ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಚಿಡುವುದೇ ವಿನ್ಯಾಸ

Last Updated 1 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬಾಲಿವುಡ್ ಹಾಗೂ ವಸ್ತ್ರವಿನ್ಯಾಸ ಕ್ಷೇತ್ರದಲ್ಲಿ ಕೃಷ್ಣಾ ಮೆಹ್ತಾ ಅವರದ್ದು ಸುಪರಿಚಿತ ಹೆಸರು. ಪುರುಷರ ಡಿಸೈನರ್‌ವೇರ್ ಕ್ಷೇತ್ರವನ್ನು ಆರಂಭಿಸಿದ ಮೊದಲ ವಿನ್ಯಾಸಕಿ ಎಂಬ ಖ್ಯಾತಿಯೂ ಅವರದ್ದು. `ಮೆಟ್ರೊ~ದೊಂದಿಗೆ ಮಾತಿಗಿಳಿದಾಗ ಕೃಷ್ಣಾ ಕಾಯ, ಕಾಯಕ ಹಾಗೂ ಬದುಕಿನ ಬಗ್ಗೆ ಸಾಕಷ್ಟು ಬೆಳಕು ಚೆಲ್ಲಿದರು.

ಎಂಬತ್ತರ ದಶಕದಲ್ಲಿ ವಸ್ತ್ರವಿನ್ಯಾಸ ಕ್ಷೇತ್ರ ಆಯ್ಕೆ ಮಾಡಿಕೊಂಡಾಗ ಎದುರಿಸಿದ ಸವಾಲುಗಳೇನು?

ಆ ಕಾಲದಲ್ಲಿ ವಸ್ತ್ರವಿನ್ಯಾಸ ಎಂಬ ಪ್ರತ್ಯೇಕ ಕ್ಷೇತ್ರವೇ ಇರಲಿಲ್ಲ. ಹಾಗಾಗಿ ಸವಾಲುಗಳೂ ಸಮಸ್ಯೆಗಳೂ ಇರಲಿಲ್ಲ. ಮಾಡಿದ ಪ್ರಯೋಗಗಳೆಲ್ಲವೂ ಯಶಸ್ವಿ ಪ್ರಯತ್ನಗಳೇ ಆಗುತ್ತಿದ್ದವು. ಹಾಗಾಗಿ ಸಮಸ್ಯೆಗಳೇನೂ ಇರಲಿಲ್ಲ.

ಕುಟುಂಬದ ಬೆಂಬಲವೂ ಇತ್ತು. ಮಾರುಕಟ್ಟೆಯೂ ಮುಕ್ತವಾಗಿತ್ತು. ರಿಲಯನ್ಸ್ ಪಾಲಿಯೆಸ್ಟರ್ ಬಿಟ್ಟರೆ ಬೇರೆ ಜವಳಿಗೆ ಹೆಚ್ಚು ಬೇಡಿಕೆ ಇರಲಿಲ್ಲ. ಆಗ ಆಂಧ್ರಪ್ರದೇಶದ ಇಕತ್ ಕಲೆಯನ್ನು ಪೋಂಚಪಲ್ಲಿ ವಿನ್ಯಾಸವನ್ನು ಅಪ್ಪಟ ಕಾಟನ್ ಕುರ್ತಾಗಳಲ್ಲಿ ಪರಿಚಯಿಸಿದೆ. ಅದು ಖ್ಯಾತಿ ಪಡೆಯಿತು.

ಆಗಿನಿಂದಲೇ ಕುರ್ತಾ, ಕುರ್ತಿಸ್, ಶೇರ್ವಾನಿ, ಜೋಧ್‌ಪುರಿಗಳಲ್ಲಿ ಇಂಥ ಪ್ರಯೋಗಗಳನ್ನು ಮಾಡತೊಡಗಿದೆ. ಹೆಸರು, ಖ್ಯಾತಿ ಎಲ್ಲವೂ ಬೆನ್ನಟ್ಟಿ ಬಂದವು.

ಪಾಶ್ಚಿಮಾತ್ಯ ಸಂಗ್ರಹ ನಿಮ್ಮನ್ನು ಆಕರ್ಷಿಸಲಿಲ್ಲವೇ?

ಇದು ಆಕರ್ಷಣೆಯ ವಿಷಯವಲ್ಲ. ವಸ್ತ್ರಾಭರಣ ನಮ್ಮ ಸಂಸ್ಕೃತಿಯ ದ್ಯೋತಕ. ಹಾಗಾಗಿ ಭಾರತೀಯರಲ್ಲಿ ಬಹುತೇಕರು ಶೇ 80ರಷ್ಟು ಜನರು ಭಾರತೀಯ ಉಡುಗೆಯನ್ನೇ ಇಷ್ಟ ಪಡುತ್ತಾರೆ.

ಒಂದು ವಯೋಮಾನದ, ಮೆಟ್ರೊ ಮಹಿಳೆಯರು ಮಾತ್ರ ಪಾಶ್ಚಿಮಾತ್ಯ ಉಡುಗೆಗಳನ್ನು ತೊಡುತ್ತಾರೆ. ಅದಕ್ಕೂ ಭಾರತೀಯ ಸ್ಪರ್ಶ ನೀಡುವಂಥ ಕುರ್ತಿಸ್ ಅಥವಾ ಟ್ಯುನಿಕ್ಸ್ ಬಳಸುತ್ತಾರೆ. ಹಾಗಿದ್ದಾಗ, ಬಹುಜನರನ್ನು ಮುಟ್ಟುವುದು ನನ್ನ ಗುರಿಯಾಗಿತ್ತು. ಮೈಸಿರಿಯನ್ನು ಪ್ರದರ್ಶಿಸುವುದಲ್ಲ, ಸೌಂದರ್ಯ ಹೆಚ್ಚಿಸುವುದು ನನ್ನ ಉಡುಗೆಯ ವಿಶೇಷವಾಗಿದೆ, ಅಷ್ಟೆ!

ಕೃಷ್ಣಾ ಮೆಹ್ತಾ ಬ್ರಾಂಡ್ ಆಗಿ ಬೆಳೆದಿದ್ದು ಹೇಗೆ?

ಮತ್ತದೇ ಭಾರತೀಯತೆ. ಭಾರತೀಯ ನಾರಿಯರ ಮೈಕಟ್ಟು ಹೂಜಿಯಾಕಾರದಲ್ಲಿರುತ್ತದೆ. ಹೆಚ್ಚಿನ ವಸ್ತ್ರವಿನ್ಯಾಸಕಿಯರು ತೆಳ್ಳನೆಯ, ಬೆಳ್ಳನೆಯ ಲತಾಂಗಿಯರನ್ನೇ ಗಮನದಲ್ಲಿರಿಸಿಕೊಂಡು ವಸ್ತ್ರವಿನ್ಯಾಸ ಮಾಡುತ್ತಾರೆ.

ಆದರೆ ಅದು ಜನರನ್ನು ತಲುಪುವುದೇ ಇಲ್ಲ. `ಕೃಷ್ಣಾ ಮೆಹ್ತಾ~ ಎಲ್ಲ ಗಾತ್ರದ ಮಹಿಳೆಯರಿಗಾಗಿ ಉಡುಗೆಗಳನ್ನು ಸಿದ್ಧಪಡಿಸುತ್ತದೆ. ದೇಹದ ಉಬ್ಬು ತಗ್ಗುಗಳನ್ನು ಪ್ರದರ್ಶಿಸುವುದು ವಿನ್ಯಾಸವಲ್ಲ; ಸೂಕ್ತವಾಗಿ ಸಮರ್ಪಕವಾಗಿ ಮುಚ್ಚಿಡುವುದು ವಸ್ತ್ರವಿನ್ಯಾಸ.

ನಿಮಗೆ ಅತಿ ಖುಷಿ ನೀಡಿದ ವಸ್ತ್ರವಿನ್ಯಾಸ ಯಾರದ್ದು?

ಬಾಲಿವುಡ್‌ನ ಬಹುತೇಕ ತಾರೆಯರಿಗೆ ನನ್ನ ವಿನ್ಯಾಸದ ವಸ್ತ್ರಗಳನ್ನು ನೀಡಿದ್ದೇನೆ. ಆದರೆ ಖುಷಿ ನೀಡಿದ್ದು, `ಪಾಲಕ್~ನಲ್ಲಿ ನನ್ನ ಸಂಸ್ಥೆಯ ವಿಶೇಷ ಸಾಮರ್ಥ್ಯವುಳ್ಳ ಮಕ್ಕಳು ಸಿದ್ಧ ಪಡಿಸಿದ ಟ್ಯುನಿಕ್‌ಗಳು.

ಏನಿದು ಪಾಲಕ್?


ಗುಜರಾತ್‌ನ ಪಾಲಂಪುರ್ ನನ್ನ ಗಂಡನ ಊರು. ಅಲ್ಲಿ ವಿಶೇಷ ಸಾಮರ್ಥ್ಯ ಉಳ್ಳವರಿಗಾಗಿಯೇ ಒಂದು ಸಂಸ್ಥೆಯನ್ನು ತೆರೆದಿದ್ದೇವೆ. ಅಂಗವೈಕಲ್ಯ ಹಾಗೂ ಮನೋವೈಕಲ್ಯ ಇರುವವರಿಗೆ ಇಲ್ಲಿ ತರಬೇತಿ ನೀಡಲಾಗುತ್ತದೆ.

ಬ್ಲಾಕ್ ಪ್ರಿಂಟ್, ಕಸೂತಿ, ಪೇಂಟಿಂಗ್ ಮುಂತಾದವುಗಳನ್ನು ಮಾಡುತ್ತಾರೆ. ಅವರಿಗೆ ಆರ್ಥಿಕ ಸಹಾಯ ನೀಡುವುದರೊಂದಿಗೆ ಸ್ವಾವಲಂಬಿಯಾಗುತ್ತಾರೆ. ಆ ಕಿವುಡ, ಮೂಕ ಮಹಿಳೆಯರು, ಮಕ್ಕಳು, ಬುದ್ಧಿಮಾಂದ್ಯ ಮಕ್ಕಳು ಸಿದ್ಧಪಡಿಸುವ ಟ್ಯುನಿಕ್‌ಗಳು ಬಹಳ ಖುಷಿ ನೀಡುತ್ತವೆ. ಆ ವಸ್ತ್ರಗಳಲ್ಲಿ ಹಲವರ ಬದುಕಿನ ಬಣ್ಣಗಳೂ ಅರಳುತ್ತವೆ.

ಇತ್ತೀಚಿನ ಟ್ರೆಂಡ್ ಹೇಗಿದೆ?

ಟ್ರೆಂಡನ್ನು ಯಾವತ್ತಿಗೂ ವಸ್ತ್ರ ವಿನ್ಯಾಸಕರು ನಿರ್ಧರಿಸುವುದಿಲ್ಲ. ಸಾಮಾನ್ಯರು ನಿರ್ಧರಿಸುತ್ತಾರೆ. ತಮಗೆ ಅನುಕೂಲಕರ, ಆರಾಮದಾಯಕವಾಗಿರುವುದನ್ನೇ ಹೆಚ್ಚು ಜನರು ಇಷ್ಟಪಡುತ್ತಾರೆ. ಅದೇ ಟ್ರೆಂಡ್ ಮುಂದುವರಿಯುತ್ತದೆ.

ಈ ಸಲದ ಲ್ಯಾಕ್ಮೆ ಫ್ಯಾಶನ್ ವೀಕ್ ಅನುಭವ ತಿಳಿಸಿ.

ಭಾರತೀಯ ಮಾರುಕಟ್ಟೆ ಇದೀಗ ಉಚ್ಛ್ರಾಯ ಸ್ಥಿತಿಯಲ್ಲಿದೆ. ವಸ್ತ್ರವಿನ್ಯಾಸವೂ ಒಂದು ಉದ್ಯಮವಾಗಿ ಬೆಳೆದು ನಿಂತಿದೆ. ಫ್ಯಾಶನ್ ಎಂದಾಗ ಫ್ರಾನ್ಸ್ ಕಡೆ ತಲೆ ಮಾಡುತ್ತಿದ್ದ ಪರಿಣತರೀಗ ಭಾರತದೆಡೆ ದೃಷ್ಟಿ ಹೊರಳಿಸುವಂತಾಗಿದೆ.

ಇದು ಖುಷಿ ನೀಡುತ್ತದೆ. ಪಾಶ್ಚಿಮಾತ್ಯ ಔಟ್‌ಫಿಟ್‌ಗಳಷ್ಟೇ ಭಾರತೀಯ ಔಟ್‌ಫಿಟ್‌ಗಳೂ ಮಹತ್ವ ಪಡೆಯುತ್ತಿವೆ ಎನ್ನುವುದೇ ಖುಷಿಯ ಸಂಗತಿಯಾಗಿದೆ.

ಬೆಂಗಳೂರಿನ ಬಗ್ಗೆ ಏನನ್ನಿಸುತ್ತದೆ?

ಇಲ್ಲಿಯ ಜನರು ಅದೆಷ್ಟೇ ಪ್ರಗತಿಪರರಾಗಿದ್ದರೂ ಸಂಪ್ರದಾಯ ಹಾಗೂ ಸಂಸ್ಕೃತಿ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಆಧುನಿಕ ಮನೋಭಾವದವರೂ ಪೂಜೆ ಎಂದಾಕ್ಷಣ ರೇಷ್ಮೆ ವಸ್ತ್ರಗಳನ್ನು ಧರಿಸುತ್ತಾರೆ. ಕನ್ನಡಿಗರ ಈ ನಿಲುವು ಇಷ್ಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT