ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ಮೇಲೆ ದೌರ್ಜನ್ಯ ಸಲ್ಲದು

Last Updated 9 ಆಗಸ್ಟ್ 2011, 9:25 IST
ಅಕ್ಷರ ಗಾತ್ರ

ದಾವಣಗೆರೆ: ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಪ್ರಕರಣ, ವರದಕ್ಷಿಣೆ ಹಿಂಸೆ ತಡೆ, ಒಟ್ಟಾರೆಯಾಗಿ ಮಹಿಳೆಯರ ಹಿತರಕ್ಷಣೆ ಸಂಬಂಧಿಸಿದಂತೆ ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಚರ್ಚೆ ನಡೆಯಿತು.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಅವರು ನಗರದಲ್ಲಿ ಜಿಲ್ಲಾ ಹಾಗೂ ತಾಲ್ಲೂಕುಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ಚರ್ಚೆ ನಡೆಸಿದರು.

ಜಿಲ್ಲೆಯಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ ದಾಖಲಾದ ಪ್ರಕರಣಗಳು, ಪರಿಹಾರ ಕ್ರಮಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ವಿ. ವಾಸುದೇವ್ ಮಾಹಿತಿ ನೀಡಿದರು.

2010-11ನೇ ಸಾಲಿನಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿ 108 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 88ನ್ನು ನ್ಯಾಯಾಲಯಕ್ಕೆ ವರದಿ ಮಾಡಲಾಗಿದೆ. 3 ಪ್ರಕರಣಗಳಿಗೆ ಮಧ್ಯಂತರ ಪರಿಹಾರ ಸಿಕ್ಕಿದೆ. 38ನ್ನು ಆಪ್ತ ಸಮಾಲೋಚನೆ ಮೂಲಕ ಬಗೆಹರಿಸಲಾಗಿದೆ. ಕಾನೂನು ಮೂಲಕ 12 ಪ್ರಕರಣಗಳನ್ನು ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಎಷ್ಟೋ ವೇಳೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಯಾಕೆಂದರೆ ದೂರು ನೀಡಲು ಹಿಂಜರಿಯುವ ಪರಿಸ್ಥಿತಿಯಿದೆ. ಅಲ್ಲದೇ ಎಷ್ಟೋ ವೇಳೆ ದೂರು ನೀಡಲು ಹೋದಾಗ ಪ್ರಕರಣಗಳು ದಾಖಲಾಗುವುದೇ ಇಲ್ಲ. ಸಾಕಷ್ಟು ಬೆದರಿಕೆ ಒಡ್ಡಲಾಗುತ್ತದೆ ಎಂದು ಸರ್ಕಾರೇತರ ಸಂಘಟನೆಯ ಪ್ರತಿನಿಧಿಗಳು ದೂರಿದರು.

ಡಿವೈಎಸ್‌ಪಿ ಚಂದ್ರಪ್ಪ ಮಾತನಾಡಿ, ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ರಕ್ಷಣೆ ಒದಗಿಸಲು ತಮ್ಮ ಇಲಾಖೆ ಬದ್ಧವಾಗಿದೆ. ಈ ಬಗ್ಗೆ ರಕ್ಷಣೆ ಒದಗಿಸುವಂತೆ ಎಲ್ಲ ಠಾಣೆಗಳಿಗೆ ಸೂಚಿಸಲಾಗುವುದು ಎಂದು ಹೇಳಿದರು.

ಅಧಿಕಾರಿಗಳು ಮತ್ತು ಸರ್ಕಾರೇತರ ಸಂಘಟನೆಗಳ ಕಾರ್ಯಕರ್ತರು ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಕೆಲಸ ಮಾಡುತ್ತಿರುವ ಸ್ಥಳಗಳಿಗೆ ಭೇಟಿ ನೀಡಬೇಕು. ಅವರ ಸಮೀಕ್ಷೆ ನಡೆಸಿ, ಕಷ್ಟ ಸುಖ ವಿಚಾರಿಸಬೇಕು. ಆಯಾ ಕಚೇರಿಯಲ್ಲಿ ದೂರು ನಿವಾರಣಾ ಸಮಿತಿ ರಚಿಸಬೇಕು. ಕಿರುಕುಳ ತಡೆಗೆ ಸಂಬಂಧಿಸಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಸಲಹೆ ಮಾಡಿದರು.

ಏನೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಹೇಳಿ. ಅಥವಾ ನೇರವಾಗಿ ಆಯೋಗವನ್ನು ಸಂಪರ್ಕಿಸಿ ಹೇಳಬಹುದು. ತಮ್ಮ ಅಹವಾಲುಗಳಿಗೆ ಸರ್ಕಾರದಮಟ್ಟದಲ್ಲಿ ಏನಾದರೂ ಬದಲಾವಣೆ ಆವಶ್ಯವಿದ್ದಲ್ಲಿ ತರಲು ಪ್ರಯತ್ನಿಸಲಾಗುವುದು ಎಂದು ಮಂಜುಳಾ ಭರವಸೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುತ್ತಿ ಜಂಬುನಾಥ, ಸಾಂತ್ವನ ಕೇಂದ್ರದ ಕಾರ್ಯದರ್ಶಿ ಲೀಲಾ, ಶಿಕ್ಷಣ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT