ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿನುಗು ಮಿಂಚು : ಪೆಟ್ರಾ ಪ್ರಪಂಚ

Last Updated 1 ಡಿಸೆಂಬರ್ 2012, 20:44 IST
ಅಕ್ಷರ ಗಾತ್ರ

ಅರೇಬಿಯನ್ ಮರುಭೂಮಿಯ ಅಂಚಿನಲ್ಲಿರುವ ಪ್ರಾಚೀನ ನಗರ ಪೆಟ್ರಾ. ಜೋರ್ಡಾನ್‌ನ ಎತ್ತರದ ಬೆಟ್ಟಸಾಲುಗಳ ನಡುವೆ ಈ ನಗರವಿದೆ. ಬಹಳ ಹಿಂದೆ ಕೆತ್ತಲಾದ ರಚನೆಗಳು ಇಂದಿಗೂ ಕಣ್ಮನ ಸೆಳೆಯುತ್ತವೆ. ಬಂಡೆಗಳ ಮೇಲೆಯೇ ಕೆತ್ತನೆ ಮಾಡಿರುವುದರಿಂದ ಈಗಲೂ ಅವು ಉತ್ತಮ ಪರಿಸ್ಥಿತಿಯಲ್ಲಿವೆ. ಸುಣ್ಣಕಲ್ಲಿನ ಬಂಡೆಗಳ ರಚನೆಗಳು ಇಲ್ಲಿರುವುದರಿಂದ ಪೆಟ್ರಾ ನಗರವನ್ನು `ರೋಸ್ ಸಿಟಿ' ಎಂದೂ ಕರೆಯುತ್ತಾರೆ.

ಕ್ರಿ.ಪೂ. ನಾಲ್ಕನೇ ಶತಮಾನದಲ್ಲಿ ನೆಬಾಟಿಯನ್ ಜನರು ತಮ್ಮ ರಾಜಧಾನಿಯಾಗಿ ಪೆಟ್ರಾ ನಗರವನ್ನ ನಿರ್ಮಿಸಿದರು. ಕಾಲಕ್ರಮೇಣ ಅದು ಜನಸಮುದಾಯದಿಂದ ದೂರವೇ ಆಗಿ ಉಳಿಯಿತು. ಶತಮಾನಗಳವರೆಗೆ ಅದರ ಅಸ್ತಿತ್ವವೇ ಗೊತ್ತಿರಲಿಲ್ಲ. ಸ್ವಿಟ್ಜರ‌್ಲೆಂಡ್‌ನ ಯೊಹಾನ್ ಬರ್ಕಾಟ್ 19ನೇ ಶತಮಾನದಲ್ಲಿ ಈ ನಗರವನ್ನು ಪತ್ತೆಹಚ್ಚಿದ.

ಅರಬ್ ಮೂಲದ ನೆಬಾಟಿಯನ್ ಜನರು ನೀರಿನ ನಿರ್ವಹಣೆ ಹಾಗೂ ಎಂಜಿನಿಯರಿಂಗ್‌ನಲ್ಲಿ ಪಳಗಿದವರು. ಕಲಾವಂತಿಕೆಯೂ ಅವರ ರಕ್ತದಲ್ಲಿತ್ತು. ಕುಡಿಯುವ ನೀರು ಮೂಲೆಮೂಲೆಗೂ ತಲುಪುವಂಥ ದೊಡ್ಡ ಕಾಲುವೆಗಳನ್ನು ಪೆಟ್ರಾ ನಗರದಲ್ಲಿ ಅವರು ನಿರ್ಮಿಸಿದ್ದಾರೆ.

ಈ ಅದ್ಭುತವಾದ ನಗರಿಯನ್ನು ತಲುಪಲು ಸಿಕ್ ಎಂಬ ಸ್ಥಳದಿಂದ 1 ಕಿ.ಮೀ. ಕಿರುಹಾದಿಯಲ್ಲಿ ಪಯಣಿಸಬೇಕು. ಆ ಹಾದಿಯಲ್ಲಿ ಹೋದರೆ ಚೌಕಾಕಾರದ ಸ್ಥಳ ಅನಾವರಣಗೊಳ್ಳುತ್ತದೆ. ಪೆಟ್ರಾದ ಸುಂದರ ಕೆತ್ತನೆಗಳ ರಚನೆಗಳಿರುವ ಸ್ಥಳ ಅದು. `ಖಜಾನೆ' (ಏಕ್-ಖಜನೆ) ಹೆಸರಿನ ರಚನೆಯು 40 ಮೀಟರ್ ಉದ್ದವಿದೆ. ಮೂಲತಃ ಅದು ಪ್ರತಿಷ್ಠಿತ ಗೋಪುರ.

ಸ್ಥಳೀಯರ ಪ್ರಕಾರ ಕಳ್ಳರು ಇಲ್ಲಿ ಕದ್ದಮಾಲನ್ನು ಬಚ್ಚಿಡುತ್ತಿದ್ದರಂತೆ. ಹಾಗಾಗಿ ಇದನ್ನು ಖಜಾನೆ ಎಂದು ಕರೆಯಲಾಗುತ್ತಿದೆ. ಗ್ರೀಕ್-ರೋಮನ್ ಶೈಲಿಯ ರಂಗಮಂದಿರ ಕೂಡ ಇದ್ದು, ಅದೂ ಪ್ರಸಿದ್ಧಿಯಾಗಿದೆ. ನಾಲ್ಕು ಸಾವಿರ ಪ್ರೇಕ್ಷಕರು ಇಲ್ಲಿ ಆಸೀನರಾಗಬಹುದು.

ಅರಬರ ಮೂಲ ದೇವರು ದುಶಾರಾ. ಆಯತಾಕಾರದ ಕಪ್ಪು ಕಲ್ಲು ಈ ದೇವರ ಮೂರ್ತಿರೂಪ. ಅಲತ್ ದೇವಿಯ ರಚನೆಯೂ ಈ ಆಕಾರದಲ್ಲಿ ಮಿಳಿತಗೊಂಡಿದೆ. ಪೆಟ್ರಾದಲ್ಲಿ ಪ್ರಾರ್ಥನೆ ಸಲ್ಲಿಸಲು ವಿಶಾಲ ಸ್ಥಳಗಳಿದ್ದು, ನೈವೇದ್ಯ ಅಥವಾ ಬಲಿ ನೀಡಲೂ ಹೊರಭಾಗದಲ್ಲಿ ಅವಕಾಶವಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT