ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಡಾಕ್ಕೆ ಮುತ್ತಿಗೆ: ಮಾತಿನ ಚಕಮಕಿ

Last Updated 18 ಅಕ್ಟೋಬರ್ 2012, 4:30 IST
ಅಕ್ಷರ ಗಾತ್ರ

ಮಂಡ್ಯ: ನಗರದ ಹೊರವಲಯದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಹೊಸ ಬಡಾವಣೆಗಳಿಗೆ ಅನುಮತಿ ನೀಡಲು ವಿಳಂಬ ಮಾಡಲಾಗುತ್ತಿದೆ. ಹಣ ಕೊಟ್ಟರೆ ಮಾತ್ರ ಅನುಮತಿ ನೀಡಲಾಗುತ್ತಿದೆ ಎಂದು ಆರೋಪಿಸಿ ನೂರಾರು ಮಂದಿ ಮುಡಾ ಕಚೇರಿಗೆ ಬುಧವಾರ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ತೀವ್ರ ಮಾತಿನ ಚಕಮಕಿ ನಡೆಯಿತು.

ಸರ್ಕಾರಿ ನೌಕರರರ ಗೃಹ ನಿರ್ಮಾಣ ಸಂಘದ ಸದಸ್ಯರು, ನಗರಸಭೆ ಸದಸ್ಯ ಎಂ.ಜೆ. ಚಿಕ್ಕಣ್ಣ, ಹೋಟೆಲ್ ಉದ್ಯಮಿ ಚಂದ್ರಶೇಖರ್, ಅಂಬರೀಷ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮಶೇಖರ್ ಬೇಲೂರು ಸೇರಿದಂತೆ ಹಲವರು, ಅಧ್ಯಕ್ಷ ಬಿ. ಬಸವೇಗೌಡ ಅವರ ವರ್ತನೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಈ ಹಂತದಲ್ಲಿ ಪರಸ್ಪರ ಮಾತಿನ ವಾಗ್ವಾದ ನಡೆಯಿತು.

ಮೂರು ತಿಂಗಳ ಹಿಂದೆಯೇ ಹೊಸ ಬಡಾವಣೆಗೆ ಅನುಮತಿ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದೇವೆ. ಅರ್ಜಿ ಸಲ್ಲಿಕೆಯ ನಂತರ ಎರಡು ಸಾಮಾನ್ಯ ಸಭೆಗಳು ನಡೆದಿವೆ. ಆದರೂ ಸಾಮಾನ್ಯಸಭೆಯಲ್ಲಿ ಈ ವಿಷಯವನ್ನೇ ಮಂಡಿಸುತ್ತಿಲ್ಲ ಎಂದು ಸರ್ಕಾರಿ ನೌಕರರ ಗೃಹ ನಿರ್ಮಾಣದ ಸಂಘದ ಅಧ್ಯಕ್ಷ ರಾಮಕೃಷ್ಣ ಆರೋಪಿಸಿದರು.

ಕೋಣನಹಳ್ಳಿ ಬಳಿ 18 ಎಕರೆ ಭೂಮಿಯಲ್ಲಿ 400 ಸರ್ಕಾರಿ ನೌಕರರಿಗಾಗಿ ಬಡಾವಣೆ ನಿರ್ಮಿಸಲು ಯೋಜಿಸಿದ್ದೇವೆ. ನೌಕರರಿಂದ ಹಣವನ್ನೂ ತುಂಬಿಸಿಕೊಂಡಿದ್ದೇವೆ. ಆದರೆ, ಅನುಮತಿ ನೀಡದ್ದರಿಂದ ಮನೆ ನಿರ್ಮಿಸಬೇಕೆಂಬ ನೌಕರರ ಕನಸು ನನಸಾಗಿಲ್ಲ ಎಂದು ದೂರಿದರು. ಬಡಾವಣೆ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿದ್ದೇವೆ. ಎಲ್ಲ ದಾಖಲೆಗಳನ್ನೂ ಸಲ್ಲಿಸಲಾಗಿದೆ. ಆದರೂ, ವಿಷಯವನ್ನು ಸಭೆಯಲ್ಲಿ ಮಂಡಿಸುತ್ತಿಲ್ಲ.

ಅಧ್ಯಕ್ಷರು, 30 ಲಕ್ಷ ರೂಪಾಯಿ ಕೇಳುತ್ತಿದ್ದಾರೆ ಎಂದು ಉದ್ಯಮಿ ಚಂದ್ರಶೇಖರ್ ಆರೋಪಿಸಿದರು. ಮಧ್ಯ ಪ್ರವೇಶಿಸಿದ ಆಯುಕ್ತ ಡಾ. ಶಿವರಾಮು ಹಾಗೂ ಪೊಲೀಸರು, ಎಲ್ಲರನ್ನೂ ಸಮಾಧಾನಪಡಿಸಿ ಹೊರಗಡೆ ಕಳುಹಿಸಿದರು. ನಂತರ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಆಯುಕ್ತರು, ಇಂದಿನ ಸಭೆಯನ್ನು ಮುಂದೂಡಲಾಗಿದೆ. ಹದಿನೈದು ದಿನಗಳ ಒಳಗಾಗಿ ಇನ್ನೊಂದು ವಿಶೇಷ ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಹೊಸ ಬಡಾವಣೆಗಳ ಎಲ್ಲ ಅರ್ಜಿಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮುಡಾ ಅಧ್ಯಕ್ಷ ಬಸವೇಗೌಡ ಮಾತನಾಡಿ, ಲಂಚ ತೆಗೆದುಕೊಂಡಿರುವುದನ್ನು ಸಾಬೀತು ಮಾಡಿದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೇನೆ. ಬಡಾವಣೆ ನಿರ್ಮಿಸಲು ಉದ್ದೇಶಿಸಿರುವ ಭೂಮಿಯೂ ಹಸಿರು ವಲಯದಲ್ಲಿ ಬರುತ್ತವೆ. ಆದ್ದರಿಂದ ಕಾನೂನು ತಜ್ಞರ ಸಲಹೆ ಕೇಳಿದ್ದೇನೆ. ಅನುಮತಿ ನೀಡಲು ಸಾಧ್ಯ ಎನ್ನುವುದಾದರೆ ಮಾತ್ರ ಅನುಮತಿ ನೀಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT