ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಯದ ಮೈತ್ರಿ ಗೊಂದಲ

ಲೋಕಸಭೆ, ವಿಧಾನಪರಿಷತ್ ಉಪಚುನಾವಣೆ: ದೇವೇಗೌಡ, ಶೆಟ್ಟರ್ ವ್ಯತಿರಿಕ್ತ ಹೇಳಿಕೆ
Last Updated 5 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆಯ ಎರಡು ಸ್ಥಾನಗಳು ಹಾಗೂ ವಿಧಾನ ಪರಿಷತ್‌ನ 3 ಸ್ಥಾನಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಗೊಂದಲ ಇನ್ನೂ ಮುಂದುವರಿದಿದ್ದು, `ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ. ಏಕಾಂಗಿಯಾಗಿ ಪಕ್ಷ ಹೋರಾಟ ನಡೆಸುತ್ತದೆ' ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದರೆ, `ಮೈತ್ರಿ ಮಾತುಕತೆ ಇನ್ನೂ ಮುಂದುವರಿದಿದೆ' ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿ ಕುತೂಹಲ ಮೂಡಿಸಿದ್ದಾರೆ.

ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಸೋಮವಾರ ಅಂತಿಮ ದಿನವಾಗಿತ್ತು. ಜೆಡಿಎಸ್ ಈ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿಲ್ಲ. ಆದರೆ ಲೋಕಸಭಾ ಉಪಚುನಾವಣೆ ನಡೆಯುವ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ನಾಮಪತ್ರ ವಾಪಸು ಪಡೆಯಲು ಬುಧವಾರ ಅಂತಿಮ ದಿನ. ಅಷ್ಟರಲ್ಲಿ ಮೈತ್ರಿ ಗೊಂದಲ ಬಗೆಹರಿಯಬಹುದು ಎನ್ನುವ ಭಾವನೆ ಬಿಜೆಪಿ ನಾಯಕರದ್ದು.

`ನಾಮಪತ್ರ ವಾಪಸು ಪಡೆಯಲು ಇನ್ನೂ 2 ದಿನ ಇದ್ದು ಅಷ್ಟರಲ್ಲಿ ಮೈತ್ರಿ ಬಗ್ಗೆ ತೀರ್ಮಾನವಾಗುತ್ತದೆ. ಈ ಬಗ್ಗೆ ಮಾತುಕತೆ ನಡೆಸುವ ಜವಾಬ್ದಾರಿಯನ್ನು ಮಾಜಿ ಸಚಿವ ಆರ್.ಅಶೋಕ್ ಅವರಿಗೆ ನೀಡಲಾಗಿದೆ' ಎಂದು ಜಗದೀಶ ಶೆಟ್ಟರ್ `ಪ್ರಜಾವಾಣಿ'ಗೆ ತಿಳಿಸಿದರು.

ಒತ್ತಡ ಕಾರಣ: `ಪ್ರತಿಯೊಂದು ಕ್ಷೇತ್ರದಲ್ಲೂ ನಮ್ಮ ಕುಟುಂಬದವರನ್ನೇ ಕಣಕ್ಕಿಳಿಸಿ ಜಾತ್ಯತೀತ ಜನತಾ ದಳವನ್ನು ಮತ್ತೊಂದು ಡಿಎಂಕೆ ರೀತಿಯ ಪಕ್ಷವನ್ನಾಗಿ ಪರಿವರ್ತಿಸಲು ನಾನು ಸಿದ್ಧನಿಲ್ಲ. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸಬೇಕು ಎಂದು ಮುಖಂಡರು ಮತ್ತು ಕಾರ್ಯಕರ್ತರು ಒತ್ತಡ ಹೇರಿದರು. ಹೀಗಾಗಿ ಅನಿವಾರ್ಯವಾಯಿತು' ಎಂದು ದೇವೇಗೌಡರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.

ಬಿಜೆಪಿ ಜತೆ ಮೈತ್ರಿ ಬೆಳೆಸಲು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಒಲವು ತೋರಿಸಿದ್ದಾರೆಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, `ನಾನು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ. ಹಿರಿಯ ಮುಖಂಡರ ಜತೆ ಚರ್ಚಿಸಿ ಅಂತಿಮ ತೀರ್ಮಾನವನ್ನು ನಾನೇ ಕೈಗೊಳ್ಳುತ್ತೇನೆ' ಎಂದರು.

`ನನ್ನ ರಾಜಕೀಯ ಮತ್ತು ಜಾತ್ಯತೀತತೆಯ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಕೆಲವು ಮಧ್ಯವರ್ತಿಗಳು ಮಾತ್ರ ಬಿಜೆಪಿ ಜತೆ ಕೈಜೋಡಿಸುವ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಕದ್ದು ಮುಚ್ಚಿ ರಾಜಕೀಯ ಮಾಡುವ ಅಗತ್ಯವಿಲ್ಲ. ಬಿಜೆಪಿಯ ತೀರ್ಮಾನಕ್ಕೂ ನಮಗೂ ಸಂಬಂಧ ಇಲ್ಲ. ಈ ಉಪಚುನಾವಣೆಯಲ್ಲಿ ಇಡೀ ಸರ್ಕಾರ ನನ್ನ ವಿರುದ್ಧ ಸಮರ ಸಾರಿದೆ. ಆದರೆ, ಯಾವ ರೀತಿ ಹೋರಾಟ ಮಾಡಬೇಕು ಎನ್ನುವುದು ನಮಗೂ ಗೊತ್ತಿದೆ' ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

`ತುಮಕೂರಿನಲ್ಲಿ ಬಿಜೆಪಿ ಮುಖಂಡ ಕೃಷ್ಣಕುಮಾರ್ ಅವರನ್ನು ಭೇಟಿಯಾಗಿದ್ದು ನಿಜ. ಕದ್ದು ಮುಚ್ಚಿ ಭೇಟಿ ಮಾಡಿಲ್ಲ. ಅವರು ಈ ಹಿಂದೆ ಜೆಡಿಎಸ್‌ನಲ್ಲಿದ್ದರು. ತಮಗಾಗಿರುವ ನೋವು ಹಂಚಿಕೊಂಡರು. ಜೆಡಿಎಸ್‌ಗೆ ಬೆಂಬಲ ನೀಡುವಂತೆ ಅವರಿಗೆ ಕೋರಿದ್ದೇನೆ' ಎಂದರು.

`ಪಕ್ಷಕ್ಕೆ ಶಕ್ತಿ ಇಲ್ಲದ ಕಾರಣ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ, ಇದಕ್ಕೂ ಅಪಾರ್ಥ ಕಲ್ಪಿಸುವುದು ಬೇಡ. ಪ್ರತಿ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಕ್ತಿ ಎಷ್ಟು ಎನ್ನುವುದು ಗೊತ್ತಿದೆ. ಚುನಾವಣೆ ಎನ್ನುವುದು ಮಕ್ಕಳಾಟ ಅಲ್ಲ' ಎಂದು ಹೇಳಿದರು.

`ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಜತೆಗೆ ಚುನಾವಣೆ ವಿಷಯ ಕುರಿತು ಮಾತನಾಡಿಲ್ಲ. ಆದರೆ, ಆ ಪಕ್ಷದ ವಕ್ತಾರರ ಕುರಿತು ಚರ್ಚಿಸಿದ್ದೇವೆ. ಜತೆಗೆ ಬೆಂಬಲ ನೀಡುವಂತೆ ಎಡಪಕ್ಷಗಳನ್ನು ಕೋರಿದ್ದೇವೆ' ಎಂದರು.

ಧಾರವಾಡ ವರದಿ: `ಲೋಕಸಭೆ, ವಿಧಾನಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಸಲುವಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನಮ್ಮಂದಿಗೆ ಮೈತ್ರಿ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಇಲ್ಲಿ ಪುನರುಚ್ಚರಿಸಿದರು.

ವಿಧಾನಪರಿಷತ್ ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿ ಪ್ರದೀಪ ಶೆಟ್ಟರ್ ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಈ ಸಂಬಂಧ ಕುಮಾರಸ್ವಾಮಿ ನಮ್ಮಂದಿಗೆ ಈಗಾಗಲೇ ಮಾತನಾಡಿದ್ದಾರೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸೋಲಿಸಲು ನಮ್ಮ ಮೈತ್ರಿ ಅವರಿಗೆ ಅಗತ್ಯ ಎಂದು ಅನಿಸಿದೆ. ಇದರ ನಿರ್ಧಾರವನ್ನು ನಮ್ಮ ಪಕ್ಷದ ರಾಷ್ಟ್ರೀಯ ನಾಯಕತ್ವವೇ ಮಾಡಲಿದ್ದು, ಅದಕ್ಕಾಗಿ ಎಚ್‌ಡಿಕೆ ಪ್ರಸ್ತಾವ ಕುರಿತ ವರದಿಯನ್ನು ದೆಹಲಿಗೆ ಕಳುಹಿಸಲಿದ್ದೇವೆ' ಎಂದರು.

ಗದಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, `ಮೈತ್ರಿ ಸಂಬಂಧ ಈವರೆಗೆ ಜೆಡಿಎಸ್ ಯಾವುದೇ ಪಕ್ಷದೊಂದಿಗೆ ಮಾತುಕತೆ ನಡೆಸಿಲ್ಲ. `ಎರಡೂ ಲೋಕಸಭಾ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ವಿಶ್ವಾಸ ಪಕ್ಷಕ್ಕಿದೆ. ಅವಧಿ ಕಡಿಮೆ ಇರುವುದರಿಂದ ವಿಧಾನಪರಿಷತ್ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿಲ್ಲ. ಮೈತ್ರಿಯಾಗದಿದ್ದರೆ ಶಾಸಕರೊಂದಿಗೆ ಚರ್ಚಿಸಿ, ವಿಧಾನಪರಿಷತ್ ಚುನಾವಣೆಯಲ್ಲಿ ಯಾರನ್ನು ಬೆಂಬಲಿಸಬೇಕು ಎಂಬ ನಿರ್ಧಾರವನ್ನು ಕುಮಾರಸ್ವಾಮಿ ಕೈಗೊಳ್ಳುತ್ತಾರೆ. ಆ. 7ರ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ' ಎಂದರು.

`ಅಳಿವು- ಉಳಿವು'
ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪಚುನಾವಣೆ ನನ್ನ ರಾಜಕೀಯ ಜೀವನದ ಕೊನೆಯ ಹೋರಾಟ. ಇದು ಅಳಿವು ಮತ್ತು ಉಳಿವಿನ ಪ್ರಶ್ನೆ. ಈ ಚುನಾವಣೆಯಲ್ಲಿ ಒಳ ಒಪ್ಪಂದ ಅಥವಾ ಹೊರ ಒಪ್ಪಂದ ಎನ್ನುವ ಪ್ರಶ್ನೆಯೇ ಇಲ್ಲ. ನಾನು ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ. ಹಿರಿಯ ಮುಖಂಡರ ಜತೆ ಚರ್ಚಿಸಿ ಅಂತಿಮ ತೀರ್ಮಾನವನ್ನು ನಾನೇ ಕೈಗೊಳ್ಳುತ್ತೇನೆ - ದೇವೇಗೌಡ.

ಕಾಂಗ್ರೆಸ್‌ಗೇ ಲಾಭ:ಸಿ.ಎಂ
ಬೆಂಗಳೂರು:
`ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್‌ಗೆ ಹೆಚ್ಚಿನ ಲಾಭವಾಗಲಿದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಸೋಮವಾರ ಏರ್ಪಡಿಸಿದ್ದ ವಿಪತ್ತು ನಿರ್ವಹಣೆ ಕಾರ್ಯಾಗಾರ ಉದ್ಘಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿ, `ಕೋಮುವಾದಿ ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಪಡೆದಿದ್ದಕ್ಕೆ ನನಗೆ ಈಗಲೂ ಪಶ್ಚಾತ್ತಾಪ ಆಗಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಎಚ್.ಡಿ. ದೇವೇಗೌಡರು ಅದೇ ಪಕ್ಷದ ಜತೆಯಲ್ಲಿ ಮತ್ತೆ ಹೊಂದಾಣಿಕೆ ಮಾಡಿಕೊಳ್ಳಲು ಹೊರಟಿದ್ದಾರೆ. ಜಾತ್ಯತೀತ ಜನತಾದಳದ ಬಣ್ಣ ಜನರ ಮುಂದೆ ಬಯಲಾಗಲಿದೆ' ಎಂದು ಅವರು ವ್ಯಂಗ್ಯವಾಡಿದರು.

`ಸಾಕು ತಂದೆಯ ಅಕಾಲಿಕ ನಿಧನದಿಂದ ರಮ್ಯಾ ಅವರಿಗೆ ನೋವಾಗಿದ್ದು, ಚುನಾವಣೆಯಿಂದ ಹಿಂದೆ ಸರಿಯುವ ಮಾತುಗಳನ್ನು ಆಡಿದ್ದಾರೆ. ನೋವಿನಲ್ಲಿ ಯಾರಿಗಾದರೂ ಇಂತಹ ಭಾವನೆ ಬರುವುದು ಸಹಜ. ಪಕ್ಷದ ಮುಖಂಡರು ಅವರೊಂದಿಗೆ ಮಾತನಾಡಿದ್ದು, ಧೈರ್ಯ ತುಂಬಿದ್ದಾರೆ. ಈ ಹಂತದಲ್ಲಿ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಪಕ್ಷದ ಮುಖಂಡರೆಲ್ಲ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ' ಎಂದು ಅವರು ಹೇಳಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT