ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗಿಲು ಮುಟ್ಟಿದ ರೋದನ

Last Updated 11 ಅಕ್ಟೋಬರ್ 2011, 6:10 IST
ಅಕ್ಷರ ಗಾತ್ರ

ಚಡಚಣ: ನಕ್ಸಲರ ಗುಂಡೇಟಿಗೆ ಬಲಿಯಾದ ನಕ್ಸಲ್ ನಿಗ್ರಹ ಪಡೆಯ ಪೇದೆ ಮಹಾದೇವ ಮಾನೆ ಅವರ ಅಂತ್ಯಕ್ರಿಯೆ ಸೋಮವಾರ ಮಹಾರಾಷ್ಟ್ರದ ಬಾಲಗಾಂವ ಗ್ರಾಮದಲ್ಲಿ ನಡೆಯಿತು.

ಪಾರ್ಥಿವ ಶರೀರ ಮಧ್ಯಾಹ್ನ ಗ್ರಾಮಕ್ಕೆ ಆಗಮಿಸುತ್ತಿದ್ದಂತೆಯೇ ತಾಯಿ ಭಾಗೀರಥಿ, ಹೆಂಡತಿ ಶೋಭಾ ಮತ್ತು ಪುತ್ರರಾದ ಸಂದೀಪ, ಪ್ರದೀಪ  ಹಾಗೂ ಸಹೋದರರು ಅಲ್ಲದೇ ಬಂಧು-ಬಾಂಧವರು ಸೇರಿದಂತೆ ಗ್ರಾಮಸ್ಥರ ದುಃಖದ ಕಟ್ಟೆ ಒಡೆದು ಆಕ್ರಂದನ ಮುಗಿಲು ಮುಟ್ಟಿತು. ನಂತರ ಗ್ರಾಮದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ನಡೆದು ಕೊನೆಗೆ ಗ್ರಾಮದ ಅಮೋಘಸಿದ್ಧ ದೇವಾಲಯದ ಎದುರು ಅಂತಿಮ ದರ್ಶನಕ್ಕಿಡಲಾಯಿತು.

ಕೆಎಸ್‌ಆರ್‌ಪಿಯ ಐಜಿಪಿ- ಕೆ.ಎಲ್. ಸುಧೀರ್ ಅವರು ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ, ಅಂತಿಮ ಗೌರವ ಸಲ್ಲಿಸಿದರು. ಕೆಎಸ್‌ಆರ್‌ಪಿಯ  ಎಎಸ್‌ಐ- ಎಂ.ವಿ. ಪತ್ತಾರ ಅವರ ನೇತೃತ್ವದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ, ಹುತಾತ್ಮ  ಮಹಾದೇವ ಮಾನೆ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. ನಂತರ ಅಂತ್ಯಸಂಸ್ಕಾರ ನೆರವೇರಿತು.

ಆಕ್ರೋಶ
ಮಹಾರಾಷ್ಟ್ರ ಸರ್ಕಾರದ ಯಾವೊಬ್ಬ ಅಧಿಕಾರಿಯೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳದ್ದಕ್ಕೆ ಸೇರಿದ್ದ ಜನರು ಅಸಮಾಧಾನ ವ್ಯಕ್ತಪಡಿಸಿದರು. ಜತ್ ತಹಸೀಲದಾರರಾಗಲಿ, ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳಾಗಲಿ ಪಾಲ್ಗೊಳ್ಳದಿರುವುದು ವಿಷಾದನೀಯ. ಇದು ವೀರ ಮರಣವನ್ನಪ್ಪಿದ ಮಾನೆ ಅವರಿಗೆ ಮಾಡಿದ ಅಗೌರವ ಎಂದು ಜನ ಆಕ್ರೋಶ ವ್ಯಕ್ತಪಡಿಸಿದರು.

ಶಾಲೆಗಳಿಗೆ ರಜೆ
ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಬಾಲಗಾಂವ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ ಬಾಲಗಾಂವ ಗ್ರಾಮದ ಸೋಮವಾರದ ಸಂತೆ ಎಂದಿನಂತೆಯೇ ನಡೆಯುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT