ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡರಗಿ : ಶುದ್ಧ ನೀರಿಗೆ ತಪ್ಪದ ಪರದಾಟ

Last Updated 7 ಮೇ 2012, 6:15 IST
ಅಕ್ಷರ ಗಾತ್ರ

ಮುಂಡರಗಿ: ಉತ್ತರ ಕರ್ನಾಟಕದ ಬಳ್ಳಾರಿ, ಗದಗ, ಕೊಪ್ಪಳ ಸೇರಿದಂತೆ ಕೆಲ ಜಿಲ್ಲೆಗಳ ಜೀವ ನಾಡಿಯಾಗಿರುವ ತುಂಗಭದ್ರಾ ನದಿ ತಾಲ್ಲೂಕಿನಲ್ಲಿ ಹರಿಯುತ್ತಿದ್ದರೂ ದಶಕಗಳಿಂದ ತಾಲ್ಲೂಕಿನ ಕೆಲವು ಗ್ರಾಮಗಳು ಶುದ್ಧವಾದ ಕುಡಿಯುವ ನೀರಿಗಾಗಿ ಪರದಾಡಬೇಕಿದೆ.

ತಾಲ್ಲೂಕಿನ ಅತ್ತಿಕಟ್ಟಿ, ಡೋಣಿ, ಡೋಣಿ ತಾಂಡಾ, ಹಿರೇವಡ್ಡಟ್ಟಿ, ಬಾಗೇವಾಡಿ, ಮುರುಡಿ, ಮುರುಡಿತಾಂಡಾ, ಜ್ಯಾಲವಾಡಿಗಿ, ಹಳ್ಳಿಗುಡಿ, ವೆಂಕಟಾಪೂರ, ಪೇಠಾಲೂರ, ಹಿರೇವಡ್ಡಟ್ಟಿ, ಹಾರೋಗೇರಿ, ಕಲಕೇರಿ, ವಿರುಪಾಪೂರ ಮೊದಲಾದ ಗ್ರಾಮಗಳ ಜನರು ಶುದ್ಧ ಕುಡಿಯುವ ನೀರು ದೊರೆಯದೆ ನಿತ್ಯ ಪರದಾಡುತ್ತಿದ್ದಾರೆ.
ತಾಲ್ಲೂಕಿನ ಹಳ್ಳಿಗುಡಿ, ವೆಂಕಟಾಪೂರ, ಪೇಠಾಲೂರ, ಕಲಕೇರಿ, ವಿರುಪಾಪೂರ, ಮುಷ್ಠಿಕೊಪ್ಪ ಮೊದಲಾದ ಗ್ರಾಮಗಳಿಗೆ ಸರಬರಾಜು ಆಗುವ ಬೋರವೆಲ್ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚು ಇರುವುದರಿಂದ ನೀರು ಕುಡಿಯಲು ಯೋಗ್ಯವಲ್ಲ ಎಂದು ಪ್ರಮಾಣಿಕರಿ ಸಲಾಗಿದ್ದರೂ ಗ್ರಾಮಸ್ಥರು ಅನ್ಯ ಮಾರ್ಗವಿಲ್ಲದೆ ಫ್ಲೋರೈಡ್ ಅಂಶ ಇರುವ ನೀರನ್ನೇ ಕುಡಿಯಬೇಕಾದ ಅನಿವಾರ್ಯತೆ ಉಂಟಾಗಿದೆ.

ಕೆಲ ಗ್ರಾಮಗಳಲ್ಲಿ ಸಾಕಷ್ಟು ಪ್ರಮಾಣದ ಬೋರ್‌ವೆಲ್ ನೀರು ಲಭ್ಯವಿದ್ದರೂ, ಅದನ್ನು ಸಕಾಲದಲ್ಲಿ ಗ್ರಾಮಸ್ಥರಿಗೆ ಪೂರೈಸಲು ವಿದ್ಯುತ್ ಕೊರತೆ ಕಾಡುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೆಲವು ಗ್ರಾಮಗಳಲ್ಲಿ ಸಕಾಲದಲ್ಲಿ ನೀರು ಪೂರೈಸಲಾಗುತ್ತಿಲ್ಲ ಎಂದು ಎಂಬುದು ಅಧಿಕಾರಿ ಸಮಜಾಯಿಷಿ. ಇದರಿಂದಾಗಿ ಸಾರ್ವಜನಿಕರು ಗ್ರಾಮದಲ್ಲಿ ಸಾಕಷ್ಟು ನೀರಿದ್ದರೂ ನೀರಿನ ತೊಂದರೆ ಅನುಭವಿಸುವಂತಾಗಿದೆ.

ಗದಗ-ಬೆಟಗೇರಿ ನಗರವನ್ನು ಒಳಗೊಂಡಂತೆ ಜಿಲ್ಲೆಯ ವಿವಿಧ ನಗರ, ಪಟ್ಟಣ ಮತ್ತು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ತಾಲ್ಲೂಕಿನ ತುಂಗಭದ್ರಾ ನದಿಯಲ್ಲಿ ನೀರು ಗಣನೀಯವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಎರಡು-ಮೂರು ದಿನಗಳಿಗೊಮ್ಮೆ ಮಾತ್ರ ತುಂಗಭದ್ರಾ ನದಿ ನೀರು ಪೂರೈಸಲಾಗುತ್ತಿದೆ.

ಉಳಿದಂತೆ ಎರಡು ದಿನಗಳಿಗೊಮ್ಮೆ ಸವಳು ನೀರನ್ನು ಪೂರೈಸಲಾಗುತ್ತಿದೆ. ಬರಗಾಲದ ಹಿನ್ನೆಲೆಯಲ್ಲಿ ಪಟ್ಟಣವನ್ನು ಒಳಗೊಂಡಂತೆ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಹೊಸದಾಗಿ ಬೋರವೆಲ್‌ಗಳನ್ನು ಕೊರೆಯಿಸಲಾಗಿದ್ದರೂ, ವಿದ್ಯುತ್ ಕೊರತೆ ನೀರು ಸರಬರಾಜಿಗೆ ತೀವ್ರ ಅಡಚಣೆ ಉಂಟುಮಾಡುತ್ತಿದೆ.
-ಕಾಶಿನಾಥ ಬಿಳಿಮಗ್ಗದ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT