ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 5ರಂದು ಅಧಿಕಾರಿಗಳ ವಿಶೇಷ ಸಭೆ: ವಿಶ್ವನಾಥ್

Last Updated 16 ಫೆಬ್ರುವರಿ 2011, 8:35 IST
ಅಕ್ಷರ ಗಾತ್ರ

ಮಡಿಕೇರಿ: ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ (ಐಟಿಡಿಪಿ), ಸಮಾಜ ಕಲ್ಯಾಣ ಹಾಗೂ ಅರಣ್ಯ ಇಲಾಖೆ ಯೋಜನೆಗಳ ಅನುಷ್ಠಾನದ ಬಗ್ಗೆ ವಿಸ್ತೃತ ಚರ್ಚೆ ನಡೆಸಲು ಸಂಸದ ಎಚ್. ವಿಶ್ವನಾಥ್ ಮಾರ್ಚ್ 5ರಂದು ಅಧಿಕಾರಿಗಳ ವಿಶೇಷ ಸಭೆ ಕರೆಯಲು ನಿರ್ಧರಿಸಿದ್ದಾರೆ. ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿಶೇಷವಾಗಿ ಐಟಿಡಿಪಿ ಇಲಾಖೆಯ ಕಾರ್ಯಕ್ರಮಗಳ ಅನುಷ್ಠಾನದ ಬಗ್ಗೆ ಸಮಿತಿಯ ಸದಸ್ಯರಾದ ಸರಿತಾ ಪೂಣಚ್ಚ, ಬಿ.ಎಸ್. ತಮ್ಮಯ್ಯ ಹಾಗೂ ಎಚ್.ಜೆ. ಕರಿಯಪ್ಪ ಆರೋಪಗಳ ಸುರಿಮಳೆಗರೆದ ಹಿನ್ನೆಲೆಯಲ್ಲಿ ವಿಶೇಷ ಸಭೆ ಕರೆಯಲು ತೀರ್ಮಾನಿಸಿದರು.

ಮಾರ್ಚ್ 5ರಂದು ಮಧ್ಯಾಹ್ನ 2 ಗಂಟೆಗೆ ಈ ವಿಶೇಷ ಸಭೆ ನಡೆಸಲಾಗುವುದು. ಅಂದು ಶಾಸಕರು, ಜಿಲ್ಲಾಧಿಕಾರಿಗಳು, ಜಿ.ಪಂ. ಅಧ್ಯಕ್ಷರು, ಮೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳ ಸಮ್ಮುಖದಲ್ಲಿ ಇಲಾಖೆ ಯೋಜನೆಗಳ ಅನುಷ್ಠಾನದ ಬಗ್ಗೆ ಪರಾಮರ್ಶೆ ನಡೆಸಲಾಗುವುದು. ಅಧಿಕಾರಿಗಳು ಫಲಾನುಭವಿಗಳ ಪಟ್ಟಿ, ಹೆಸರು, ವಿಳಾಸ ಸೇರಿದಂತೆ ಎಲ್ಲ ಮಾಹಿತಿಯನ್ನೂ ಸಭೆಗೆ ನೀಡಬೇಕು. ಸಂಜೆ 5 ಗಂಟೆವರೆಗೆ ಚರ್ಚೆ ನಡೆಸಿದ ಅಗತ್ಯ ಬಿದ್ದರೆ ನಂತರ ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಸಂಸದರು ಹೇಳಿದರು.

ಐಟಿಡಿಪಿ ಇಲಾಖೆಯ ಬಗ್ಗೆ ಸಭೆಯಲ್ಲಿ ಮಾತನಾಡಿದ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ, ಇಲಾಖೆಯ ಅಧಿಕಾರಿಗಳು ಯಾವುದರ ಬಗ್ಗೆಯೂ ಸರಿಯಾದ ಮಾಹಿತಿ ನೀಡುವುದಿಲ್ಲ. ದಕ್ಷಿಣ ಕೊಡಗಿನ ರೇಷ್ಮೆ ಹಡ್ಲುವಿನಲ್ಲಿ ಒಂದೇ ಒಂದು ಕೆರೆ ನಿರ್ಮಾಣಕ್ಕೆ 1.19 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಇದರ ಸ್ಥಳ ಪರಿಶೀಲನೆ ನಡೆಸಿದ್ದರೂ ಅನುಪಾಲನಾ ವರದಿಯಲ್ಲಿ ಉದ್ದೇಶಪೂರ್ವಕವಾಗಿ ವಿಷಯ ಸೇರಿಸಿಲ್ಲ ಎಂದು ಆರೋಪಿಸಿದರು.

ಪ್ರತಿ ಸಭೆಗಳಲ್ಲಿ ಈ ಬಗ್ಗೆ ಬರೀ ಚರ್ಚೆ ನಡೆಸಿ ಸಾಕಾಗಿದೆ. ಗಿರಿಜನರು ಕೂಡ ಇಲಾಖೆಯ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. 2009-10ನೇ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಗಿರಿಜನ ಅಭಿವೃದ್ಧಿ ಕಾರ್ಯಕ್ರಮಗಳಿಗಾಗಿ 24.70 ಲಕ್ಷ ರೂಪಾಯಿಗಳ ಪೈಕಿ 16.5 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಆದರೆ, ಇದ್ಯಾವುದರ ಬಗ್ಗೆಯೂ ಇಲಾಖಾಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ನಾವು ಕೂಡ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಪಡೆದುಕೊಳ್ಳುವಂತಾಗಿದೆ. ಬಹಳಷ್ಟು ಕಾರ್ಯಕ್ರಮಗಳು ಕೇವಲ ಪುಸ್ತಕದಲ್ಲಿ ಅನುಷ್ಠಾನಗೊಂಡಿವೆ ಎಂದು ದೂರಿದರು.

ಸೀಬೆಹಳ್ಳಿಯಲ್ಲಿ ಸಿಬ್ಬಂದಿಗಳ ವಸತಿಗೃಹ ದುರಸ್ತಿಗೆ ಎರಡೆರಡು ಬಾರಿ ಹಣ ಖರ್ಚು ಮಾಡಲಾಗಿದೆ. ಐಟಿಡಿಪಿ ಹಾಗೂ ಸಮಾಜ ಕಲ್ಯಾಣ ಇಲಾಖೆಗಳೆರಡರಿಂದಲೂ ಹಣ ಖರ್ಚು ಮಾಡಿರುವುದರಿಂದ ಮಾರ್ಚ್ 5ರಂದು ನಡೆಯಲಿರುವ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನೂ ಸೇರಿಸಿಕೊಂಡು ಚರ್ಚೆ ನಡೆಸಲು ತೀರ್ಮಾನಿಸಲಾಯಿತು. ಕ್ರಿಯಾ ಯೋಜನೆ ರೂಪಿಸಲು ಸೂಚನೆ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಲು 2011-12ನೇ ಸಾಲಿಗೆ ಸೂಕ್ತ ಕ್ರಿಯಾ ಯೋಜನೆಯನ್ನು ರೂಪಿಸುವಂತೆ ಸಂಸದರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಕ್ರಿಯಾ ಯೋಜನೆ ರೂಪಿಸುವವರೆಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಮಾರ್ಚ್ 31ರವರೆಗೆ ರಜೆ ಮಂಜೂರು ಮಾಡಬಾರದು ಎಂದು ಸಂಸದರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಆದೇಶಿಸಿದರು. ಅರ್ಹ ಕೂಲಿ- ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆಯಲು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕೂಲಿ-ಕಾರ್ಮಿಕರನ್ನು ಗುರುತಿಸಿ ಅವರಿಗೆ ಉದ್ಯೋಗದ ಚೀಟಿಗಳನ್ನು ನೀಡಬೇಕು.

ಈ ಹಿಂದೆ ಒತ್ತಾಯಕ್ಕಾಗಿ ಯೋಜನೆಯಡಿ ಹಣ ಖರ್ಚು ಮಾಡುವಂತಹ ಪರಿಸ್ಥಿತಿ ಇತ್ತು. ಇದರಿಂದ ಹಣ ಡ್ರಾ ಮಾಡಿ ಖರ್ಚು ಮಾಡಲಾಗುತ್ತಿತ್ತು. ಆದರೆ, ಇದೀಗ ಬೇಕಾಬಿಟ್ಟಿ ಹಣ ಖರ್ಚು ಮಾಡುವುದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಸಂಸದರು ಸಭೆಗೆ ತಿಳಿಸಿದರು. ಈ ನಡುವೆ, 2011-12ನೇ ಸಾಲಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಗೆ 30 ಕೋಟಿ ರೂಪಾಯಿ ಗುರಿ ನಿಗದಿಪಡಿಸಲಾಗಿದೆ.

ಜಿಲ್ಲೆಗೆ ನಿಗದಿಪಡಿಸಿದ ಮೊತ್ತದಲ್ಲಿ ಅರ್ಧದಷ್ಟು ಕೂಡ ಹಣ ಖರ್ಚು ಮಾಡಲು ಸಾಧ್ಯವಾಗದಿರುವುದರಿಂದ ಮುಂದಿನ ಹಣಕಾಸು ವರ್ಷದಲ್ಲಿ ಕಡಿಮೆ ಮೊತ್ತದ ಗುರಿ ನಿಗದಿಪಡಿಸಲು ಕಾರಣ. ಈ ನಡುವೆ, ಸಂದರ್ಭ- ಸನ್ನಿವೇಶಕ್ಕೆ ಅನುಗುಣವಾಗಿ ಕಾಮಗಾರಿಗಳಿಗೆ ಜೆಸಿಬಿ ಯಂತ್ರ ಬಳಸಲು ಕೂಡ ಸರ್ಕಾರದಿಂದ ಆದೇಶ ಬಂದಿದೆ ಸಿಇಓ ಎನ್. ಕೃಷ್ಣಪ್ಪ ತಿಳಿಸಿದರು. ಜಿ.ಪಂ. ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ, ಉಪಾಧ್ಯಕ್ಷೆ ಎಚ್.ಎಂ. ಕಾವೇರಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದು ಆಯಾ ಇಲಾಖೆಗಳ ಯೋಜನೆಗಳ ಪ್ರಗತಿ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT