ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಮಳೆ ಮುನಿಸು: ಕೃಷಿಕರಲ್ಲಿ ಆತಂಕ

Last Updated 20 ಜುಲೈ 2012, 6:05 IST
ಅಕ್ಷರ ಗಾತ್ರ

ಶನಿವಾರಸಂತೆ: ಮುಂಗಾರು ಮಳೆಯ ಕಣ್ಣಾಮುಚ್ಚಾಲೆ ಆಟದಿಂದ ಶನಿವಾರಸಂತೆ ಹೋಬಳಿ ವ್ಯಾಪ್ತಿಯ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಹಗಲಿನಲ್ಲಿ ಬಿಸಿಲಿನ ವಾತಾವರಣ. ರಾತ್ರಿಯಲ್ಲಿ ತುಂತುರು ಮಳೆಯಾಗುತ್ತಿದೆ. ಆರಿದ್ರಾ ಮಳೆ ಕೈಕೊಟ್ಟಂತೆ, ಪುನರ್ವಸು ಮಳೆಯೂ ಕೈಕೊಟ್ಟಿದೆ. ಶುಕ್ರವಾರದಿಂದ ಪುಷ್ಯ ಮಳೆಯಾದರೂ ಸುರಿಯಬಹುದು ಅನ್ನೋ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಕೆಲ ರೈತರು.

ಈ ವಿಭಾಗದಲ್ಲಿ ಶೇ10ರಷ್ಟು ನಾಟಿಕಾರ್ಯ ಮುಗಿದಿಲ್ಲ. ಕಳೆದ ವರ್ಷ ಇದೇ ಅವಧಿಗೆ ಶೇ 60ರಷ್ಟು ನಾಟಿ ಕಾರ್ಯ ಮುಗಿದಿತ್ತು. ಕೆರೆ, ಹಳ್ಳ, ಬಾವಿಯ ನೀರಿನ ಅನುಕೂಲ ಇರುವ ಕೆಲ ರೈತರು ಅದೇ ನೀರು ಬಳಸಿ ನಾಟಿ ಕಾರ್ಯ ಕೈಗೊಂಡಿದ್ದಾರೆ. ಸಸಿಮಡಿಗಳು ಬೆಳೆದು ನಿಂತಿವೆ. ಈಗಲೂ ಮಳೆ ಬೀಳದಿದ್ದರೆ ಒಣಗಿ ಹೋಗುವ ಸಂಭವವಿದೆ.

ಶನಿವಾರಸಂತೆ ಹೋಬಳಿಯಲ್ಲಿ ಇಲ್ಲಿಯವರೆಗೆ ಸುಮಾರು 19 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ 38 ಇಂಚು ಮಳೆಯಾಗಿತ್ತು. ಇನ್ನು ಮುಂದೆ ಮಳೆಯಾದರೂ ಸಹ ವ್ಯವಸಾಯಕ್ಕೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಬತ್ತದ ವ್ಯವಸಾಯವನ್ನೇ ಅವಲಂಬಿಸಿರುವ ರೈತರು ಅಲ್ಪಾವಧಿಯ ಬೆಳೆ ಬೆಳೆಯಬೇಕು ಎಂಬ ಅಭಿಪ್ರಾಯವೂ ರೈತವಲಯದಲ್ಲಿ ವ್ಯಕ್ತವಾಗಿದೆ.

ಈ ವರ್ಷದ ಮುಂಗಾರು ಮಳೆ ರೈತರ ಭರವಸೆಯನ್ನು ಹುಸಿಯಾಗಿಸಿದ್ದು, ಬರಗಾಲದ ಭೀತಿಯನ್ನು ಮೂಡಿಸಿದೆ. ಈಗಾಗಲೇ ಅಕ್ಕಿ ಮತ್ತು ದ್ವಿದಳ ಧಾನ್ಯಗಳ ಬೆಲೆ ಗಗನಕ್ಕೇರಿದ್ದು ಕೂಲಿಕಾರ್ಮಿಕರು  ಹಾಗೂ ಮಧ್ಯಮ ವರ್ಗದವರು ಆತಂಕಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT