ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರನ್ ವಿರುದ್ಧ ಪುರಾವೆ ಇಲ್ಲ

Last Updated 2 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): 2 ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ಸೆಲ್ ಕಂಪೆನಿಯ ಷೇರು ಮಾರಾಟದಲ್ಲಿ ದೂರಸಂಪರ್ಕ ಮಾಜಿ ಸಚಿವ ದಯಾನಿಧಿ ಮಾರನ್ ಪಾತ್ರವಿದೆ ಎಂಬುದನ್ನು ಪುಷ್ಟೀಕರಿಸುವ ಯಾವ ದಾಖಲೆಗಳೂ ಇಲ್ಲ ಎಂದು ಸಿಬಿಐ ಸುಪ್ರೀಂಕೋರ್ಟ್‌ಗೆ ಹೇಳಿದೆ.

ಏರ್‌ಸೆಲ್ ಕಂಪೆನಿಯ ಷೇರುಗಳನ್ನು ಹೊಂದಿದ್ದ ಸಿ.ಶಿವಶಂಕರನ್ ಅವರ ಮೇಲೆ ಷೇರುಗಳನ್ನು ಮಲೇಷಿಯಾ ಮೂಲದ ಮ್ಯಾಕ್ಸಿಸ್ ಸಮೂಹಕ್ಕೆ ಮಾರಾಟ ಮಾಡಲು ಒತ್ತಡ ಹೇರಿದ ಆರೋಪ ಮಾರನ್ ಮೇಲೆ ಇತ್ತು. ಆದರೆ ಸಿಬಿಐ ಪರವಾಗಿ ಗುರುವಾರ ಹಾಜರಿದ್ದ ವಕೀಲ ಕೆ.ಕೆ.ವೇಣುಗೋಪಾಲ್ ಅವರು ಜಿ.ಎಸ್.ಸಿಂಘ್ವಿ ಮತ್ತು ಎ.ಕೆ.ಗಂಗೂಲಿ ಅವರಿದ್ದ ನ್ಯಾಯಪೀಠದ ಮುಂದೆ, ಈ ಸಂಬಂಧ ಯಾವುದೇ ಸಾಕ್ಷ್ಯಾಧಾರ ಇಲ್ಲ ಎಂದರು.

ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿದ್ದಾಗ ದೂರಸಂಪರ್ಕ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಆಗ ಹಣಕಾಸು ಸಚಿವರಾಗಿದ್ದ ಜಸ್ವಂತ್ ಸಿಂಗ್ ಅವರನ್ನು ವಿಚಾರಣೆಗೆ ಒಳಪಡಿಸಬಹುದು. ಅರುಣ್ ಶೌರಿ 2003-04ರ ಅವಧಿಯಲ್ಲಿ ದೂರಸಂಪರ್ಕ ಸಚಿವರಾಗಿದ್ದಾಗ ಉನ್ನತಾಧಿಕಾರ ಸಚಿವರ ಸಮಿತಿಯ (ಇಜಿಒಎಂ) ನೇತೃತ್ವವನ್ನು ಜಸ್ವಂತ್ ವಹಿಸಿದ್ದರು ಎಂದು ವೇಣುಗೋಪಾಲ್ ಇದೇ ವೇಳೆ ತಿಳಿಸಿದರು.

ಆದರೆ ಶಿವಶಂಕರನ್ ಏರ್‌ಸೆಲ್ ಕಂಪೆನಿ ಮಾಲೀಕರಾಗಿದ್ದಾಗ ಒಪ್ಪಿಗೆ ಪತ್ರ ನೀಡಲು ದೂರಸಂಪರ್ಕ ಇಲಾಖೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದೆ ಎಂದೂ ಸಿಬಿಐ ಹೇಳಿದೆ.

ಇದೇ ವೇಳೆ ವೇಣುಗೋಪಾಲ್  ಸಿಬಿಐ ತನಿಖೆಯ ಸ್ಥಿತಿಗತಿ ಕುರಿತು ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ವಿವರ ಸಲ್ಲಿಸಿದರು. ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳೂ ವರದಿ ಸಲ್ಲಿಸಿದವು.

ತನಿಖೆಯು ಮುಖ್ಯವಾಗಿ 2002ರಿಂದ 2010ರ ನಡುವಿನ ಅವಧಿಗೆ ಸಂಬಂಧಪಟ್ಟದ್ದಾಗಿದೆ. ಅರುಣ್ ಶೌರಿ ಅವಧಿಯಲ್ಲಿ ಲೋಪಗಳಾಗಿವೆ ಎಂಬುದಕ್ಕೆ ಯಾವ ಪುರಾವೆಯೂ ಲಭ್ಯವಾಗಿಲ್ಲ. ಆದರೆ ಪ್ರಮೋದ್ ಮಹಾಜನ್ ಅವಧಿಯಲ್ಲಿ ದೂರಸಂಪರ್ಕ ನೀತಿ ಹಾಗೂ ಅವುಗಳ ಅನುಷ್ಠಾನದಲ್ಲಿ ಮಾರ್ಪಾಡುಗಳಾಗಿದ್ದು ಈ ಬಗ್ಗೆ ಹೆಚ್ಚಿನ ತನಿಖೆ ನಡೆದಿದೆ ಎಂದು ವೇಣುಗೋಪಾಲ್ ತಿಳಿಸಿದ್ದಾರೆ.

ಹಗರಣದಲ್ಲಿ ಗೃಹ ಸಚಿವ ಪಿ.ಚಿದಂಬರಂ ಅವರ ಪಾತ್ರದ ಬಗ್ಗೆ ತನಿಖೆ ನಡೆಸಲು ಕೋರಿ ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿ ಸೆ.8ರಂದು ವಿಚಾರಣೆಗೆ ಬರಲಿದೆ.
 
ಮಾರನ್ ವಿರುದ್ಧ ಸಾಕ್ಷ್ಯಾಧಾರ ಇಲ್ಲ ಎಂದು ಸಿಬಿಐ ಹೇಳಿರುವುದಕ್ಕೆ ಡಿಎಂಕೆ ವಕ್ತಾರ ಇಳಂಗೋವನ್ ಹರ್ಷ ವ್ಯಕ್ತಪಡಿಸಿದ್ದು, `ಇಡೀ 2 ಜಿ ಪ್ರಕರಣವೇ ಸಾಕ್ಷ್ಯಾಧಾರ ರಹಿತವಾಗಿದೆ. ರಾಜಾ ಮತ್ತು ಕನಿಮೊಳಿ ವಿರುದ್ಧದ ಪ್ರಕರಣಗಳೂ ಬಿದ್ದುಹೋಗಲಿವೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT