ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಎದುರು ಬೆಳಗಿದ ರಾಹುಲ್‌

ರಣಜಿ ಕ್ರಿಕೆಟ್‌: ಕರ್ನಾಟಕ ಸಾಧಾರಣ ಮೊತ್ತ, ಹಾಲಿ ಚಾಂಪಿಯನ್ನರ ಮೇಲುಗೈ
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಾ ಮುಂದು ತಾ ಮುಂದು ಎಂದು ಜಿದ್ದಿಗೆ ಬಿದ್ದವರಂತೆ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದರು. ಇದರಿಂದ ಕರ್ನಾಟಕ ತಂಡಕ್ಕೆ ಪ್ರಖರವಾದ ಬೆಳಕು ಕೂಡಾ ಮಬ್ಬು ಕತ್ತಲಿನಂತೆ ಭಾಸವಾಯಿತು. ಆದರೆ, ಭವಿಷ್ಯದ ರಾಹುಲ್‌ ದ್ರಾವಿಡ್‌ ಎನಿಸಿಕೊಳ್ಳುತ್ತಿರುವ ಕೆ.ಎಲ್‌. ರಾಹುಲ್‌ ಶತಕ ಗಳಿಸುವ ಮೂಲಕ ಆತಿಥೇಯ ತಂಡಕ್ಕೆ ಬೆಳಕಾದರು.

ಈ ಪಂದ್ಯದಲ್ಲಿ ಗೆಲುವು ಪಡೆದರೆ ಕರ್ನಾಟಕ ತಂಡದ ಕ್ವಾರ್ಟರ್‌ ಫೈನಲ್‌ ಪ್ರವೇಶದ ಹಾದಿ ಸುಲಭವಾಗುತ್ತದೆ. ಜೊತೆಗೆ 40 ಸಲ ರಣಜಿ ಚಾಂಪಿಯನ್‌ ಆಗಿರುವ ಮುಂಬೈ ತಂಡವನ್ನು ಮೊದಲ ಸಲ ಸೋಲಿಸುವ ಕನಸೂ ನನಸಾಗುತ್ತದೆ. ಇದೇ ಆಸೆ ಹೊತ್ತುಕೊಂಡಿರುವ ವಿನಯ್‌ ಕುಮಾರ್‌ ಬಳಗ ರಣಜಿ ಕ್ರಿಕೆಟ್‌ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಮುಂಬೈ ಎದುರು ಮೊದಲ ದಿನ ಸಾಧಾರಣ ಮೊತ್ತ ಕಲೆ ಹಾಕಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ಆರಂಭವಾದ ಪಂದ್ಯದಲ್ಲಿ ಮುಂಬೈ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ಮೊದಲ ದಿನದಾಟದಲ್ಲಿ 91 ಓವರ್‌ ಗಳಲ್ಲಿ ಏಳು ವಿಕೆಟ್‌ ಕಳೆದುಕೊಂಡು 228 ರನ್‌ ಕಲೆ ಹಾಕಿತು. ಇದರಲ್ಲಿ ರಾಹುಲ್‌ ಗಳಿಸಿದ್ದು 120 ರನ್‌!

ಸೊಗಸಾದ ಆಟ: ಕಣ್ಣ ಮುಂದೆ ಪದೇ ಪದೇ ಕಾಡುವ ‘ಗೋಡೆ’ ಖ್ಯಾತಿಯ ದ್ರಾವಿಡ್‌ ಅವರ ಕವರ್ ಡ್ರೈವ್‌ ಹೊಡೆತಗಳನ್ನು ಮತ್ತೆ ಮತ್ತೆ ನೆನಪಾಗುವಂತೆ ಮಾಡಿದ್ದು ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌. ರಾಹುಲ್‌. ದ್ರಾವಿಡ್‌ ಹೊಂದಿದ್ದ ಬದ್ಧತೆ ಹಾಗೂ ಸ್ಥಿರತೆಯನ್ನು ಯುವ ಬ್ಯಾಟ್ಸ್‌ಮನ್‌ ರಾಹುಲ್‌ ಕೂಡಾ ಮೈಗೂಡಿಸಿಕೊಂಡಿದ್ದಾರೆ.

ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ಪಂಜಾಬ್‌ (92) ಮತ್ತು ಹರಿಯಾಣ ವಿರುದ್ಧ (98) ಗಳಿಸಿದ ರನ್‌ಗಳು ಇದಕ್ಕೆ ಸಾಕ್ಷಿ. ಒಂದು ಬದಿ ಮುಂಬೈ ಬೌಲರ್‌ಗಳನ್ನು ಎದುರಿಸಲು ಉಳಿದ ಬ್ಯಾಟ್ಸ್‌ಮನ್‌ಗಳು ಪರದಾಡುತ್ತಿದ್ದರೆ, ರಾಹುಲ್‌ ದಿನ ಪೂರ್ತಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತರು.

ಹಿಂದಿನ ಎರಡು ಪಂದ್ಯಗಳಲ್ಲಿ ಶತಕದ ಹೊಸ್ತಿಲಲ್ಲಿದ್ದಾಗ ರಾಹುಲ್‌ ಔಟ್‌ ಆಗಿದ್ದರು. ಆದರೆ, ಹಾಲಿ ಚಾಂಪಿಯನ್‌ ಮುಂಬೈ ಎದುರು ಆ ನಿರಾಸೆ ಕಾಡಲಿಲ್ಲ. 99 ರನ್‌ ಗಳಿಸಿದ್ದ ವೇಳೆ ವಿಶಾಲ್‌ ದಭೋಲ್ಕರ್‌ ಎಸೆತದಲ್ಲಿ ಒಂಟಿ ರನ್‌ ಗಳಿಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮೂರನೇ ಶತಕ ಗಳಿಸಿದರು. ಆಗ ನೋಡಬೇಕಿತ್ತು ರಾಹುಲ್‌ ಸಂಭ್ರಮ. ಬ್ಯಾಟ್‌ ಎತ್ತಿ, ಜಿಗಿದು ಕುಣಿದಾಡಿ ಸಂತಸಪಟ್ಟರು.

19 ಮತ್ತು 23 ವರ್ಷದ ಒಳಗಿನವರ ಟೂರ್ನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ರಾಹುಲ್‌ ಈ ಸಲದ ರಣಜಿಯಲ್ಲಿ ಗಳಿಸಿದ ಎರಡನೇ ಶತಕ ಇದಾಗಿದೆ. 276 ಎಸೆತಗಳನ್ನು ಎದುರಿಸಿರುವ ಅವರು ಕ್ರೀಸ್‌ನಲ್ಲಿದ್ದಾರೆ. ಮೊದಲ ದಿನದಾಟದಲ್ಲಿ ಕರ್ನಾಟಕ 26 ಬೌಂಡರಿಗಳನ್ನು ಬಾರಿಸಿತು. ಅದರಲ್ಲಿ ರಾಹುಲ್‌ ಸಿಡಿಸಿದ್ದು 16 ಬೌಂಡರಿ. ಕವರ್, ಲಾಂಗ್‌ ಆನ್‌, ಹಾಗೂ ಮಿಡ್‌ ವಿಕೆಟ್‌ ಬಳಿ ಬೌಂಡರಿ ಸಿಡಿಸಿ ಎದುರಾಳಿ ಬೌಲರ್‌ಗಳ ಚಳಿ ಬಿಡಿಸಿದರು.

ರಣಜಿಗೆ ಪದಾರ್ಪಣೆ ಮಾಡಿದ ಆರ್. ಸಮರ್ಥ್‌ ಜೊತೆ ಇನಿಂಗ್ಸ್‌ ಆರಂಭಿಸಿದ ರಾಹುಲ್‌ಗೆ ಸೂಕ್ತ ಬೆಂಬಲ ಸಿಗಲಿಲ್ಲ. 18 ರನ್‌ ಗಳಿಸಿ ಸಮರ್ಥ್‌ ಔಟಾದರು. ಅವಕಾಶ ಹಾಳುಮಾಡಿಕೊಂಡ ಮನೀಷ್‌: ಎರಡು ಸಲ ಜೀವದಾನ ಸಿಕ್ಕರೂ ಮನೀಷ್‌ ಪಾಂಡೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲಿಲ್ಲ. ಕರುಣ್‌ ನಾಯರ್‌ (13) ಔಟಾದ ನಂತರ ಬಂದ ಪಾಂಡೆ ರನ್‌ ಖಾತೆ ತೆರೆಯುವ ಮುನ್ನವೇ ಜೀವದಾನ ಪಡೆದರು.

38.4ನೇ ಓವರ್‌ನ ಶಾರ್ದುಲ್‌  ಎಸೆತದಲ್ಲಿ ಪಾಂಡೆ ಎಲ್‌ಬಿ ಬಲೆಗೆ ಬಿದ್ದಿದ್ದರು. ಆದರೆ, ಆ ಎಸೆತ ನೋಬಾಲ್‌ ಆಗಿತ್ತು. ನಂತರದ ಓವರ್‌ನಲ್ಲಿಯೂ ರನ್‌ ಔಟ್‌ ಅಪಾಯದಿಂದ ಪಾರಾದರು. ಆದರೆ, ಪಾಂಡೆ ಒಂದು ರನ್‌ ಗಳಿಸಿದ ವೇಳೆ ಶಾರ್ದುಲ್‌ ಎಸೆತದಲ್ಲಿ ಬೌಲ್ಡ್‌ ಆದರು. ನಂತರ ಬಂದ ಉಪನಾಯಕ ಸಿ.ಎಂ. ಗೌತಮ್‌ ಕೂಡಾ ಒಂದೇ ನಿಮಿಷದಲ್ಲಿ ಡ್ರೆಸ್ಸಿಂಗ್‌ ಕೊಠಡಿ ಸೇರಿಕೊಂಡರು.  ಕರ್ನಾಟಕ ಐದು ರನ್ ಕಲೆ ಹಾಕುವ ಅಂತರದಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ರಂಜಿಸಿದ ಬಿನ್ನಿ: ರಜೆ ದಿನವಾಗಿದ್ದ ಕಾರಣ ಕೆಲ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದಿದ್ದರು. ಅನುಭವಿ ಸ್ಟುವರ್ಟ್‌ ಬಿನ್ನಿ (38) ಮಿಡ್‌ ಆಫ್‌ ಬಳಿ ಎರಡು ಸಿಕ್ಸರ್‌ ಸಿಡಿಸಿ ಪ್ರೇಕ್ಷಕರನ್ನು ರಂಜಿಸಿದರು. ಎರಡು ಬೌಂಡರಿ ಬಾರಿಸಿದ ಅವರು ರಾಹುಲ್‌ಗೆ ಅಲ್ಪ ಸಾಥ್‌ ನೀಡಿದರು. 69ನೇ ಓವರ್‌ನಲ್ಲಿ ಜಾವೇದ್‌ ಖಾನ್‌ ಎಸೆತದಲ್ಲಿ ಬೌಂಡರಿ ಬಳಿ ಬಿನ್ನಿ ಬಾರಿಸಿದ ಚೆಂಡನ್ನು ಸಿದ್ದೇಶ್‌ ಲಾಡ್‌ ಹಿಡಿತಕ್ಕೆ ಪಡೆದಾಗ ಇವರ ಜೊತೆಯಾಟಕ್ಕೆ ತೆರೆ ಬಿತ್ತು.

ನಾಯಕ ವಿನಯ್‌ (5), ಚೊಚ್ಚಲ ರಣಜಿ ಆಡಿದ ಶ್ರೇಯಸ್‌ ಗೋಪಾಲ್‌ (11) ಬಂದಷ್ಟೇ ವೇಗವಾಗಿ ಔಟ್‌ ಆದರು. 7 ರನ್‌ ಗಳಿಸಿರುವ ಅಭಿಮನ್ಯು ಮಿಥುನ್‌ ಮತ್ತು ರಾಹುಲ್‌ ಕ್ರೀಸ್‌ನಲ್ಲಿದ್ದಾರೆ. 

ಬೀಗಿದ ಬೌಲರ್‌ಗಳು: ದಿನದಾಟದ ಮೊದಲ ಅವಧಿಯಲ್ಲಿ ಆತಿಥೇಯರನ್ನು ಮುಂಬೈ ಬೌಲರ್‌ಗಳು ಹಿಡಿತದಲ್ಲಿ ಇಟ್ಟುಕೊಂಡರು. ಶಾರ್ದುಲ್‌ ಮತ್ತು ವಿಶಾಲ್‌ ತಲಾ ಎರಡು ವಿಕೆಟ್‌ ಪಡೆದು ಬೀಗಿದರು. ಮೊದಲ ಅವಧಿಯಲ್ಲಿ ಸಾಧಿಸಿದ್ದ ಹಿಡಿತ ನಂತರ ಸಡಿಲಗೊಂಡಿತು. ರಾಹುಲ್‌ ಮೈ ಚಳಿ ಬಿಟ್ಟು ಎಲ್ಲಾ ಬೌಲರ್‌ಗಳನ್ನು ದಂಡಿಸಿದರು. ಆತಿಥೇ ಯರನ್ನು ಆಲ್ ಔಟ್‌ ಮಾಡುವ ಗುರಿ ಈಡೇರಲಿಲ್ಲವಾದರೂ, ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಸಮಾಧಾನ ಮಾತ್ರ ಮುಂಬೈ ತಂಡಕ್ಕೆ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT