ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸಾಶನವೇ ಇಲ್ಲ, ಸಾಲ ಇನ್ನಾರು ಕೊಟ್ಟಾರು?

Last Updated 20 ಸೆಪ್ಟೆಂಬರ್ 2013, 8:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಾಕಿ ನೀಡಬೇಕಾದ ಆರು ತಿಂಗಳ ಮಾಸಾಶನಕ್ಕೆ ಆಗ್ರಹಿಸಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ, ಮನವಿ ಸಲ್ಲಿಸಿದರು.

ಚಳ್ಳಕೆರೆ ತಾಲ್ಲೂಕಿನ ಜಾಜೂರು ಪ್ರಗತಿ ಗ್ರಾಮೀಣ ಬ್ಯಾಂಕ್ ವ್ಯಾಪ್ತಿಯಲ್ಲಿ ಬರುವ ಜಾಜೂರು, ಕಾಮಸಮುದ್ರ, ಮೋದೂರು, ಹರವೀಗೊಂಡನಹಳ್ಳಿ, ಪಗಡಲಬಂಡೆ, ನಾಗೊಂಡನಹಳ್ಳಿ ಗ್ರಾಮಗಳ ಇಂದಿರಾ ಗಾಂಧಿ, ರಾಷ್ಟ್ರೀಯ ವೃದ್ಧಾಪ್ಯ ವೇತನ, ನಿರ್ಗತಿಕ ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆಗಳ ಫಲಾನುಭವಿ ಗಳಿಗೆ ಆರು ತಿಂಗಳಿನಿಂದ ಮಾಸಾಶನ ಬಂದಲ್ಲ ಎಂದು ಫಲಾನುಭವಿಗಳು ಆರೋಪಿಸಿದರು.

ಈ ಬಗ್ಗೆ ಗ್ರಾಮೀಣ ಬ್ಯಾಂಕಿನವರಲ್ಲಿ ವಿಚಾರಿಸಿದರೆ,  ಅನುದಾನ ಬಂದಿಲ್ಲ ಎಂದು ಹೇಳುತ್ತಾರೆ. ಇದನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ನಮ್ಮಂಥ ಬಡವರಿಗೆ ತೊಂದರೆಯಾಗಿದ್ದು ಕೂಡಲೇ ಜಿಲ್ಲಾಡಳಿತ ಪ್ರತಿ ತಿಂಗಳು ಮಾಸಾಶನವನ್ನು ಸರಿಯಾದ ಸಮಯಕ್ಕೆ ವಿತರಿಸುವಂತೆ ಫಲಾನುಭವಿಗಳು ಒತ್ತಾಯಿಸಿದರು.

ಮಾಸಾಶನ ಬಾರದಿರುವುದರಿಂದ ನಿತ್ಯದ ಔಷಧೋಪಚಾರದ ಖರ್ಚುಗಳಿಗಾಗಿ ಬೇರೆಯವರ ಬಳಿ ಸಾಲ ಮಾಡುವಂತಾಗಿದೆ. ಮಾಸಾಶನವೇ ಸರಿಯಾಗಿ ಬಾರದಿದ್ದಾಗ, ಬೇರೆಯವರು ಸಾಲವಾದರೂ ಹೇಗೆ ಕೊಡುತ್ತಾರೆ. ನಮ್ಮ ಈ ಸ್ಥಿತಿಯನ್ನು ಅರಿತು ಮಾಸಾಶನ ಬಿಡುಗಡೆ ಮಾಡುವಂತೆ ಫಲಾನುಭವಿಗಳಾದ ಅಶ್ವತಮ್ಮ, ಈರಕ್ಕ, ಸರೋಜಮ್ಮ, ಮೂಕಮ್ಮ, ಪ್ರೇಮಕ್ಕ, ನಿಂಗಮ್ಮ, ನಾಗಮ್ಮ, ಗೌರಮ್ಮ, ಕರಿಯಜ್ಜಿ, ಪಾಲಮ್ಮ, ರುದ್ರಕ್ಕ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಫಲಾನುಭವಿಗಳ ಪರವಾಗಿ ರೈತ ಸಂಘದ ಮುಖಂಡ ಕೆ.ಪಿ.ಭೂತಯ್ಯ ಮಾತನಾಡಿ, ಗ್ರಾಮೀಣ ಬ್ಯಾಂಕಿನವರು ೬ ತಿಂಗಳಿಗೊಮ್ಮೆ ಮಾಸಾಶನ ನೀಡುತ್ತಿದ್ದಾರೆ. ಬಡಪಾಯಿಗಳ ದುಡ್ಡಿನಲ್ಲಿ ಬ್ಯಾಂಕಿನವರು ಬಡ್ಡಿ ವ್ಯವಹಾರ ಮಾಡುತ್ತಾರೆಯೇ ? ಎಂದು ಕಿಡಿ ಕಾರಿದರು.

ಸರ್ಕಾರ ಮಾಸಾಶನ ಬಿಡುಗಡೆ ಮಾಡಿ ಬ್ಯಾಂಕಿನವರು ನೀಡದಿದ್ದರೇ ಕೂಡಲೇ ಆ ಬ್ಯಾಂಕಿನಲ್ಲಿ ವಿತರಣೆ ಮಾಡುತ್ತಿರುವ ಸಾಮಾಜಿಕ ಭದ್ರತೆಯ ಫಲಾನುಭವಿಗಳ ಖಾತೆಯನ್ನು ಅಂಚೆ ಕಚೇರಿಗೆ ವರ್ಗಾವಣೆ ಮಾಡಿ ಪ್ರತಿ ತಿಂಗಳು ಫಲಾನುಭವಿಗಳಿಗೆ ಸರಿಯಾದ ಸಮಯದಲ್ಲಿ ಮಾಸಾಶನ ನೀಡುವ ವ್ಯವಸ್ಥೆಯನ್ನು ಜಿಲ್ಲಾಡಳಿತ ತುರ್ತಾಗಿ ಮಾಡಬೇಕೆಂದು ಅವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT