ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂಸ ವ್ಯಾಪಾರಕ್ಕೆ ಚಳಿ ಮಾಸ

Last Updated 3 ಡಿಸೆಂಬರ್ 2012, 19:30 IST
ಅಕ್ಷರ ಗಾತ್ರ

ನಗರದಲ್ಲಿ ಕಳೆದ ತಿಂಗಳು ಹಕ್ಕಿಜ್ವರದ ಭೀತಿಯಿಂದ ಕೋಳಿಮಾಂಸವನ್ನು ತಿನ್ನಲು ಅಂಜಿದ ಮಾಂಸಾಹಾರಿಗಳು ಮೀನಿನ ಮೊರೆಹೋದರು. ಒಂದೇ ಅಂಗಡಿಯಲ್ಲಿ ಐನೂರರಿಂದ ಆರುನೂರು ಕೆ.ಜಿ. ವ್ಯಾಪಾರವಾಗುತ್ತಿದ್ದ ಮೀನಿನ ವ್ಯಾಪಾರ ದಿಢೀರನೇ 1400 ಕೆ.ಜಿ.ಗೆ ಹೆಚ್ಚಳವಾಯಿತು. ಆದರೆ ಈ ತಿಂಗಳಲ್ಲಿ 400 ಕೆ.ಜಿ.ಗಿಂತ ಕಡಿಮೆ ಮೀನು ಬಿಕರಿಯಾಗುತ್ತಿದೆ.

ಶ್ರಾವಣ ಮುಗಿದ ನಂತರ ಹಬ್ಬಗಳ ಸಾಲೇ ಎದುರಾಯಿತು. ಎಲ್ಲ ಹಬ್ಬಗಳು ಮುಗಿದವೆಂದು ನಿಟ್ಟುಸಿರು ಬಿಡುವಾಗಲೇ ಕಾರ್ತಿಕ ಮಾಸ ಬಂದಿದೆ. ನವೆಂಬರ್ 14ರಿಂದ ಆರಂಭವಾಗಿರುವ ಕಾರ್ತಿಕ ಮಾಸ ಇದೇ ತಿಂಗಳ 13ರವರೆಗೆ ಇರುತ್ತದೆ. ಬಹುತೇಕ ಹಿಂದೂಗಳು ಈ ಮಾಸದಲ್ಲಿ ಮಾಂಸಾಹಾರ ಸೇವನೆಯನ್ನು ತ್ಯಜಿಸುತ್ತಾರೆ. ಇದರಿಂದಾಗಿ ಬಹುತೇಕ ಮೀನು, ಕೋಳಿ ಹಾಗೂ ಮಾಂಸದಂಗಡಿಗಳಲ್ಲಿ ಆರ್ಥಿಕ ಬದಲಾವಣೆಗೆ ಕಾರಣವಾಗಿದೆ.

ಯಶವಂತಪುರ ರೈಲ್ವೆ ನಿಲ್ದಾಣ ರಸ್ತೆಯಲ್ಲಿ ಕೆ.ಎಲ್.ಡಿ. ಮೀನಿನ ಅಂಗಡಿ ನಡೆಸುತ್ತಿರುವ ವಿ.ವಿನೋದ್ ನಾಯರ್ ಶ್ರಾವಣ ಮಾಸದಿಂದ ವ್ಯಾಪಾರ ವಹಿವಾಟಿನಲ್ಲಾದ ಬದಲಾವಣೆ ಕುರಿತು `ಮೆಟ್ರೊ'ದೊಂದಿಗೆ ಮಾತಿಗಿಳಿದರು. `ಪ್ರತಿದಿನ 700 ಕೆ.ಜಿ. ಮೀನು ವ್ಯಾಪಾರವಾಗುತ್ತದೆ.

ಆದರೆ ಶ್ರಾವಣ, ಕಾರ್ತಿಕ ಮಾಸದಲ್ಲಿ ಈ ಪ್ರಮಾಣ 300 ಕೆ.ಜಿ. ಆಗಿದೆ. ತಮಿಳರು, ಮಲಯಾಳಿಗರು, ಕ್ರಿಶ್ಚಿಯನ್ನರು ಹಾಗೂ ಹಿಂದೂಗಳು ನಮ್ಮ ಹೆಚ್ಚಿನ ಪ್ರಮಾಣದ ಗ್ರಾಹಕರು.

ಶಬರಿಮಲೆ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ಹೋಗುವವರು ಮಾಲೆ ಧರಿಸುವ ಸಂದರ್ಭ ಬಂದಿರುವುದರಿಂದ ಹಾಗೂ ಕ್ರಿಶ್ಚಿಯನ್ನರು ಕ್ರಿಸ್‌ಮಸ್‌ವರೆಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿರುವುದರಿಂದ ಈ ಮಾಸದಲ್ಲಿ ಮಾಂಸಾಹಾರವನ್ನು ವರ್ಜಿಸುವವರ ಸಂಖ್ಯೆ ಏರುತ್ತದೆ. ಆದ್ದರಿಂದ ವ್ಯಾಪಾರವೂ ಕಡಿಮೆಯಾಗಿದೆ. ಇದರಿಂದ ಆದಾಯದಲ್ಲಿ ಶೇ 60ರಷ್ಟು ಕುಸಿತವಾಗಿದೆ' ಎಂದು ಬೇಸರ ವ್ಯಕ್ತಪಡಿಸಿದರು.

`ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಅರ್ಧದಷ್ಟು ವಹಿವಾಟು ನಿಂತುಹೋಯಿತು. ನಂತರ ಹಕ್ಕಿಜ್ವರದ ಭಯದಿಂದ ಕಳೆದ ತಿಂಗಳು ಮೀನಿನ ವ್ಯಾಪಾರ ಹೆಚ್ಚಾಗಿತ್ತು. ಆಗ ದಿನಕ್ಕೆ 700 ಕೆ.ಜಿ. ಹೆಚ್ಚು ವ್ಯಾಪಾರವಾಗತೊಡಗಿತು.

ಇದೀಗ ಮಾಲೆ ಧರಿಸುವವರ ಸಂಖ್ಯೆ ಹೆಚ್ಚುತ್ತಿರುವುದರಿಂದಲೂ ವ್ಯಾಪಾರ ಕಡಿಮೆಯಾಗುತ್ತಿದೆ. ಮಂಗಳೂರು, ಉಡುಪಿ, ಕಾರವಾರ, ಕೇರಳದ ಕಡಲೂರು, ನಾಗಪಟ್ಟಣಂ, ಆಂಧ್ರದ ವಿಶಾಖಪಟ್ಟಣ, ಪಾಂಡಿಚೇರಿ, ಒಡಿಶಾದಿಂದ ಮೀನು ತರಿಸಿಕೊಳ್ಳುತ್ತೇವೆ. ಬಂಗುಡೆ, ಪಾಂಪ್ಲೆಟ್, ಕಾಣೆ, ವೈಟ್ ಅಂಜಲ್, ಬ್ಲಾಕ್ ಅಂಜಲ್, ನತ್ಲಿ, ಸಿಗಡಿ ಹಾಗೂ ಏಡಿ ನಮ್ಮಲ್ಲಿ ವ್ಯಾಪಾರ ಮಾಡುತ್ತೇವೆ. ಜೊತೆಗೆ ಕೆರೆ ಮೀನು ಸಿಗುತ್ತದೆ.

ಕೆಲ ಸಂದರ್ಭಗಳಲ್ಲಿ ಗುಜರಾತ್‌ನಿಂದ ವಿಮಾನದಲ್ಲಿ ಮೀನು ತರಿಸಿಕೊಳ್ಳುತ್ತೇವೆ. ಆದರೆ ಅದು ದುಬಾರಿಯಾಗುತ್ತದೆ. ವರ್ಷದ ಬಹುತೇಕ ತಿಂಗಳು ಮಂಗಳೂರಿನಿಂದಲೇ ತರಿಸಿಕೊಳ್ಳುತ್ತೇವೆ' ಎಂದು ಮಾಹಿತಿ ನೀಡುತ್ತಾರೆ ವಿನೋದ್.

`ಶ್ರಾವಣ ಮಾಸಕ್ಕೂ ಮುಂಚೆ ದಿನಕ್ಕೆ 70ರಿಂದ 100 ಕೆ.ಜಿ. ಕುರಿ ಮಾಂಸ, 80ರಿಂದ 100 ಕೆ.ಜಿ. ಕೋಳಿ ಮಾಂಸ ಖರ್ಚಾಗುತ್ತಿತ್ತು. ಆದರೆ ಈಗ ಅದರ ಅರ್ಧದಷ್ಟು ಮಾತ್ರ ವ್ಯಾಪಾರವಾಗುತ್ತಿದೆ. ನಮ್ಮಲ್ಲಿ ಬಹುತೇಕ ಗ್ರಾಹಕರು ಹಿಂದೂಗಳೇ. ಪ್ರತಿವರ್ಷ ಶ್ರಾವಣ ಹಾಗೂ ಕಾರ್ತಿಕ ಮಾಸದಲ್ಲಿ ವಹಿವಾಟು ಕಡಿಮೆಯಾಗುತ್ತದೆ.

ಅಲ್ಲದೆ ಚಳಿಗಾಲದಲ್ಲಿ ಸಂತೆಯಲ್ಲಿ 20 ಕೆ.ಜಿ. ತೂಗುವ ಕುರಿ, ನಾವು ತಂದು ಮಾರಾಟ ಮಾಡುವ ವೇಳೆಗೆ 16 ಕೆ.ಜಿ. ಆಗಿರುತ್ತದೆ. ಇದರಿಂದ ಲಾಭಕ್ಕಿಂತ ನಷ್ಟವೂ ಜಾಸ್ತಿಯಾಗುತ್ತದೆ. ವ್ಯಾಪಾರ ಕಡಿಮೆಯಾಗುವುದರ ನಡುವೆ ಇವೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕು' ಎಂದು ತಮ್ಮ ಕಷ್ಟ ಹೇಳಿಕೊಳ್ಳುತ್ತಾರೆ ಪೈಪ್‌ಲೈನ್ ರಸ್ತೆಯ ರಾಯಲ್ ಮಟನ್ ಮತ್ತು ಚಿಕನ್ ಸೆಂಟರ್‌ನ ಮೌಲಾ ಖುರೇಷಿ.

`ಕ್ಯಾತ್ಸಂದ್ರದ ಸಮೀಪದ ಅಕ್ಕಿ ರಾಮಪುರ, ವಿಜಾಪುರ, ಆಂಧ್ರದ ಆನಂದಪುರದ ಸಂತೆಗಳಿಂದ ಕುರಿಗಳನ್ನು ತರುತ್ತೇವೆ. ಒಮ್ಮೆ 30ರಿಂದ 40 ಕುರಿಗಳನ್ನು ತರುತ್ತೇವೆ. ಆದರೆ ಈ ಹಬ್ಬಗಳ ಸಂದರ್ಭಗಳಲ್ಲಿ ದಿಢೀರನೇ ವಹಿವಾಟು ಕಡಿಮೆಯಾಗುತ್ತದೆ. ದಿನಕ್ಕೆ 1500ರಿಂದ 2000 ರೂಪಾಯಿ ನಷ್ಟವಾಗುತ್ತದೆ.

ಕುರಿಗಳ ಬೆಲೆ ಮಾರುಕಟ್ಟೆಯಲ್ಲಿ ಹೆಚ್ಚಿರುವುದರಿಂದಲೂ ಮಾಂಸದ ಬೆಲೆ ಹೆಚ್ಚಾಗಿ ಗ್ರಾಹಕರು ಕುರಿಮಾಂಸವನ್ನು ಕೊಂಡುಕೊಳ್ಳುವ ಪ್ರಮಾಣ ಕಡಿಮೆಯಾಗುತ್ತಿದೆ' ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

`ಎರಡು ತಿಂಗಳ ಹಿಂದಷ್ಟೇ ಎಂಬತ್ತರಿಂದ ನೂರು ಕೆ.ಜಿ. ಕೋಳಿ ವ್ಯಾಪಾರವಾಗುತ್ತಿತ್ತು. ಆದರೆ ಕಾರ್ತಿಕ ಮಾಸ ಇರುವುದರಿಂದ ಕಡಿಮೆಯಾಗಿದೆ. 30ರಿಂದ ಐವತ್ತು ಕೆ.ಜಿ. ಮಾತ್ರ ವ್ಯಾಪಾರವಾಗುತ್ತಿದೆ' ಎಂದು ಹೇಳುತ್ತಾರೆ ಕೋಳಿ ವ್ಯಾಪಾರಿ ಫಿರೋಜ್.

`ಮಗ ಅಯ್ಯಪ್ಪ ಸ್ವಾಮಿ ಮಾಲೆ ಧರಿಸುವುದರಿಂದ ಈ ಮಾಸದಲ್ಲಿ ಮಾಂಸಾಹಾರ ತ್ಯಜಿಸುತ್ತೇವೆ. ಪ್ರತಿದಿನ ದೇವರ ಪೂಜೆ ಮಾಡಬೇಕು. ಆದ್ದರಿಂದ ಕಟ್ಟುನಿಟ್ಟಾಗಿ ಮಾಸಾಚರಣೆ ಮಾಡುತ್ತೇವೆ' ಎಂದು ಮಾಂಸಾಹಾರ ವರ್ಜಿಸಿರುವ ಬಗ್ಗೆ ಹೇಳುತ್ತಾರೆ ಯಶವಂತಪುರದಲ್ಲಿ ವಾಸವಿರುವ ಹಾಸನ ಜಿಲ್ಲೆ ಅರಸಿಕೆರೆ ತಾಲ್ಲೂಕಿನ ಶ್ರೀಧರ್.

ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರೆನ್ನದೆ ಎಲ್ಲಾ ಧರ್ಮದ ಗ್ರಾಹಕರನ್ನು ನೆಚ್ಚಿಕೊಂಡು ವ್ಯಾಪಾರ ನಡೆಸುವ ಯಶವಂತಪುರದ ಮಾಂಸ ವ್ಯಾಪಾರಿಗಳು ಮಾತ್ರ ಶ್ರಾವಣ, ಕಾರ್ತಿಕ ಮಾಸಗಳಲ್ಲಿ ಶೇ 50ರಷ್ಟು ನಷ್ಟ ಅನುಭವಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT