ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಚಿದ ಬೆಂಗಳೂರು ಗ್ರಾಮಾಂತರ, ತುಮಕೂರು

Last Updated 9 ಅಕ್ಟೋಬರ್ 2012, 6:00 IST
ಅಕ್ಷರ ಗಾತ್ರ

ಕೋಲಾರ: ಇಲ್ಲಿನ ಜಿಲ್ಲಾ  ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ 2012-13ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಯ 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ತಂಡ ಮತ್ತು ಶಿವಮೊಗ್ಗ ತಂಡ, ಬಾಲಕಿಯರ ವಿಭಾಗದಲ್ಲಿ ಬೆಂಗಳೂರು ಗ್ರಾಮಾಂತರ ತಂಡಗಳು ಸೆಮಿಫೈನಲ್ ಹಂತ ತಲುಪಿದವು.

14 ವರ್ಷ ವಯೋಮಿಯ ಬಾಲಕರ ವಿಭಾಗದಲ್ಲಿಯೂ ಬೆಂಗಳೂರು ಗ್ರಾಮಾಂತರ ತಂಡ ಸೆಮಿಫೈನಲ್ ಹಂತ ತಲುಪಿ ಗಮನ ಸೆಳೆದರೆ, ಬಾಲಕಿಯರ ವಿಭಾಗದಲ್ಲಿ ತುಮಕೂರು ತಂಡ ಫೈನಲ್ ಹಂತ ತಲುಪಿ ಎಲ್ಲರ ಹುಬ್ಬೇರುವಂತೆ ಮಾಡಿತು.

17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ತುಮಕೂರು ಮತ್ತು ಬೆಂಗಳೂರು ಉತ್ತರ ಹಾಗೂ ಕೋಲಾರ ಮತ್ತು ದಾವಣಗೆರೆ ತಂಡಗಳು ಕ್ವಾರ್ಟರ್ ಫೈನಲ್ ಹಂತ ತಲುಪಿದವು. ಬಾಲಕಿಯರ ವಿಭಾಗದಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ದಕ್ಷಿಣ ತಂಡಗಳು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು. ಮಧುಗಿರಿ ಮತ್ತು ಬೆಂಗಳೂರು ಉತ್ತರ ತಂಡ ಸೆಮಿಫೈನಲ್ ತಲುಪಿದವು.

14 ವರ್ಷ ವಯೋಮಿಯ ಬಾಲಕರ ವಿಭಾಗದಲ್ಲಿ ಶಿವಮೊಗ್ಗ- ತುಮಕೂರು, ಕೋಲಾರ- ದಾವಣಗೆರೆ ಮತ್ತು ಬೆಂಗಳೂರು ಉತ್ತರ-ದಕ್ಷಿಣ ತಂಡಗಳು ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದವು.

ಬಾಲಕಿಯರ ವಿಭಾಗದಲ್ಲಿ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ತಂಡಗಳು ಸೆಮಿಫೈನಲ್ ಹಂತ ತಲುಪಿವೆ.
ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡವು ತುಮಕೂರಿನ ತಂಡದೊಡನೆ ಸೆಣೆಸಲಿದೆ ಎಂದು ಜಿಲ್ಲಾ ಪ್ರಭಾರಿ ದೈಹಿಕ ಶಿಕ್ಷಣ ಅಧೀಕ್ಷಕ ಬಸವರಾಜ ಚಿಲಕಾಂತ ಮಠ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.

ಮೂಲ ಸೌಕರ್ಯ ಕಲ್ಪಿಸಿ
ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಎಲ್ಲ ಕ್ರೀಡಾಪಟುಗಳಿಗೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಚೌಡೇಶ್ವರಿ ಸೂಚಿಸಿದರು.

ನಗರದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ 2012-13ನೇ ಸಾಲಿನ ಬೆಂಗಳೂರು ವಿಭಾಗ ಮಟ್ಟದ 14, 17ವರ್ಷ ವಯೋಮಿತಿಯ ಹಿರಿಯ ಪ್ರಾಥಮಿಕ, ಪ್ರೌಢಶಾಲೆಗಳ ಬಾಲಕ-ಬಾಲಕಿಯರ ಥ್ರೋಬಾಲ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ವಿಭಾಗ ಮಟ್ಟದ 11 ಶೈಕ್ಷಣಿಕ ಜಿಲ್ಲೆಗಳಿಂದ ಬಂದಿರುವ ನೂರಾರು ಕ್ರೀಡಾಪಟುಗಳಿಗೆ ಯಾವ ಮೂಲಸೌಕರ್ಯದ ಕೊರತೆಯೂ ಆಗದಂತೆ ಅಧಿಕಾರಿ-ಸಿಬ್ಬಂದಿ ಮುತುವರ್ಜಿ ವಹಿಸಬೇಕು ಎಂದರು.

ವಿಭಾಗಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆ ಪ್ರಕ್ರಿಯೆ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಅದೇ ವೇಳೆ ಅದೊಂದು ಮಹತ್ತರ ಜವಾಬ್ದಾರಿ. ವಿಭಾಗ ಮಟ್ಟದ ಕ್ರೀಡಾಕೂಟವನ್ನು ಉತ್ತಮವಾಗಿ ಸಂಘಟಿಸಿ, ಕ್ರೀಡಾಪಟುಗಳನ್ನು ಉತ್ತೇಜಿಸಿದರೆ ಜಿಲ್ಲೆಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಹೆಸರು ದೊರಕುತ್ತದೆ. ಹೀಗಾಗಿ ಜಿಪಂ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚು ಕಾಳಜಿ ವಹಿಸಬೇಕು ಎಂದರು.

ವಿಭಾಗ ಮಟ್ಟದ ಸ್ಪರ್ಧೆಗೆ ಬಂದಿರುವ ಕ್ರೀಡಾಪಟುಗಳ ಪರಿಶ್ರಮ ಮತ್ತು ಸಾಧನೆ ಕಡಿಮೆ ಏನಲ್ಲ. ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಸಂದರ್ಭದಲ್ಲಿ ಸೋಲುಂಟಾದರೆ ಯಾರೂ ವಿಷಾದಿಸಬೇಕಿಲ್ಲ. ಸೋಲು-ಗೆಲುವುಗಳು ಸ್ಪರ್ಧೆಯ ಎರಡು ಮುಖಗಳು. ಪಾಲ್ಗೊಳ್ಳುವಿಕೆಯೇ ಮುಖ್ಯ ಎಂದು ನುಡಿದರು.

 ಉಪಕಾರ್ಯದರ್ಶಿ ಜಿ.ಎಫ್.ಬದನೂರು, ಡಿಡಿಪಿಐ ಎಸ್.ವಿ.ಪದ್ಮನಾಭ, ಶಿಕ್ಷಣಾಧಿಕಾರಿಗಳಾದ ಜಯರಾಮರೆಡ್ಡಿ ಮತ್ತು ಶಿವಲಿಂಗಯ್ಯ, ಯುವಜನ ಸೇವೆ-ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಬಿ.ರುದ್ರಪ್ಪ, ಜಿಲ್ಲಾ ಅಥ್ಲೆಟಿಕ್ ತರಬೇತುದಾರ ಪಿ.ಎಲ್.ಶಂಕರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT