ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಯದಂಥ ಕೆರೆ

Last Updated 1 ಡಿಸೆಂಬರ್ 2010, 10:00 IST
ಅಕ್ಷರ ಗಾತ್ರ


ಹಾವೇರಿ ಜಿಲ್ಲೆ ಹಿರೇಕೆರೂರ ತಾಲ್ಲೂಕಿನಲ್ಲಿರುವ ಐತಿಹಾಸಿಕ ಮಾಸೂರು ಮದಗದ ಮಾಸೂರು ಕೆರೆ ಈಗ ತುಂಬಿ ತುಳುಕುತ್ತಿದೆ.ಭರ್ತಿಯಾಗಿರುವ ವಿಶಾಲ ಕೆರೆ, ತುಂಬಿ ಹರಿಯುವ ಕುಮದ್ವತಿ ಕೋಡಿಯ ಮುಂದೆ ಎರಡು ಗುಡ್ಡಗಳನ್ನು ಸೀಳಿ ಬಂಡೆಯ ಮೇಲಿಂದ ಧುಮ್ಮಿಕ್ಕುವ ನೋಟ ನಯನ ಮನೋಹರ.

ನೂರಾರು ವರ್ಷಗಳ ಹಿಂದೆ ನಿರ್ಮಾಣವಾದ ಕೆರೆಗಳು ಹೆಚ್ಚು ಕಾಲ ಉಳಿಯಲಿ ಹಾಗೂ ಒಡೆಯದಿರಲಿ ಎಂಬ ಆಶಯದಿಂದ ಕೆರೆಗೆ ಮಾನವರನ್ನು ಬಲಿ ಕೊಟ್ಟ ಕಥೆಗಳಿವೆ. ಇವುಗಳು ಹಾಡುಗಳಾಗಿ ಇಂದಿಗೂ ಜನಪದರ ಬಾಯಲ್ಲಿ ಉಳಿದಿವೆ. ಹೊಸದಾಗಿ ಕಟ್ಟಿದ ಕೆರೆಗೆ ಅಥವಾ ತುಂಬಿ ಒಡೆಯುವ ಹಂತ ತಲುಪಿದ ಕೆರೆಗೆ ಮಗಳನ್ನೋ, ಸೊಸೆಯನ್ನೋ ‘ಹಾರ’ವಾಗಿ ಕೊಟ್ಟ ದಾರುಣ ಕಥೆಗಳು ಕರ್ನಾಟಕದ ಉದ್ದಗಲದಲ್ಲಿವೆ. ಪ್ರತಿಯೊಂದು ಕೆರೆಯ ಹಿಂದೆ ಒಂದು ‘ಹಾರ’ದ ಕಥೆ ಇದೆ. ಮಾಸೂರು ಮದಗ ಕೆರೆಯ ಹಿಂದೆಯೂ ಅಂಥ ಒಂದು ಕಥೆ ಇದೆ.

ಅನೇಕ ವರ್ಷಗಳ ಹಿಂದೆ ಮಾಸೂರು ಮದಗ ಸುತ್ತಮುತ್ತ ಭೀಕರ ಬರಗಾಲ ಇತ್ತು. ಜನರು ಅನ್ನ- ನೀರಿಗಾಗಿ ಪರಿತಪಿಸುತ್ತಿದ್ದರು. ಆಗ ಊರಿನ ರೈತ ಹಾಗೂ ವರ್ತಕ ಮಾಸೂರಿನ ಮಲ್ಲನಗೌಡರ ಮಗಳ ಕನಸಿನಲ್ಲಿ ಗಂಗಾ ದೇವತೆ  ಕಾಣಿಸಿಕೊಂಡು ಜನರಿಗಾಗಿ ಕೆರೆಯೊಂದನ್ನು ಕಟ್ಟಿಸಿ ಜನರ ಬವಣೆ ನೀಗಿಸುವಂತೆ  ಹೇಳುತ್ತಾಳೆ. ಗೌಡರು ಮಗಳ ಸೂಚನೆಯಂತೆ ಕೆರೆ ನಿರ್ಮಿಸಲು ಆರಂಭಿಸುತ್ತಾರೆ. ಅದು ಪೂರ್ಣಗೊಳ್ಳುವ ಹೊತ್ತಿಗೆ ಗಂಗಾಮಾತೆ ಗೌಡರ ಕನಸಿನಲ್ಲಿ ಬಂದು ಕೆರೆಗೆ ಅವರ ಹಿರಿಯ ಸೊಸೆ ಕೆಂಚಮ್ಮನನ್ನು ‘ಹಾರ’ವಾಗಿ ಕೊಡುವಂತೆ ಸೂಚಿಸುತ್ತಾಳೆ.

ಸೊಸೆಯನ್ನೇ ಕೆರೆಗೆ ಹಾರ ಕೊಡಬೇಕಾಗಿ ಬಂದಿದ್ದರಿಂದ ಮಲ್ಲನಗೌಡರು ಚಿಂತಿತರಾಗುತ್ತಾರೆ. ಊರಿನ ಅಭ್ಯುದಯಕ್ಕಾಗಿ ಸೊಸೆ ದೊಡ್ಡ ಕೆಂಚಮ್ಮನನ್ನು ಕೆರೆಗೆ ಹಾರ ಕೊಡುವ ನಿರ್ಧಾರ ಮಾಡುತ್ತಾರೆ. ಆ ಸಂದರ್ಭದಲ್ಲಿ ಮಗ ಇರಬಾರದೆಂದು ಅವನನ್ನು ಊರಿಗೆ ವ್ಯಾಪಾರಕ್ಕೆಂದು ಕಳಿಸುತ್ತಾರೆ.

ಹೊಸ ಕೆರೆಯಲ್ಲಿ ಗಂಗೆಯ ಪೂಜೆ ಮಾಡುವ ಹೊಣೆಯನ್ನು ಗೌಡರು ಸೊಸೆಗೆ ವಹಿಸುತ್ತಾರೆ. ತನ್ನನ್ನು  ಮಾವ ಕೆರೆಗೆ ಹಾರವಾಗಿ ಕೊಡುವ ನಿರ್ಧಾರ ಮಾಡಿದ್ದಾರೆ ಎಂಬುದು ಆಕೆಗೆ ಹೇಗೋ ಗೊತ್ತಾಗುತ್ತದೆ. ಕೆರೆಗೆ ಹಾರವಾಗುವ ಮೊದಲು ಒಮ್ಮೆ ಗಂಡನ ಮುಖ ನೋಡುವ ಹಂಬಲವಾಗುತ್ತದೆ. ಆದರೆ ಅವನು ಊರಲ್ಲಿಲ್ಲ. ತವರು ಮನೆಗೆ ಹೋಗಿ ಹೆತ್ತವರ ಮುಖ ನೋಡಿಕೊಂಡು ಬಂದು ಕೆರೆಗೆ ಹಾರವಾಗಲು ಮಾನಸಿಕವಾಗಿ ಸಿದ್ಧಳಾಗುತ್ತಾಳೆ. ಕೆಂಚಮ್ಮನನ್ನು ಹಾರ ಕೊಡುವ ದಿನ ಊರ ಜನರು ಬಂಡಿಗಳಲ್ಲಿ ಮದಗ ಕೆರೆ ಪೂಜೆಗಾಗಿ ಬರುತ್ತಾರೆ.

ಕೆಂಚಮ್ಮ ಭಕ್ತಿಯಿಂದ ಗಂಗಾಮಾತೆ ಪೂಜೆ ನೆರವೇರಿಸುತ್ತಾಳೆ. ಹೊನ್ನಾಳಿಯ ಚನ್ನಪ್ಪ ಸ್ವಾಮಿಗಳು ಪೂಜೆಯಲ್ಲಿ ಪಾಲ್ಗೊಂಡು ಕೆರೆಗೆ ದೀಕ್ಷೆ ಮಾಡಿ ಕೆಂಚಮ್ಮನನ್ನು ಹರಸಿ, ಪ್ರಸಾದ ಸ್ವೀಕರಿಸಿ ತೆರಳುಸುತ್ತಾರೆ. ಪೂಜೆಗೆ ಬಂದವರೆಲ್ಲ ಊಟ ಮುಗಿಸಿ ಹೊರಡುತ್ತಾರೆ. ಸ್ವಲ್ಪ ದೂರ ಬರುತ್ತಿದ್ದಂತೆ ಮಲ್ಲನಗೌಡರು ಹಾಗೂ ಅವರ ಪತ್ನಿ ‘ಚಿನ್ನದ ಒಳಲೆ’ಯನ್ನು ಕೆರೆಯಲ್ಲಿ ಬಿಟ್ಟು ಬಂದಿದ್ದೇವೆ; ಹೋಗಿ ತೆಗೆದುಕೊಂಡು ಬಾ’ ಎಂದು ಸೊಸೆ ಕೆಂಚಮ್ಮನನ್ನು ಕಳಿಸುತ್ತಾರೆ.

ಇದನ್ನು ಊಹಿಸಿದ್ದ ಕೆಂಚಮ್ಮ ಒಳಲೆ ತರಲು ಹೋಗುತ್ತಾಳೆ. ಆಗ ಪ್ರತ್ಯಕ್ಷಳಾದ ಗಂಗೆ ‘ಬಂಗಾರದ ಗುಡಿಯ ಕೆರೆಯಾಗ ಕಟ್ಟಿದ್ದೀನಿ, ಅಂಜದಲೆ ಬಾರೆ ನನ ಮಗಳೆ’ ಎನ್ನುತ್ತಾಳೆ. ಆಗ ಮಾಯದಂಥ ಮಳೆ ಬಂದು ಕ್ಷಣಾರ್ಧದಲ್ಲಿ ಮದಗದ ಕೆರೆ ಪ್ರವಾಹದಂತೆ ಏರುತ್ತದೆ. ಕೆಂಚಮ್ಮ ಗಂಗೆಯಲ್ಲಿ ಲೀನವಾಗುತ್ತಾಳೆ.

ಪ್ರವಾಸಿ ಕೇಂದ್ರ: ಮಾಸೂರು ಮಗದ ಕೆರೆ ಪ್ರದೇಶ ಪ್ರವಾಸಿ ತಾಣವೂ ಹೌದು. ಸಂಕ್ರಾಂತಿ ದಿನ ತಾಲ್ಲೂಕಿನ ಜನರು ಕೆರೆ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಈಗ ಕೆರೆ ತುಂಬಿರುವುದರಿಂದ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.ಮದಗ ಮಾಸೂರು ಕೆರೆ ಹಿರೇಕೆರೂರಿನಿಂದ ಸುಮಾರು 16 ಕಿ.ಮೀ. ದೂರದಲ್ಲಿ ಹಾವೇರಿ- ಶಿವಮೊಗ್ಗ ಗಡಿ ಭಾಗದಲ್ಲಿದೆ. ಮದಗ ಮಾಸೂರು ಕೆರೆಯ ದಕ್ಷಿಣಕ್ಕಿರುವ ಶಿಕಾರಿಪುರದ ಕಡೆಯಿಂದ ಕುಮದ್ವತಿ ಹರಿದು ಬಂದು ಕೆರೆಗೆ ಸೇರುತ್ತದೆ. ಮುಂದೆ ಕೆರೆಯ ಕೋಡಿ ಮೂಲಕ ಹರಿದು ಸಾಗುತ್ತದೆ. ಎರಡು ಗುಡ್ಡಗಳ ನಡುವೆ ಕೆರೆ ನಿರ್ಮಾಣವಾಗಿದೆ. ಈ ಕೆರೆ ಶಿಥಿಲಗೊಂಡಿತ್ತು. 1858ರಲ್ಲಿ ಬ್ರಿಟಿಷ್ ಸರ್ಕಾರ ವಿಶೇಷ ಆಸಕ್ತಿ ವಹಿಸಿ ದುರಸ್ತಿ ಮಾಡಿಸಿತು. ಕೆರೆಯ ಕೋಡಿ ಮತ್ತು ತೂಬನ್ನು ವ್ಯವಸ್ಥಿತಗೊಳಿಸಿ ಕೆರೆಯ ಎರಡೂ ಪಕ್ಕದಲ್ಲಿ ಕಾಲುವೆಗಳನ್ನು ನಿರ್ಮಿಸಿ 3000 ಎಕರೆ ಕೃಷಿ ಭೂಮಿಗೆ ನೀರು ಪೂರೈಸುವ ವ್ಯವಸ್ಥೆ ಮಾಡಿತ್ತು. 1889ರಲ್ಲಿ ಕಾಮಗಾರಿ ಮುಕ್ತಾಯವಾದ ಬಗ್ಗೆ ಗೆಜೆಟಿಯರ್‌ನಲ್ಲಿ ದಾಖಲಾಗಿದೆ.

ಬಚಾವತ್ ಆಯೋಗ ಮದಗ ಮಾಸೂರು ಕೆರೆಗೆ  2.71 ಟಿ.ಎಂ.ಸಿ ನೀರನ್ನು ನಿಗದಿಪಡಿಸಿದೆ. ಕೋಡಿಯನ್ನು 11.27 ಅಡಿ ಎತ್ತರಿಸಿ, ಎಡದಂಡೆ ಕಾಲುವೆಯನ್ನು 36.4 ಕಿ.ಮೀ ಹಾಗೂ ಬಲದಂಡೆ ಕಾಲುವೆಯನ್ನು 38.2 ಕಿ.ಮೀ ನಿರ್ಮಿಸುವ ಮೂಲಕ ಹಿರೇಕೆರೂರ, ರಾಣೇಬೆನ್ನೂರು ಹಾಗೂ ಹರಿಹರ ತಾಲ್ಲೂಕುಗಳ 45 ಹಳ್ಳಿಗಳ 21 ಸಾವಿರ ಎಕರೆ ಕೃಷಿ ಜಮೀನಿಗೆ ನೀರುಣಿಸುವ ಯೋಜನೆಯೊಂದನ್ನು ರಾಜ್ಯ ಸರ್ಕಾರ 1974-75ರಲ್ಲಿ ಸಿದ್ಧಪಡಿಸಿತ್ತು. ಆದರೆ ಅದು ಅನುಷ್ಠಾನಗೊಳ್ಳಲಿಲ್ಲ. ಆನಂತರ ಸರ್ಕಾರ ಈ ಯೋಜನೆಯ ಬಗ್ಗೆ  ಗಮನ ಹರಿಸಲಿಲ್ಲ.ಪ್ರವಾಸೋದ್ಯಮ ಇಲಾಖೆ ಕೆರೆ ಪ್ರದೇಶವನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯೂ ಅರ್ಧಕ್ಕೆ ನಿಂತಿದೆ. ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೆ ಇದು ಅತ್ಯುತ್ತಮ ಪ್ರವಾಸಿ ತಾಣವಾಗಲಿದೆ.

ಭವ್ಯ ನೋಟ
ಸುಮಾರು 195 ಹೆಕ್ಟರ್ ವಿಸ್ತೀರ್ಣದ ಭರ್ತಿಯಾಗಿರುವ ವಿಶಾಲವಾದ ಮದಗದ ಕೆರೆ, ಮೈದುಂಬಿ ಹರಿಯುವ ಕುಮದ್ವತಿ ನದಿಯು ಕೋಡಿಯ ಮುಂದೆ ಎರಡು ಗುಡ್ಡಗಳನ್ನು ಸೀಳಿ ಬಂಡೆಯ ಮೇಲಿಂದ ಧುಮ್ಮಿಕ್ಕುವ ಭವ್ಯ ನೋಟ, ಸುತ್ತ ಹಚ್ಚ ಹಸಿರು ಗುಡ್ಡಗಳ ರಮಣೀಯತೆ...

ಇವುಗಳನ್ನೆಲ್ಲ ನೋಡು ನೋಡುತ್ತಿದ್ದಂತೆಯೇ ವಾವ್! ಎನ್ನುವಂಥ ಉದ್ಗಾರ ನಮಗೆ ಅರಿವಿಲ್ಲದಂತೆ ಹೊರಹೊಮ್ಮುತ್ತದೆ. ಹಿರೇಕೆರೂರಿನಿಂದ ಸುಮಾರು 16 ಕಿ.ಮೀ. ದೂರದಲ್ಲಿ ತಾಲ್ಲೂಕಿನ ಗಡಿಯಲ್ಲಿರುವ ಮದಗ ಮಾಸೂರು ಕೆರೆಗೆ ಸಂಕ್ರಾಂತಿಯ ದಿನ ಮಾತ್ರ ಬರುತ್ತಿದ್ದ ಸ್ಥಳೀಯರು ಈಗ ಮತ್ತೆ ಮತ್ತೆ ಭೇಟಿ ನೀಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದು ಉತ್ತಮ ಪ್ರವಾಸಿ ತಾಣವಾಗಿ ರೂಪಗೊಳ್ಳುತ್ತಿದ್ದು, ದೂರದಿಂದ ಪ್ರವಾಸಿಗರು ಸಹ ಆಗಮಿಸುತ್ತಿದ್ದಾರೆ. ಕೆರೆಯ ಏರಿಯ ಮೇಲಿರುವ ಕೆಂಚಮ್ಮನ ದೇವಸ್ಥಾನ, ತಿಮ್ಮಪ್ಪನ ಗವಿ ದೇವಾಲಯ, ಮಹಾಸತಿ ಕಲ್ಲು ಮುಂತಾದವುಗಳನ್ನು ಇಲ್ಲಿ ಕಾಣಬಹುದು.

ಮದಗ ಮಾಸೂರು ಕೆರೆಗೆ ದಕ್ಷಿಣ ಭಾಗಕ್ಕಿರುವ ಶಿಕಾರಿಪುರದ ಕಡೆಯಿಂದ ಕುಮದ್ವತಿ ಹರಿದು ಬರುತ್ತಾಳೆ.ಮುಂದೆ ಕೆರೆಯ ಕೋಡಿಯಿಂದ ಮಾಸೂರು, ರಟ್ಟೀಹಳ್ಳಿ ಮೂಲಕ ಸಾಗಿ, ಹೊಳೆ ಆನ್ವೇರಿ ಹತ್ತಿರ ತುಂಗಭದ್ರೆಯನ್ನು ಸೇರುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT