ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಟಿ: ಮನೆ ಅಲಂಕಾರದ ಮೇಟಿ!

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

`ಮಗುವಿದ್ದಾಗಿನಿಂದಲೂ ನಮಗೆ ಮಣ್ಣಿನೊಂದಿಗೆ ಮುಗ್ಧ ನಂಟಿರುತ್ತದೆ. ಅಂತಹದ್ದೇ ಒಡನಾಟ ಇಂದಿಗೂ ನನ್ನ ಮತ್ತು ಮಣ್ಣಿನ ನಡುವೆ ಇದೆ. ನನ್ನ ಕೈಯಿಂದ ತಯಾರಾಗುವ ಮಣ್ಣಿನ ಕಲಾಕೃತಿಗಳು ನನಗೆ ತೃಪ್ತ ಭಾವವನ್ನು ತರುತ್ತವೆ~ ಎಂದು ಮಾತಿಗಿಳಿದರು ಶಶಿ ಬಾಗ್ಚಿ.

`ಮಣ್ಣಿನ ಕಲಾಕೃತಿಗಳನ್ನು ತಯಾರಿಸುವುದು ಅತಿ ಸುಲಭ ಎನ್ನುವುದು ಜನರ ಅಂದಾಜು. ಆದರೆ ಮಣ್ಣಿನಲ್ಲಿ ನಮಗೆ ಬೇಕಾದ ರೂಪ, ಆಕಾರ, ಭಾವ ನೀಡುವುದು ಅಂದುಕೊಂಡಷ್ಟು ಸುಲಭವಲ್ಲ. ಕಾಲಕ್ಕೆ ತಕ್ಕಂತೆ ವಿನ್ಯಾಸ ಬದಲಾಗುತ್ತಿರುತ್ತದೆ.

ದಿನೇದಿನೇ ಹೊಸತನ್ನು ಹುಡುಕುತ್ತಿರಬೇಕು. ಜನರ ಅಭಿರುಚಿ, ನಿರೀಕ್ಷೆ ಬದಲಾದಂತೆ ನಮ್ಮ ವಿನ್ಯಾಸದಲ್ಲೂ ಮಾರ್ಪಾಟು ಮಾಡಿಕೊಳ್ಳಬೇಕು. ಇದು ನಮಗೆ ಸವಾಲಿನ ಸಂಗತಿ~ ಎಂದು ಸಾಮಗ್ರಿಗಳನ್ನು ತಯಾರಿಸುವ ಪ್ರಕ್ರಿಯೆಯನ್ನು ವಿವರಿಸುತ್ತಾ ಹೋದರು ಶಶಿ.

`ಮಾಟಿ~ ಟೆರಕೋಟಾ ಸಾಮಗ್ರಿಗಳ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿರುವ ಶಶಿ ಓದಿದ್ದು ಮುಂಬೈನಲ್ಲಿ. ಕಳೆದ ಎಂಟು ವರ್ಷಗಳಿಂದ ಈ ಸಂಸ್ಥೆ ಮೂಲಕ ಮಣ್ಣಿನ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಪರಿಸರ ಸ್ನೇಹಿ ವಸ್ತುಗಳನ್ನು ಜನರಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆಯನ್ನು ಹುಟ್ಟುಹಾಕಿದವರು.

`ಜೆ. ಜೆ. ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಅಧ್ಯಯನ ಮಾಡುತ್ತಿದ್ದಾಗ ಅಲ್ಲಿ ಮಣ್ಣಿನ ಕಲಾಕೃತಿಗಳನ್ನು ತಯಾರಿಸುವುದು ಅಧ್ಯಯನದ ಭಾಗವಾಗಿತ್ತು. ಆಗಿನಿಂದ ಮಣ್ಣಿನೊಂದಿಗೆ ವಿಶೇಷ ಪ್ರೀತಿ ಹುಟ್ಟಿಕೊಂಡಿತು. ಖಾಸಗಿ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಆದರೆ ತೃಪ್ತಿಯಾಗಲಿಲ್ಲ.

ನನ್ನ ಕ್ರಿಯಾಶೀಲತೆಯನ್ನೇ ಬಂಡವಾಳವಾಗಿಟ್ಟುಕೊಂಡು ಈ ಟೆರಕೋಟಾ ಸಾಮಗ್ರಿಗಳ ತಯಾರಿಕೆಯಲ್ಲಿ ತೊಡಗಿಕೊಂಡೆ. ಇದೀಗ ಕೈ ತುಂಬಾ ಕೆಲಸ. ನನ್ನೊಂದಿಗೆ ಇಬ್ಬರು ಈ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಇದರಲ್ಲಿ ತೃಪ್ತಿಯಿದೆ~ ಎಂಬುದು ಅವರ ಅನುಭವದ ಮಾತು.

ನಗರದಲ್ಲಿ ಮನೆಯೊಂದನ್ನು ಕಟ್ಟಿಕೊಂಡರೆ ಸಾಲದು. ಕಾಲಕ್ಕೆ ತಕ್ಕಂತೆ ಅದಕ್ಕೆ ಅಲಂಕಾರ ಮಾಡುವುದೂ ಅಷ್ಟೇ ಮುಖ್ಯ. ಮನೆಯ ಅಂಗಳಕ್ಕೆ ಕಾಲಿಡುತ್ತಿದ್ದಂತೆ ನಮ್ಮ ಮನೆ ವಿಶೇಷವಾಗಿ ಕಾಣಬೇಕು. ಇದು ನಮ್ಮ ಅಭಿರುಚಿಯ ಸಂಕೇತವೂ ಆದ್ದರಿಂದ ಆದಷ್ಟೂ ಸುಂದರವಾಗಿ ಪ್ರಸ್ತುತಪಡಿಸುವುದು ಬಹು ಮುಖ್ಯ. ಆದ್ದರಿಂದ ಮನೆ, ಹೂದೋಟದ ಅಂದಕ್ಕೆ ಏನೇನು ಅವಶ್ಯವಿದೆಯೋ ಅದನ್ನೇ ವಿಭಿನ್ನವಾಗಿ ತಯಾರಿಸುತ್ತೇವೆ~ ಎಂದರು ಶಶಿ.

ಮನೆಯ ಪುಟ್ಟ ತೋಟದ ಅಂದ ಹೆಚ್ಚಿಸುವ ಗಾರ್ಡನ್ ಕಂಟೇನರ್‌ಗಳನ್ನು ವಿವಿಧ ಆಕೃತಿಗಳಲ್ಲಿ ತಯಾರಿಸಲಾಗುತ್ತದೆ. ಕೇವಲ ಗಾತ್ರವಲ್ಲ, ನೋಡಲೂ ಆಕರ್ಷಕವೆನಿಸುವ ಪ್ರಾಣಿ, ಗಿಡಗಳನ್ನು ಹೋಲುವ ಪಾಟ್‌ಗಳು ನಮ್ಮ ಚಿಕ್ಕ ತೋಟವನ್ನೂ ಸುಂದರಗೊಳಿಸುತ್ತವೆ.

ನೀರು ಕುಡಿಯಲು ನಮ್ಮ  ತೋಟಕ್ಕೆ ಪಕ್ಷಿ ಅತಿಥಿಯಾಗಿ ಬಂದಂತೆ  `ಬರ್ಡ್ ಪಾತ್~ ಇರುತ್ತದೆ. ಕಾಡಿನಲ್ಲಿ ಬೆಳೆಯುವ ಅಣಬೆಯನ್ನು ಹೋಲುವ ಪಾಟ್ ಕೂಡ ಅರೆಕ್ಷಣ ಕಣ್ಸೆಳೆಯುತ್ತದೆ. ತೋಟದಲ್ಲಿ ನಮ್ಮ ಮುದ್ದಿನ ನಾಯಿ, ಕೋತಿ, ಕಪ್ಪೆ, ಆಮೆ ಚಿತ್ರಗಳು ಕಾರ್ಟೂನ್ ಪ್ರಪಂಚವನ್ನು ಪರಿಚಯಿಸಿದಂಥ ಅನುಭವ ನೀಡುತ್ತದೆ.

ಅಷ್ಟೇ ಅಲ್ಲ, ಮಣ್ಣಿನಿಂದ ಮಾಡಿದ ಪುಟ್ಟ ನೀರಿನ ಚಿಲುಮೆ ತೋಟಕ್ಕೆ ಕಳೆ ತರುತ್ತದೆ. ಇನ್ನು ತೋಟವನ್ನು ಶಾಂತಿಯ ಸ್ಥಾನವನ್ನಾಗಿ ಮಾಡಲು ಬುದ್ಧ, ಗಣಪತಿಯ ಮಣ್ಣಿನ ವಿಗ್ರಹಗಳೂ ಲಭ್ಯವಿದೆ. ಚಿಕ್ಕ ಪುಟ್ಟ ಮಣ್ಣಿನ ಚಿಟ್ಟೆ, ಹೂವುಗಳೊಂದಿಗೆ ಇನ್ನಿತರ ಹೂದೋಟದ ಆಲಂಕಾರಿಕ ಸಲಕರಣೆಗಳ ಕಿನ್ನರ ಲೋಕದ ತುಣುಕಿನಂತೆ ಗೋಚರಿಸುತ್ತವೆ.

ಮನೆಯ ಹೊರಗಷ್ಟೇ ಅಲ್ಲ `ವಾಲ್ ಮ್ಯೂರಲ್~ (ಗೋಡೆಗೆ ತೂಗುಹಾಕುವ ಕಲಾಕೃತಿ), ವಿವಿಧ ವ್ಯಂಗ್ಯಚಿತ್ರಗಳ ಮುಖವಾಡಗಳ ಟೈಲ್ಸ್, ತೂಗುದೀಪ, ತೂಗುಗಂಟೆಗಳು ಮನೆ ಪ್ರವೇಶಿಸುತ್ತಿದ್ದಂತೆ ಗಮನ ಸೆಳೆಯುತ್ತವೆ. ಇನ್ನು ನಿಮ್ಮ ಸುಂದರ ಗೂಡಿಗೆ ಹೆಸರಿನ ಫಲಕ ವಿಭಿನ್ನವಾಗಿರಬೇಕೆಂದು ಯೋಚಿಸುತ್ತಿದ್ದರೆ `ನೇಮ್ ಪ್ಲೇಟ್~ ಕೂಡ ಚಿತ್ತಾಕರ್ಷಕವಾಗಿರುವಂತೆ ತಯಾರಿಸಿಕೊಡಲಾಗುತ್ತದೆ.

ಅಡುಗೆ ಮನೆ ಬಳಕೆಗೂ ಈ ಮಣ್ಣಿನ ಸಾಮಗ್ರಿಗಳು ಉಂಟು. ಅಡುಗೆ ಮಾಡಲು ವಿವಿಧ ಗಾತ್ರದ, ವಿಭಿನ್ನ ರೀತಿಯ ಮಣ್ಣಿನ ಪಾತ್ರೆಗಳಿವೆ. ಸ್ಟೀಲ್ ಪಾತ್ರೆಯನ್ನೇ ಹೋಲುವ ಈ ಮಣ್ಣಿನ ಪಾತ್ರೆಗಳನ್ನು ಬಳಸಿ ಅಡುಗೆ ಮಾಡಬಹುದು. ಇದರಿಂದ ಗ್ಯಾಸ್ ಉಳಿತಾಯವಾಗುವುದಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು. ರುಚಿಯೂ ಹೆಚ್ಚುತ್ತದೆ~ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ.

`ಈ ಮಣ್ಣಿನ ಪಾತ್ರೆಗಳನ್ನು ಓವನ್‌ನಲ್ಲಿಯೂ ಇಡಬಹುದು. ಇದು ಮಧುಮೇಹಿಗಳಿಗೆ ಒಳಿತು. ಮಣ್ಣಿನ ಸಾಮಗ್ರಿಗಳು ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ ಎನ್ನುವುದು ಜನರ ತಪ್ಪು ನಂಬಿಕೆ. ಮಣ್ಣಿನ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ತಯಾರಿಸಿದರೆ ಅವು ಇನ್ನಿತರ ವಸ್ತುಗಳಿಗಿಂತ ಹೆಚ್ಚು ಬಾಳಿಕೆ ಬರುತ್ತದೆ ಮಾತ್ರವಲ್ಲ, ಶೇ 100ರಷ್ಟು ಪರಿಸರ ಸ್ನೇಹಿ. ಆದರೆ ಮಣ್ಣಿನ ಪದಾರ್ಥಗಳನ್ನು ಖರೀದಿಸುವಾಗ ಪರೀಕ್ಷಿಸುವುದು ಮುಖ್ಯವಷ್ಟೆ~ ಎಂಬುದು ಅವರ ಸಲಹೆ. 100ರೂಪಾಯಿಯಿಂದ ಆರಂಭಗೊಂಡು 1500 ರೂವರೆಗಿನ ಮಣ್ಣಿನ ಸಾಮಗ್ರಿಗಳು ಇಲ್ಲಿರುತ್ತವೆ.

`ದೊಡ್ಡ ದೊಡ್ಡ ಕಂಪೆನಿಗಳ ಒಳಾಂಗಣ ವಿನ್ಯಾಸಕ್ಕೂ ಬೇಡಿಕೆ ಹೆಚ್ಚಿದೆ. ಆದರೆ ಈ ಕೆಲಸದಲ್ಲಿ ಕ್ರಿಯಾಶೀಲತೆ ಇರುವವರು ದೊರಕುತ್ತಿಲ್ಲದ ಕಾರಣ ಹೆಚ್ಚಿನ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಮಣ್ಣಿನ ಕಲಾಕೃತಿ ತಯಾರಿಕೆಯಲ್ಲಿ ಆಸಕ್ತಿಯಿರುವವರು ನನ್ನನ್ನು ಭೇಟಿ ಮಾಡಿದರೆ ತರಬೇತಿ ನೀಡುತ್ತೇನೆ. ಆದರೆ ಕಲಿಯುವ ಮನಸ್ಸಿರಬೇಕಷ್ಟೆ~ ಎನ್ನುತ್ತಾರೆ.

`ಒಟ್ಟಿನಲ್ಲಿ ಈ ಮಣ್ಣಿನ ಸಾಮಗ್ರಿಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕೆಂಬುದೇ ನನ್ನ ಉ್ದ್ದದೇಶ. ಈ ಕುರಿತು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಕಲೆಯ ಒಂದು ಭಾಗವಾಗಿ ಟೆರಕೋಟಾ ಕಲಾಕೃತಿಗಳ ತಯಾರಿಕೆಯನ್ನೂ ಹೇಳಿಕೊಡುವ ಮನಸ್ಸಿದೆ~ ಎಂದು ನಗು ಬೀರಿದರು. ಅವರ ಸಂಪರ್ಕಕ್ಕೆ: 9886105432.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT