ್ಟೇ ಈ ಸಮ್ಮೇಳನದ ಉದ್ದೇಶವಲ್ಲ. ಮಹಿಳಾ ಸಮುದಾಯದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ~ ಎಂದು ತಿಳಿಸಿದರು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಐಪಿಸಿ ಪ್ರಧಾನ ಕಾರ್ಯದರ್ಶಿ ಡಾ. ಶೋಭನಾ ಜೈನ್, ಡಾ. ಸರೋಜಿನಿ ಚಲವಾರ, ಶಿಲ್ಪಾ ಶೆಟ್ಟರ, ಡಾ. ವಿದ್ಯಾವತಿ ರಜಪೂತ್, ಸಂಧ್ಯಾ ದೀಕ್ಷಿತ್, ವಿಶ್ವೇಶ್ವರಿ ಹಿರೇಮಠ ಮತ್ತಿತರರು ವೇದಿಕೆ ಮೇಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT