ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಜಿ ಕೇಂದ್ರ ಸಚಿವ ವಸಂತ ಸಾಥೆ ನಿಧನ

Last Updated 23 ಸೆಪ್ಟೆಂಬರ್ 2011, 19:50 IST
ಅಕ್ಷರ ಗಾತ್ರ

ಗುಡಗಾಂವ್ (ಪಿಟಿಐ): ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ವಸಂತ ಸಾಥೆ (86) ಶುಕ್ರವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಾಘಾತದಿಂದ ನಿಧನರಾದರು.

ಗುರುವಾರ ಸಂಜೆ ಸಾಥೆ ಅವರಿಗೆ ಎದೆನೋವು ಕಾಣಿಸಿಕೊಂಡ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈ ದಿನ ರಾತ್ರಿ 7.50ಕ್ಕೆ ಅವರು ಮೃತಪಟ್ಟರು.

ವೃತ್ತಿಯಿಂದ ವಕೀಲರಾಗಿದ್ದ ಸಾಥೆ, ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿಯವರ ಸಂಪುಟದಲ್ಲಿ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದರು. ಅವರು ಹಲವು ಖಾತೆಗಳನ್ನು ನಿರ್ವಹಿಸಿದ್ದರೂ, 1982ರ ಏಷ್ಯನ್ ಕ್ರೀಡಾ ಕೂಟದಲ್ಲಿ ಕಲರ್ ಟಿವಿ ಪರಿಚಯಿಸಿ ಹೆಚ್ಚು ಜನಪ್ರಿಯರಾದರು.

ರಿಚರ್ಡ್ ಅಟೆನ್‌ಬರೊ ಅವರ `ಮಹಾತ್ಮ ಗಾಂಧಿ~ ಚಲನಚಿತ್ರ ಪ್ರದರ್ಶನಕ್ಕೆ ಹಸಿರು ನಿಶಾನೆ ತೋರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

 ಇಂದಿರಾ ಅವರಿಗೆ ಆಪ್ತರಾಗಿದ್ದ ಅವರು, 1977-79ರ ಅವಧಿಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಉಪನಾಯಕರಾಗಿದ್ದರು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು, ಕ್ವಿಟ್ ಇಂಡಿಯಾ ಚಳವಳಿಯಲ್ಲಿ ನಾಗಪುರ ಜಿಲ್ಲಾ ನ್ಯಾಯಾಲಯದಲ್ಲಿ ಬ್ರಿಟಿಷ್ ಧ್ವಜ ತೆಗೆದುಹಾಕಿ, ತ್ರಿವರ್ಣಧ್ವಜ ಹಾರಿಸಿದ್ದರು.

ಮಹಾರಾಷ್ಟ್ರದ ನಾಸಿಕ್‌ನಲ್ಲಿ 1925ರ ಮಾರ್ಚ್ 5ರಂದು ಜನಿಸಿದ ಸಾಥೆ, ತಮ್ಮ ಕೊನೆಗಾಲದಲ್ಲಿ ಗುಡಗಾಂವ್‌ನಲ್ಲಿ ನೆಲೆಸಿದ್ದರು.

 ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕಾನೂನು ಪದವಿಯನ್ನೂ ಪಡೆದಿದ್ದರು.

ಏಳು ಪುಸ್ತಕಗಳನ್ನು ರಚಿಸಿದ್ದ ಅವರು, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ.

ಸಂತಾಪ: ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತಿತರರು ಸಾಥೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ದೇಹ ದಾನ (ನಾಗಪುರ ವರದಿ): ಸಾಥೆಯವರ ಇಚ್ಛೆಯಂತೆ ಅವರ ಮೃತದೇಹವನ್ನು ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ    (ಏಮ್ಸ)ಗೆ ದಾನವಾಗಿ ನೀಡಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT