ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ಡೀವ್ಸ್ ಸರ್ಕಾರದ ಪರ ತೀರ್ಪು

ಮಾಲೆ ವಿಮಾನ ನಿಲ್ದಾಣ ವಿವಾದ- ಜಿಎಂಆರ್‌ಗೆ ಹಿನ್ನಡೆ
Last Updated 6 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಸಿಂಗಪುರ/ಮಾಲೆ (ಪಿಟಿಐ): ವಿವಾದಿತ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಶಕ್ಕೆ ತೆಗೆದುಕೊಳ್ಳುವ ಹಕ್ಕು ಮಾಲ್ಡೀವ್ಸ್ ಸರ್ಕಾರಕ್ಕೆ ಇದೆ ಎಂದು ಸಿಂಗಪುರದ ನ್ಯಾಯಾಲಯ ಗುರುವಾರ ಹೇಳಿದೆ. ಇದರಿಂದ ಮಾಲ್ಡೀವ್ಸ್ ಸರ್ಕಾರದೊಂದಿಗೆ ಕಾನೂನು ಹೋರಾಟ ನಡೆಸುತ್ತಿರುವ ಭಾರತದ `ಜಿಎಂಆರ್' ಕಂಪೆನಿಗೆ ಹಿನ್ನಡೆ ಉಂಟಾಗಿದೆ.

`ಸಿಂಗಪುರದ ಮೇಲ್ಮನವಿ ಅರ್ಜಿ ವಿಚಾರಣಾ ನ್ಯಾಯಾಲಯ ನೀಡಿರುವ ಆದೇಶದಿಂದ ಈ ವಿಚಾರದಲ್ಲಿ ಮಾಲ್ಡೀವ್ಸ್ ಸರ್ಕಾರ ಕಾನೂನು ಮೀರಿ ನಡೆದಿಲ್ಲ ಎನ್ನುವುದು ಸಾಬೀತಾಗಿದೆ' ಎಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ವಹೀದ್ ಅವರ ಪತ್ರಿಕಾ ಕಾರ್ಯದರ್ಶಿ ಮಸೂದ್ ಇಮಾದ್ ಮಾಲೆಯಲ್ಲಿ ಹೇಳಿದ್ದಾರೆ.

`ವಿಮಾನ ನಿಲ್ದಾಣವನ್ನು ವಶಕ್ಕೆ ತೆಗೆದುಕೊಳ್ಳಲು `ಜಿಎಂಆರ್'ಗೆ ನೀಡಲಾಗಿರುವ ನೋಟಿಸ್ ಅವಧಿಯು ಶನಿವಾರಕ್ಕೆ ಅಂತ್ಯವಾಗಲಿದೆ. ಈಗ ಅದನ್ನು ವಶಕ್ಕೆ ತೆಗೆದುಕೊಳ್ಳಲು ಕಾನೂನಿನ ತೊಡಕೂ ಇಲ್ಲ. ಹಾಗಾಗಿ ಸರ್ಕಾರ ತನ್ನ ಪ್ರಕ್ರಿಯೆಯನ್ನು ಮುಂದುವರಿಸಲಿದೆ' ಎಂದು ಅವರು ತಿಳಿಸಿದ್ದಾರೆ.

ಹಿನ್ನೆಲೆ: ಭಾರತದ ನಿರ್ಮಾಣ ವಲಯದ ಬೃಹತ್ ಕಂಪೆನಿಯಾದ `ಜಿಎಂಆರ್', 50 ಕೋಟಿ ಡಾಲರ್ (ಅಂದಾಜು 270 ಕೋಟಿ ರೂಪಾಯಿ) ವೆಚ್ಚದ ಮಾಲೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನವೀಕರಣದ ಗುತ್ತಿಗೆಯನ್ನು ಪಡೆದಿತ್ತು. ಈ ಗುತ್ತಿಗೆಯನ್ನು ಮಾಲ್ಡೀವ್ಸ್ ಸರ್ಕಾರ ನವೆಂಬರ್ 27ರಂದು ಏಕಪಕ್ಷೀಯವಾಗಿ ರದ್ದು ಮಾಡಿತ್ತು.

ಗುತ್ತಿಗೆ ವಿಷಯಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಉಂಟಾದರೆ ಬ್ರಿಟನ್ ಅಥವಾ ಸಿಂಗಪುರದ ಕಾನೂನಿನಡಿಯಲ್ಲಿ ಪರಿಹರಿಸಿಕೊಳ್ಳುವ ಒಪ್ಪಂದ ಆಗಿತ್ತು. ಅದರಂತೆ `ಜಿಎಂಆರ್' ಸಿಂಗಪುರದ ಹೈಕೋರ್ಟ್‌ನಲ್ಲಿ ದಾವೆ ಹೂಡಿ, ಮಾಲ್ಡೀವ್ಸ್ ಸರ್ಕಾರದ ಗುತ್ತಿಗೆ ರದ್ದತಿ ಆದೇಶಕ್ಕೆ ತಡೆಯಾಜ್ಞೆ ತಂದಿತ್ತು.

ಆದರೆ, ತಡೆಯಾಜ್ಞೆಗೆ ಗೌರವ ನೀಡದ ಮಾಲ್ಡೀವ್ಸ್ ಸರ್ಕಾರ, ವಿವಾದಿತ ವಿಮಾನ ನಿಲ್ದಾಣವನ್ನು ತನ್ನ ಸ್ವಾಧೀನಕ್ಕೆ ಪಡೆಯಲು ಮುಂದಾಯಿತು. ಈ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಭಾರತ, ಒಪ್ಪಂದದಂತೆ ನಡೆದುಕೊಳ್ಳದ ಮತ್ತು ಕೋರ್ಟ್ ಆದೇಶವನ್ನು ಗೌರವಿಸದ ಮಾಲ್ಡೀವ್ಸ್ ಸರ್ಕಾರದ ನಿಲುವಿಗೆ ಅಸಮಾಧಾನ ವ್ಯಕ್ತಪಡಿಸಿದೆ. ಆ ರಾಷ್ಟ್ರದ ಹಟಮಾರಿ ಧೋರಣೆಯಿಂದ ದ್ವಿಪಕ್ಷೀಯ ಸಂಬಂಧಕ್ಕೆ ತೊಡಕಾಗುತ್ತದೆ. ಮಾಲ್ಡೀವ್ಸ್‌ಗೆ ನೀಡುವ ನೆರವನ್ನು ಸ್ಥಗಿತ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಭಾರತ ರವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT